ಅಂಕಣ ಬರಹ

ಗಜಲ್ ಲೋಕ

ಅನುಸೂಯಜಹಗೀರದಾರ

ಗಜಲ್ ಲೋಕದಲ್ಲೊಂದುಸುತ್ತು…

.  

ಗಜಲ್ ಕನವರಿಸುವ ಎಲ್ಲ ಮನಸುಗಳಿಗೆ ಗಜಲ್ ಪ್ರೇಮಿಯ ಸಲಾಂ. ಇಂದು  ನಾನು ಮತ್ತೊಮ್ಮೆ ಗಜಲ್ ಕನ್ಯೆಯೊಂದಿಗೆ ತಮ್ಮ ಮುಂದೆ ಬಂದು ನಿಂತಿದ್ದೇನೆ, ತಮಗೆಲ್ಲರಿಗೂ ತುಂಬು ಹೃದಯದಿಂದ  ಸ್ವಾಗತಿಸಲು ; ಜೊತೆ ಜೊತೆಗೆ ಹೆಜ್ಜೆ ಹಾಕಲು, ಬರುವಿರಲ್ಲವೆ… ಬನ್ನಿ…!!

ಪಡೆದುಕೊಳ್ಳುವುದೆ ಕಳೆದುಕೊಳ್ಳಲು ಕಳೆದುಕೊಳ್ಳುವುದೆ ಪಡೆದುಕೊಳ್ಳಲು

ಎಚ್ಚರ ತಪ್ಪುವುದೆ ಎಚ್ಚರವಾಗಲು ಎಚ್ಚರವಾಗುವುದೆ ಎಚ್ಚರ ತಪ್ಪಲು

                           –ಬೇದಮ್ ಶಾಹ ವಾರಸೀ

          ‘ಹೃದಯ’ ತುಂಬಾ ಮೃದುವಾದ ಅಂಗ. ದೇಹದ ಸಂಪೂರ್ಣ ಆರೋಗ್ಯ ನಿಂತಿರುವುದು ಹೃದಯದ ಸುರಕ್ಷತೆಯ ಮೇಲೇಯೇ. ಹೃದಯ ದೇಹದ ಎಲ್ಲಾ ಭಾಗಗಳ ಚಲನವಲನಗಳಲ್ಲಿಯೂ ಅತೀ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಇದು ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಪಂಪ್ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಹೆಚ್ಚು ಪೂರಕವಾಗಿ ಸಹಾಯ ಮಾಡುತ್ತದೆ. ಆರೋಗ್ಯ‌ಪೂರ್ಣ ಹೃದಯ ಮನುಷ್ಯ‌ರನ್ನು ಆರೋಗ್ಯವಂತ‌ರಾಗಿ ಬದುಕಲು ಸಹಾಯ ಮಾಡುತ್ತದೆ. ಆದರೆ ಇದರಿಂದ ಹೊರಡುವ ಚಟುವಟಿಕೆಗಳು ಮಾತ್ರ ಕಾಲ, ಪರಿಸ್ಥಿತಿಯನ್ನು ನಿಯಂತ್ರಿಸುತ್ತವೆ ; ಹಲವೊಮ್ಮೆ ಬಿಗಡಾಯಿಸುತ್ತವೆ. ಇದಕ್ಕೆ ಕೌಟುಂಬಿಕ ಪರಿಸರ, ಸಾಮಾಜಿಕ ವ್ಯವಸ್ಥೆ ಹಾಗೂ ಮನುಷ್ಯನು ಪಡೆದುಕೊಂಡ, ಗಳಿಸಿದ ಸಂಸ್ಕಾರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಕ್ಷರದ ತಂಬೆಲರು ಮನುಕುಲವನ್ನು, ಹೃದಯಗಳನ್ನು ಶುಚಿಗೊಳಿಸಿವೆ, ಶುಚಿಗೊಳಿಸುತ್ತಿವೆ ; ಶುಚಿಗೊಳಿಸಬೇಕಾಗಿದೆ. ಅಕ್ಷರದ ಬೀಜವು ಜಗದಲಿ ಮೊಳಕೆಯೊಡೆದು ಆಲದ ಮರದಂತೆ ಪಸರಿಸಿದೆ. ಆ ಆಲದ ಮರದ ಮೂಲ ಬೇರೆಂದರೆ ಸಾಹಿತ್ಯ. ಆ ಸಾಹಿತ್ಯವೇ ಇಂದು ಸಂಸ್ಕೃತಿಗೆ ನೀರೆರೆದು ಪೋಷಿಸಿ ಬೆಳೆಸುತ್ತಿದೆ. ವಾಗ್ದೇವಿಯ ಮಕ್ಕಳಲ್ಲಿ ಕೋಮಲತೆ, ಮಧುರತೆಗೆ ಅನ್ವರ್ಥವಾದ ಪ್ರಕಾರವೆಂದರೆ ‘ಕಾವ್ಯ’. ಇದು ಭಾವನೆಗಳ ತೂಗುದೀಪವಾಗಿದ್ದು ಮನಸ್ಸಿನ ಅಂಧಕಾರವನ್ನು ಕಳೆಯುತ್ತದೆ. ಅಂತೆಯೇ ಸಾಹಿತ್ಯಕ್ಕೆ ಮನಸೋಲದ ಸಹೃದಯಿಗಳೆ ಇಲ್ಲ ಎನ್ನಬಹುದು. ಇಂತಹ ಕಾವ್ಯದ ಅತ್ಯಂತ ಸೂಕ್ಷ್ಮ ಹಾಗೂ ಮೆದು ರೂಪವೆಂದರೆ ‘ಗಜಲ್’. ಇದು ಮೃದುತ್ವಕ್ಕೆ ಹೆಸರುವಾಸಿಯಾದ ಪಾರಿಜಾತಕ್ಕಿಂತಲೂ ನಾಜೂಕಾಗಿದ್ದು, ಸಂಪಿಗೆಯಂತೆ ಸುಗಂಧಭರಿತವಾಗಿದೆ. ಇಂದು ಕರುನಾಡಿನಾದ್ಯಂತ ಅಸಂಖ್ಯಾತ ಗಜಲ್ ಗೋ ಅವರು ಗಜಲ್ ಗೋಯಿಯಲ್ಲಿ ತೊಡಗಿಸಿಕೊಂಡಿದ್ದು ಗಜಲ್ ನ ಪರಿಮಳವನ್ನು ಎಲ್ಲೆಡೆ ಪಸರಿಸುತಿದ್ದಾರೆ. ಇದರಲ್ಲಿ ಸಹೃದಯ ಓದುಗರ ಪಾತ್ರದ ಅನುಪಮವನ್ನು ಅಲ್ಲಗಳೆಯಲಾಗದು. ಇಂತಹ ಗಜಲ್ ಗೋ ಅವರಲ್ಲಿ ಶ್ರೀಮತಿ ಅನುಸೂಯಾ ಜಹಗೀರದಾರ ಅವರೂ ಒಬ್ಬರು.

          ಬಹುಮುಖ ಪ್ರತಿಭೆಯ ಶ್ರೀಮತಿ ಅನುಸೂಯ ಜಹಗೀರದಾರ ಅವರು ಪರಮಹಂಸ ಜಹಗೀರದಾರ ಮತ್ತು ಶ್ರೀಮತಿ ಶಾಂತಾಬಾಯಿ ಜಹಗೀರದಾರ ದಂಪತಿಗಳ ಮುದ್ದಿನ ಮಗಳು. ಇವರ ಕುಟುಂಬವು ಸಂಗೀತ ಲೋಕದ ಹಿನ್ನೆಲೆಯನ್ನು ಹೊಂದಿದೆ. ಇವರ ತಾಯಿಯವರು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ತಂದೆಯವರು ಉತ್ತಮ ತಬಲ ವಾದಕರಾಗಿದ್ದರು.‌ ಇನ್ನೂ ಇವರ ಅಜ್ಜ ಪುಟ್ಟಭಟ್ಟ ಜಹಗೀರದಾರ ಕೀರ್ತನೆ , ಹರಿಕಥೆ, ಭಾಗವತ, ಅಧ್ಯಾತ್ಮಿಕ ದರ್ಶನಗಳನ್ನು ಹೇಳುವುದರ ಜೊತೆಗೆ ಗಾಯಕರೂ ಆಗಿದ್ದರು ಎಂಬುದು ತಿಳಿದು ಬರುತ್ತದೆ. ಇದರೊಂದಿಗೆ ಸ್ವಾತಂತ್ಯ ಹೋರಾಟದಲ್ಲೂ ಸಕ್ರೀಯವಾಗಿ ಭಾಗವಹಿಸಿರುವುದು ಇತಿಹಾಸದಿಂದ ಸ್ಪಷ್ಟವಾಗುತ್ತದೆ. ಮಾನವೀಯ ಮೌಲ್ಯಗಳ ರಾಯಭಾರಿಯಾದ ಅವರು ಸಮಾನತೆ, ದಲಿತಪರ ಹಾಗು ದೌರ್ಜನ್ಯ ವಿರೋಧಿ ಆಂದೋಲನಗಳಲ್ಲೂ ಭಾಗವಹಿಸಿ ನಾಯಕತ್ವವಹಿಸಿದ್ದರು. ಇಂತಹ ಪರಿಸರದಲ್ಲಿ ಬೆಳೆದ ಶ್ರೀಮತಿ ಅನುಸೂಯ ಜಹಗೀರದಾರ ಅವರು ಕನ್ನಡ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು, ಬಿ. ಎಡ್ ಅನ್ನು ಮುಗಿಸಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹಿಂದುಸ್ತಾನಿ ಸಂಗೀತ ಕಲಾವಿದರಾದ ಇವರು ಉತ್ತಮ ಬರಹಗಾರರಾಗಿದ್ದು ಕಥೆ, ಕಾವ್ಯ, ಕಿರುಗವಿತೆಗಳು ಮತ್ತು ಗಜಲ್ ಕ್ಷೇತ್ರದಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಕನ್ನಡ ಪರ ವಿವಿಧ ಸಂಘಟನೆಗಳಲಿ ಪದಾಧಿಕಾರಿಯಾಗಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಾಗು ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿರುವ ಇವರು ಕನ್ನಡ ಸಾರಸ್ವತ ಲೋಕಕ್ಕೆ ‘ಒಡಲಬೆಂಕಿ’, ‘ನೀಹಾರಿಕೆ’, ಎಂಬ ಕವನ ಸಂಕಲನಗಳನ್ನು ಹಾಗೂ ‘ಆತ್ಮಾನುಸಂಧಾನ’, ಎಂಬ ಗಜಲ್ ಸಂಕಲನವನ್ನು ಅರ್ಪಿಸಿದ್ದಾರೆ. ಪ್ರಸ್ತುತ ಇವರ ಕಥಾಸಂಕಲನ ‘ಪರಿವರ್ತನೆ’ ಎನ್ನುವುದು ಅಚ್ಚಿನಲ್ಲಿದೆ.‌

        ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಶ್ರೀಮತಿ ಅನುಸೂಯ ಜಹಾಗೀರದಾರ ಅವರು ಆಕಾಶವಾಣಿ, ದೂರದರ್ಶನ, ಅನೇಕ ರಾಜ್ಯ, ಜಿಲ್ಲಾ ಕವಿಗೋಷ್ಠಿಗಳಲ್ಲಿ, ಹಲವು ಉತ್ಸವಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವ ಇವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಕರ್ಕಿ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ, ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ, ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ಧೆ ಪ್ರಶಸ್ತಿ, ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ.. ಮುಂತಾದವುಗಳು ಪ್ರಮುಖವಾಗಿವೆ.

         ಮನುಷ್ಯನ ಮನಸ್ಸು ನವರಸಗಳ ಆಗರ. ಈ ರಸಗಳಿಗೆಲ್ಲ ಪ್ರೀತಿಯೆ ಸ್ಥಾಯಿ ಭಾವ. ಒಬ್ಬ ವ್ಯಕ್ತಿ ಪ್ರಮಾಣಿಕವಾಗಿ ದ್ವೇಷಿಸಬೇಕಾದರೂ ಪ್ರೀತಿಯೆ ಬೇಕು. ಪ್ರೀತಿಯಿಲ್ಲದೆ ಬದುಕಲೂ ಸಾಧ್ಯವಿಲ್ಲ. ಯಾರಾದರೂ ಬದುಕುತ್ತಿದ್ದಾರೆ ಎಂದಾದರೆ ಅವರ್ಯಾರೂ ಮನುಷ್ಯರಾಗಿರಲು ಸಾಧ್ಯವೇ ಇಲ್ಲ!! ಇಂತಹ ಪ್ರೀತಿಯ ಪರಿಧಿಯಲ್ಲಿಯೆ ಉದಯಿಸಿ ಲೋಕಕ್ಕೆಲ್ಲ ಅಮೃತದ ಬಟ್ಟಲನ್ನು ಹಂಚುತ್ತಿರುವ ‘ಸಾಕಿ’ ಎಂದರೆ ಗಜಲ್!! ಇದಕ್ಕೆ ಧ್ಯಾನ ಮತ್ತು ಮನುಷ್ಯ ಪ್ರೀತಿ ಬೇಕು. ಇಂತಹ ಧ್ಯಾನಸ್ಥ ಸ್ಥಿತಿಯಲ್ಲಿ ಹಲವಾರು ಗಜಲ್ ಕಾರರು ಗಜಲ್ ಗಳನ್ನು ಚಿತ್ರಿಸಿದ್ದಾರೆ, ಚಿತ್ರಿಸುತಿದ್ದಾರೆ. ಆ ಕಲಾಕೃತಿಗಳ ರಚನೆಕಾರರಲ್ಲಿ ಶ್ರೀಮತಿ ಅನುಸೂಯ ಜಹಾಗೀರದಾರ ಅವರು ಒಬ್ಬರು. ಇವರ ಗಜಲ್ ಗಳು ಬಾಳಿನ ಚಿಂಥನ-ಮಂಥನ ಗೈಯುತ್ತ ಓದುವ ಮನಸ್ಸುಗಳನ್ನು ಸದಾ ಕಾಡುತ್ತವೆ. ಕನ್ನಡ ಭಾಷೆಯ ಮೇಲೆ ಉತ್ತಮ ಪ್ರಭುತ್ವವನ್ನು ಹೊಂದಿರುವ ಶ್ರೀಯುತರು ತಮ್ಮ ಗಜಲ್ ಗಳಲ್ಲಿ ದೇಶಿಯತೆಯನ್ನು ತುಂಬಾ ಸರಳವಾಗಿ, ಅನಾಯಾಸವಾಗಿ ರೂಢಿಸಿಕೊಂಡಿದ್ದಾರೆ. ಸಮಾಜದ ರೀತಿ- ನೀತಿಗಳು, ಮನುಷ್ಯನ ಸ್ವಭಾವಗಳು, ರಾಜಕೀಯ ಸ್ಥಿತ್ಯಂತರಗಳು, ಧಾರ್ಮಿಕ ಪಲ್ಲಟಗಳು, ಮಾನಿನಿಯ ಮನೋದರ್ಪಣ… ಇಂತಹ ವೈವಿಧ್ಯಮಯ ಚಿತ್ರಣಗಳು ಇವರ ಗಜಲ್ ಗಳಲ್ಲಿ ಅಡಕಗೊಂಡಿವೆ. 

ಕಾಯುವ ಬೇಲಿಯೇ ಎದ್ದು ಹುನ್ನಾರದಲಿ ಹೊಲವ ಮೇಯುತ್ತಿದೆ

ಸಮೃದ್ಧ ಪೈರು ಹಾಳಾಗಿ ದೂರಲೇನಿದೆ ಹೋಗಲಿಬಿಡು ಸಾಕಿ

ಸಮಾಜ ಜೀವಿಯಾದ ಮನುಷ್ಯನು ತನ್ನ ಇಹದೊಂದಿಗೆ ಅವಕಾಶವಾದವನ್ನು ಮೈಗೂಡಿಸಿಕೊಂಡು ಬಂದಿದ್ದಾನೆ. ಇದ್ಯಾವುದು ಕಾಕತಾಳೀಯವಲ್ಲ. ಎಲ್ಲವೂ ಸ್ವಯಂಕೃತ. ಈ ಕಾರಣಕ್ಕಾಗಿಯೇ ‘ಬೇಲಿ’ ಎನ್ನುವ ಊಯ್ಯಾಲೆ ಹಲವು ಬಾರಿ ನೇಣಿಗೆ ಹಾಕುವ ಹಗ್ಗವಾಗುತ್ತಿರುವುದು ದುರಂತವಾದರೂ ಸತ್ಯ. ಪರಸ್ಪರರನ್ನು ಗೌರವಿಸುವ, ಪ್ರೀತಿಸುವ ಬದಲಿಗೆ ದೂಷಿಸುವ, ಅಪವಾದ ಹೊರಿಸುವ ಕಾಯಕದಲ್ಲಿ ಇಡೀ ಮನುಕುಲವೇ ನಿರತವಾಗಿದೆ. ಮೌಲ್ಯಗಳನ್ನು ಪೂಜಿಸುವ, ಆರಾಧಿಸುವ ಹಾಗೂ ಇನ್ನಿತರರ ಹೆಗಲ ಮೇಲೆ ಹೊರಿಸುವ ಇಂದಿನ ದಿನಗಳಲ್ಲಿ ಯಾರನ್ನೂ ದೂರಲಾಗದಂತಹ ಅಸಹಾಯಕ ಸ್ಥಿತಿಯಲ್ಲಿ ಮನುಷ್ಯ ತೊಳಲಾಡುತಿದ್ದಾನೆ. ಸಾಮಾನ್ಯವಾಗಿ ಹೊಲದ ರಕ್ಷಣೆಗಾಗಿ ಬೇಲಿಯನ್ನು ಹಾಕಲಾಗುತ್ತದೆ. ಆದರೆ ಆ ಬೇಲಿಯೆ ಪೈರನ್ನು ದ್ವಂಸಗೊಳಿಸಲು ತುದಿಗಾಲಲ್ಲಿ ನಿಂತರೆ ಆ ಫಸಲನ್ನು ಕಾಯುವವರಾರು, ಕಾಯುವುದಾದರೂ ಹೇಗೆ….!! ಇದು ಕೇವಲ ಹೊಲ ಮತ್ತು ಬೆಳೆಗೆ ಸಂಬಂಧಿಸಿರದೆ ಇಡೀ ಜೀವ ಸಂಕುಲಕ್ಕೆ ಅನ್ವಯಿಸುತ್ತದೆ. ಇಲ್ಲಿ ಗಜಲ್ ಗೋ ಅವರ ಸಾಮಾಜಿಕ ಕಳಕಳಿ ಅನನ್ಯವಾಗಿದೆ.

         ಪ್ರೀತಿ-ಪ್ರೇಮವನ್ನು ನಿರಂತರವಾಗಿ ಬಯಸುವ ಮನುಷ್ಯ ತಾನು ಪ್ರೀತಿಯಲಿ ಸಿಲುಕಿದಾಗ ತನಗರಿವೆ ಇಲ್ಲದಂತೆ ‘ವಿರಹ’ವನ್ನೂ ಮುದ್ದಿಸುತ್ತಾನೆ. ಇದಕ್ಕೊಂದು ಉತ್ತಮ ಉದಾಹರಣೆಯಾಗಿ ಒಂದು ಷೇರ್ ಅನ್ನು ಗಮನಿಸಬಹುದು.

ನೀನಿಲ್ಲದ ಸಮಯ ಸುದೀರ್ಘ ಮಾತಾಡುತ್ತೇನೆ ನಿನ್ನೊಂದಿಗೆ

ನೀನು ಇದಿರಾದ ಹೊತ್ತು ಮೌನದ ಹೊಡೆತ ಹೇಗೆ ಇರಲಿ ಗೆಳತಿ

ಈ ಮೇಲಿನ ಷೇರ್ ಮಾತು-ಮೌನಗಳ ತಾಕಲಾಟದ ಬೀಗದ ಕೈ ಇರುವುದು ಪ್ರೇಮಿಗಳ ಆಂತರ್ಯದಲ್ಲಿ ಎಂಬುದನ್ನು ಧ್ವನಿಸುತ್ತದೆ. ಪ್ರೇಮಿಗಳು ಅನುದಿನವೂ, ಹಗಲಿರುಳು ತಮ್ಮ ಪ್ರೀತಿಗೆ ಪಾತ್ರರಾದವರ ನೆನೆಪನ ದೋಣಿಯಲ್ಲಿ ಸಾಗುತ್ತಿರುತ್ತಾರೆ. ಆದರೆ ಮುಖಾಮುಖಿಯಾದಾಗ…. ಮಾತು ಮೌನದ ತೆಕ್ಕೆಗೆ ಜಾರುತ್ತದೆ. ಮೌನ ಮಾತಾಡಲು ಹವಣಿಸುತ್ತಿರುತ್ತದೆ. ಇಂತಹ ಪ್ರೇಮಿಗಳ ಸಾರ್ವತ್ರಿಕ ಚಟುವಟಿಕೆಯನ್ನು ಶ್ರೀಯುತರು ತುಂಬಾ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

        ಕಾವ್ಯ ಮೀಮಾಂಸೆ ಕುರಿತು ಹೆಚ್ಚಿನ ಆಸಕ್ತಿ, ಅಭಿರುಚಿ ಹೊಂದಿರುವ ಶ್ರೀಮತಿ ಅನುಸೂಯ ಜಹಾಗೀರದಾರ ಅವರು ತಮ್ಮ ಗಜಲ್ ಗಳಲ್ಲಿ ರೂಪಕಗಳನ್ನು ಔಚಿತ್ಯಪೂರ್ಣವಾಗಿ ಬಳಸಿ, ಓದುಗರ ಮನವನ್ನು ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಇವರಿಂದ ಇನ್ನೂ ಹೆಚ್ಚು ಹೆಚ್ಚು ಗಜಲ್ ಗಳು ರೂಪುಗೊಳ್ಳಲಿ, ಅವುಗಳು ಸಂಕಲನ ರೂಪದಲ್ಲಿ ಹೊರ ಬಂದು ಸಾರಸ್ವತ ಲೋಕದಲ್ಲಿ ಚಿರಾಯುವಾಗಲಿ ಎಂದು ಶುಭ ಕೋರುತ್ತೇನೆ.

ನಗು ನಗುತ್ತ ನನ್ನನ್ನು ನೋಡಬೇಡ

ನನ್ನ ಜೊತೆ ನಿನಗೂ ನೋವಾಗಿದೆ

                             –ಕೈಫ್ ಭೋಪಾಲಿ

     “ಗಡಿಯಾರದ ಮುಳ್ಳುಗಳು ತಿರುಗುತಿವೆ ಮೌನವಾಗಿ. ಮುಳ್ಳಿನ ಮೊನಚಿಗೆ ಎಲ್ಲರೂ ತಲೆ ಬಾಗಲೆ ಬೇಕಲ್ಲವೇ…!!

ಮತ್ತೆ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಬಂದು ನಿಲ್ಲುವೆ, ಗಜಲ್ ಗಾರುಡಿಗನ ಹೆಜ್ಜೆ ಗುರುತುಗಳೊಂದಿಗೆ!! ನಿರೀಕ್ಷಿಸುವಿರಲ್ಲವೆ… ಗೊತ್ತು, ನನ್ನನ್ನು ಸ್ವಾಗತಿಸಲು ಸಿದ್ಧರಿರುವಿರೆಂದು.

ಎಲ್ಲರಿಗೂ ಹೃನ್ಮನದಿ ವಂದನೆಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top