ಸಂತೆಯೊಳಗೊಂದು ಮನೆಯ ಮಾಡಿ.

ಕಥಾ ಸಂಗಾತಿ

ಸಂತೆಯೊಳಗೊಂದು ಮನೆಯ ಮಾಡಿ.

ಜ್ಯೋತಿ ಡಿ. ಬೊಮ್ಮಾ.

Large Abstract Figurative Black And White Paintings On Canvas Women Fa –  Trend Gallery Art | Original Abstract Paintings

ಬಾಯಿಯಲ್ಲಿ ತುಂಬಿಕೊಂಡ ಎಲೆಅಡಿಕೆಯ ಕೆಂಪನೆಯ ರಸ ಬಾಯಿಂದ ಹೊರಗೆ ಒಸರದಂತೆ ಕತ್ತು ತುಸು ಮೇಲೆಮಾಡಿ ಮಾತಾಡುತಿದ್ದ ಈರವ್ವಳ ಮಾತು ಕಟ್ಟಡದ ಸೆಂಟರಿಂಗ್ ಕೆಲಸಗಾರ ಶಂಕರನಿಗೆ ಅರ್ಥವಾಗದೆ ಮತ್ತದೆ ಪ್ರಶ್ನೆ ಕೇಳಿದಾಗ ಈರವ್ವ ತನ್ನ  ತಲೆ ಮೇಲಿನ ರೇತಿ ತುಂಬಿದ ಬುಟ್ಟಿ ಕೆಳಗಿಳಿಸಿ ಬಾಯಲ್ಲಿನ ಕವಳ ಉಗುಳಿ ಅವನ ಪ್ರಶ್ನೆ ಗೆ ಉತ್ತರಿಸಬೇಕಾಯಿತು. ಸದಾ ಬಾಯಲ್ಲಿ ಎಲೆ ತಂಬಾಕಿನ ರಸ ಇದ್ದರೆ ಮಾತ್ರ ಅವಳು ಹುರುಪಿನಲ್ಲಿ ಇರುತಿದ್ದಳು , ತಂಬಾಕಿನ ರಸ ಬಾಯಲ್ಲಿದ್ದಾಗ ಅವಳ ಮಾತು ಎದುರಿನವರಿಗೆ ಅರ್ಥವಾಗದಿದ್ದರು ಕತ್ತು ಕೊಂಕಿಸಿ ಮಾತಾಡುವದು ಬಿಡುತ್ತಿರಲಿಲ್ಲ ಅವಳು.

ಎಲೆತಂಬಾಕಿನ ಚಟ ಇತ್ತೀಚಗೆ ಹೆಚ್ಚಾಗಿತ್ತು ಅವಳಿಗೆ.ಮೊದಲು ಯಾವಾಗಲಾದರೊಮ್ಮೆ ಹೊಳಿಗೆ ಊಟ ಮಾಡಿದಾಗಲೋ , ಹಲ್ಲು ನೋವಿದ್ದಾಗಲೋ , ಮಾಡಲೇನು ತೋಚದಿದ್ದಾಗ ಎಲೆ ಜೊತೆಗೆ ತಂಬಾಕು ಬೆರೆಸಿ ತಿನ್ನುತಿದ್ದಳು.

ಕರೋನಾ ಮಾರಿಯಿಂದ ತನ್ನ ಗಂಡನನ್ನು ಕಳೆದುಕೊಂಡ ಮೇಲೆ ದಿಕ್ಕೆಟ್ಟವಳಂತಾಗಿ ತನ್ನ ದುಗುಡ ಸ್ಥಿಮಿತಕ್ಕೆ ತಂದುಕೊಳ್ಳಲು ತಂಬಾಕಿನ ಮೊರೆ ಹೋಗಿದ್ದಳು. ತಂಬಾಕಿನ ರಸ ಬಾಯಲ್ಲಿರುವಷ್ಟು ಹೊತ್ತು ಅವಳಿಗೆ ಒಂಥರಾ ದೈರ್ಯವಿರುತಿತ್ತು.

ಕರೋನಾ ಮಾರಿ ಒಕ್ಕರಿಸಿಕೊಳ್ಳುವದಕ್ಕಿಂತ ಮೊದಲು ಈರವ್ವ ಮತ್ತು ಅವಳ ಗಂಡ ಹೊಲದಲ್ಲಿ ಕೂಲಿ ಕೆಲಸ ಮಾಡುತಿದ್ದರು.ಈರವ್ವಳ ಗಂಡ ಪರಮೇಶಿಗೆ ಪಿತ್ರಾರ್ಜಿತವಾಗಿ ಬಂದ ಅರ್ಥ ಎಕರೆ ಜಮೀನು ಊರಲ್ಲಿನ ಶುಗರ ಫ್ಯಾಕ್ಟರಿ ಯವರು ಕೆಳಿದಾಗ ಸಂತೋಷವಾಗಿ ಮಾರಲು ಒಪ್ಪಿದ್ದರು.ಜಮಿನು ಮಾರಿದ ಹಣದಿಂದ ಗುಡಿಸಿಲಿನಂತಿದ್ದ ಮನೆಗೆ ರಿಪೇರಿ ಮಾಡಿಸಿ ಆರ್ ಸಿಸಿ ಹಾಕಿಸಿದ್ದರು. ಮನೆ ರೀಪೇರಿಗೆ ಅದೇ ಊರಿನವನಾಗಿದ್ದ ಕಟ್ಟಡದ ಕೆಲಸ ಮಾಡುವ ಶಂಕರನಿಗೆ ಗುತ್ತಿಗೆ ಕೊಟ್ಟಿದ್ದರು.ಮನೆ ರೀಪೇರಿ ಮಾಡಿಸಿ ಉಳಿದ ಒಂದು ಲಕ್ಷ ಹಣವನ್ನು ಮಗಳ ಹೆಸರಲ್ಲಿ ಬ್ಯಾಂಕ್ ಲ್ಲಿ ಇಟ್ಟಿದ್ದರು.ಓದಿನಲ್ಲಿ ಜಾಣೆಯಾದ ಮಗಳು ಪಿಯುಸಿ ನಂತರ ಅವಳಿಚ್ಚೆಯಂತೆ ಪ್ರವಾಸೊದ್ಯಮದ ಡಿಗ್ರಿ ಓದುವ ಆಸಕ್ತಿ ಯಿಂದ ಪಟ್ಟಣದಲ್ಲಿ ಹಾಸ್ಟೆಲ್ ನಲ್ಲಿದ್ದುಕೊಂಡು ಓದುತಿದ್ದಳು.

ಶ್ರಮಜೀವಿಗಳಾದ ಗಂಡ ಹೆಂಡತಿ ಇಬ್ಬರು ಮಕ್ಕಳ ಆಕಾಂಕ್ಷೆಗೆ ಪ್ರೋತ್ಸಾಹಿಸಿ ಅವಳ ವಿದ್ಯಾಬ್ಯಾಸಕ್ಕಾಗಿ ಹಣ ಹೊಂದಿಸಲು ಶ್ರಮವಹಿಸಿ ದುಡಿಯುತಿದ್ದರು.

ಕರೋನಾ ಕಾರಣದಿಂದ ಕಾರ್ಮಿಕ ರೆಲ್ಲ ಅವರವರ ಊರಿಗೆ ತೆರಳಿದಾಗ ಕಟ್ಟಡ ನಿರ್ಮಾಣಕ್ಕೆ ಕಾರ್ಮಿಕರ ಅಭಾವ ತಲೆದೂರಿತ್ತು.ಅನೇಕ ಕಟ್ಟಡಗಳನ್ನು ಗುತ್ತಿಗೆ ಹಿಡಿದಿದ್ದ ಶಂಕರನು ಕಾರ್ಮಿಕರನ್ನು ಹೊಂದಿಸಲು ಹೆಣಗುತಿದ್ದ. ಈ ಸಂದರ್ಭದಲ್ಲಿ ಈರವ್ವ ಮತ್ತು ಅವಳ ಗಂಡನಿಗೆ ಹೊಲದ ಕೂಲಿಗಿಂತ ಹೆಚ್ಚು ಕೂಲಿ ಕೊಡುವದಾಗಿ ಹೇಳಿ ಕಟ್ಟಡದ ಕೆಲಸಕ್ಕೆ ಆಮಂತ್ರಿಸಿದನು.

ಇಬ್ಬರು ಶ್ರಮವಹಿಸಿ ದುಡಿಯುತ್ತ ನೆಮ್ಮದಿಯಾಗಿದ್ದಾಗಲೆ ವಿಧಿ ಕರೋನಾ ರೂಪದಲ್ಲಿ ಬಂದು ಈರವ್ವನ ಗಂಡನನ್ನು ಕಸಿದುಕೊಂಡಿತು. ಸುತ್ತಲೆಲ್ಲಾ ಇಂತಹವೆ ಸಾವುಗಳು . ಯಾರು ಯಾರಿಗೂ ಆಸರೆಯಾಗುವಂತಿಲ್ಲ.ಪ್ರತಿಯೊಬ್ಬರ ಮನೆಗಳು ದ್ವೀಪಗಳಂತಾದವು. ಯಾರ ನೆರವು ಸಾಂತ್ವನಗಳಿಲ್ಲದೆ ನರಳಿದ ಅದೆಷ್ಟೋ ಜನ. ಈರವ್ವಳು ತನ್ನ ಮಗಳೊಂದಿಗೆ ತಿಂಗಳುಗಳ ಕಾಲ ಮನೆಯಲ್ಲಿ ಬಂಧಿಯಾಗಿದ್ದರು , ಒಬ್ಬರಿಗೊಬ್ಬರು ಆಸರೆಯಾಗಿದ್ದರು.

ಕ್ರಮೇಣ ಸಾಂಕ್ರಾಮಿಕದ ಹಾವಳಿ ಕಡಿಮೆಯಾಗುತ್ತ ಜಗತ್ತು ತನ್ನ ಮೂಲಗತಿಗೆ ಮರಳತೊಡಗಿತು.ಅದರೊಂದಿಗೆ ಜನರು ಮತ್ತು ಜೀವನವೂ.ಬದುಕು ಮತ್ತೆ ಕೈಬೀಸಿ ಕರೆಯಿತು.

ಕಾಲೇಜು ಶುರುವಾಗಿ ಮಗಳು ತೆರಳಿದ ಮೇಲೆ ಈರವ್ವ ಒಂಟಿಯಾದಳು.ಜೀವನ ನಡೆಯಲೇಬೆಕಿತ್ತು.ಅದಕ್ಕಾಗಿ ದುಡಿತ ಅನಿವಾರ್ಯ.ನಿಂತ ನೀರು ಎಷ್ಟು ದಿನ ಇರಲು ಸಾದ್ಯ. ಈರವ್ವ ತಲೆಕೊಡವಿ ಎದ್ದಳು.ದುಡಿಮೆಯನ್ನೆ ದೇವರಾಗಿಸಿಕೊಂಡಳು.

ಕರೋನಾ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು.ಕೆಲಸವಿಲ್ಲದೆ ಕಾರ್ಮಿಕರು ಪರಿತಪಿಸತೊಡಗಿದರು.

ಕಟ್ಟಡದ ಕೆಲಸ ಗುತ್ತಿಗೆ ಪಡೆಯುವ ಶಂಕರನ ಸಹಾಯದಿಂದ ಈರವ್ವಳಿಗೆ ಕೂಲಿಕೆಲಸ ಸಿಗುವದು ಕಷ್ಟವಾಗುತ್ತಿರಲಿಲ್ಲ. ಗಂಡನ ನಿಧನದ ನಂತರ ಅವಳ ಕುಟುಂಬಕ್ಕೆ ಆಪ್ತ ನಾಗಿದ್ದ ಶಂಕರ ಅವಳಿಗೆ ಬೇಕಾದ ಸಲಹೆ ಸೂಚನೆ ಕೊಡುತ್ತ ಅವಳಿಗೆ ನಿಕಟವಾಗಿದ್ದ.ಒಂಟಿ ಯಾಗಿದ್ದ ಈರವ್ವಳಿಗೆ ಅವನ ನಿಕಟತೆ ಆಪ್ತವೆನಿಸತೊಡಗಿತು.ಆಪ್ತತೆಯಲ್ಲಿನ ಆಕರ್ಷಣೆ ಹೆಚ್ಚಾಗುತ್ತ ಅದನ್ನು ಮರೆಮಾಚುವದು ಅಸಾದ್ಯವಾಗತೊಡಗಿತು.

ಅವರಿಬ್ಬರ ಕುರಿತ ಗುಸಗುಸ ಶಂಕರನ ಹೆಂಡತಿಗೆ ತಲುಪುವದು ತಡವಾಗಲಿಲ್ಲ. ಅವಳು ಈರವ್ವನನ್ನು ಕಂಡರೆ ಕೆಂಡಕಾರತೊಡಗಿದಳು. ತನ್ನ ಸಿಟ್ಟು ಕೋಪಗಳೆಲ್ಲ ಗಂಡನ ಮೇಲೆ ತೋರಿಸುತ್ತ ಮನೆ ರಣರಂಗವಾಗತೊಡಗಿತು.

ಶಂಕರನ ಹೆಂಡತಿ ಸರೂ ಈರವ್ವ ತನ್ನ ಗಂಡನಿಗೆ ದುಡ್ಡುಕೊಟ್ಟು ಅವನನ್ನು ಬುಟ್ಟಿಗೆ ಹಾಕಿಕೊಂಡಳೆಂದು ಎಲ್ಲರಿಗೂ ಸಾರುತ್ತ ರೋಧಿಸುತಿದ್ದಳು.

ಈರವ್ವ ಶಂಕರನಿಗೆ ದುಡ್ಡು ಕೈಕಡವಾಗಿ ಕೊಟ್ಟದ್ದು ನಿಜವೆ ಆಗಿತ್ತು. ಕಟ್ಟಡದ  ಕೆಲಸಕ್ಕೆ ಬೇಕಾದ ಕಟ್ಟಿಗೆಗಳನ್ನು ಕೊಳ್ಳಲು ಶಂಕರನಿಗೆ ಹಣದ ಅವಶ್ಯಕತೆ ಇತ್ತು. ಈರವ್ವಳ ಹಣ ಬ್ಯಾಂಕನಲ್ಲಿರುವದು ಅವನಿಗೆ ತಿಳಿದಿತ್ತು. ಅವಳ ಶುಭ ಚಿಂತಕ ನಾಗಿದ್ದ ಶಂಕರನನ್ನು ಈರವ್ವ ಸಂಪೂರ್ಣ ನಂಬಿದ್ದಳು.

ರಜೆಯಲ್ಲಿ ಊರಿಗೆ ಬರುತಿದ್ದ ಈರವ್ವಳ ಮಗಳಿಗೆ ಊರಿನಲ್ಲಿನ ಪಿಸುಮಾತುಗಳು ಕಿವಿಗೆ ಬಿಳುವದು ತಡವಾಗಲಿಲ್ಲ.ಗಾಳಿಮಾತಿಗೆ ರೆಕ್ಕೆಗಳು ಬಲು ಗಟ್ಟಿ.

ಆದರೂ ತಾಯಿಯ ಬಗ್ಗೆ ಅವಳು ಯಾವದೇ ಕೀಳುಭಾವನೆ ಹೊಂದಿರಲಿಲ್ಲ.ವಿದ್ಯೆ ಅಷ್ಟರ ಮಟ್ಟಿಗೆ ಅವಳನ್ನು ವಿಶಾಲದೃದಯಿಯನ್ನಾಗಿಸಿತ್ತು.ಒಬ್ಬಂಟಿಯಾಗಿರುವ ತಾಯಿಗೆ ಮಾನಸಿಕ ಬೆಂಬಲ ಕೋರುವ ಒಬ್ಬ ಸ್ನೇಹಿತ ನಿರುವದು ಒಪ್ಪಿಕೊಳ್ಳುವಷ್ಷು ಮನಸ್ಥಿತಿ ಹೊಂದಿದ್ದಳು.ಈರವ್ವ ಹಣಕಾಸಿನ ಯಾವ ವ್ಯವಹಾರವು ಮಗಳಲ್ಲಿ ಮುಚ್ಚಿಡದೆ ಹೇಳುತಿದ್ದಳು.ಶಂಕರನಿಗೆ  ದುಡ್ಡುಕೊಟ್ಟ ವಿಷಯವು ಅವಳು ಮಗಳಿಂದ ಮುಚ್ಚಿಟ್ಟಿರಲಿಲ್ಲ.

ಇತ್ತ ಶಂಕರನ ಮನೆಯಲ್ಲಿ ಅವನ ಹೆಂಡತಿ ಸರೂಳ ಜಗಳ ದಿನೆದಿನೇ ಹೆಚ್ಚಾಗತೊಡಗಿತ್ತು.ಶಂಕರನ ಮೂವರು ಮಕ್ಕಳಲ್ಲಿ ಒಬ್ಬ ಮಗಳು ಬೆಳೆದುನಿಂತಿದ್ದಳು.ಉಳಿದ ಇಬ್ಬರು ಗಂಡು ಮಕ್ಕಳು ಅಪ್ಪನೊಂದಿಗೆ ಕಟ್ಟಡ ಕೆಲಸದಲ್ಲಿ ತೊಡಗಿದ್ದರು. ಈರವ್ವ ಕೊಟ್ಟ ದುಡ್ಡಿನಿಂದ  ಕಟ್ಟಡ ಕೆಲಸಕ್ಕೆ ಬೇಕಾದ ಹೋಸ ಸಾಮುಗ್ರಿಗಳನ್ನು ಅವರಪ್ಪ ಖರಿದಿಸಿಕೊಟ್ಟಿದ್ದರಿಂದ ಅವರು ಉತ್ಸಾಹಿತರಾಗಿ ಕೆಲಸ ಮಾಡುತಿದ್ದರು. ತಮ್ಮ ಅಪ್ಪನ ಕುರಿತ ಅವ್ವನ ಸಿಟ್ಟಿಗೆ ಯಾರ ಕಡೆಗೂ ಆಗದೆ ನಿರ್ಲಿಪ್ತರಾಗಿದ್ದರು.

ಬೆಳೆದ ಮಗಳ ಮದುವೆ ಮಾಡದೆ ಗಂಡ ಮತ್ತೊಂದು ಹೆಣ್ಣಿನತ್ತ ಆಕರ್ಷಿತನಾದದ್ದು ಸಹಿಸದ ಸರೂ ಮಗಳ ಮದುವೆ ಮಾಡಲು ಗಂಡನಿಗೆ ಒತ್ತಾಯ ಹೇರತೊಡಗಿದಳು .

ಹೀಗೆ ಬಿಟ್ಟರೆ ಗಂಡ ತನ್ನ ಕೈಬಿಡುವದು ಖಚಿತ ಎಂದರಿತ ಸರೂ ಮಕ್ಕಳೊಂದಿಗೆ ಚರ್ಚಿಸಿ ಗಂಡನನ್ನು ಹದ್ದುಬಸ್ತಿನಲ್ಲಿಡಲು ನಿರ್ಧರಿಸಿದಳು. ಮೂಲತ ಬಜಾರಿಯಾದ ಅವಳಿಗೆ ಶಂಕರ ಯಾವಾಗಲೂ ಅಂಜುತಿದ್ದ.ಇಬ್ಬರು ಮಕ್ಕಳು ತಾವೆ ಮುಂದಾಗಿ ಅಪ್ಪ ಹಿಡಿದಿದ್ದ ಕಟ್ಟಡದ ಗುತ್ತಿಗೆ ಗಳನ್ನು ತಾವೆ ನಿರ್ವಹಿಸತೊಡಗಿದರು.ಹಣದ ಪೂರ್ತಿ ವ್ಯವಹಾರ ಅವರ ಸುಪರ್ದಿಗೆ ತೆಗೆದುಕೊಂಡರು.ಸರೂ ಶಂಕರನನ್ನು ಈರವ್ವಳ ಮನೆಕಡೆ ಸುಳಿಯಗೊಡದಂತೆ ಎಚ್ಚರವಹಿಸತೊಡಗಿದಳು.ಮಗಳ ಮದುವೆಯ ನೆಪವೊಡ್ಡಿ ತನ್ನೆಲ್ಲ ಸಂಭಂದಿಕರನ್ನು ಭೇಟಿಯಾದ ವರನ ಅನ್ವೇಷಣೆಗೆ ತೊಡಗುವಂತೆ ಗಂಡನನ್ನು ವ್ಯಸ್ತನಾಗಿಸಿದಳು.

ಮೊದಮೊದಲು ಶಂಕರ ತನ್ನನ್ನು ಕಡೆಗಾಣಿಸುತ್ತಿರುವದು ಈರವ್ವಳ ಗಮನಕ್ಕೆ ಬರಲಿಲ್ಲ.ಗಾರೆ ಕೆಲಸಕ್ಕೆ ತನ್ನನ್ನು ಸೇರಿಸಿಕೊಳ್ಳದ ಅವನ ಮಕ್ಕಳ ವರ್ತನೆ ಅವಳನ್ನು ಯೋಚಿಸುವಂತೆ ಮಾಡಿತ್ತು.ಇತ್ತಿಚೆಗೆ ಶಂಕರ ತನ್ನ ಮನೆಕಡೆಗೆ ಬರುವದನ್ನು ಕಡಿಮೆಮಾಡಿದ್ದ. ಯಾವಾಗಾದರು ಸಿಕ್ಕಾಗ ತನ್ನ ದುಡ್ಡು ವಾಪಸು ಕೊಡುವಂತೆ ದುಂಬಾಲು ಬಿದ್ದಳು ಈರವ್ವ.ಮೊದಮೊದಲು ಈಗ ಕೋಡುತ್ತೆನೆ ಆಗ ಕೋಡುತ್ತೆನೆ ಎಂದು ಹೇಳುತಿದ್ದ ಶಂಕರ ಹಣದ ಪೂರ್ತಿ ವ್ಯವಹಾರ ಮಕ್ಕಳಿಗೆ ಗೊತ್ತೆಂದು ಅವರಿಗೆ ಕೇಳಬೆಕೆಂದೂ ಜಾರಿಕೊಂಡ.

ಅವನ ಮೇಲಿನ ಮೋಹದಿಂದ ಮಗಳ ಭವಿಷ್ಯಕ್ಕಾಗಿ ಜೋಪಾನವಾಗಿಟ್ಟ ಪೂರ್ತಿ ಹಣ ಕೊಟ್ಟ ತನ್ನ ಬೆಪ್ಪುತನಕ್ಕೆ ವೀಪರಿತವಾಗಿ ಅಲವತ್ತುಕೊಂಡಳು

.ತನ್ನನ್ನು ಎಂದಿಗೂ ಕೈಬಿಡಲಾರ ಎಂದು ನಂಬಿ ಮೋಸಹೋದ ತನ್ನ ಧಡ್ಡತನಕ್ಕೆ ಹಳಿದುಕೊಳ್ಳತೊಡಗಿದಳು.ತನ್ನ ದುಡ್ಡು ವಾಪಸು ಪಡೆ್ಉಕೊಳ್ಳುವದು ಹೇಗೆಂದು ಚಿಂತಿಸಿ ಇಳಿದುಹೋದಳು ಈರವ್ವ. ಹೇಗಾದರೂ ಸರಿ ತನ್ನ ದುಡ್ಡು ವಾಪಸು ಪಡೆದೇ ತೀರಬೆಕೆಂದು ನಿರ್ಧರಿಸಿದಳು .

ಮುಂಜಾನೆ ಎಂದಿನಂತೆ ಗಾರೆ ಕೆಲಸಕ್ಕೆ ತೆರಳಿದಳು.ಅವಳಿಗಿಂತ ಮುಂಚಿತವಾಗಿ ಶಂಕರ ಅವನ ಮಕ್ಕಳೋಂದಿಗೆ ಬಂದು ಕೆಲಸದವರಿಗೆ ನಿರ್ದೆಶಿಸುತಿದ್ದ. ಅವನು ಒಬ್ಬನೆ ಇದ್ದಾಗ ಸಮೀಪಿಸಿ ಹುಸಿಕೋಪ ತೋರಿಸಿ ತನ್ನನ್ನು ಕಡೆಗಾಣಿಸುತ್ತಿರುವ ಕುರಿತು ಆಕ್ಷೇಪಿಸಿದಳು.ತನಗೆ ಅವನ್ನು ಬಿಟ್ಟಿರುವದು ಆಗದೆಂದೂ ದುಡ್ಡು ತಮ್ಮಿಬ್ಬರ ಪ್ರೀತಿಗೆ ಅಡ್ಡ ಬರಬಾರದೆಂದೂ, ದಯವಿಟ್ಟು ಮನೆಗೆ ಬರಬೇಕೆಂದು ಬೇಡಿಕೊಂಡಳು. ತನ್ನ ಆಸರೆ ಇಲ್ಲದೆ ಹೇಗೆ ಬದುಕಬಲ್ಲಳು ಎಂದು ಹೆಮ್ಮೆಯಿಂದ ಬೀಗಿದ ಶಂಕರ.

ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ಬಾರದ ಗಂಡನ ಬಗ್ಗೆ ಆತಂಕಗೊಂಡ ಸರೂ ಅವರ ಅಪ್ಪನನ್ನು ಹುಡುಕಲು ಮಕ್ಕಳಿಗೆ ದುಂಬಾಲು ಬಿದ್ದಳು. ರಾತ್ರಿ ಬಹಳವಾದ್ದರಿಂದ ಬೆಳೆಗ್ಗೆ ನೋಡೋಣವೆಂದು ಮಕ್ಕಳು ತಾಯಿಯನ್ನು ಸುಮ್ಮನಾಗಿಸಿದರು. ರಾತ್ರಿಯೆಲ್ಲ ನಿದ್ದೆ ಇಲ್ಲದೆ ಒದ್ದಾಡಿದ ಸರೂ ನಸುಕಿನಲ್ಲೆ ಈರವ್ವನ ಮನೆಕಡೆ ಓಡಿದಳು.ಅವಳೆಣಿಕೆಯಂತೆ ಗಂಡನ ಚಪ್ಪಲಿ ಈರವ್ವನ ಮನೆ ಹೊರಗಿರುದನ್ನು ನೋಡಿ ಕೋಪಾವಿಷ್ಟಳಾಗಿ ಬಾಗಿಲು ಬಡಿಯುತ್ತ ಊರು ಕೇರಿ ಒಂದಾಗುವಂತೆ ಚೀರತೊಡಗಿದಳು.ಈರವ್ವ ಬಾಗಿಲು ತೆಗೆದು ಹೊರಗೆ ಬಂದು ಮತ್ತೆ ಬಾಗಿಲು ಮುಚ್ಚಿ ಅದಕ್ಕೆ ಒಂದು ದೊಡ್ಡ ಚಿಲಕ ಹಾಕಿ ತಲಬಾಗಿಲ ಮುಂದೆ ಕುಳಿತಳು . ಬಾಯಿಯಲ್ಲಿ ಎಲೆ ತಂಬಾಕು ನುರಿದಷ್ಟು ಅಂತರಂಗದ ಕಿಚ್ಚು ಹೆಚ್ಚುತಿತ್ತು.

ಇಷ್ಟರಲ್ಲಿ ಓಣಿಯ ಜನ ಸರೂನ ಚೀರಾಟ ಕೇಳಿ ಈರವ್ವಳ ಮನೆ ಮುಂದೆ ನೆರೆಯತೊಡಗಿರು.

ಈರವ್ವ ತನ್ನ ಗಂಡನನ್ನು ತನ್ನಿಂದ ಕಸಿದುಕೊಂಡು ತನ್ನ ಮನೆಯೊಳಗಿಟ್ಟುಕೊಂಡಿದ್ದಾ ಳೆಂದೂ ಜರಿಯತೊಡಗಿದಳು. ಈರವ್ವ ದೋಷದಿಂದ ಸರೂಳ ಕೆನ್ನೆಗೊಂದು ಬಿಗಿದು ನಿನ್ನ ಗಂಡ ನನ್ನ ಹತ್ತಿರ ತೆಗೆದುಕೊಂಡು ಒಂದು ಲಕ್ಷ ವಾಪಸು ಕೊಟ್ಟು ನಿನ್ನ ಗಂಡನನ್ನು ಕರೆದುಕೊಂಡು ಹೋಗೆಂದು ಅರ್ಭಟಿಸಿದಳು.ಇಷ್ಟರಲ್ಲೆ ಶಂಕರನ ಇಬ್ಬರು ಗಂಡುಮಕ್ಕಳು ಬಂದು ಈರವ್ವ ತನ್ನಪ್ಪನನ್ನು ಹೀಗೆ ಗೃಹಬಂಧನದಲ್ಲಿ ಇಟ್ಟಿರುವದು ನೋಡಿ ಕೈಕೈ ಹಿಸುಕಿಕೊಂಡರು.

ಅವಳ ಹಣವನ್ನು ಕೊಡದೆ ಯಾಮಾರಿಸಬೆಕೆಂಬ ಅವರ ಯೊಇಜನೆ  ಈ ರೀತಿ ಸಾರ್ವಜನಿಕವಾಗಿ ರಂಜಿತವಾಗುತ್ತಿರುವದು ನೋಡಿ ಉಗುಳು ನುಂಗುತ್ತ ನಿಂತರು.ಪೋಲಿಸರ ಬೆದರಿಕೆಗೂ ಮಣಿಯದ ಈರವ್ವ ನನ್ನ ದುಡ್ಡು ವಾಪಸ್ಸು ಕೊಡಬೇಕು ಇಲ್ಲವೆ ನಿಮ್ಮಪ್ಪನನ್ನು ಇಲ್ಲಯೇ ಬಿಟ್ಟು ಹೋಗಬೆಕೆಂದು ಅರ್ಭಟಿಸಿ ಮುಚ್ಚಿದ ಬಾಗಿಲೆದುರು ಪಟ್ಟಾಗಿ ಕುಳಿತುಬಿಟ್ಟಳು.

ನೆರೆದಿದ್ದ ಜನರೆಲ್ಲ ತಲೆಗೊಂದು ಮಾತಾಡುತ್ತ ಕೆಲವರು ಈರವ್ವಳ ಕಡೆ, ಕೆಲವರು ಸರೂಳ ಕಡೆಗಾಗಿ ಮಾತಾಡುತ್ತ ಒಟ್ಟಿನಲ್ಲಿಯಾವದೇ ನಿರ್ಣಯಕ್ಕೂ ಬರದೆ ತಮಗೆ ತಿಳಿದಂತೆ ಮಾತಾಡುತಿದ್ದರು.ತೆರೆದ ಕಿಟಕಿಯ ಒಳಗೆ ಸರಳುಗಳಿಗೆ ಕೈಹಿಡಿದು ಹೊರಗಿನ ವಿದ್ಯಮಾನ ನೋಡುತ್ತ ಮೌನವಾಗಿ ನಿಂತಿದ್ದ ಶಂಕರ.

ಮಕ್ಕಳು ಈರವ್ವಳ ಹಣ ವಾಪಸ್ಸು ಕೊಡುವ ಬಗ್ಗೆ ಆಸಕ್ತಿ ವಹಿಸದೆ ಮೌನವಾಗಿ ನಿಂತಿದ್ದು ನೋಡಿ ರೋಸಿ ಮಕ್ಕಳ ಮೇಲೆ ಹರಿಹಾಯ್ದಳು ಸರೂ.ಯಾವದೆ ಕಾರಣಕ್ಕೂ ಗಂಡನನ್ನು ಬಿಟ್ಟುಕೊಡಲು ಸಿದ್ದಳಿರಲಿಲ್ಲ ಅವಳು. ಬೇರೆ ದಾರಿ ಕಾಣದೆ ಮಕ್ಕಳು ದುಡ್ಡು ಹೊಂದಿಸಲು ತೆರಳಿದರು.

ಅದಾವಾಗಲೋ ಬಂದು ಈ ಎಲ್ಲಾ ವಿದ್ಯಮಾನ ದೂರದಲ್ಲಿ ನಿಂತು ನೋಡುತಿದ್ದ ಮಗಳೆಡೆ ದೃಷ್ಟಿ ಹರಿದಾಗ ಈರವ್ವ ಭೊರ್ಗರೆದು ಅಳತೊಡಗಿದಳು.ಓಡುತ್ತ ಹೋಗಿ ಮಗಳನ್ನು ಅಪ್ಪಿ ಯಾವದೇ ಸಂದರ್ಬದಲ್ಲಿ ತನ್ನ ದುಡ್ಡು ಮಗಳಿಗಲ್ಲದೆ ಮತ್ತಾರಿಗೂ ದಕ್ಕಕೂಡದೆಂದು ಹೇಳುತ್ತ ಕುಸಿದಳು.ಮಗಳು ತನ್ನ ಬಗ್ಗೆ ಎಷ್ಟು ಹೇಸಿಗೆ ಪಟ್ಟುಕೊಂಡಿರಬಹುದೆಂದು ಉಹಿಸಿ ಹಿಡಿಯಷ್ಟಾದಳು.

ಮಗಳು ಅಮ್ಮನನ್ನು ಎಬ್ಬಿಸಿ ಅವಳಿಗೆ ಆಸರೆ ಒದಗಿಸುತ್ತ ಮೆಲ್ಲನೆ ನಡೆಸಿಕೊಂಡು ಬಂದು ಅಲ್ಲೆ ನಿಂತ ಸರೂಳಿಗೆ ತಮ್ಮ ದುಡ್ಡು ವಾಪಸು ಕೊಟ್ಟು ನಿನ್ನ ಗಂಡನನ್ನು ಕರೆದುಕೊಂಡು ಹೋಗೆಂದು ನಿರ್ಧಾರದ ದನಿಯಲ್ಲಿ ಹೇಳಿ ಮನೆಕಡೆ ಸಾಗಿದಳು ತನ್ನಮ್ಮನೊಡನೆ.

ಜನರು ನಿಧಾನವಾಗಿ ಚದುರತೊಡಗಿದರು.


Leave a Reply

Back To Top