ಜಾನಪದ ಸೌರಭದ ಬೆನ್ನು ಹತ್ತಿ

ಪುಸ್ತಕ ಸಂಗಾತಿ

ಜಾನಪದ ಸೌರಭದ ಬೆನ್ನು ಹತ್ತಿ

ಹಾಲುಂಡ ತವರೀಗಿ ಏನೆಂದು ಹಾಡಲಿ

ಹೊಳೆದಂಡಿಲಿರುವ ಕರಕೀಯ| ಕುಡಿಯಂಗ|

ಹಬ್ಬಲಿ ಅವರ ರಸಬಳ್ಳಿ||”

             ಸೃಷ್ಟಿಯ ಬಹುಭಾಗ ಜಲದಿಂದ ಆವೃತವಾಗಿದ್ದು, ಆ ಜಲದಿಂದಲೆ ಜೀವಸಂಕುಲಗಳ ಸೃಷ್ಟಿ ಆಗಿದೆ ಎನ್ನಲಾಗುತ್ತದೆ. ಆದಿಮಾನವನ ಜೊತೆ ಜೊತೆಗೆ ಅವನ ನಡವಳಿಕೆಗಳು, ಪದ್ದತಿಗಳು, ಆಚರಣೆಗಳು, ನಂಬಿಕೆಗಳು ಕೂಡ ಚಿಗುರೊಡೆದವು. ಇವುಗಳ ಸಮಗ್ರ ಮೊತ್ತವೇ ಜಾನಪದ. ಅಕ್ಷರ ಲೋಕಕ್ಕೆ ಅಪರಿಚಿತರಾಗಿದ್ದರೂ ಸೃಷ್ಟಿಶೀಲತೆಯಿಂದ ಅತ್ಯುನ್ನತ ಜ್ಞಾನ ಪರಂಪರೆಯನ್ನು ಕಟ್ಟಿದವರೆ ಇದರ ವಾರಸುದಾರರು. ಅವರ ರಚನೆಗಳಲ್ಲಿ ತೀವ್ರತರವಾದ ತತ್ವಜ್ಞಾನವಿದೆ. ಧಾರ್ಮಿಕ ಆಯಾಮವಿದೆ. ಒಂದು ನಾಡಿನ ಪರಂಪರೆ, ಸಂಸ್ಕೃತಿಯ ಸತ್ವ ಎಲ್ಲವೂ ಅಡಗಿದೆ. ಸಾವಿರಾರು ವಸಂತಗಳಿಂದ ನಮ್ಮ ಬದುಕನ್ನು ರಸಪೂರ್ಣವಾಗಿ, ಜೀವಂತವಾಗಿ ಉಳಿಸಿಕೊಂಡು ಬಂದ ಶ್ರೀಮಂತಿಕೆಯಿದೆ. ಆದರೆ ನಾವಿಂದು ಜಾಗತಿಕರಣದ ಹೊಟ್ಟೆಬಾಕ ಸಂಸ್ಕೃತಿಯ ಸುಳಿಯಲ್ಲಿ ಕಳೆದು ಹೋಗುತಿದ್ದೇವೆ. ನಾಗರಿಕತೆ, ಆಧುನಿಕತೆಯ ಹೆಸರಿನಲ್ಲಿ ನಾವಿಂದು ಜಾನಪದ ಜಗತ್ತಿನಿಂದ ವಿಮುಖರಾಗುತ್ತಿದ್ದೇವೆ. ನಮ್ಮ ಸಿರಿತನದ ಸೊಬಗನ್ನು ನಾವೆ ಕಾಲ ಕಸದಂತೆ ಅಲಕ್ಷಿಸಿ ದರಿದ್ರತನವನ್ನು ಆಲಂಗಿಸುತಿದ್ದೇವೆ. ಇಂತಹ ಶ್ರೀಮಂತಿಕೆಯನ್ನು ಕಳೆದುಕೊಳ್ಳುವುದೆಂದರೆ ನಮ್ಮ ಬಾಳು, ನಮ್ಮ ನಾಡು ಸಾಂಸ್ಕೃತಿಕವಾಗಿ ಬೆಂದು ಬರಡಾದಂತೆ. ಜನಸಾಮಾನ್ಯರ, ಜನಪದರ ಬದುಕೇ ಆಗಿದ್ದ ಸಾಹಿತ್ಯ, ಸಂಗೀತ, ಕುಣಿತ, ಆಚರಣೆಗಳೆಲ್ಲವೂ ನಳನಳಿಸುವ ಹೊಸ ನಾಗರಿಕತೆಯ ಪ್ರಭಾವ ವಲಯದಲ್ಲಿ ಕಳೆಗುಂದುತ್ತಿರುವುದು ದುರಂತವಾದರೂ ನಗ್ನ ಸತ್ಯ. ಜಾನಪದವೆಂದರೆ ಮನುಕುಲದ ಜನಾಂಗಗಳ ಪಳೆಯುಳಿಕೆಗಳನ್ನು ಪ್ರೀತಿಸುತ್ತ ಸಮಗ್ರವಾಗಿ ಸಂಗ್ರಹಿಸಿ ಅಧ್ಯಯನ ಮಾಡುವುದಾಗಿದೆ. ಇದು ನಮ್ಮ ಸಮಾಜದ ಅರಿವು, ಆಚಾರ, ವಿಚಾರ, ಹೆಜ್ಜೆ ಗುರುತುಗಳ ಮೊತ್ತವೇ ಜಾನಪದ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ದೇ.ಜವರೇಗೌಡ ಅವರು ಹೇಳಿದ “ಬಾಲಕೃಷ್ಣನ ಬಾಯಿಯಲ್ಲಿ ಬ್ರಹ್ಮಾಂಡವು ಅಡಗಿರುವಂತೆ ಜಾನಪದದಲ್ಲಿ ಎಲ್ಲವೂ ಅಡಗಿದೆ” ಎಂಬುದು ಅಕ್ಷರಶಃ ಸತ್ಯವಾಗಿದೆ. ಬದುಕಿನ ಸಮೃದ್ಧಿಯ ಭಾಗವಾಗಿರುವ ಇಂತಹ ಜ್ಞಾನ ಪರಂಪರೆಯನ್ನು ಸಂಗ್ರಹಿಸಬೇಕೆಂಬ ತುಡಿತ 19ನೇ ಶತಮಾನದಲ್ಲಿ ಆರಂಭಗೊಂಡಾಗ ನಾಡಿನುದ್ದಕ್ಕೂ ಅನೇಕ ಹಿರಿಯರು ಹಳ್ಳಿಗಳಿಗೆ ತೆರಳಿ ದಾಖಲಿಸುವ ಕ್ರಿಯೆಗೆ ನಾಂದಿ ಹಾಡಿದರು.

        ಜಾನಪದ ಲಿಖಿತ ದಾಖಲೆಗಳ ಸೋಂಕಿನಿಂದ ದೂರವಿರುವಂತದ್ದು. ಅನುಕರಣೆ, ಕಂಠಸ್ಥವೆ ಇದರ ಸ್ಥಾಯಿ ಭಾವ.  ಆಶು ಕವಿತ್ವವೆ ಜಾನಪದದ ಅಸ್ಮಿತೆ.‌ ಅಂತೆಯೇ ಶ್ರೀವಿಜಯ ಜನಪದರನ್ನು ಕುರಿತು “ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್” ಎಂದು ಹೇಳಿದ್ದು.‌ ಹೆಸರಿಲ್ಲದ, ಹೆಸರೊಲ್ಲದ ಸಹೃದಯಿಗಳು ಅವರು. ಬದುಕಿನ ಅನುಭವಗಳೆ ಅವರ ಅಭಿವ್ಯಕ್ತಿಯ ಮೂಲಗೀತೆ. ಅವರು ತಮ್ಮ ಪ್ರತಿದಿನದ ಬದುಕಿನ ಎಲ್ಲ ಚಟುವಟಿಕೆಗಳ ಹಿಂದಿರುವ ದೈಹಿಕ ಶ್ರಮವನ್ನು ನಿಗಿಸಲು ಹಾಡು ಕಟ್ಟಿ ಹಾಡಿದರು, ಹಾಡೇ ಅವರ ಬದುಕಾಯಿತು.‌ ಅದುವೆ ನೈತಿಕ ತಳಹದಿಯಾಯಿತು. ಹಳ್ಳಿ ಬದುಕಿನ ಅನುಭವ ಇಲ್ಲದ ಜನಗಳ ನಡುವೆಯೂ ಒಂದು ಹೊಸ ಸಂಚಲನವನ್ನು ಮೂಡಿಸುವ ಶಕ್ತಿ ಜಾನಪದಕ್ಕೆ ಇದೆ. ಬಾಯಿಯಿಂದ ಬಾಯಿಗೆ ತಲೆಮಾರುಗಳ ನಡುವೆ ಉಳಿದು ಬೆಳೆದು ಬಂದಿರುವ ಈ ಶ್ರೀಮಂತ ಪರಂಪರೆಗೆ ಒಂದು ನೆಲೆ ದೊರಕಬೇಕಾಗಿದೆ. ಜಾನಪದ ಎನ್ನುವುದು ಕೇವಲ ಸಾಹಿತ್ಯವೆಂದಾಗಲಿ ಅಥವಾ ಹಳ್ಳಿಯ ತಾಯಂದಿರು ಕಟ್ಟಿದ್ದ ಸಾಹಿತ್ಯವೆಂದಾಗಲಿ ಅಲ್ಲ. ಜನಪದವೆ ಅವರ ಬದುಕಿನ ಸಹಜ ಉಸಿರು, ಅಭಿವ್ಯಕ್ತಿ ಕೂಡ. ಹೀಗಾಗಿಯೇ ಇಲ್ಲಿನ ಭಾಷೆ ಸಹಜವಾಗಿಯೂ, ಸರಳವಾಗಿಯೂ ಇದೆ. ಎಲ್ಲರಿಗೂ ಬಾಳೆಹಣ್ಣಿನಂತೆ ಸುಲಭವಾಗಿ ಅರಗುತ್ತದೆ. ದೈನಂದಿನ ಬದುಕಿನ ಆಡುನುಡಿಯೇ ಗರತಿಯರ ಬಾಯಲ್ಲಿ ಹಾಡಿನ ರೂಪವನ್ನು ಪಡೆದುಕೊಂಡಿದೆ. ಇದು ಮನುಕುಲದ ಹುಟ್ಟಿನೊಂದಿಗೆ ಉದಯಿಸಿದರೂ ನಮಗೆ ಪರಿಚಯವಾದದ್ದು ತೀರ ಇತ್ತೀಚೆಗೆ. ಅಂದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜಾನಪದ ಸಂಗ್ರಹ ಹಾಗೂ ಅಧ್ಯಯನಗಳ ಬಗೆಗೆ 19ನೆಯ ಶತಮಾನದಲ್ಲಿ ವಿಶೇಷವಾದ ಆಸಕ್ತಿ ಮೂಡಿ ಆ ನಿಟ್ಟಿನಲ್ಲಿ ಹೆಜ್ಜೆಗಳನ್ನಿಟ್ಟರು!! ನಂತರದ ದಿನಗಳಲ್ಲಿ ಭಾರತದಲ್ಲಿಯೂ ಜಾನಪದ ಸಂಗ್ರಹಕಾರ್ಯ ಆರಂಭವಾಯಿತು. ಪಾಶ್ಚಾತ್ಯ ವಿದ್ವಾಂಸರೂ ಅಧಿಕಾರಿಗಳೂ ಭಾರತೀಯ ವಿದ್ವಾಂಸರೂ ಭಾರತದ ನಾನಾ ಕಡೆಗಳಲ್ಲಿ ಜನಪದ ಕಥೆಗಳನ್ನೂ, ಗಾದೆಗಳನ್ನೂ, ಲಾವಣಿಗಳನ್ನೂ, ಸಂಪ್ರದಾಯ, ನಂಬಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಾಹಿತ್ಯವನ್ನು ಅಲ್ಲಲ್ಲಿ ಸಂಗ್ರಹಿಸುತ್ತ ಸಾಗಿದರು. ಅದೆಲ್ಲ ಸಾಹಿತ್ಯವೂ ಇಂಗ್ಲೀಷಿಗೆ ಅನುವಾದಗೊಂಡು ಪ್ರಕಟವಾಗಿ ವಿಶ್ವಮಟ್ಟದಲ್ಲಿ ಭಾರತೀಯ ಜಾನಪದದ ಕಡೆ ಪ್ರಸಿದ್ಧ ವಿದ್ವಾಂಸರ ದೃಷ್ಟಿ ಹರಿಯಲು ಕಾರಣವಾಯಿತು. ಇನ್ನೂ ಕನ್ನಡದಲ್ಲಿ ಜಾನಪದ ಸಂಗ್ರಹದ ಪ್ರಥಮ ಪ್ರಯತ್ನವನ್ನು 1816ರ ವೇಳೆಗೇ ಗುರುತಿಸಬಹುದು. ಈ ಅವಧಿಯಲ್ಲಿ ಪ್ರಕಟವಾದ ಅಬೈಡುಬ್ಯೊಸನ “ಹಿಂದೂ ಮ್ಯಾನರ್ಸ್‌”, “ಕಸ್ಟಮ್ಸ್‌ ಅಂಡ್ ಸೆರೆಮೊನೀಸ್”, ಎಂಬ ಗ್ರಂಥಗಳಲ್ಲಿ ಕನ್ನಡ ಜನಪದ ಕಥೆಗಳ ಕೆಲವು ಭಿನ್ನರೂಪಗಳಿವೆ. ಕನ್ನಡ ಜಾನಪದ ಸಂಗ್ರಹದ ಇತಿಹಾಸದಲ್ಲಿ ಚಾರಲ್ಸ್‌ ಇ. ಗೋವರನ ಹೆಸರು ಅತ್ಯಂತ ಗಮನಾರ್ಹವಾಗಿದೆ. 19ನೇ ಶತಮಾನದ ಮಧ್ಯಭಾಗದಲ್ಲಿ ಪ್ರಕಟವಾದ “ಪೋಕ್ ಸಾಂಗ್ಸ್‌ ಆಫ್ ಸದರನ್ ಇಂಡಿಯ” ಎಂಬ ತನ್ನ ಗ್ರಂಥದಲ್ಲಿ ಈತ ಭಾರತದ ಪ್ರಮುಖ ಭಾಷೆಗಳ ಜನಪದಗೀತೆಗಳನ್ನು ಇಂಗ್ಲೀಷಿಗೆ ಅನುವಾದಿಸಿ ಪ್ರಕಟಿಸಿದ್ದಾನೆ. ಕನ್ನಡ ವಿದ್ವತ್ತಿನ ಬೆಳೆವಣಿಗೆಗೆ ರೆ. ಎಫ್. ಕಿಟ್ಟೆಲನ ಕೊಡುಗೆ ಅನನ್ಯ ಮತ್ತು ಅನುಪಮ. ಜರ್ಮನಿಯ ಈ ವಿದ್ವಾಂಸ ಕ್ರೈಸ್ತಮತ ಪ್ರಚಾರಕ್ಕಾಗಿ ಭಾರತಕ್ಕೆ ಬಂದು ಮಂಗಳೂರಿನಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿಕೊಂಡರು. ಮತಪ್ರಸಾರಕ್ಕಿಂತಲೂ ಕನ್ನಡದ ಉದ್ಧಾರಕ್ಕಾಗಿ ಕಿಟ್ಟೆಲ್ ಕೈಗೊಂಡ ಕಾರ್ಯಗಳು ದೊಡ್ಡ ಐತಿಹಾಸಿಕ ದಾಖಲೆಗಳಾಗಿ ಉಳಿದಿವೆ. 1894ರಲ್ಲಿ ಪ್ರಕಟವಾದ ಈ ಶಬ್ದಕೋಶದಲ್ಲಿ ಕಿಟ್ಟೆಲ್ ಕನ್ನಡ ನಾಡಿನ ನಾನಾ ಕಡೆಯ ಜನಪ್ರಿಯ ಗಾದೆಗಳನ್ನು ಸಂಗ್ರಹಿಸಿ ನೀಡಿರುವುದು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ದೊಡ್ಡ ಸೇವೆಯಾಗಿದೆ. ಅದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಗಾದೆಗಳಿವೆ. ಸೇರಿವೆ.

         ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನವೋದಯ ಕ್ರಾಂತಿಯ ಜೊತೆಯಲ್ಲಿಯೇ ಜಾನಪದ ನವೋದಯವೂ ಆಯಿತು. ಎನ್ನಬಹುದು. 1925ಕ್ಕೂ ಮುಂಚೆಯೇ ಪ್ರಕಟವಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರ ಲೇಖನ “ಕನ್ನಡ ಲಾವಣಿ ಸಾಂಗತ್ಯ”-ಎಂಬುದು ಕನ್ನಡ ಜನಪದ ಸಾಹಿತ್ಯದ ನಾನಾ ಮುಖಗಳನ್ನು ಪರಿಚಯ ಮಾಡಿಕೊಟ್ಟು, ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸಂಗ್ರಹ ಕಾರ್ಯಕ್ಕೆ ಒಂದು ರೀತಿಯ ಪ್ರೇರಣೆಯನ್ನು, ಮುನ್ನುಡಿಯನ್ನು ಬರೆಯಿತು. ಮುಂದೆ ನಾಡಿನಾದ್ಯಂತ ಹಲವಾರು ಜಾನಪದ ಸಂಶೋಧಕರು, ಚಿಂತಕರು ಮಹತ್ತರವಾದ ಕಾರ್ಯವನ್ನು ಮಾಡಿದ್ದಾರೆ. ಅವರಲ್ಲಿ ಹಾ.ಮಾ.ನಾಯಕ, ಜೀ.ಶಂ.ಪರಮಶಿವಯ್ಯ, ಹಲಸಂಗಿ ಗೆಳೆಯರು, ಡಾ. ಎಂ.ಎಸ್.ಲಠ್ಠೆ, ಡಾ. ಬಿ.ಬಿ.ಹೆಂಡಿ, ಡಾ.ಎಚ್. ಜೆ. ಲಕ್ಕಪ್ಪಗೌಡ, ಸಿಂಪಿ ಲಿಂಗಣ್ಣ, ಪ್ರೊ. ಅಂಬಳಿಕೆ ಹಿರಿಯಣ್ಣ, ಡಾ. ಎಂ.ಎಸ್. ಸುಂಕಾಪುರ, ಡಾ. ಶಾಂತಾ ಇಮ್ರಾಪುರ, ಡಾ. ಬೆಟಗೇರಿ ಕೃಷ್ಣಶರ್ಮ, ಡಾ. ಚೆನ್ನಣ್ಣ ವಾಲಿಕಾರ, ಡಾ. ಪಿ.ಕೆ.ಖಂಡೋಬಾ, ಡಾ. ಡಿ.ಬಿ.ನಾಯಕ, ಡಾ. ವೀರಣ್ಣ ದಂಡೆ, ಡಾ. ಯಶೋಧರ ಶಾಸ್ತ್ರೀ, ಡಾ. ಬಸವರಾಜ ಪೋಲಿಸ್ ಪಾಟೀಲ್, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಬಸವರಾಜ ಸಬರದ್, ಪ್ರೊ. ಸೂಗಯ್ಯ ಹಿರೇಮಠ, ಡಾ. ಅಮರೇಶ ನುಗಡೋಣಿ, ಡಾ. ಶಕುಂತಲಾ ದುರ್ಗಿ, ಡಾ. ಹಣಮಂತರಾವ ದೊಡ್ಡಮನಿ, ಬೆ. ಗೋ. ರಮೇಶ್, ಶ್ರೀಮತಿ ಪರಿಮಳಾ…. ಮುಂತಾದ ಮಹನೀಯರ ಕೊಡುಗೆ ಅಪರಿಮಿತವಾದುದು. ಇವರೆಲ್ಲರು ಹಲವು ರೀತಿಯ ಸಂಶೋಧನೆ, ಸಂಪಾದನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಮ್ಮ ಜಾನಪದ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹೋನ್ನತ ಕಾರ್ಯವನ್ನು ಮಾಡಿದ್ದಾರೆ. ಮನುಷ್ಯ ತನ್ನ ಜೀವನದುದ್ದಕ್ಕೂ ಪ್ರಜ್ಞಾಪೂರ್ವಕವಾಗಿಯೂ ಹಾಗೂ ಅಪ್ರಜ್ಞಾಪೂರ್ವಕವಾಗಿಯೂ ಒಂದಲ್ಲ ಒಂದು ವಿಧದ ಅನ್ವೇಷಣೆಯಲ್ಲಿ ತೊಡಗಿಕೊಂಡಿರುವುದರ ಫಲವೇ ಮನುಕುಲದ ಸಾಂಸ್ಕೃತಿಕ ಚಟುವಟಿಕೆಗಳು. ಈ ಹಿನ್ನೆಲೆಯಲ್ಲಿ ಸಂಶೋಧನೆ ಯಾವ ದೃಷ್ಟಿಯಿಂದಲೂ ಹೊಸ ಸೃಷ್ಟಿಯಲ್ಲ. ಅದು ಸೃಷ್ಟಿಯಲ್ಲಿರುವ, ಬೆಳಕಿಗೆ ಬಾರದ ಹೊಸ ಅಂಶಗಳನ್ನು ಗುರುತಿಸುವ ಪ್ರಯತ್ನ, ಅವುಗಳ ಹರಹನ್ನು ವಿಸ್ತರಿಸುವ ಪ್ರಯೋಗ ಹಾಗೂ ಉಪಯುಕ್ತತೆಯನ್ನು ನಿಶ್ಚಿತಗೊಳಿಸುವ ಕ್ರಿಯೆಯಾಗಿದೆ. ಈ ಕ್ಷೇತ್ರದ ಶಿಸ್ತು ಬದ್ಧವಾದ ಬೆಳವಣಿಗೆಗೆ ಅದರ ತಾತ್ವಿಕ ತಳಹದಿ ಹಾಗೂ ಪ್ರಾಯೋಗಿಕ ಮುಖಗಳೆರಡೂ ಪುಷ್ಟಿಗೊಳ್ಳಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕವಿಗಳು, ನಾಟಕಕಾರರು, ಇತಿಹಾಸಕಾರರು, ಸಂಶೋಧಕರು, ಸಂಘಟಕರು ಹಾಗೂ ಉತ್ತಮ ಶಿಕ್ಷಕರೂ ಆಗಿರುವ ಶ್ರೀ ನಿಂಗನಗೌಡ ದೇಸಾಯಿಯವರು ಕೈಗೊಂಡಿರುವ, ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಅವರು ಮುತುವರ್ಜಿಯಿಂದ ಅಕಾಡೆಮಿಕ್ಕಾಗಿ ಸಂಪಾದಿಸಿದ “ಜಾನಪದ ಸೌರಭ” ಎಂಬ ಕಲಾಕೃತಿ. 

         ಜಾನಪದದ ಮೂಲ ತವರೂರೆಂದರೆ ಹೆಣ್ಣು. ಹೆಂಡತಿಯಾಗಿ, ತಾಯಿಯಾಗಿ, ಅತ್ತೆಯಾಗಿ, ಸಹೋದರಿಯಾಗಿ…. ದೇಶಿ ಸೊಗಡನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತಿದ್ದಾಳೆ. ಅಂತವರಲ್ಲಿ ಯಾದಗಿರಿ ಜಿಲ್ಲೆಯ ಸುರಪೂರ ತಾಲ್ಲೂಕಿನ ಪರಸನಹಳ್ಳಿ ಗ್ರಾಮದ ದಿ. ಸೂಗಮ್ಮ ಗಂ/. ಸಿದ್ದಯ್ಯ ಸ್ವಾಮಿ ಮತ್ತು ದಿ. ಕಮಲಮ್ಮ ಗಂ/. ಷಣ್ಮುಖಪ್ಪ ವಿಶ್ವಕರ್ಮ. ಇವರಿಂದ ಸಂಗ್ರಹಿಸಿದ ಜಾನಪದ ಗೀತೆಗಳ ಅದರಲ್ಲೂ ತ್ರಿಪದಿಗಳ ಸಂಗ್ರಹವೇ ಈ ಕೃತಿ. ಕೃತಿಯ ಆರಂಭದಲ್ಲಿ ಲೇಖಕರು ಈ ವಿಷಯವನ್ನು ಹಂಚಿಕೊಂಡಿರುವುದು ಅವರ ವೃತ್ತಿಪರ ಸಂಶೋಧನೆಯ ದ್ಯೋತಕವಾಗಿದೆ. ಸಾಗರದಂತೆ ವಿಶಾಲವಾಗಿರುವ ಜಾನಪದ ಜಗತ್ತಿನೊಳಗಿನ ಮುತ್ತುಗಳನ್ನು ಸಂಗ್ರಹಿಸಿ, ಸಂಪಾದಿಸಿ ಓದುಗರ ಕೈಯಲ್ಲಿಟ್ಟಿದ್ದಾರೆ. ಇದು ಒಂದು ನೂರ ಐವತ್ತೆರಡು ವೈವಿಧ್ಯಮಯ ತ್ರಿಪದಿಗಳನ್ನು ಒಳಗೊಂಡಿದೆ. ಇದು ಜೀವನದ ಅನನ್ಯತೆಯನ್ನು, ಸೊಗಸನ್ನು ಬಹು ಸುಂದರವಾಗಿ ಹಿಡಿದಿಟ್ಟಿದೆ. ಜನಪದರ ನಾಲಗೆ ತುದಿಯೊಳಗೆ ನಲಿದಾಡುತ್ತಿದ್ದ ಪದಗಳನ್ನು ಸಂಗ್ರಹಿಸುವ ಪ್ರಯತ್ನವನ್ನು ಶ್ರೀಯುತರು ಮಾಡಿದ್ದಾರೆ. ಇದರೊಂದಿಗೆ ಗಮನಿಸಬೇಕಾದ ಒಂದು ವಿಷಯವೆಂದರೆ ಪ್ರಾದೇಶಿಕ ಭಿನ್ನತೆಯ ಜೊತೆಗೆ ಸಾಮ್ಯತೆ ಹೊಂದಿರುವ ಜಾನಪದ ಗೀತೆಗಳು.

“ಏಳುತಲೆ ಎದ್ದು ಯಾರ್ಯಾರ ನೆನೆಯಲಿ|

ಎಳ್ಳು ಜೀರಿಗೆ ಬೆಳಿಯೋಳೆ | ಭೂಮಿತಾಯ| 

ಎದ್ದೊಂದು ಗಳಿಗೆ ನೆನೆವೇನು||

ಇದಕ್ಕೆ ಹೋಲುವ ಸಗರ ನಾಡಿನ ಪ್ರಾದೇಶಿಕ ದೈವಿಕತೆಯನ್ನು ಸಾರುವ ತ್ರಿಪದಿಯನ್ನು ಗೌಡರು ಇಲ್ಲಿ ಸಂಗ್ರಹಿಸಿದ್ದಾರೆ.

ಮುಂಜಾನೆದ್ದು ಮುತ್ತ್ಯೇನ ನೆನದೇನ

ಮುತ್ತಿನ ಟೊಪ್ಪಿಗೆ ಅರಳಲಿ | ಶಹಾಪೂರ

ಮುತ್ಯಾ ಬಸಯ್ಯನ ನೆನದೇನ

ಈ ತ್ರಿಪದಿಯು ತೌಲನಿಕ ಮತ್ತು ಅಂತರ ಶಿಸ್ತೀಯ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ. ಒಂದು ಸಂಪಾದನೆ ಕಾರ್ಯ ಇಲ್ಲಿಯೆ ಗೆಲ್ಲುವುದು. ಸಂಪಾದನೆ ಎಂದರೆ ಹೊಸ ದಾರಿಗಳ ಬೆಳಕಿನಲ್ಲಿ ಹಿಂದಿನ ಅಧ್ಯಯನ ಕ್ರಮಗಳನ್ನು ಮರು ಪರಿಶೀಲಿಸುವುದೆ ಆಗಿದೆ. ಸಮಕಾಲೀನ ವಿಚಾರಗಳ ಹಿನ್ನೆಲೆಯಲ್ಲಿ ಅವುಗಳನ್ನು ಮರು ಬಳಕೆಗೆ ಸಿದ್ಧಗೊಳಿಸುವುದಾಗಿದೆ. ಈ ಕೃತಿಯ ತ್ರಿಪದಿಗಳನ್ನು ಗಮನಿಸುತ್ತಾ ಹೋದರೆ ಅವರು ನೆಲೆಸಿದ ಊರಿನ ಪರಿಸರದ ಸುತ್ತ ಆಗಿ ಹೋದ ಮಹಾನುಭಾವರ, ಅವರ ನಂಬಿಕೆಯ ದೇವಾನುದೇವತೆಗಳ ಸ್ತುತಿ ನಮ್ಮನ್ನು ಇದಿರುಗೊಳ್ಳುತ್ತದೆ. ತ್ರಿಪದಿ ರೂಪದಲ್ಲಿರುವ ಇಲ್ಲಿಯ ಹಾಡುಗಳು ಕೌಟುಂಬಿಕ ಜಂವನದ ವಿವಿಧ ಅನುಭವಗಳನ್ನು, ಆಯಾಮಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಂಡು ಹೋಗುವುದೇ ಇಲ್ಲಿನ ವೈಶಿಷ್ಟ್ಯವಾಗಿದೆ. ಈ ಸೌರಭದಲ್ಲಿ ಸಂಸಾರದ ಸುಖ- ದುಃಖಗಳಿವೆ, ಬಂಧು ಬಳಗದ ನಂಟಿದೆ, ಹಬ್ಬ ಹರಿದಿನಗಳ ಸಂಭ್ರಮವಿದೆ.

      ಶಿಷ್ಟ ಪರಂಪರೆ ಮತ್ತು ಜಾನಪದ ಪರಂಪರೆಯಲ್ಲಿ ಒಂದು ಭಿನ್ನತೆ ಇದೆ. ಅದೆಂದರೆ ಹಂಚಿಕೊಂಡು ತಿನ್ನುವ ಹಾಗೂ ಮುಚ್ಚಿಟ್ಟುಕೊಂಡು ಕಬಳಿಸುವ ಹುನ್ನಾರ. ಸಾಮಾನ್ಯವಾಗಿ ಜಾನಪದ ಕಲಾವಿದರ ನಡುವೆ ಅನ್ಯೋನ್ಯತೆ ಇರುತ್ತದೆ. ಮುಕ್ತವಾಗಿ ತಮಗೆ ಬರುವುದನ್ನು ಇನ್ನೊಬ್ಬರಿಗೆ ಕಲಿಸಿಕೊಡುತ್ತಾರೆ. ಅವರಲ್ಲಿದ್ದುದನ್ನು ತಾವು ಸ್ವೀಕರಿಸುತ್ತಾರೆ. ಜನಪದರು ನಂಬಿಕೆಯ ಮೇಲೆ ಬದುಕನ್ನು ಕಟ್ಟಿಕೊಂಡವರು. ಈ ಕಾರಣಕ್ಕಾಗಿಯೇ ಜನಪದ ಸಾಹಿತ್ಯ, ಸಂಸ್ಕೃತಿಯು ಜನಸಾಮಾನ್ಯರ ನಾಲಿಗೆಯ ತೂಗು ತೊಟ್ಟಿಲಿನ ಮೇಲೆ ನರ್ತಿಸುತ್ತಾ ಜನಸಾಮಾನ್ಯರ ಸರ್ವತೋಮುಖ ಅಭಿವ್ಯಕ್ತಿಯಾಗಿದೆ. ಅಂತೆಯೇ ಕೋಮು ಸೌಹಾರ್ದತೆ ಅವರ ಉಸಿರಲ್ಲಿ ಬೆರೆತಿರುವುದನ್ನು ಗಮನಿಸಬಹುದು. ಗರತಿ ಶರಣ ಬಸವನನ್ನು ನೆನೆಯುವುದರ ಜೊತೆಗೆ ಅಲಾಯಿಪೀರನನ್ನು ಸ್ಮರಿಸುತ್ತಾಳೆ. ಭಾವೈಕ್ಯತೆಯಿಂದ ಬಾಳಲು ನಮಗೆ ದಾರಿ ದೀಪವಾಗುತ್ತಾರೆ. ಜೊತೆಗೆ ಇತಿಹಾಸದ ಪಾಠವನ್ನು ಅರಹುತ್ತವೆ. ಅಜ್ಞಾತ ಜಾನಪದರ ಹಾಡಿನಲ್ಲಿ ಈ ನಾಡಿನ ಅಂದರೆ ಸಗರ ನಾಡಿನ ಇತಿಹಾಸವಿದೆ.

ಗುತ್ತಿ ಬಸವಣ್ಣನ ಗುಡಿಯಾರ ಕಟ್ಟಿಸ್ಯಾರ

ಗಚ್ಚಿನ ಮನೆಯ ತವರವರು| ಬೇನ್ಹಾಳ

ಮಾನೆ ಉಣ್ಣುವಂತಹ ಗೌಡರ||”

ಈ ಮೇಲಿನ ತ್ರಿಪದಿಯಲ್ಲಿ ಬೇನ್ಹಾಳದ ಮಾನೆ ಉಣ್ಣುವ ಮನೆತನದ ಗೌಡರು ಗುತ್ತಿ ಬಸವಣ್ಣನ ಗುಡಿ ಕಟ್ಟಿದ್ದಾರೆ ಎಂಬ ಐತಿಹಾಸಿಕ ಮಾಹಿತಿಯನ್ನು ನೀಡುತ್ತದೆ. ಈ ದಿಸೆಯಲ್ಲಿ “ಜಾನಪದ ಸೌರಭ” ಎನ್ನುವ ಕೃತಿಯಲ್ಲಿ ಮಹಿಳೆಯರ ಬದುಕಿನ ಸ್ವಾವಲಂಬನೆಯ ಜೊತೆಗೆ ಅವರ ಆಚಾರ ವಿಚಾರಗಳ ಪರಿಧಿಯಲ್ಲಿ ಇಡೀ ಮನುಕುಲದ ಪರಂಪರೆಯ ಸಾರವಿದೆ. ಭೌಗೋಳಿಕವಾಗಿ ವಿಶಾಲ ವ್ಯಾಪ್ತಿಯುಳ್ಳ ಸಗರ ನಾಡಿನ ಮಾರ್ಗವಾಗಿ ಇಡೀ ಕರ್ನಾಟಕವನ್ನು, ಕನ್ನಡಿಗರನ್ನು ಬೆಸೆಯುವ ಶಕ್ತಿ ಈ ಹಾಡುಗಳಿದೆ.

    ಜನಪದ ಸಂಸ್ಕೃತಿಯ ಜನಕರೆಂದರೆ ನಮ್ಮ ತಾಯಂದಿರು, ಸಹೋದರಿಯರು. ಆದರೆ ಇಂದು ಆ ಹೆಣ್ಣು ಮಕ್ಕಳಲ್ಲಿಯೇ ಈ ಜನಪದ ಹಾಡುಗಳ ವಾಡಿಕೆಯು ಮರೆಯಾಗುತ್ತಾ ಬಂದಿದೆ, ಬರುತ್ತಿದೆ. ಹೆಣ್ಣು ಮಕ್ಕಳ ಹಾಡುಗಳನ್ನು ಅವರ ಕೊರಳ ಮಧುರ ಕೊಳಲಿನಿಂದ ಕೇಳುವುದರಲ್ಲಿಯೇ ಒಂದು ಸೊಗಸಿದೆ, ಜೀವದಾಯಕ ಶಕ್ತಿಯಿದೆ. ನವ ನಾಗರಿಕತೆಯಾಗಲಿ, ನೂತನ ಶಿಕ್ಷಣವಾಗಲಿ ಆ ಹಳೆಯ ಹಾಡಿನ ಸಂಭ್ರಮವನ್ನು ಬೀಳುಗಳೆಯಬಾರದು. ಕನ್ನಡಮ್ಮನ ಕಾವ್ಯ ಗಂಗೆಯ ತವರೂರೆಂದರೆ ಈ ಜಾನಪದ ಹಾಡುಗಳು. ಈ ದಿಸೆಯಲ್ಲಿ ಯೋಚಿಸಿದಾಗ ಸಾಹಿತ್ಯವನ್ನು ಹೊರತು ಪಡಿಸಿ ಜೀವನವಿಲ್ಲ. ಜೀವನದ ತಿರುಳಿನಲ್ಲಿ ಜಾನಪದ ಸಾಹಿತ್ಯದ ಪಾತ್ರ ಅವಿಸ್ಮರಣೀಯ. ಈ ನಿಟ್ಟಿನಲ್ಲಿ ಜೀವನವೇ ಕಾವ್ಯ. ಅದುವೇ ಜನವಾಣಿ.. ಅಂದರೆ ಜನಪದ ಸಾಹಿತ್ಯ. ಈ ಜನಪದ ವೇದವೇ ಎಲ್ಲ ಕನ್ನಡಿಗರಿಗೂ ಸಾಮಾನ್ಯವಾದ ತಾಯಿಯ ಮೊಲೆಹಾಲಾಗಿದೆ. ಕಾವ್ಯವೆಂದರೆ ಕಾಂತೆಯರ ಮಾತು ಎನ್ನಲಾಗುತ್ತದೆ. ಕಾಂತೆಯೆಂದರೆ ಹೆಂಡತಿ ಮಾತ್ರವಲ್ಲ; ಅಕ್ಕ-ತಂಗಿ, ತಾಯಿ-ಮಗಳು… ಮೊದಲಾದ ರೂಪಗಳಲ್ಲಿರುವ ಗರತಿ. ಸ್ತ್ರೀ ಹೃದಯ ಇಲ್ಲಿ ಲಾಸ್ಯವಾಡಿದೆ. ಹಳ್ಳಿಯ ತಾಯಂದಿರು ಪರಾಂಪರಾಗತವಾಗಿ ತಲೆಮಾರುಗಳವರೆಗೆ ಕಂಠಸ್ಥವಾಗಿಯೇ ಉಳಿಸಿಕೊಂಡು ತಮ್ಮ ನಾಲಗೆಯ ಮೇಲೆಯೇ ನಲಿದಾಡುವಂತೆ ಮಾಡಿದ ಶ್ರಮದ ಹಿರಿಮೆಯ ಪರಿಚಯ ಈ ಕೃತಿಯ ಮೂಲಕ ಲೋಕಕ್ಕಾಗಲಿ. ಈ ಹಾಡುಗಳಲ್ಲಿ ಅಂತರಾತ್ಮದ ನೆಲೆಯನ್ನು, ಹೃದಯದ ಹೊನಲನ್ನು, ಆನಂದದ ಕಳೆಯನ್ನು, ತೀರದ ರಸವನ್ನು, ಕುಂದದ ತಿಳಿಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಕೌಟುಂಬಿಕ ಬಾಳಿನ ರಸ, ಸ್ತ್ರೀ ಜೀವನದ ಒಳಗನ್ನಡಿಯಂತಿರುವ “ಜಾನಪದ ಸೌರಭ” ಕೃತಿಯ ಕಂಪು ಸಹೃದಯ ಓದುಗರ ಮನವನ್ನು ತಣಿಸಲಿ ಹಾಗೂ ನಾಡಿನಾದ್ಯಂತ ಪಸರಿಸಲಿ ಎಂದು ಮನದುಂಬಿ ಶುಭ ಕೋರುತ್ತೇನೆ.


ಡಾ. ಮಲ್ಲಿನಾಥ ಎಸ್. ತಳವಾರ

Leave a Reply

Back To Top