ಕಥಾಸಂಗಾತಿ
ಸೌಮ್ಯ-ಸೌಖ್ಯ
ಮಾಲತಿ ಎಸ್.ಆರಾಧ್ಯ
ಸಪ್ತ ಸಾಗರಗಳ ಆಚೆ ದೂರದೂರಿನ ಬೆಟ್ಟಗಳ ಕಾಡುಮೇಡು ನದ ನದಿಗಳ ಆಚೆ ಎಲ್ಲೇ ಹೋಗಲಿ ಹೆಣ್ಣು ಒಂದು ಸಂಸಾರದ ಕಣ್ಣು. ಒಂದು ಗಾಡಿಗೆ ಹೇಗೆ ಎರಡು ಚಕ್ರಗಳಿರುತ್ತವೆಯೋ ಹಾಗೆ ಒಂದು ಚಕ್ರ ಇಲ್ಲದೆ ಹೋದರೆ ಜೀವನ ಎನ್ನುವುದು ಒಂದು ಒಣ ಮರದಂತೆ ನೀರಿಲ್ಲದ ಬಾವಿಯಂತೆ ಹೂವಿಲ್ಲದ ತೋಟದಂತೆ …..
ಬಟ್ಟೆಯ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಸೌಮ್ಯಳ ಬದುಕು ಎಲ್ಲರಂತೆ ಸುಖವಾದ, ಗಂಡ ಹೆಂಡತಿ ಹಾಗೂ ಎರಡು ಮಕ್ಕಳೊಂದಿಗೆ ಸುಖೀ ಸಂಸಾರ.
ಹೀಗಿರುವಾಗ ಅದೇ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕ ಇವಳನ್ನು ಕಂಡು ಮಾತನಾಡಲು ಪ್ರಾರಂಭ ಮಾಡಿದನು. ತುಂಬಾ ಒಳ್ಳೆಯ ವ್ಯಕ್ತಿ ಹಾಗೂ ಸರಳ ಸ್ವಭಾವದವನು.ಈ ಗಿರಣಿಗೆ ಕೆಲಸಕ್ಕೆ ಬಂದಾಗಿನಿಂದ ಸೌಮ್ಯ ಳ ನಡೆ ನುಡಿ ನೋಡಿ,ಅವಳ ಸ್ನೇಹಕ್ಕೆ ಹಾತೊರೆಯುತ್ತಿದ್ದ. ಇಬ್ಬರಿಗೂ ಪರಿಚಯವಾಗಿ ,ಕೂಡಿ ಮಾತುಕತೆಯಲ್ಲಿ ಆಗಾಗ ಅವರ ಕಷ್ಟ ಸುಖ ಎಲ್ಲವನ್ನು ಹಂಚಿಕೊಳ್ಳುತ್ತಿದ್ದರು ಒಬ್ಬರಿಗೊಬ್ಬರು.
ಸೌಮ್ಯಳ ಮನದಲ್ಲಿ ಸ್ನೇಹ ಒಂದನ್ನು ಬಿಟ್ಟು ಬೇರೆ ಯಾವುದೇ ಭಾವನೆ ಯಾಗಲಿ ಇರಲಿಲ್ಲ. ನಿಷ್ಕಲ್ಮಶವಾದ ಮನಸ್ಸು ಸೌಮ್ಯಳದ್ದು. ದಿನವೂ ಭೇಟಿಯಾಗುತ್ತಿದ್ದ ಬಟ್ಟೆ ಗಿರಣಿಯಲ್ಲಿ ಅಶೋಕನಿಗೆ ಎಲ್ಲೋ ಒಂದು ಮನದಲಿ ಪ್ರೀತಿಯ ರೂಪಕ್ಕೆ ತಿರುಗಲು ಕಾರಣವಾಯಿತು. ಹಾಗಾಗಿ ಸೌಮ್ಯ ನಡೆ-ನುಡಿ ಅವಳ ಮಾತು ವೈಖರಿ ಎಲ್ಲವೂ ಸಹ ಅಶೋಕನ ಪ್ರೀತಿಗೆ ಒಂದು ಮುನ್ನುಡಿಯನ್ನು ಬರೆಯುತ್ತಾ ಬಂತು. ಒಂದು ದಿನ ಸಮಯ ನೋಡಿ ಅಶೋಕನ ಮನದಲ್ಲಿರುವ ಭಾವನೆಯನ್ನು ಸೌಮ್ಯಾಳ ಮುಂದೆ ಉಸುರಿದಾಗ ಸೌಮ್ಯ ಇದಕ್ಕೆ ಖಡಾ ಖಂಡಿತವಾಗಿನಿರಾಕರಿಸುವಳು .ನಿನಗೇನಾದರೂ ಬುಧ್ದಿ ಇದೆಯಾ ,ನಂಗೆ ಗಂಡ ,ಎರಡು ಮಕ್ಕಳು ಇದಾರೆ.ನಾನ್ಸೆನ್ಸ್ ಅಂತ ಚೆನ್ನಾಗಿ ಬೈದು ಕಳಿಸಿದಳು.
ಸೌಮ್ಯಳ ಸುಖೀ ಕುಟುಂಬದಲ್ಲಿ ಯಾರೇ ಅಡ್ಡ ಬಂದರೂ ಅವಳು ಸಹಿಸುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಅಶೋಕ ಸ್ವಲ್ಪ ದಿನ ಕೆಲಸಕ್ಕೆ ಬರಲಿಲ್ಲ.ಇದನ್ನು ಕಂಡ ಸೌಮ್ಯ ಕುಪಿತಗೊಂಡು,ತನಗಿಂತ ಚಿಕ್ಕವನಾದ ಅಶೋಕನಿಗೆ ಫೋನಾಯಿಸಿದಳು. ಫೋನು ಸ್ವಿಚ್ ಆಫ್ ಆಗಿತ್ತು. ಮನಸ್ಸಿಗೆ ಇಲ್ಲಸಲ್ಲದ ಆಲೋಚನೆಗಳು.
ಆ ದಿನ ಹೇಗೋ ಸಾಗಿ ಹೋಯಿತು ಮಾರನೆಯ ದಿನ ಮತ್ತೆ ಸೌಮ್ಯ ಕೆಲಸಕ್ಕೆ ಬಂದಾಗ ಅಶೋಕನಿಗೆ ಫೋನಾಯಿಸಿದಳು ಫೋನು ರಿಂಗಾಯಿತು ಆದರೆ ತೆಗೆದುಕೊಳ್ಳಲಿಲ್ಲ. ದಿನವೂ ಸಹ ಹಾಗೆಯೇ ಸಾಗಿತ್ತು .ಈಗಲೂ ಸಹ ಮನದಲ್ಲಿ ಇಲ್ಲಸಲ್ಲದ ಆಲೋಚನೆಗಳು ಅವಳನ್ನು ಕಾಡತೊಡಗಿದವು. ಕೆಲಸ ಮುಗಿಸಿ ಮನೆಗೆ ಬಂದರೂ, ಮಕ್ಕಳ ಜೊತೆಯಲ್ಲಿ ಇದ್ದರೂ ಸಹ ಮನಸ್ಸು ಅಲ್ಲೋಲ ಕಲ್ಲೋಲ ವಾಗುತ್ತಿತ್ತು.
ಇದನ್ನು ಕಂಡ ಪತಿ ಏನಾಯಿತೆಂದು ವಿಚಾರಿಸಿದಾಗ ಇದ್ದ ವಿಷಯವನ್ನು ಗಂಡನಲ್ಲಿ ಹಂಚಿಕೊಂಡಳು. ಸೌಮ್ಯಳ ಗಂಡ ಇದನ್ನು ಕೇಳಿ ಅವಳಿಗೆ ಸಾಂತ್ವನದ ಮಾತುಗಳನ್ನು ಆಡಿ, ಅಶೋಕನನ್ನು ಮನೆಗೆ ಬರುವಂತೆ ಆಹ್ವಾನಿಸಲು ಹೇಳಿದ.
ಮರುದಿನ ಕೆಲಸಕ್ಕೆ ಹೋದಾಗ ಅಶೋಕನ ಪ್ರತ್ಯಕ್ಷವಾಯಿತು .ಮುಖ ಮಾತ್ರ ಸಪ್ಪೆಮೋರೆ. ಮನುಷ್ಯನಲ್ಲಿ ಏನೋ ಸೋಮಾರಿತನ.ಯಾವುದರಲ್ಲಿಯೂ ಸಹ ಮನಸ್ಸಿಲ್ಲ ದಂತೆ ಭಾಸವಾಗುತ್ತಿತ್ತು. ಸೌಮ್ಯಳನ್ನು ನೋಡಿಯೂ ನೋಡದಂತೆ ಅವನ ಕೆಲಸದಲ್ಲಿ ಮಗ್ನನಾದ.
ಸೌಮ್ಯಾಳೆ ಅಶೋಕನ ಹತ್ತಿರ ಹೋಗಿ ,ನನ್ನನ್ನು ಕ್ಷಮಿಸು ಎಂದಳು.ನಿನಗೆ ನಾ ಬೈದಿರಬಾರದಿತ್ತು…ಎಂದಳು.ಅಶೋಕ ಮೌನವಾಗಿದ್ದ .ಏನೊಂದೂ ಉತ್ತರಿಸಲಿಲ್ಲ. ಮತ್ತೆ ಸೌಮ್ಯ ಮಾತನ್ನು ಮುಂದುವರಿಸಿ…. “ಅಶೋಕ ಈ ದಿನ ನಮ್ಮ ಮನೆಗೆ ಸಂಜೆಯ ಟೀಗೆ ಬರಬೇಕು “ಎಂದು ಆಹ್ವಾನವಿತ್ತಳು. ಒಲ್ಲದ ಮನಸ್ಸಿನಿಂದ ಆಯಿತು ಎಂದು ತಲೆಯಾಡಿಸಿದ. ಮಧ್ಯಾಹ್ನದ ಊಟಕ್ಕೂ ಸಹ ಜೊತೆಯಲ್ಲಿ ಕೂರಲು ಬರಲಿಲ್ಲ ದೂರದಲ್ಲಿ ಒಬ್ಬನೇ ಕೂತು ಊಟ ಮಾಡತೊಡಗಿದ. ಸೌಮ್ಯಳೂ ಸಹ ಏನೂ ಮಾತಾಡದೆ ಮೌನವಾಗಿದ್ದಳು. ಸಂಜೆ ಮನೆಗೆ ಹಿಂದಿರುಗುವ ಸಮಯದಲ್ಲಿ ಮತ್ತೆ ಅಶೋಕನಿಗೆ ನೆನಪಿಸಿದಳು. ಆರು ಗಂಟೆಗೆ ಬರುವೆನೆಂದು ತಿಳಿಸಿದನು.
ಅಶೋಕ ನಿಗಾಗಿ ಕಾಯುತ್ತಿದ್ದ ಸೌಮ್ಯಳ ಸಂಸಾರ ಗೇಟಿನ ಬಳಿ ಅಶೋಕನನ್ನು ಕಂಡು ಹೃತ್ಪೂರ್ವಕವಾಗಿ ಸ್ವಾಗತಿಸಿದರುಸೌಮ್ಯಳ ಮಕ್ಕಳು ಚಿಕ್ಕಪ್ಪ ಎಂದು….ಅಶೋಕನ ಕೈಯನ್ನು ಆಕಡೆ ಈಕಡೆ ಹಿಡಿದರು
ಅಶೋಕನಿಗೆ ಗಲಿಬಿಲಿಯಾಯಿತು .ಚಿಕ್ಕಪ್ಪ ,..ಎಂದು ಕರೆದಿದ್ದಕ್ಕೆ.
ಮನೆಯೊಳಗಡೆ ಬಂದ ಅಶೋಕನನ್ನು ಕುಳಿತುಕೊಳ್ಳುವಂತೆ ಹೇಳಿದರು .ಕಾಫಿಯನ್ನು ತರಲು ಸೌಖ್ಯಳಿಗೆ ಹೇಳಿದರು. ಯಾರಿದು ಸೌಖ್ಯ ಎಂದು ಚಿಂತೆಯಾಯಿತು
ಕಾಫಿಯನ್ನು ತಂದ ಸೌಖ್ಯ ಳನ್ನು ನೋಡಿ ದಿಗ್ಭ್ರಮೆಗೊಂಡು ಹಾಗೆಯೇ ಎದ್ದುನಿಂತ. ತನ್ನ ಕಣ್ಣನ್ನು ನಂಬಲಾಗಲಿಲ್ಲ. ಎದುರಿಗೆ ಸೌಮ್ಯಳೇ ನಿಂತಂತೆ ಭಾಸವಾಯಿತು.ಸಾವರಿಸಿಕೊಂಡು ಮತ್ತೆ ಕುಳಿತ . ಗಟಗಟ ನೀರು ಕುಡಿದ.
ಸೌಮ್ಯಳ ಗಂಡ ಸೌಖ್ಯ ಳನ್ನು ಪರಿಚಯಿಸಿದ. ಇವಳು ಸೌಮ್ಯಳ ತಂಗಿ ಸೌಖ್ಯ .ಇವರಿಬ್ಬರೂ ಅವಳಿಜವಳಿ .ಒಬ್ಬರನ್ನು ನೋಡಿದರೆ ಮತ್ತೊಬ್ಬರನ್ನು ನೋಡುವ ಹಾಗಿಲ್ಲ.ಒಂದೇ ಪ್ರತಿ ರೂಪು. ಬುದ್ಧಿಯಲ್ಲಿ ನಡತೆಯಲ್ಲಿ ಎಲ್ಲವೂ ಇಬ್ಬರೂ ಒಬ್ಬರನ್ನೊಬ್ಬರು ಹೋಲುತ್ತಿದ್ದರು.
ಸೌಮ್ಯ ಳ ಗಂಡ ಮಾತು ಮುಂದುವರಿಸಿ,ನನ್ನ ಮಾವ ಹೋಗುವಾಗ ತಂಗಿಯ ಜವಾಬ್ದಾರಿ ನಮ್ಮಿಬ್ಬರ ಮೇಲೆ ಬಿಟ್ಟು ಹೋದರು.ಸೌಖ್ಯ ಬಿಕಾಂ.ಪದವೀಧರೆ . ಎಂದು ಸುಮ್ಮನಾದ
ಮತ್ತೆ ಸೌಮ್ಯಳ ಗಂಡನೇ ಮಾತು ಮುಂದುವರಿಸಿ….
ಸೌಖ್ಯ ಳನ್ನು ಮದುವೆಯಾಗುವುದಾದರೆ …..ಎಂದು ಮಾತು ಆರಂಭಿಸುವುದರಲ್ಲೇ….
ಮಾತನ್ನು ತಡೆದು, ಅಶೋಕ ಹೇಳಿದ “ಇವಳು ನನ್ನ ಹೆಂಡತಿ” ಎಂದು ಎಲ್ಲರೂ ಜೋರಾದ ನಗುವಿನೊಂದಿಗೆ ಸಮಸ್ಯೆಗಳೆಲ್ಲಾ ಬಗ್ಗೆ ಹರಿದಂತಾಯಿತು. ಒಂದು ಒಳ್ಳೆಯ ಮುನ್ನುಡಿಗೆ ಹೆಜ್ಜೆ ಇಟ್ಟಂತಾಯಿತು.
ಮಾಲತಿ ಎಸ್.ಆರಾಧ್ಯ