ಮನ್ವಂತರ

ಕಾವ್ಯ ಸಂಗಾತಿ

ಮನ್ವಂತರ

ಅರುಣಾ ರಾವ್

ಯಾರು ಊದಿದರೇ ನಿನ್ನ ಕಿವಿಯಲ್ಲಿ ಗುಟ್ಟು

ವಸಂತ ಬರುತಿಹನೆಂದು ನಿನಗೇಗೆ ಗೊತ್ತು

ನಿರೀಕ್ಷಣೆಯ ಕಾತರ ಮನದಲಿ ಹೊತ್ತು
ಪಕಳೆ ಪಕಳೆಗಳಲ್ಲಿ ಸಿಹಿ ಜೇನ ಮುತ್ತು

ಮಧುರ ಮಧುವನು ಮನಸಾರೆ ಹೀರಿ
ಚೆಲ್ಲಾಟದಿ ಹಾರಾಡಿವೆ ದುಂಬಿ ಗಣ
ಕಣ್ ಹರಿಯಲೆತ್ತೆತ್ತ  ಸೂರೆಗೊಳುವುದು
ವಸಂತನ ಪರ್ಣ ಕುಸುಮ ಫಲ ರಿಂಗಣ

ಎಣ್ಣೆಯ ಜೊತೆಜೊತೆಗೆ ಮಹಾ ಮಜ್ಜನ
ನವನವೀನ ಉಡುಪು ತಳಿರು ತೋರಣ
ಪಾಡ್ಯ ಕೂಜನಕೂ ತಂದಿದೆ ಸಂಭ್ರಮ
ಬಂಧು ಬಾಂಧವರ ಕೂಡೆ ಸಕಾರಣ

ಬಂತದೋ ನವ ಸಂವತ್ಸರ ಬಾಗಿಲಲ್ಲಿ
ಮರೆಸಿ ಹಳೆಯದರ ದುಗುಡ ದುಮ್ಮಾನ 
ತಂದಿದೆ  ನವ ವಸಂತವ ನಲಿವಿನಲ್ಲಿ
ಸಾವು ಸಂಕಟಗಳ ಮೀರಿ ಸುಖಿಸೋಣ 

ಯುಗಾದಿ ಹೊಸ ಮನ್ವಂತರದ ಬುನಾದಿ
ಬೇವುಬೆಲ್ಲ ಹೋಳಿಗೆ ಘಮಲು ಜೊತೆ ಸೇರಿ 
ಹೊಡೆದೋಡಿಸಿ ಕಹಿ ದ್ವೇಷ ದಳ್ಳುರಿ
ನಗುನಗುತಲಿ ಬಾಳ ಹಸನಾಗಿಸಿರಿ.


Leave a Reply

Back To Top