ಈ ಜೀವನ ಬೇವು ಬೆಲ್ಲ

ಸುಜಾತಾ ರವೀಶ

[08:57, 01/04/2022] SUJATHA RAVEESH: ಯುಗಾದಿ ಅಂದ ಕೂಡಲೇ ನೆನಪಿಗೆ ಬರುವುದು ಬೇವು ಬೆಲ್ಲ ಮನೆಯ ಮುಂದಿನ ತೋರಣ ಮಾವು ಬೇವು ಮಲ್ಲಿಗೆ ಹೂ. ನಂತರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎಂಬ ಚಲನಚಿತ್ರದ ಹಾಡು. ಮೊದಲು ರೇಡಿಯೊದಲ್ಲಿ ಕೇಳುತ್ತಿದ್ದೆವು ನಂತರ ದೂರದರ್ಶನದಲ್ಲಿ ಅಷ್ಟೇ ವ್ಯತ್ಯಾಸ .ಪ್ರತಿ ಯುಗಾದಿಗೂ ಬೆಳಗಾಗೆದ್ದು ಅಭ್ಯಂಗ ಸ್ನಾನ ಪೂಜೆ ಬೇವು ಬೆಲ್ಲ ತಿಂದು ಆ ನಂತರ ತಿಂಡಿ .ಪ್ರತಿ ವರ್ಷವೂ ಕಾಯೊಬ್ಬಟ್ಟು (ನಮ್ಮಅಣ್ಣ ಅಂದರೆ ತಂದೆ ಬೇಳೆ ಒಬ್ಬಟ್ಟು ತಿನ್ನದೇ ಇದ್ದುದರಿಂದ) ಒಬ್ಬಟ್ಟಿನ ಜೊತೆಗೆ ಅಡುಗೆ ಯಾವಾಗಲೂ ಸಾಂಗವಾಗಿ ಇರಬೇಕೆಂದು ಅಮ್ಮ ಗೊಜ್ಜಿನ ಚಿತ್ರಾನ್ನ ಎರಡು ಬಗೆಯ ಪಲ್ಯ ಎರಡು ಎರಡು ವಿಧದ ಕೋಸಂಬರಿ ತೊವ್ವೆ ಎಲೆ ತುದಿಗೆ ಪಾಯಸ ಹಸಿ ಮಜ್ಜಿಗೆ ಅಥವಾ ಮಜ್ಜಿಗೆ ಹುಳಿ ಸಾರು ಆಂಬೊಡೆ ಕಡ್ಡಾಯವಾಗಿ ಮಾಡುತ್ತಿದ್ದುದು ಇನ್ನೂ ಕಣ್ಣೆದುರೇ ಇದೆ. ಅಮ್ಮ ಬದುಕಿರುವವರೆಗೂ ಇದು ಅನೂಚಾನವಾಗಿ ನಡೆದು ಬಂತು. ಇನ್ನು ಯುಗಾದಿಗೆ ಹೊಸ ಬಟ್ಟೆ ಇದ್ದೇ ಇರುತ್ತಿತ್ತು. ಬೆಳಗ್ಗೆ ಪೂಜೆ ವೇಳೆ ಧರಿಸಿ ತೆಗೆದಿಟ್ಟು ಮತ್ತೆ ಸಂಜೆ ಮುಖ ತೊಳೆದು ಜಡೆ ಹೆಣೆದು ಅದೇ ಬಟ್ಟೆ ಧರಿಸುತ್ತಿದ್ದೆವು ಸಂಜೆ ಇನ್ನೊಂದು ಒಬ್ಬೆ ಒಬ್ಬಟ್ಟು ಚಿತ್ರಾನ್ನ ಆಂಬೊಡೆ ತಿಂದು ಮುಗಿಸಿದ ನಂತರ. ಮಲ್ಲಿಗೆಯ ಕಾಲವಾದ್ದರಿಂದ ಮನೆಯಲ್ಲಿ ಧಂಡಿ ಮಲ್ಲಿಗೆ ಮೊಗ್ಗು ಬಿಟ್ಟಿರುತ್ತಿತ್ತು . ಅವನ್ನು ಕಿತ್ತು ಕಟ್ಟಿ ಮುಡಿಯುವುದು. ಒಂಟಿಕೊಪ್ಪಲ್ ಪಂಚಾಂಗ ತಂದು ಬೆಳಿಗ್ಗೆ ಪೂಜೆ ವೇಳೆ ದೇವರ ಹತ್ತಿರ ಇಟ್ಟು ಸಂಜೆ ಅದನ್ನು ಅಣ್ಣ ಸಂಜೆ ಪಠಿಸುತ್ತಿದ್ದುದು ನೆನಪಿನಂಗಳದಿಂದ ಎಂದೂ ಮರೆಯಾಗದ ಚಿತ್ರ .

ಇಷ್ಟೆಲ್ಲಾ ಸಡಗರದ ನಡುವೆಯೂ ಒಂದು ಬೇಸರದ ಸಂಗತಿ ಎಂದರೆ ಪರೀಕ್ಷೆಗಳು. ಕಾಲೇಜಿಗೆ ಬಂದ ಮೇಲೆ ಹಬ್ಬದ ವೇಳೆಗೆ ಪರೀಕ್ಷೆಗಳು ಮುಗಿಯದೇ ಹಬ್ಬದ ಸವಿ ಪೂರ್ತಿ ಸವಿದಂತೆ ಆಗುತ್ತಲೇ ಇರಲಿಲ್ಲ .ನಾವು ಓದಿ ಕಡಿದು ಕಟ್ಟೆ ಹಾಕುತ್ತಿದ್ದುದು ಅಷ್ಟರಲ್ಲೇ ಇತ್ತು ಅನ್ನಿ .ಆದರೂ ಪರೀಕ್ಷೆ ಮುಗಿದಿದ್ದರೆ ಅದರ ಮಜವೇ ಬೇರೆ .ಮತ್ತೆ ಈಗ ಜೀವ ವಿಮಾ ನಿಗಮಕ್ಕೆ ಸೇರಿದ ನಂತರ ವರ್ಷಾಂತ್ಯದ ಕೆಲಸಗಳು(yearend closing) ಪರೀಕ್ಷೆಯನ್ನೇ ಹೋಲುತ್ತವೆ ಅದರಲ್ಲೂ ಹಬ್ಬ ಮಾರ್ಚ್ ೩೧ರ ಆಸುಪಾಸೇ ಬಂದರೆ ಮಾತ್ರ ಹಿಂಸೆಯೇ. ಎಷ್ಟೋ ವೇಳೆ ಹಬ್ಬದ ದಿನವೂ ಕಚೇರಿಗೆ ಹೋಗಿರುವ ಸಂದರ್ಭಗಳೂ ಉಂಟು .

ಯುಗಾದಿಯೆಂದರೆ ಮತ್ತೊಮ್ಮೆ ನೆನಪಿಗೆ ಬರುವ ಘಟನೆ ಇದು ನಾನಾಗ ಸಕಲೇಶಪುರದಲ್ಲಿದ್ದ ಸಂದರ್ಭ . ಮೇಲೆ ಹೇಳಿದಂತೆ ಹಬ್ಬ ಏಪ್ರಿಲ್ ಮೊದಲ ವಾರ ಬಂದಿತ್ತು. ನನಗೆ ಹೊಸ ವ್ಯವಹಾರಗಳ ವಿಭಾಗದಲ್ಲಿ ಇದ್ದರಿಂದ ರಜಾ ಸಿಗುವುದಿರಲಿ ಅಂದು ಸಹ ಕಚೇರಿಗೆ ಹೋಗಬೇಕಿತ್ತು ಮತ್ತೆ ಹಬ್ದದ ಮಾರನೆಯ ದಿನಕ್ಕೆ ಎಲ್ಲವನ್ನೂ ಸಬ್ಮಿಟ್ ಮಾಡಲು ಮೈಸೂರಿನ ಕಚೇರಿಗೆ ಹೋಗಬೇಕಾಗಿದ್ದರಿಂದ ಈ ಬಾರಿ ಹಬ್ಬಕ್ಕೆ ಬರುವುದಿಲ್ಲವೆಂದು ತವರಿಗೆ ಫೋನ್ ಮಾಡಿ ತಿಳಿಸಿ ಬಿಟ್ಟಿದ್ದೆ. ರವೀಶ್ ತಾವೇ ಸಕಲೇಶಪುರಕ್ಕೆ ಬಂದಿದ್ದರು. ನಂತರ ಹಿಂದಿನ ರಾತ್ರಿ ಸಬ್ಮಿಶನ್ ಮುಂದೂಡಲ್ಪಟ್ಟಿದ್ದರಿಂದ ಅಲ್ಲಿ ನಾವಿಬ್ಬರೇ ಹಬ್ಬ ಮಾಡುವ ಬದಲು ಬೆಳಿಗ್ಗೆ ಮೈಸೂರಿಗೆ ಹೋಗುವ ಎಂದು ನಿಶ್ಚಯಿಸಿ ದೂರವಾಣಿ ಮಾಡಿ ತಿಳಿಸೋಣ ಅಂದರೆ ದೂರವಾಣಿ ಸ್ಥಗಿತವಾಗಿರಬೇಕೇ. ( ಆಗೆಲ್ಲಾ ಸಕಲೇಶಪುರದಲ್ಲಿ ಫೋನ್ ಡೆಡ್ ಆದರೆ ವಾರಾನುಗಟ್ಟಲೆ ಬರುತ್ತಿರಲಿಲ್ಲ) ಹೋಗಲಿ ಬಿಡು ದಿಢೀರ್ ಅಂತ ಹೋಗಿ ಆಶ್ಚರ್ಯ ಪಡಿಸೋಣ ಅಂರ ಸುಮ್ಮನಾದೆ. ಬೆಳಿಗ್ಗೆ ಐದು ಗಂಟೆ ಬಸ್ಸಿಗೆ ಹೊರಟು ಹತ್ತು ಗಂಟೆ ಸುಮಾರಿಗೆ ಮನೆ ತಲುಪಿದರೆ ಅಮ್ಮ ನಮಗೂ ಸೇರಿಸಿ ತಿಂಡಿ ರೆಡಿ ಮಾಡಿದ್ದರು. ಅಣ್ಣ ಉಪ್ಪಿಟ್ಟು ಮಕ್ಕಳಿಗೂ ಸೇರಿಸಿ ಮಾಡು ಅಂದಿದ್ದರಂತೆ. ಅಮ್ಮ ನನ್ನ ತಂಗಿಯರು ಎಲ್ಲಾ ನಾವು ವಿಷಯ ಮೊದಲೇ ಅಣ್ಣನಿಗೆ ತಿಳಿಸಿರಬೇಕು ಅಂದುಕೊಂಡಿದ್ದಾರೆ. ಆದರೆ ನಮಗೆ ಹೇಳಲು ಆಗಿಯೇ ಇರಲಿಲ್ಲ . ಆಗ ಚರ ದೂರವಾಣಿಯೂ ಇರಲಿಲ್ಲ . ಅಣ್ಣ ಮಾತ್ರ ನನಗೆ ಅನ್ನಿಸ್ತಿತ್ತು ನೀವುಗಳು ಬಂದೇ ಬರ್ತೀರಾ ಅಂತ ಎಂದು ಹೇಳಿದರು .ಇದೇ “ಟೆಲಿಪತಿ” ಇರಬಹುದೇ ? ಆದರೂ ಅಮ್ಮ ಮತ್ತು ತಂಗಿಯರು ಮಾತ್ರ ಅಪ್ಪ ಮಗಳ ಗುಟ್ಟು ಎಂದು ರೇಗಿಸುತ್ತಲೇ ಇದ್ದರು .

ಇನ್ನು ಹಬ್ಬದ ಮಾರನೆಯ ದಿನ ವರ್ಷದ ತೊಡಕು ಎಂದು ಹೇಳಿ ಅಂದು ಸಹ ಹಬ್ಬದಡಿಗೆ ಸಿಹಿ ಮಾಡುವ ಸಂಪ್ರದಾಯ. ಸಾಮಾನ್ಯವಾಗಿ ಅಂದು ಜಾಮೂನು ಬಿಸಿ ಬೇಳೆ ಭಾತು ಒಂದು ಅಲಿಖಿತ ನಿಯಮದಂತೆಯೇ ಆಗಿಬಿಟ್ಟಿತ್ತು . ಈಗಲೂ ನಾವು ಮೂರು ಜನ ಅಕ್ಕ ತಂಗಿಯರು ಯುಗಾದಿಯ ಮಾರನೇ ದಿನ ಅದನ್ನೇ ಮಾಡುತ್ತೇವೆ ಒಂದು ಸಂಪ್ರದಾಯ ಎಂಬಂತೆ . 

ಹಬ್ಬದ ಆಚರಣೆಯಲ್ಲಿ ಅಮ್ಮ ಅಣ್ಣನಿಗೆ ಇದ್ದ ಉತ್ಸಾಹ ಶ್ರದ್ಧೆ ನೆನೆದರೆ ಈಗ ಆಶ್ಚರ್ಯವಾಗುತ್ತದೆ. ಹಾಗೆಯೇ ಇಂದಿನವರ ನಿರಾಸಕ್ತಿ ಗಮನಿಸಿದಾಗ ಯಾವುದಕ್ಕೂ ಮನಸ್ಸು ಮುಖ್ಯ ಹಣ ಗೌಣ ಎಂಬ ಅಂಶ ಮನದಟ್ಟಾಗುತ್ತದೆ. 

ಹಿಂದಿನದನೆಲ್ಲ ನೆನೆಸಿಕೊಂಡಾಗಲೆಲ್ಲಾ ಕಣ್ತುಂಬಿ ಬರುತ್ತದೆ. ಇಂದು ಅಮ್ಮನೂ ಇಲ್ಲ ಅಣ್ಣನೂ ಇಲ್ಲ. ಅವರೊಂದಿಗೆ ಕಳೆದ ಸವಿ ಗಳಿಗೆಗಳ ಮೆಲುಕೇ ಜೀವನದ ಬೆಲ್ಲ ಅವರಿಲ್ಲದ ಚಿರ ದುಃಖವೇ ಬಾಳಿನ ಬೇವು. ಇವುಗಳ ಸಮರಸವೇ ಜೀವನ ಅಲ್ಲವೇ ?


One thought on “

  1. ಪ್ರಕಟಣೆಗಾಗಿ ಧನ್ಯವಾದಗಳು .

    ಸುಜಾತಾ ರವೀಶ್

Leave a Reply

Back To Top