ಪುಸ್ತಕ ಸಂಗಾತಿ
ಮಂಗಳಮುಖಿಯರ ಸಂಗದಲ್ಲಿ
ಕಾದಂಬರಿ ಎಂದೊಡನೆ ಎಲ್ಲರ ಮನದೊಳಗೆ ಮೂಡುವ ಚಿತ್ರಣವೆಂದರೆ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ವೈದ್ಯಕೀಯ, ಪ್ರಾಕೃತಿಕ, ಕಾದಂಬರಿಗಳು. ಇವುಗಳ ಜೊತೆಗೆ ವೈಜ್ಞಾನಿಕ ಕಾದಂಬರಿಗಳು ಹಾಗೂ ಅನುಭವ ಕಥನಗಳ ಮಹತ್ವವನ್ನು ಅಲ್ಲಗಳೆಯುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಯೋಗಗಳು ಬಹಳವಾಗಿ ನಡೆಯುತ್ತಿವೆ. ಕಾದಂಬರಿ ಸಾಹಿತ್ಯದ ಒಂದು ಪ್ರಕಾರ. ಸಾಹಿತ್ಯ ಎಂದರೆ ಓದುಗರನ್ನು ಕುಣಿಸಿ, ತನು ಮನಗಳನ್ನು ತಣಿಸಿ, ಮನರಂಜನೆ ನೀಡುವುದು ಮಾತ್ರವಲ್ಲ. ಅದರ ಹೊರತಾಗಿ ಸಾಮಾಜಿಕ ಸಂಕಟಗಳಿಗೆ ಧ್ವನಿಯಾಗುವುದು. ನೊಂದವರ ಪಾಲಿಗೆ ಸಾಂತ್ವನವಾಗುವುದು. ಕತ್ತಲ ಕೂಪದಲ್ಲಿ ನರಳುವವರನ್ನು ಬೆಳಕ ನಿಚ್ಚಣಿಕೆಯನೇರಿಸುವುದಾಗಿದೆ. ಕವಿಯಾದವನು ಅರಗಿನ ಅರಮನೆಯಲ್ಲಿ ಕುಳಿತು ಸಾಹಿತ್ಯ ಕೃಷಿ ಮಾಡಲಾಗದು. ಕವಿಯಾದವನು ಹೊರ ಜಗತ್ತಿನ ಸ್ಪರ್ಶಕ್ಕೆ ಬಂದು ಅವರ ನಾಡಿಮಿಡಿತಕ್ಕೆ, ಅವರ ಹೃದಯದ ಬಡಿತಕ್ಕೆ ನಾಲಿಗೆಯಾಗಬೇಕು. ಅವರು ಅನುಭವಿಸುವ ಯಾತನೆಗಳನ್ನು ಕವಿಯಾದವನು ಅನುಸಂಧಾನ
ಮಾಡಬೇಕು. ಸಮಾಜಮುಖಿ ಬರಹಕ್ಕೆ ಚಿಕಿತ್ಸಕ ಗುಣವಿದ್ದು, ಜನಪರ ಕಾಳಜಿಗೆ ಲೇಖಕನ ಲೇಖನಿ ಸದಾ ತುಡಿಯುತ್ತಿರಬೇಕು.
ಆ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ, ವೈಜ್ಞಾನಿಕ ಹಾಗೂ ತಾರ್ಕಿಕ ಬರಹಗಳ ಮೂಲಕ ಹಲವಾರು ವಿಸ್ಮಯ ಹಾಗೂ ನಿಗೂಡ ವಿಚಾರಗಳನ್ನು ಪ್ರಾಯೋಗಿಕ ಅಧ್ಯಯನದ ದಾರಿಯಲ್ಲಿ ಸಾಗಿ ಓದುಗರಿಗೆ ಕುತೂಹಲಕಾರಿ ವಿಚಾರಧಾರೆಗಳನ್ನು ಹೊತ್ತು ತರುತ್ತಿರುವ ಶ್ಲಾಘನೀಯ ಕಾರ್ಯ ಮಾಡುತ್ತಿರುವ ನಾಡಿನ ಹೆಸರಾಂತ ಲೇಖಕರಲ್ಲಿ ಒಬ್ಬರು ಶ್ರೀ ಸಂತೋಷ್ ಕುಮಾರ್ ಮೆಹಂದಳೆ ಅವರು.
ಮನುಷ್ಯರಾಗಿ ಹುಟ್ಟಿದರು ದೈಹಿಕ ವೈಪರೀತ್ಯಗಳಿಗೆ ಬಲಿಯಾಗಿ, ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದು, ತನ್ನದೇ ಸಮುದಾಯ ಸೃಷ್ಟಿಸಿಕೊಂಡು, ಹೊಟ್ಟೆಪಾಡಿಗಾಗಿ ಒಲ್ಲದ ಕೆಲಸಗಳನ್ನು ಮಾಡುವ ಅನಿವಾರ್ಯತೆಯಲ್ಲಿ ಸಿಲುಕಿ, ಸಮಾಜದ ತಿರಸ್ಕಾರವನ್ನುಂಡು, ಜನರಿಂದ ಅವಮಾನ ಶೋಷಣೆಯ ಕರುಣಾಜನಕ ಸ್ಥಿತಿಯಲ್ಲಿ ತೊಳಲಾಡುತ್ತಿರುವ ತೃತೀಯ ಲಿಂಗಿಗಳು ಅಥವಾ ಮಂಗಳಮುಖಿಯರ ಸಾಮಾಜಿಕ, ಮಾನಸಿಕ, ಭಾವನಾತ್ಮಕ ಮನೋಗತವನ್ನು ಅಧ್ಯಯನ ಮಾಡಿ ಜನರಿಗೆ ಅವರ ಬಗ್ಗೆ ನಿಖರ ಹಾಗೂ ಸ್ಪಷ್ಟ ಮಾಹಿತಿ ನೀಡಲು ಪಣತೊಟ್ಟು ಯಶಸ್ವಿಯ ಹೆಜ್ಜೆ ಇಟ್ಟಿರುವ ಲೇಖಕರು ಶ್ರೀ ಸಂತೋಷ್ ಕುಮಾರ್ ಮೆಹಂದಳೆಯವರು.
ಸಂತೋಷ್ ಕುಮಾರ್ ಮೆಹಂದಳೆ ಅವರು “ಮಂಗಳಮುಖಿಯರ ಸಂಗದಲ್ಲಿ” ಹಿಜಡಾ ಜಗತ್ತಿನ ಅನುಭವ ಕಥನ ಪುಸ್ತಕವು ಸ್ನೇಹ ಬುಕ್ ಹೌಸ್ ಬೆಂಗಳೂರು ಇವರ ಪ್ರಕಾಶನದಿಂದ ಮುದ್ರಣಗೊಂಡು 2022 ರಲ್ಲಿ ಕನ್ನಡ ಸಾರಸ್ವತ ಲೋಕ ಸೇರಿದೆ.
ದೈವಿಕ ಸೃಷ್ಟಿಯಲ್ಲಿ ಸರ್ವರು ಸಮಾನರು. ಕೆಲವು ದೈಹಿಕ ಮತ್ತು ಭಾವನಾತ್ಮಕ ನ್ಯೂನತೆಗಳ ಕಾರಣ ಹಿಜಡಾಗಳನ್ನು ಸಾಮಾಜಿಕ ಪರಿಸರದಿಂದ ದೂರವೇ ಇರಿಸಲಾಗಿದೆ. ಅವರು ನಮ್ಮಂತೆ ಮನುಷ್ಯರು, ಎಲ್ಲರಂತೆ ಅವರಿಗೂ ಬದುಕುವ ಹಕ್ಕಿದೆ ಎನ್ನುವ ಮಾನವೀಯ ದೃಷ್ಟಿಕೋನದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕಾದ ಅಂತಃಕರಣ ಸಾಮಾಜಿಕವಾಗಿ ಮೂಡುವ ಅಗತ್ಯವಿದೆ.
ಹಿಜಡಾ ಎಂದರೆ ಯಾರು? ಅವರ ಗುಣಲಕ್ಷಣಗಳೇನು ? ಅವರ ಈ ಸ್ಥಿತಿಗೆ ಕಾರಣಗಳೇನು? ಅವರ ದೈನಂದಿನ ಕಾರ್ಯವೈಖರಿ ಹೇಗಿರುತ್ತದೆ? ನಮ್ಮ ಪರಿಸರಕ್ಕೂ ಅವರ ಸಮುದಾಯಕ್ಕೆ ಇರುವ ವ್ಯತ್ಯಾಸಗಳೇನು? ಎಂಬ ಹತ್ತು ಹಲವಾರು ಪ್ರಶ್ನೆಗಳು ನನ್ನನ್ನು ಹಲವಾರು ಬಾರಿ ಕಾಡಿವೆ.ಬಹುಶಹ ಇದು ನನ್ನೊಬ್ಬಳ ಪ್ರಶ್ನೆಯಲ್ಲ ಬಹುತೇಕರಿಗೂ ಹೀಗೆ ಅನಿಸಿರಬಹುದು. ಕಾರಣ ಇವರು ನಮ್ಮಿಂದ ನಮ್ಮ ಸಂಪರ್ಕದಿಂದ, ಒಡನಾಟದಿಂದ ದೂರವಿದ್ದು ನಮಗೆ ಅವರು ಬಗ್ಗೆ ತಿಳಿಯಲು ಸಾಧ್ಯ ವಾಗಿಲ್ಲ .
ಹಿಜಡಾಗಳು ಎಂದರೆ ಯಾವ ವೃತ್ತಿಯೂ ಸಿಗದೆ, ರಸ್ತೆಯಲ್ಲಿ, ಟ್ರಾಫಿಕ್ ನಲ್ಲಿ , ವಾಹನ ಚಾಲಕರಿಂದ ಹಣ ಕೇಳುವವರು, ಸಮಾರಂಭಗಳಲ್ಲಿ ಆಶೀರ್ವದಿಸಿ ಹಾರೈಸುವವರು, ಲೈಂಗಿಕ ಕಾರ್ಯಕರ್ತೆಯರು ಅನ್ನುವ ವಿಚಾರಗಳಷ್ಟು ಮಾತ್ರ ತಿಳಿದಿದ್ದ ನನಗೆ ಸಂತೋಷ್ ಕುಮಾರ್ ಮೆಹಂದಳೆ ಅವರ ಮಂಗಳಮುಖಿಯರ ಸಂಗದಲ್ಲಿ ಅನುಭವ ಕಥನ ಓದಿ
ಹಿಜಡಾ ಜಗತ್ತಿನೊಳಗೆ ಒಂದು ಸುತ್ತು ಸುತ್ತು ಬಂದಂತಾಯಿತು.
ನನಗೂ ಹಿಜಡಾಗಳ ಬಗ್ಗೆ ಕೌತುಕ ಮೂಡಿಸುವ ಹಲವಾರು ಉತ್ತರ ಸಿಗದ ಪ್ರಶ್ನೆಗಳಿದ್ದವು. ಹಿಜಡಾಗಳ ದೈಹಿಕ ಅವಯವಗಳು ಹೇಗಿರಬಹುದೆಂಬ ಕುತೂಹಲ ಬಹಳವಿತ್ತು. ದ್ವನಿ ಗಂಡಿನಂತಿದೆ ಆದರೆ ಸ್ತನಗಳು ಮಾತ್ರ ಹೆಣ್ಣಿನಂತಿವೆ
ಇದು ಹೇಗೆ ಸಾಧ್ಯ? ಎನಿಸಿದ್ದು ಸತ್ಯ.
ಇವರೊಂದಿಗೆ ಲೈಂಗಿಕ ಕ್ರಿಯೆ ಹೇಗೆ ನಡೆಸುತ್ತಾರೆ, ವಾಸ್ತವದಲ್ಲಿ ಇವರು ಸ್ತ್ರೀ ಅಂಗಾಗ ಹೊಂದಿರುವರೋ ಅಥವಾ ಪುರುಷರೋ ಎಂದು ತಿಳಿಯಲು ಹಲವಾರು ಬಾರಿ ಗೂಗಲ್ ಮಾಡಿದ್ದು ಆಗಿತ್ತು.
ಇಂತಹ ಹತ್ತಾರು ವಿಸ್ಮಯಕಾರಿ ನಿಗೂಢತೆಗಳನ್ನು ಭೇದಿಸಿದ್ದುಸಂತೋಷ್ ಕುಮಾರ್ ಮೆಹಂದಳೆಯವರ ಮಂಗಳಮುಖಿಯರ ಸಂಗದಲ್ಲಿ ಪುಸ್ತಕ.
ಅದ್ಭುತ ನಿರೂಪಣೆಯೊಂದಿಗೆ, ಸೂಕ್ಷ್ಮಗ್ರಾಹಿಯಾಗಿ, ಯಾರ ಮನಸ್ಸಿಗೂ ನೋವಾಗದಂತೆ, ಅತಿ ಸೂಕ್ಷ್ಮ ವಸ್ತು ವಿಷಯವನ್ನು ಬಹಳ ಜಾಣ್ಮೆಯಿಂದ, ವೈಜ್ಞಾನಿಕ ಆಧಾರಗಳು ,ನಿರ್ದಿಷ್ಟ ಮಾಹಿತಿಯೊಂದಿಗೆ ಪ್ರಾಯೋಗಿಕ ಹಾಗೂ ಕ್ಷೇತ್ರಭೇಟಿ ಅಡಿಯಲ್ಲಿ ಜನ್ಮತಳೆದ ಸಂಶೋಧನಾ ಗ್ರಂಥವಾಗಿ ರಚಿಸಿದ್ದಾರೆ. ಯಾರು ಕಂಡರಿಯದ ಹಿಜಿಡಾ ಜಗತ್ತಿನ ಕಥನವನ್ನು ಓದುಗರ ಮುಂದೆ ತೆರೆದಿಡುವ ದೃಢ ಹೆಜ್ಜೆ ಇಟ್ಟಿರುವ ಮೆಹಂದಳೆ ಅವರ ಕಾರ್ಯ ಶ್ಲಾಘನೀಯವಾಗಿದೆ. ಸಮಾಜದ ಮುಖ್ಯವಾಹಿನಿಗೆ ಅವರನ್ನು ತರಬೇಕೆಂಬ ಆಶಾಭಾವ ಹಲವಾರು ಮಾನವೀಯ ಅಂಶಗಳೊಂದಿಗೆ ಮೂಡಿಬಂದಿದೆ.
ಹಿಜರಾ ಅಥವಾ ಹಿಜಡಾ ಎನ್ನುವುದು ಮೂಲತಹ ಪರ್ಶಿಯನ್ ಶಬ್ದವಾಗಿದ್ದು ಹಿಜ್ರಾ ರೂಪದ ಆಡುಭಾಷೆ ಆಗಿದೆ. ಇಲ್ಲಿ ಲೇಖಕರು ಖೋಜಾ, ಚಕ್ಕ, ಕೋಥಿ, ಚನ್ನಪಟ್ಣ, ಶಿಖಂಡಿ, ನಪಂಸಕ, ಒಂಬತ್ತು, ಕಿನ್ನರ್ , ಬಕ್ಲಾಸ್, ಯುನೆಕ್,ಮಂಗಳಮುಖಿ ಮತ್ತು ಜೋಗತಿ ಹೆಸರುಗಳಿಂದ ಕರೆಯಲಾಗುತ್ತದೆ. ಇವು ಆಯಾ ಕಾಲಾ ವ್ಯಾಪ್ತಿ , ಸ್ಥಳಿಯ ಗುರುತಿಸುವಿಕೆಯ ಕುರುಹುಗಳಾಗಿವೆ ಎನ್ನುತ್ತಾರೆ.
“ಹುಟ್ಟುವಾಗ ಸಂಪೂರ್ಣ ಗಂಡೆ ಆಗಿದ್ದರು ಬೆಳೆಯುತ್ತ ಬೆಳೆಯುತ್ತ ಮಾನಸಿಕವಾಗಿ ತಾನು ಹೆಣ್ಣು ಎನ್ನುವ ಭಾವನಾತ್ಮಕ ಮತ್ತು ಹಾರ್ಮೋನ್ ಪ್ರೇರಿತ ಅನುಭೂತಿಗೆ ಪಕ್ಕಾಗುವ ನಿಸರ್ಗ ಸಹಜ ಸ್ಥಿತಿಯೆ ಹಿಜಡಾ ರೂಪ” . ಹುಟ್ಟುವಾಗ ಹೆಣ್ಣಾಗಿದ್ದು ಮಾನಸಿಕವಾಗಿ ಗಂಡೆಂಬ ಎಂಬ ಭಾವ ಹೊಂದುವ ಸ್ಥಿತಿಯು ಇದೆ ಆದರೆ ಇಂತಹವರ ಸಂಖ್ಯೆ ಕಡಿಮೆ ಇದೆ ಎನ್ನುತ್ತಾರೆ ಲೇಖಕರು. ಪುರುಷರಿಂದ ಆಕರ್ಷಿತರಾಗುವವರೆ “ಗೇ” ಳಾಗಿಯೂ, ಹೆಣ್ಣಿನೊಂದಿಗೆ ಮಾತ್ರ ಸುಖಿಸುತ್ತೇನೆ ಎನ್ನುವವರು “ಲೆಸ್ಬಿಯನ್”ಗಳಾಗಿಯು ಗುರುತಿಸಿಕೊಂಡಿದ್ದು, ಉಳಿದವರು ಟ್ರಾನ್ಸ್ ಜೆಂಡರ್ ಗಳಾಗಿ ವರ್ಗೀಕರಿಸಲ್ಪಟ್ಟಿದ್ದಾರೆ ಎಂಬ ಮಾಹಿತಿ ನಮೂದಿಸಿದ್ದು ಇದು ಹಲವರ ಕುತೂಹಲಕರ ಪ್ರಶ್ನೆಗೆ ಉತ್ತರವಾದಿತು.ನನಗೆ ಇಲ್ಲಿ ತಿಳಿದು ಬಂದ ಪ್ರಮುಖ ಅಂಶವೆಂದರೆ ಹಿಜಡಾ ಗಳು ಗಂಡಾಗಿದ್ದರೂ ಸ್ತ್ರೀಯರೊಂದಿಗೆ ಲೈಂಗಿಕ ಸುಖ ಪಡೆಯಲು ಬಯಸುತ್ತಾರೆಂಬುದು.
ಸುಮಾರು 17 ಅಧ್ಯಾಯಗಳಲ್ಲಿ ವಿವಿಧ ಶೀರ್ಷಿಕೆಗಳಲ್ಲಿ ಮೂಡಿಬಂದಿದ್ದು ತೃತೀಯ ಲಿಂಗಿಗಳ ಜಗತ್ತಿನ ಮಾಹಿತಿ ಪೂರ್ಣ ಹೊತ್ತಿಗೆ ಯಾಗಿದೆ. “ಮನವಿಯೆ ಕತೆಯಾದದ್ದು” ತಲೆಬರಹದಡಿಯಲ್ಲಿ ಈ ಕಾದಂಬರಿಯು ಜನ್ಮತಾಳಲು ಕಾರಣೀಭೂತವಾದ ವಿಚಾರಧಾರೆಗಳನ್ನು ಚರ್ಚಿಸುತ್ತ ಸಾಗಿದ್ದಾರೆ. ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದ್ದವರಿಗೆ ಸವಾಲುಗಳು ಸದಾ ಆಹ್ವಾನ ನೀಡುತ್ತಿರುತ್ತವೆ. ಆ ನಿಟ್ಟಿನಲ್ಲಿ ಈ ಪುಸ್ತಕದ ಲೇಖಕರು “ಅವಳು ಎಂದರೆ” ಎಂಬ ಅಂಕಣ ಬರಹ ಬರೆಯುವಾಗ ಬಂದಿದ್ದ ಹಲವಾರು ಮೇಯಿಲ್ ಗಳನ್ನು ಸುಮಾರು ಒಂದೂವರೆ ವರ್ಷದ. ನಂತರ ತೆಗೆದು ಓದಿದಾಗ ಇವರ ಸಲಹೆ ಮಾರ್ಗದರ್ಶನ ಬಯಸಿತ್ತು .ವಿಪರ್ಯಾಸವೆಂದರೆ ಅದಕ್ಕೆ ಪ್ರತಿಕ್ರಿಯಿಸಿದ ಅವರಿಗೆ ತಿಳಿದಿದ್ದು ತೃತೀಯ ಲಿಂಗಿಗಳ ಜಗತ್ತಿನ ಅನಾವರಣ. ಅದರಿಂದ ಪ್ರೇರಿತರಾಗಿ ಲೈಂಗಿಕ ಅಲ್ಪಸಂಖ್ಯಾತರ ಜಗತ್ತಿಗೆ ಕಾಲಿಟ್ಟು ಸುಮಾರು ಎರಡು ವರ್ಷಗಳ ಕಾಲ ನಿರಂತರ ಅಧ್ಯಯನ, ಕ್ಷೇತ್ರಭೇಟಿ, ಸಮೀಕ್ಷೆ, ವೀಕ್ಷಣೆ, ಅವಲೋಕನ, ಸಂವಾದ, ಮುಖಾಮುಖಿ ಚರ್ಚೆಯ ಮೂಲಕ ಹೊಸದೊಂದು ಜಗತ್ತನ್ನು ಜನತೆಗೆ ಪರಿಚಯಿಸಿದ್ದಾರೆ. ಆ ಲೋಕ ನೋಡಿ ಬಂದ ನಂತರ ಅವರ ಮನದಲ್ಲಿ ಕೊನೆಗೆ ಎನಿಸಿದ್ದು “ನಿಜಕ್ಕೂ ನಾವು ಅದೃಷ್ಟವಂತರು. ದೇವರು ಇನ್ನೊಂದು ಜನ್ಮವಿದ್ದರೆ ಈ ಎಲ್ಲಾ ಲೈಂಗಿಕ ಅಲ್ಪಸಂಖ್ಯಾತರನ್ನು ಸರಿಯಾದ ಮನುಷ್ಯರನ್ನಾಗಿಯೆ ಹುಟ್ಟಿಸಲಿ ಎನ್ನುವಷ್ಟು ಸೋತು ಹೋಗಿದ್ದೆ” ಎನ್ನುವಲ್ಲಿನಾ ಲೇಖಕರು ಪ್ರಾರ್ಥನೆಯು ಹಿಜಡಾ ಗಳ ಬದುಕಿನ ಹಿಂದಿರುವ ಕರಾಳ ದರ್ಶನ ಮಾಡಿಸುತ್ತದೆ. ಜೊತೆಗೆ ಕಠೋರ ಸತ್ಯ ಮತ್ತು ಗಂಭೀರತೆಯನ್ನು ಓದುಗರಿಗೆ ಪರಿಚಯಿಸುತ್ತದೆ.
ನಮ್ಮೆಲ್ಲರಿಗೂ ಇರುವ ಕುತೂಹಲ ಹಿಜಡಾ ಎಂದರೆ ಹೆಣ್ಣೋ ಅಥವಾ ಗಂಡೋ ಎಂಬುದು.ಇದರ ಸಮಗ್ರ ಮಾಹಿತಿಯನ್ನು ಶಿವ ಜ್ಯೋತಿಯಾಗಿ ಪರಿವರ್ತನೆಯಾದ ನೈಜ ಕಥೆಯ ಆಧಾರದಿಂದ ನಿರೂಪಿಸಿದ್ದಾರೆ. ದೈಹಿಕವಾಗಿ ಶಿವ ಆಗಿದ್ದರೂ ಅವನಲ್ಲಿ ಅಭೀಪ್ಸೆಗಳು, ಆಸೆಗಳು, ಆಕಾಂಕ್ಷೆಗಳು, ಆಕರ್ಷಣೆ, ಲೈಂಗಿಕ ಬಯಕೆ ಎಲ್ಲವೂ ಹೆಣ್ಣಿನ ಭಾವದಲ್ಲಿ ಕಾಣಿಸಿಕೊಂಡು, ತನ್ನ ಕುಟುಂಬ, ಸ್ನೇಹ ವರ್ಗ, ಸಮಾಜ ಮತ್ತು ಬಂಧು ಬಾಂಧವರ ನಡುವೆ ಮುಜುಗರ, ಅವಮಾನ, ಸಂಕಟಗಳಿಗೆ ಈಡಾಗಿ ಪರಿತಪಿಸಿದ ಬಗ್ಗೆ ಕಟುಕರ ಕಂಗಳಲ್ಲೂ ನೀರು ತರಿಸುತ್ತದೆ. ದೇಹ ಒಂದು ಲಿಂಗ ಮನಸ್ಸು ಮತ್ತೊಂದು ಲಿಂಗವಾಗಿ ಈ ಸಮಾಜದ ನಡುವೆ ಸಾಮಾನ್ಯರಂತೆ ಸಹಜವಾಗಿ ಬದುಕಲಾಗದೆ, ಮನೆಯನ್ನು ತೊರೆದು ಅನಿವಾರ್ಯವಾಗಿ ಹಿಜಡಾ ಸಮುದಾಯ ಸೇರಿಕೊಂಡ ರೋಧನೆ ಒಂದೆಡೆಯಾದರೆ, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ದೈಹಿಕ ಪರಿವರ್ತನೆ ಮಾಡಿಕೊಳ್ಳುವುದು, ಕೆಲವು ಆಂಗಿಕ ಹಾವಭಾವಗಳನ್ನು ಕಲಿಯುವುದು ಮತ್ತೊಂದು ಸಾಹಸವೇ ಸರಿ.
ಶಿವ ಜ್ಯೋತಿಯಾಗಿ ಪರಿವರ್ತನೆಯಾಗುವ ಈ ಘಟನೆಯನ್ನು ಓದಿದವರು ದಿವಂಗತ “ಸಂಚಾರಿ ವಿಜಯ್” ಅಭಿನಯದ “ನಾನು ಅವನಲ್ಲ, ಅವಳು” ಸಿನಿಮಾದ ದೃಶ್ಯಗಳನ್ನು ಒಮ್ಮೆ ಕಣ್ಣ ಮುಂದೆ ತಂದುಕೊಳ್ಳಿ. ಆಗ ಅವರು ಅನುಭವಿಸಿದ ನೋವು ಯಾತನೆ ನಿಜಕ್ಕೂ ನಮಗೆ ಅರಿವಾಗುತ್ತದೆ. ಇವರೆಲ್ಲರಿಗೂ ಒಬ್ಬೊಬ್ಬರು ಸಮುದಾಯದಲ್ಲಿ ಅಮ್ಮ ಅಥವಾ ಗುರುವಿರುತ್ತಾರೆಂಬುದು ಈ ಪುಸ್ತಕ ಓದಿದಾಗ ತಿಳಿದು ಬಂತು.
ಇಂತಹ ಘಟನೆಗಳು ನಮ್ಮ ಅಕ್ಕ ಪಕ್ಕ ನಡೆದರೆ ಗಾಬರಿಯಾಗದೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಆ ಮಗುವನ್ನು ಸಾಮಾಜಿಕವಾಗಿ ಬದುಕಲು ಸೂಕ್ತ ತರಬೇತಿ ನೀಡಬಹುದೆಂಬ ಅರಿವು ಮೂಡಿತು. ಸ್ನೈಹಿತರೆ ಇದು ನಿಮ್ಮ ಗಮನದಲ್ಲಿಯೂ ಇರಲಿ.
ಸಮಾಜ ಇವರನ್ನು ನಿಕೃಷ್ಟವಾಗಿ ಕಾಣದಿದ್ದರೆ, ಸಹಜವಾಗಿ ನಡೆಸಿಕೊಂಡಿರದಿದ್ದರೆ, ಅವರು ಇರುವಂತೆ ಮನೆಯಲ್ಲಿ ಇರಲು ಬಿಟ್ಟಿದ್ದರೆ ಇಂತಹ ಭಯಾನಕ ಪರಿಸ್ಥಿತಿಯನ್ನು ಅವರು ಎದುರಿಸಬೇಕಾಗುತ್ತಿರಲಿಲ್ಲವೇನೊ. ಇದರಲ್ಲಿ ಅವರ ತಪ್ಪಾಗಿದ್ದು
ಏನಿದೆ ಹೇಳಿ ? ನಮ್ಮಂತೆ ಭೂಮಿಗೆ ಬಂದು ತಮ್ಮದಲ್ಲದ ತಪ್ಪಿಗೆ ಶಾರೀರಿಕ ವಿಭಿನ್ನತೆ ಹಾಗೂ ವೈರುಧ್ಯದ ಮನೋಗತವನ್ನು ಪಡೆದು, ಜೀವನಪರ್ಯಂತ ನೋವು,ಹಿಂಸೆ ,ಶೋಷಣೆ ,ಅನುಭವಿಸುತ್ತಾ ಸಮಾಜವನ್ನು ಎದುರಿಸುವ ಕರುಣಾಜನಕ ಕಥೆ ಓದುಗರಿಗೆ ಅತಿ ಭೀಕರ ಎನಿಸುತ್ತದೆ. ಸಹಜಭಾವಕ್ಕೂ ಪಕ್ಕಾಗದೆ, ಬದುಕಿನಲ್ಲಿ ದೈಹಿಕವಾಗಿಯೂ ಯಾವ ಸುಖಕ್ಕೂ ಪಕ್ಕಾಗದ ದೇಹಸ್ಥಿತಿಯಲ್ಲಿ ಅವರು ಅನುಭವಿಸುವ ನರಕ ಯಾತನೆಯನ್ನು ಮನಮಿಡಿಯುವ ಭಾವಗಳಲ್ಲಿ ಬಂಧಿಸುವ ಪ್ರಯತ್ನವನ್ನು ಲೇಖಕರು ಅನನ್ಯವಾಗಿ ಮಾಡಿದ್ದಾರೆ.
“ನಿಮಗೆ ಗಂಡಸಿನಂತೆ ಅಥವಾ ಹೆಣ್ಣಿನಂತೆ ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದು, ಈ ಜನ್ಮದಲ್ಲಿ ನೀವು ಸರಿಯಾದ ಲೈಂಗಿಕ ಸುಖಕ್ಕೆ ಆಗಾಗ ಈಡಾಗುತ್ತಿದ್ದೀರಿ ಎಂದಾದರೆ ಈ ಜೀವನಪೂರ್ತಿ ನೀವು ಆಗ ದೇವರಿಗೆ ಕೃತಜ್ಞರಾಗಿರಬೇಕು” ಎಂಬ ಸಂತೋಷ್ ಕುಮಾರ್ ಮೆಹಂದಳೆ ಯವರ ನುಡಿಯು ಸಣ್ಣಪುಟ್ಟ ಕಷ್ಟಗಳು ಬಂದಾಗಲೂ ದೇವರನ್ನು ಶಪಿಸುತ್ತಾ ಆಕಾಶವೇ ತಲೆ ಮೇಲೆ ಬಿದ್ದಂತೆ ಕೂರುವ ನಮ್ಮ ಮೂರ್ಖತನದ ಪರಮಾವಧಿಗೆ ಚಾಟಿ ಬೀಸಿದ್ದಾರೆ. ದೈಹಿಕ ಮತ್ತು ಮಾನಸಿಕ ಸದೃಢತೆ ನೀಡಿದ್ದಕ್ಕಿಂತ ದೇವರು ಇನ್ನೇನು ನೀಡಬಲ್ಲ ಎನ್ನುತ್ತಾರೆ.
“ಸಾಹಿತ್ಯದಂತಹ ವಿಶಾಲ ಕ್ಯಾನ್ವಾಸ್ ಮೇಲೆ ಬರಹಕ್ಕೆ ಯಾವ ವಿಷಯವೂ ವರ್ಜ್ಯವಲ್ಲವೇ ಅಲ್ಲ” ಎನ್ನುವ ಲೇಖಕರು ಮಂಗಳಮುಖಿಯರ ದೈಹಿಕ ಚಹರೆಗಳನ್ನು ವಿವರಿಸುವಾಗ ಪ್ರಥಮ ಮಾಹಿತಿಯಾಗಿ ವೀಕ್ಷಣೆ ಮತ್ತು ಅವಲೋಕನದ ಮೂಲಕವೇ ಖಾತ್ರಿಪಡಿಸಿ ಕೊಂಡಿದ್ದೇನೆ ಎನ್ನುವ ಲೇಖಕರು, ಅಲ್ಲಿ ದೈಹಿಕ ಪ್ರದರ್ಶನ ಅವರಿಗೆ ವೃತ್ತಿಪರ ಅನಿವಾರ್ಯತೆಯಾದರೆ, ನನಗೆ ಅದರ ವಿಶ್ಲೇಷಣೆ ಕಾರ್ಯಕಾರಣ ಸಂಬಂಧದ ಅಗತ್ಯತೆ ಎನ್ನುತ್ತಾ, ನಾನು ನಿಷ್ಕಲ್ಮಶ ಭಾವದಿಂದ ವೃತ್ತಿಪರತೆಯಿಂದ ಈ ಕಾರ್ಯ ಮಾಡಿದ್ದೇನೆ ಎನ್ನುತ್ತಾರೆ. ಇಲ್ಲಿ ಮಾಹಿತಿಯನ್ನು ಸಂಗ್ರಹಿಸುವಾಗ ಮಂಗಳಮುಖಿಯರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ, ಸಂವಾದ ನಡೆಸುವ ಸಮಯದಲ್ಲಿ, ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಇವನೇನು ಮನುಷ್ಯನೇ ಎಂದುಕೊಂಡಿರಬೇಕು ಎನ್ನುತ್ತಾರೆ. ಹಾಗೇ ಮುಂದುವರೆದು ಲೇಖಕರು ಮಂಗಳಮುಖಿಯರ ಮನೋಗತವನ್ನು ವರ್ಣಿಸುತ್ತ ಸೆಕ್ಸ್ ಮಾಡುವಾಗ ಹಿಂಜರಿಕೆ ತೋರಿದ ಸಂಕೋಚ ತೋರದ ಇವರು ಲೇಖಕರ ಮುಂದೆ ಅಧ್ಯಯನದ ವಸ್ತುವಾದಾಗ ಮುಜುಗರಗೊಳಗಾಗುತ್ತಿದ್ದುದ್ದಕ್ಕೆ ಅಚ್ಚರಿ ಪಡುವ ಲೇಖಕರು ಮೂಕವಿಸ್ಮಿತರಾಗಿದ್ದಾರೆ. ಇವರು ಮನುಷ್ಯರಲ್ಲವೇ ? ಇವರಿಗೂ ಮನುಷ್ಯ ಸಹಜವಾಗಿ ನಾಚಿಕೆ ಗುಣ ಬಂದಿಯೆಂದು ಎಂದು ವಿವರಿಸಿದ್ದಾರೆ.
ಇವರು ಹಲವಾರು ಮಂಗಳಮುಖಿಯರೊಂದಿಗೆ ಮುಖಾಮುಖಿ ಚರ್ಚಿಸಿದ ನಂತರ, ಅವರ ಬೇಕು ಬೇಡಗಳನ್ನು ಎಂಬುದನ್ನು ಪಟ್ಟಿಮಾಡುತ್ತ ಹೋಗಿದ್ದಾರೆ. ಯಾವೊಬ್ಬ ತೃತೀಯ ಲಿಂಗಿಗಳು ನನಗೆ ಸೆಕ್ಸ್ ಅಥವಾ ದೈಹಿಕ ಸಾಂಗತ್ಯವೇ ಮುಖ್ಯ ಎಂದು ಹೇಳಿದ ಉದಾಹರಣೆಗಳಿಲ್ಲ ಎನ್ನುವ ಲೇಖಕರು ಸಮಾಜದ ಇತರ ಗಂಡು ಹೆಣ್ಣುಗಳಂತೆ ನಮ್ಮನ್ನು ಸಮಾಜ ಪರಿಗಣಿಸಿದ್ದರೆ ಸಾಕಿತ್ತು ಎಂಬ ಅವರ ಮನದಾಳದ ನೋವವು ಕಡಲಾಗಿ ಹರಿಸುತ್ತದೆ ಎಂಬ ಭಾವ ಲೇಖಕರನ್ನು ಬಹಳವಾಗಿ ಕಾಡಿದೆ.
ನಾವು ಅನೇಕ ಬಾರಿ ಅಂದುಕೊಳ್ಳುತ್ತೇವೆ ಹಿಜಡಾಗಳಿಗೆ ಅವರು ಸೆಕ್ಸ್ ವರ್ಕರ್ ಗಳಾಗಿ ಕೆಲಸ ಮಾಡುವುದೆ ಇಷ್ಟವೇನೋ ಅಂತ. ರಸ್ತೆಗಳಲ್ಲಿ ಬಂದು ನಮಗೆ ಹೀಗೇಕೆ ಪೀಡಿಸುತ್ತಾರೆ ಎಂದು ಅನಿಸುತ್ತದೆ. ಅದಕ್ಕೆ ಉತ್ತರವಾಗಿ ಲೇಖಕರು ತಮ್ಮ ಅನುಭವ ಕಥನದಲ್ಲಿ ನಮ್ಮ ಅಭಿಪ್ರಾಯಗಳು ತಪ್ಪು ಎಂಬುದನ್ನು ರುಜುವಾತುಪಡಿಸಿದ್ದಾರೆ. ನಮ್ಮ ನಿಮ್ಮಂತೆ ಅವರು ಕೂಡ ಮಾನಸಿಕವಾಗಿ, ಭಾವನಾತ್ಮಕವಾಗಿ ಸಮಾಜದ ಚೌಕಟ್ಟಿನಲ್ಲಿ ಬದುಕುತ್ತಾ, ತನ್ನದೇ ಆದ ಸಂಸಾರ ಕಟ್ಟಿ ಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಅದಕ್ಕೆ ಪೂರಕ ವಾತಾವರಣ ಮತ್ತು ಅವಕಾಶಗಳು ನಮ್ಮ ಸಮಾಜದಲ್ಲಿ ಇಲ್ಲದಿರುವುದಕ್ಕೆ ಅವರೆಲ್ಲ ಒಂದು ಸಮುದಾಯ ಸೃಷ್ಟಿಸಿಕೊಂಡು ಅವರೊಂದಿಗೆ ಬದುಕುತ್ತಿದ್ದಾರೆ ಎಂಬ ವಿಷಾದ ವ್ಯಕ್ತಪಡಿಸುತ್ತಾರೆ.
ಇಲ್ಲಿ ಲೇಖಕರು ಹೆತ್ತವರಿಗೆ ಮತ್ತು ಸಮಾಜಕ್ಕೆ ಸೂಕ್ತ ಸಂದೇಶವನ್ನು ರವಾನಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ನೀಡುವ ಮೂಲಕ ಅವರಿಗೂ ಸಹಜ ಸಾಮಾಜಿಕ ಪರಿಸರದಲ್ಲಿ ಬದುಕಲು ಅವಕಾಶ ಕಲ್ಪಿಸಬಹುದು ಎನ್ನುತ್ತಾರೆ . ಇದಕ್ಕಾಗಿ ಪೋಷಕರು ಜಾಗ್ರತೆ ವಹಿಸಬೇಕು. ಮನೆಯಲ್ಲಿ ತಮ್ಮ ಮಕ್ಕಳ ದೈಹಿಕ ಮತ್ತು ಬಾಲ್ಯವಸ್ಥೆಯ ಬದಲಾವಣೆ ಅರಿವಿಗೆ ಬರುತ್ತಿದ್ದಂತೆ ಅವರನ್ನು ಮನೆಯಿಂದ ಹೊರ ಹಾಕುವ ಬದಲು ಅವರಿಗೆ ಕೌನ್ಸಿಲಿಂಗ್ ಮತ್ತು ಮಾನಸಿಕ ಬೆಂಬಲ ನೀಡಿದ್ದೆ ಆದರೆ ಲೈಂಗಿಕವಾಗಿ ಪರಿವರ್ತಿತವಾಗಿದೆ, ತೃತೀಯ ಲಿಂಗಿಯಾಗಿ ಬದುಕಬೇಕೆನ್ನುವ ಭಾವದಿಂದ ರಕ್ಷಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರ ಬದುಕು ಕಟ್ಟಿಕೊಳ್ಳುವರೆಂಬ ಆಶಾಭಾವ ವ್ಯಕ್ತಪಡಿಸುತ್ತಾರೆ.
ಮಂಗಳಮುಖಿಯರ ಕಲ್ಯಾಣಕ್ಕಾಗಿ, ಅವರ ಹಕ್ಕುಗಳಿಗಾಗಿ ಸರ್ಕಾರ ಕೆಲವೊಂದು ನಿಯಮಾವಳಿಗಳನ್ನು ರೂಪಿಸಿ ಅವರಿಗಾಗಿ ಹಲವು ಅವಕಾಶಗಳನ್ನು ತೆರೆದಿಟ್ಟಿದೆ ಯಾದರೂ ಅದು ಎಲ್ಲರಿಗೂ ತಲುಪಲು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಸಾಹಿತಿಗಳು ತಮ್ಮ ಬರಹದ ಮೂಲಕ ಅವರ ಬದುಕಿನ ಮಜಲುಗಳನ್ನು, ಕಷ್ಟಗಳನ್ನು ಓದುಗರ ಮುಂದೆ ತೆರೆದಿಟ್ಟಾಗ ಸಮಾಜವು ಅವರನ್ನು ಮಾನವೀಯ ದೃಷ್ಟಿಯಿಂದ ಕಾಣುವಂತಾಗುತ್ತದೆ ಎನ್ನುವ ಮೆಹೆಂದಳೆಯವರು ವೈರುಧ್ಯಗಳ ಮಧ್ಯೆಯು ದೇವರು ಎಲ್ಲವನ್ನೂ ದಂಡಿಯಾಗಿ ನೀಡಿರುವ ನಾವುಗಳು ಬೇರೇನು ಮಾಡಲಾಗದಿದ್ದರೂ ಮಂಗಳಮುಖಿಯಾಗಿರು ದೈನೇಸಿಯಾಗಿ ಕೈಹಿಡಿದರೆ ಹಣ ಕೊಡಲಾಗದಿದ್ದರೂ ಪ್ರೀತಿಯಿಂದ ಮಾತನಾಡಿಸಿ ಆಗ ಅವರು ಮುಖದಲ್ಲಿ ಮೂಡುವ ಆಪ್ತತೆಯ ನಗುವಿಗೆ ದಕ್ಕುವ ಅನುಭೂತಿಯ ಅನುಭವ ಪಡೆದು ನಾವು ಮನುಷ್ಯರೆಂದು ಗುರುತಿಸಿಕೊಳ್ಳಬಹುದು ಎನ್ನುತ್ತಾರೆ.
“ಮನಸ್ಸಿಗೆ ಬೇಕೆಂದುದಕ್ಕೆ ದೇಹ ಸ್ಪಂದಿಸುವುದಿಲ್ಲ. ದೇಹಕ್ಕೆ ಬೇಕೆಂದುದಕ್ಕೆ ಮನಸ್ಸಿನಲ್ಲಿ ಹಾರ್ಮೋನ್ ಸ್ರವಿಸುವುದು ಇಲ್ಲ” ಇದು ಮಂಗಳಮುಖಿಯರಿಗೆ ಆಗುತ್ತಿರುವ ಅಂತರಿಕ ಅಸಹನೆ, ತಾಕಲಾಟ, ತಳಮಳ, ನ್ಯೂನ್ಯತೆ ಬಗ್ಗೆ ಆಗಿರುವ ಖೇದ, ಏನೂ ಇಲ್ಲವೆಂಬ ಭಾವನೆ ಒಗ್ಗದು, ಆದರೆ ಮನಸ್ಸು ಕೇಳದು, ಮನಸ್ಸು ಕೇಳಿದರು ಕೈಯಲ್ಲೊಂದು ಕಾವು ಹುಟ್ಟದ ವೈರುದ್ಧ್ಯತೆ ಎರಡು ಶೀತಲ ಮನಸ್ಥಿತಿಯ ಹೊಯ್ದಾಟ, ಕಂಗಾಲಾದ ಮನಸ್ಸು ಇವೆಲ್ಲಾ ಅವರನ್ನು ಮತ್ತಷ್ಟು ಜರ್ಜರಿತ ರನ್ನಾಗಿ ಮಾಡಿದ್ದು ಅಸಹಾಯಕತೆಯ ಮಡುವಿನಲ್ಲಿ ಮುಳುಗಿಸಿದೆ ಎನ್ನುತ್ತಾರೆ.
ಆದರೆ ದಿನವೆಲ್ಲಾ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರಾದರೂ ಅವರು ಪಡುವ ಲೈಂಗಿಕ ಸುಖ ಅಷ್ಟಕಷ್ಟೆ .
ಮಂಗಳಮುಖಿಯರ ಮನದಾಳವನ್ನು ಸಮಾಲೋಚನೆ ಮೂಲಕ ತೆರೆದಿರುವ ಪ್ರಯತ್ನದಲ್ಲಿ ಲೇಖಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಅವರು ಹೇಳುವ ಮಾತುಗಳು ನಮಗೂ ಈ ಸಮಾಜದಲ್ಲಿ ಎಲ್ಲರೊಂದಿಗೆ ಬದುಕುವ ಆಸೆ ಇದೆ. ಕೈಲಾಗುವ ಕೆಲಸವನ್ನು ಮಾಡಿಕೊಂಡು ಸ್ವಾಭಿಮಾನದಿಂದ ಬದುಕುವ ಬಯಕೆ ಇದೆ. ಆದರೆ ನೆಮ್ಮದಿಯಿಂದ ಬದುಕು ನಡೆಸಲು ಈ ಸಮಾಜ ಬಿಡುವುದಿಲ್ಲವೆಂಬ ಸಂಕಟವನ್ನು ತೋಡಿಕೊಂಡಿದ್ದಾರೆ. ನಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಬೇಕು ಎಂಬ ಮಾತುಗಳಿಂದ ಲೈಂಗಿಕವಾಗಿ ನೀಡುವ ಗಂಡಸರ ಹೆರಾಸ್ಸ್ಮೆಂಟ್, ಹೆಂಗಸರ ಕುಹಕತನ, ಆಡಿಕೊಳ್ಳುವಿಕೆ, ಎಲ್ಲವನ್ನೂ ಹೇಗೆ ಸಹಿಸಿಕೊಳ್ಳುವುದು ಹೇಳಿ, ಮರ್ಯಾದೆಯನ್ನೇ ಕೊಡದ ಈ ಸಮಾಜದಲ್ಲಿ ನಾವು ಕಾಯಕ ಮಾಡುವುದಾದರೂ ಹೇಗೆ ಎಂಬುದನ್ನು ಲೇಖಕರೊಂದಿಗೆ ಹಲವು ಘಟನೆಗಳಿಗೊಂದಿಗೆ ಹಂಚಿಕೊಂಡಿರುವುದನ್ನು ಓದಿದಾಗ ನಿಜಕ್ಕೂ ನಾವೆಲ್ಲ ಮನುಷ್ಯತ್ವ ಇರುವ ಜನಗಳ ಎಂಬ ಪ್ರಶ್ನೆಯೊಂದು ಮನದಾಳದೊಳಗೆ ಮಿಂಚಿ ಮರೆಯಾಯಿತು. ಮಂಗಳಮುಖಿಯರ ಪ್ರಕಾರ ಅವರ ಬಗ್ಗೆ ಸಮಾಜದ ಒಂದು ನೋಟ ಚೂರಿಗಿಂತಲೂ ಹರಿತವಾಗಿರುತ್ತದೆ.
ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಇದಕ್ಕೆಲ್ಲಾ ಕಾರಣ ಅವರ ಲೈಂಗಿಕ ಅಂಗಗಗಳು ಹೇಗಿರಬಹುದು ಎಂಬ ವಿಚಾರವು ಕಾರಣವಿರಬಹುದು. ಅದಕ್ಕೆ ಅವರು ಬಗ್ಗೆ ತಿಳಿಯುವ ಅಗತ್ಯವಿದೆ.ಆ ನಿಟ್ಟಿನಲ್ಲಿ ಪುಸ್ತಕ ಮೂಡಿಬಂದಿರುವುದು ಹೆಮ್ಮೆಯ ವಿಷಯ.
ಮಂಗಳಮುಖಿಯರ ದೈನಿಕ ಬದುಕಿನ ಹಿಂದಿರುವ ಕರಾಳ ಸತ್ಯಗಳು ಅನಾವರಣ ಮಾಡುವಲ್ಲಿ ಲೇಖಕರು ಓದುಗರ ಮುಂದಿಟ್ಟಿರುವ ಅಂಶಗಳು ನಿಜಕ್ಕೂ ಕ್ರೌರ್ಯದ ಪರಮಾವಧಿ. ನಾವಿಂತಹ ಜಗತ್ತಿನಲ್ಲಿದ್ದೇವಾ ಎಂದು ಅನಿಸದಿರದು. ಅವರು ನಮ್ಮಂತೆ ಮನುಷ್ಯರಲ್ಲವೇ? ಅವರಿಗೂ ನಮ್ಮಂತೆ ಸಂವೇದನೆಗಳಿಲ್ಲವೇ? ದೈಹಿಕ ಮತ್ತು ಮಾನಸಿಕವಾಗಿ ಅವರಿಗೂ ನೋವಾಗುವುದಿಲ್ಲವೇ ?ಎಲ್ಲವನ್ನು ಮರೆತು ಪ್ರಾಣಿಗಿಂತಲೂ ಹೀನಾಯವಾಗಿ ಅವರನ್ನು ನಡೆಸಿಕೊಳ್ಳುವ ಪರಿ ಕೆಲವರಿಂದ ಮಾತ್ರವೇ ಆದರೂ ಅದು ಇಡೀ ಮಾನವ ಕುಲವನ್ನು ಬೆತ್ತಲಾಗಿ ಸುತ್ತದೆ. ನಾಚಿಕೆಯಿಂದ ತಲೆತಗ್ಗಿಸುವಂತೆ ಆಗುತ್ತದೆ. ತೃತೀಯ ಲಿಂಗಿಗಳು ಅವರ ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಾರೆ. ಅಲ್ಲಿಗೆ ಹೋಗುವ ಜನರು ತೋರುವ ದುರ್ವರ್ತನೆ, ಬೈಗುಳ, ಅಸಹ್ಯಕರವಾದ ಮಾತುಗಳು, ಬೇಕಂತಲೇ ಮಾಡುವ ದೈಹಿಕ ಹಿಂಸೆ, ಅವರ ದೈಹಿಕ ಇರುವಿಕೆ ಕುರಿತು ಮಾಡುವ ಅವಮಾನ ಅಷ್ಟಿಷ್ಟಲ್ಲ. ಅದು ಸಾಲದೆಂಬಂತೆ ಅವರು ಸಂಪಾದಿಸಿದ ಹಣವನ್ನು ಕಿತ್ತು ಕೊಂಡು ಹೋಗುವ ಜನರಿದ್ದಾರೆ ಎಂಬ ವಿಚಾರಗಳು ನಿಜಕ್ಕೂ ನಾಚಿಕೆಗೇಡಿನ ವೆನಿಸುವುದು. ಮಾನಸಿಕ ಅಸಮತೋಲನ ಹೊಂದಿರುವಂತಹ ಅವರು ಬದುಕಿಗೆ ಅತಿಯಾಗಿ ದುಃಖಿಸುವಂತಹ
ಘಟನೆಗಳು ಮನಮಿಡಿಯುವಂತೆ, ಓದುಗರ ಕರುಳು ಹಿಂಡುವಂತೆ ಮೂಡಿಬಂದಿವೆ. ಈ ಪುಸ್ತಕ ಓದಿದ ನಂತರವವಾದರೂ ಅವರನ್ನು ತುಚ್ಚವಾಗಿ ಕಾಣುವ ಪ್ರವೃತ್ತಿಯನ್ನು ಕೈಬಿಡಲಿ ಎಂಬುದೆ ನನ್ನ ಮನದಿಂಗಿತ.
ಯಾವುದೇ ಒಂದು ಜೀವಿ ನಿರಾತಂಕವಾಗಿ ಬದುಕಬೇಕಾದರೆ ತಲೆ ಮೇಲೊಂದು ಸೂರು ಇರಲೇಬೇಕಾದದ್ದು ಅನಿವಾರ್ಯ. ಅದು ಮನುಷ್ಯನಾದರೂ ಸರಿ, ಪ್ರಾಣಿಯಾದರೂ ಸರಿ. ಆದರೆ ನಿರ್ಭಾಗ್ಯ ತೃತೀಯ ಲಿಂಗಿಗಳಿಗೆ ಆ ಪುಣ್ಯವೂ ಇಲ್ಲ. ಅವರಿಗೆ ಮನೆ ಬಾಡಿಗೆಗೆ ಕೊಡಲು ಯಾರೂ ಒಪ್ಪುವುದಿಲ್ಲ. ಕಾರಣ ಇವರು ಲೈಂಗಿಕ ಕಾರ್ಯಕರ್ತರು ಎಂಬುದು. ಹಾಗಾಗಿ ಇವರಿಗೆ ಇರುವ ಸುಲಭ ನೆಲೆಯೆಂದರೆ “ಹಮಾಮ್” ನಾವು ರಸ್ತೆ ಬದಿಯಲ್ಲಿ ನಡೆದು ಹೋಗುವಾಗ ಇಂತಹ ಅನೇಕ ಕಟ್ಟಡಗಳನ್ನು ನೋಡಿರುತ್ತೇವೆ. ಹೊರಜಗತ್ತಿಗೆ ಇದು ಸ್ನಾನದ ಮನೆಯಂತೆ ಕಂಡರೂ ಅದು ತೃತೀಯ ಲಿಂಗಿಗಳ ಪಾಲಿಗೆ ಬದುಕಿನ ದಾರಿ ತೋರುವ ದುಡಿಮೆಯ ಕ್ಷೇತ್ರ. ದುಡಿಮೆ ಯಾವುದೆಂದು ಹೇಳುವಂತಿಲ್ಲ. ಅದಕ್ಕಿಂತ ಬೇರೆ ದಾರಿಯಾದರೂ ಏನಿದೆ ಹೇಳಿ ? ಎಲ್ಲೂ ವಾಸಕ್ಕೆ ನೆಲೆ ಸಿಗದಿದ್ದಾಗ ಮಂಗಳಮುಖಿಯರ ಸಹಬಾಳ್ವೆಯ ಮಂತ್ರದಡಿ ಸ್ಥಾಪಿತವಾಗಿರುವುದೇ ಹಮಾಮ್. ಸಾಮಾನ್ಯ ಗಂಡ ಹೆಂಡತಿ ಖಾಸಗಿಯಾಗಿ, ನಿರ್ಭಯವಾಗಿ, ತನುಮನಗಳೊಪ್ಪಿ ಮಾಡುವ ಲೈಂಗಿಕ ಕ್ರಿಯೆಗೆ ಹೋಲಿಸಿದರೆ ಹಿಜಡಾಗಳ ಬದುಕು ತುಂಬಾ ಹೀನಾಯವೆನಿಸುತ್ತದೆ.
ಅವರ ಮನ ಒಪ್ಪದಿದ್ದರೂ ಇನ್ನೊಬ್ಬರ ಅಪರಿಚಿತನ ಕೈಗೆ ದೇಹ ಒಪ್ಪಿಸುವುದಿದೆಯಲ್ಲಾ ನಿಜಕ್ಕೂ ಹಿಂಸೆ. ಅದು ಹೋಗಲಿ ಅಂದರೆ ಆ ಕ್ರಿಯೆಯಾದರೂ ನಿಗದಿತ ಅಂಗಗಳ ಮೂಲಕ ನಡೆಯಲು ಸಾಧ್ಯವೆ..
ಅದು ಇಲ್ಲಾ…ಒಂದು ರೀತಿಯ ನರಕ ಸದೃಶ ದೃಶ್ಯವನ್ನು ಕಲ್ಪಿಸಿಕೊಳ್ಳಲು ನಮಗೆ ಕಷ್ಟವಾಗುತ್ತದೆ.
ಹಮಾಮ್ ಚಟುವಟಿಕೆಗಳ ಬಗ್ಗೆ ತಿಳಿಯಲು ಅಲ್ಲಿಗೆ ಹೋದ ಲೇಖಕರು ಕೇಳಿದ ಮಾಹಿತಿ ನಿಜಕ್ಕೂ ತೃತೀಯ ಲಿಂಗಿಗಳ ನೋವಿನ ಅನಾವರಣ ಮಾಡಿಸುತ್ತದೆ. ಈ ಮಂಗಳಮುಖಿಯರು ಕೂಡ ಸ್ಥಳವನ್ನು ಹಂಚಿಕೊಂಡು ತಮ್ಮ ದಂದೆ ಮಾಡುತ್ತಾರಂತೆ. ಅಲ್ಲಿಗೆ ಹೋಗಿ ಬರುವ ಜನರಿಂದಲೇ ಅವರ ಬದುಕು ಸಾಗುತ್ತದೆ ಎಂದಿದ್ದಾರೆ. ಜೊತೆಗೆ ಅಲ್ಲಿ ಹೋಗಿ ಬರುವ ಎಲ್ಲರು ಕದ್ದುಮುಚ್ಚಿ ಸಮಾಜಕ್ಕೆ ಹೆದರಿ ಭಯದ ಪರದೆಯೊಳಗೆ ಹೋಗಿ ಬರುತ್ತಾರೆ ಎಂಬ ವಿಚಾರವು ಸುಳ್ಳಲ್ಲ ಎನ್ನುತ್ತಾರೆ. ಇವರು ತಮ್ಮ ಅಧ್ಯಯನಕ್ಕಾಗಿ, ಮಾಹಿತಿ ಸಂಗ್ರಹಣೆಗಾಗಿ ಮಂಗಳಮುಖಿಯರ ಜೊತೆ ಸಂಪರ್ಕದಲ್ಲಿದ್ದಾಗ, ಅವರ ಜೊತೆ ಓಡಾಡುತ್ತಿದ್ದಾಗ, ಎಲ್ಲೆಂದರಲ್ಲಿ ಮಾತನಾಡುತ್ತಾ ಕೂತಾಗ, ನೋಡುತ್ತಿದ್ದ ಸಜ್ಜನರ ದೃಷ್ಟಿಕೋನದ ಬಗ್ಗೆ ಲೇಖಕರು ಪ್ರಸ್ತಾಪಿಸುತ್ತಾ ನನ್ನನ್ನು ಅವರ ಗಿರಾಕಿಯಂತೆ ನೋಡುತ್ತಿದ್ದರು. ಅಪಹಾಸ್ಯದ ಅವರ ನೋಟ, ಅವರು ಆಡುತ್ತಿದ್ದ ಚುಚ್ಚು ಮಾತುಗಳು ನಿಜಕ್ಕೂ ಭಯಾನಕ ಆದರೂ ನಾನು ಇವುಗಳೆಗೆ ಕೇರ್ ಮಾಡದೆ, ತಲೆಯನ್ನು ಕೆಡಿಸಿಕೊಳ್ಳದೆ, ನನ್ನ ಪೂರ್ವನಿರ್ಧಾರಿತ ಯೋಜನೆಯೊಂದರ ಕಾರ್ಯರೂಪಕ್ಕೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಎನ್ನುತ್ತಾರೆ ಸಂತೋಷ್ ಕುಮಾರ್ ಮೆಹಂದಳೆಯವರು.
ಕೆಲವು ಗಂಡಸರ ಚಫಲ ಅಸಹ್ಯಕರವಾಗಿರುತ್ತದೆ .ಆದರೆ ಯಾವುದನ್ನು ನಾವು ನಿರಾಕರಿಸುವಂತಿಲ್ಲ. ಕೆಲವೊಮ್ಮೆ ದುಡ್ಡು ಕೊಟ್ಟು ಹೋಗುತ್ತಾರೆ ಮತ್ತೆ ಕೆಲವರು ನಮ್ಮನ್ನು ಬಳಸಿಕೊಂಡು ಏನು ಕೊಡದೆ ಧುಮುಕಿ ಹಾಕಿ ಹೋಗುತ್ತಾರೆ ಎನ್ನುವ ನೋವಿನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗಿದ್ದವಳು ಸೌಪರ್ಣಿಕಾ. ನಮಗೂ ಕೆಲವು ಚಟ ಗಳಿರುತ್ತವೆ ಎನ್ನುವ ಅವಳು ಇದು ಅನಿವಾರ್ಯವೆಂದು ಕಾರಣ ಕೊಡುತ್ತಾ ಹೋಗುತ್ತಾಳೆ. ಮನಸಿಗೆ ಬೇಕು ಬೇಡವೋ, ಅವನು ಕೊಡಕನಾಗಿರಲಿ, ಗಲೀಜ್ ಆಗಿರಲಿ, ಪಾನ್ ಹಾಕಿರಲಿ, ಸಿಗರೇಟು ಸೇರಿರಲಿ, ಎಣ್ಣೆ ಹಾಕಿದ್ದರು, ಬೆವರು ವಾಸನೆ, ಗಬ್ಬುನಾತ ಹೊಡೆಯುತಿರಲಿ, ಸ್ನಾನವನ್ನೇ ಕಾಣದ ದೇಹವಿರಲಿ ಇವೆಲ್ಲವನ್ನು ಸಹಿಸುವುದು ಸುಲಭದ ಮಾತಲ್ಲ ಅದಕ್ಕಾಗಿ ಅವುಗಳಿಂದ ಮುಕ್ತಿ ಪಡೆಯಲು ಮಂಗಳಮುಖಿಯರು ಚಟಗಳಿಗೆ ದಾಸರಾಗುತ್ತಾರೆ ಎಂದಿದ್ದಾಳೆ. ಒಂದು ದಿನ ಅನಿವಾರ್ಯವಾಗಿ ಸ್ನಾನ ಮಾಡದೆ
ಇರುವ ಸಂಗಾತಿಯೊಂದಿಗೆ ಸೇರಲು
ಹಿಂಜರಿಯುವ ಜನರಿಗೆ ಇವರ ಪರಿಸ್ಥಿತಿ ಎನೆಂದು ಅರ್ಥವಾಗಿ ಕಂಗಳನ್ನು ಒದ್ದೆಯಾಗಿಸುತ್ತದೆ.
ಸಾಮಾಜಿಕ ಬದುಕಿನಿಂದ ದೂರ ತಳ್ಳಿ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದ ಸೃಷ್ಟಿಗೆ ನಾವೇ ಕಾರಣ ಎನ್ನುವ ಲೇಖಕರು ಮನೆಯಿಂದ ದೂರ ದಬ್ಬಲ್ಪಟ್ಟ ಇವರು ಕೊನೆಗೆ ಸೇರುವುದು ಹಿಜ್ರಾ ಸಮುದಾಯಕ್ಕೆ. ಈ ಸಮುದಾಯದ ಸಂಖ್ಯೆ ಸುಮಾರ 60 ಸಾವಿರ ದಾಟಿದೆ ಎನ್ನುತ್ತಾರೆ. ಮನೆ ಬಿಡುವ ಮತ್ತು ಬದುಕುವ ಅನಿವಾರ್ಯತೆಯಲ್ಲಿ ಸಮುದಾಯದ ಸಂಪರ್ಕಕ್ಕೆ ಬರುವವರು ಸಹಜವಾಗಿ ಒಬ್ಬ ಗುರುವನ್ನು, ಅಮ್ಮನನ್ನು ಒಪ್ಪಿಕೊಳ್ಳುತ್ತಾರೆ. ನಂತರ ಅಲ್ಲಿನ ರೂಢಿಗತ ಸಂಪ್ರದಾಯದ ಕಾಯ್ದೆಗಳನ್ನು ಅನುಸರಿಸುವುದು ಅಭ್ಯಾಸ ಮಾಡಿಕೊಳ್ಳುತ್ತಾರೆ. ಗಂಡು ಅಥವಾ ಹೆಣ್ಣು ಎಂಬ ಎಡೆಂಟಿಟಿ ಇಲ್ಲದವರು “ಘರಾಣ” ಎಂಬ ಸಮುದಾಯದ ಯಜಮಾನಿಕೆಯ ಸದಸ್ಯರಾಗಿ ಗುರುತಿಸಿಕೊಳ್ಳಬೇಕು. ಈ ಘರಾಣದ ಮುಖ್ಯಸ್ಥೆ ನ್ಯಾಯಾಧೀಶರಾಗಿ ಹಿಜ್ರಾಗಳ ಎಲ್ಲಾ ಕೇಸು, ಬಡಿದಾಟ, ವ್ಯಾಜ್ಯಗಳನ್ನು ನೋಡಿಕೊಳ್ಳುತ್ತಾಳೆ.
ಇದರ ಸಮುದಾಯದ ಭಾಗದ ಹೊರತಾಗಿ ಯಾವುದೇ ಜಾತಿಸೂಚಕ ಇರುವುದಿಲ್ಲ.ಹಿಂದೂ,ಮುಸ್ಲಿಂ,ಕ್ರೈಸ್ತ ಧರ್ಮಗಳನ್ನು ಅನುಸರಿಸುತ್ತಾ, ಮಂದಿರ, ಮಸೀದಿ, ಚರ್ಚುಗಳಿಗೆ ಹೋಗಿಬರುತ್ತಾರೆ ಎಂಬ ವಿಚಾರ ಮಾತುಮಾತಿಗೂ ಜಾತಿಯಿಡಿದು ಜಗ್ಗಾಡುವ ನಮ್ಮಂತಹ ನಾಗರಿಕ ಜನರಿಗೆ ಒಂದು ಪಾಠವಾಗಬೇಕು. ಅವರ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಸಾಹಸ ಆಗಿದ್ದರೂ ಕೂಡ ಅವರಿಗೂ ಭಾವನೆಗಳಿವೆ. ಸಂಬಂಧಗಳ ಆಶಯವಿದೆ . ದೂದ್ ಬೆಟ್,ದೂದ್ ಬೇಟಿ, ಬೆಹನ್ ಪಡೆಯುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ.
ಉತ್ತರಭಾರತದಲ್ಲಿ ಮಂಗಳಮುಖಿಯರನ್ನು “ಕಿನ್ನರ್” ಎಂದು ಕರೆಯುವ ವಾಡಿಕೆ ಇದೆ ಎನ್ನುವ ಜೊತೆಗೆ ಲೇಖಕರು ಅವರು ಹಕ್ಕುಗಳಿಗಾಗಿ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಾಣವಾಗುತ್ತಿರುವುದನ್ನು ಓದುಗರ ಗಮನಕ್ಕೆ ತಂದಿದ್ದಾರೆ. ಭಾರತದಲ್ಲಿ ಪ್ರಥಮ ಬಾರಿಗೆ ಉತ್ತರಪ್ರದೇಶ ಸರ್ಕಾರ ಸುಮಾರು ಎರಡರಿಂದ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳ ಮುಖಿಯರಿಗಾಗಿ ವಿಶ್ವವಿದ್ಯಾಲಯ ಸ್ಥಾಪಿಸುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದು “ಅಖಿಲ ಭಾರತ ಕಿನ್ನರಿ ವಿಶ್ವವಿದ್ಯಾಲಯವಾಗಿದೆ”. ಸಂತೋಷ್ ಕುಮಾರ್ ಮೆಹಂದಳೆ ಅವರು ಮತ್ತೊಂದು ಅಧ್ಯಾಯದಲ್ಲಿ “ವಾರ್ಷಿಕ ಕೂವಾಗಂ ಕುಂಭಮೇಳ”ದ ಬಗ್ಗೆ ಚರ್ಚಿಸಿದ್ದಾರೆ. ಅದೇನೆಂದು ನಮಗೂ ಕುತೂಹಲವಿದೆ. ಕುಂಭಮೇಳ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಉಲುಂಡರುಪಟ್ಟ ತಾಲೂಕಿನ ಒಂದು ಚಿಕ್ಕ ಹಳ್ಳಿ “ಕೂವಾಗಂ” ಇಲ್ಲಿಗೆ ದೇಶ ವಿದೇಶಗಳ ಟ್ರಾನ್ಸ್ ಜೆಂಡರ್ಗಳು ಬರುತ್ತಾರಂತೆ .ಈ ಜಾತ್ರೆಯಲ್ಲಿ ಕೇವಲ ಧಾರ್ಮಿಕ ವಿಧಿವಿಧಾನಗಳು ಮಾತ್ರ ನಡೆಯುವುದಕ್ಕಿಂತ ವಾರ್ಷಿಕ ಟ್ರಾನ್ಸ್ಜೆಂಡರ್ ಸುಂದರಿಯ ಆಯ್ಕೆಗಾಗಿ “ಮಿಸ್ ಕೂವಾಗಂ” ಎಂಬ ದೊಡ್ಡ ಶೋ ಕೂಡ ನಡೆಯುತ್ತದೆ.ಇದು ಕೂಡ ನಮ್ಮ ಮಿಸ್ ವರ್ಲ್ಡ್ ಶೋಗಳಂತೆ ಹಲವಾರು ಹಂತಗಳಲ್ಲಿ ಜರುಗುತ್ತದೆ.
ಹಿಜಡಾ ಗಳಿಗೆ ಈ ಕುಂಭಮೇಳದಲ್ಲಿ ಭಾಗವಹಿಸುವುದೇ ಒಂದು ಸಂಭ್ರಮ .ವರ್ಷಕ್ಕೊಮ್ಮೆ ನಡೆಯುವ ಈ ಮೇಳಕ್ಕೆ ಎಲ್ಲಾ ಮಂಗಳಮುಖಿಯರು ಬರಲು ಬಹಳ ಸಡಗರ ತೋರುತ್ತಾರೆ. ಹದಿನೈದು ಹದಿನಾರು ದಿನಗಳ ಕಾಲ ಇಲ್ಲಿ ಸೆಕ್ಸ್ ದಂಧೆಗಳು ಎಗ್ಗಿಲ್ಲದೆ ನಡೆಯುವ ಉತ್ಸವದಲ್ಲಿ 16ನೇ ದಿನಕ್ಕೆ “ಮದುವೆಯ ಸುತ್ ಸಂಪ್ರದಾಯ” ನಡೆದು ಅಲ್ಲಿಗೆ ಬರುವ ಎಲ್ಲಾ ಅರವಾಣಿಗಳು ಅಂದರೆ ಹಿಜಡಾಗಳಿಗೆ “ಕೂತಾಂಡವರ್” ದೇವಸ್ಥಾನದ ಪೂಜಾರಿ ತಾಳಿಕಟ್ಟುತಾನಂತೆ . ಆಗ ಮಂಙಳಮುಖಿಯರು ಅಲಂಕಾರ ಮಾಡಿಕೊಂಡು ಅವರೆಲ್ಲರೂ ಮದುಮಗಳಂತೆ ಸಿಂಗಾರಗೊಂಡು, ಕುಂಕುಮ ಇಟ್ಟು, ಬಳೆಗಳನ್ನು ತೊಟ್ಟು ಸಂಭ್ರಮಿಸುತ್ತಾರೆ. ಮತ್ತೆ ಮಾರನೇ ದಿನ ಅದೇ ಅವರ ತಾಳಿಗಳನ್ನು ಕಿತ್ತು ವಿಧವೆಯಾಗಿ ಮಾಡಲಾಗುತ್ತದೆ. ಆ ಘಟನೆಯಲ್ಲಿ ಅವರು ಅಳುವುದು ನಟನೆಯಲ್ಲ.ನಿಜವಾದದ್ದು, ವಾಸ್ತವಿಕತೆಯಿಂದ ಕೂಡಿದ್ದು ಎನ್ನುವ ಲೇಖಕರು ಅಳುವಿನ ಹಿಂದಿನ ಕರಾಳ ಸತ್ಯವನ್ನು ತೆರೆದಿಡುತ್ತಾರೆ. ಜೀವನದಲ್ಲಿ ಮದುವೆ ಕಾಣದ ಅವರ ಬದುಕಲ್ಲಿ ವಿವಾಹ ಶಾಸ್ತ್ರ ಮರೆಯಲಾಗದ ನೆನಪು ಎನ್ನುತ್ತಾರೆ. ಹದಿನಾರನೇ ದಿನ ನಡೆದ ಈ ಸಂಭ್ರಮ ಮುಗಿದಿದ್ದಕ್ಕಾ ಅಥವಾ ವಿಧವೆಯಾಗಿದ್ದಕ್ಕಾ ಅಥವಾ ನಾಳಿನಿಂದ ಮತ್ತದೇ ಕರಾಳ ಬದುಕಿಗೆ ತೆರಳಬೇಕಾಗುತ್ತದೆ ಎಂದಾ ಗೊತ್ತಿಲ್ಲ. ಆದರೂ ಅವರು ಯಾವುದೇ ನಿಜವಾಗಿ ಗೋಳಾಡುತ್ತಾರೆ ಎಂದು ದಾಖಲಿಸುತ್ತಾರೆ.
ಹಿಜಡಾ ಕುಂಭಮೇಳದ ಬಗ್ಗೆ ಲೇಖಕರ ನಿರೂಪಣೆ ನಿಜಕ್ಕೂ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ನಮ್ಮ ಎದುರಿಗೆ ಈ ಘಟನೆಗಳು ಜರುಗುತ್ತಿದೆಯೇನೋ ಎನ್ನುವಷ್ಟರಮಟ್ಟಿಗೆ ಕಥನ ರೂಪದಲ್ಲಿ ಅದನ್ನು ವರ್ಣಿಸಿದ್ದಾರೆ .ಜಾತ್ರೆಯ ವೈಭವವನ್ನು ನೀವೂ ಓದಿಯೇ ಅರಿಯಬೇಕು.
ಮಂಗಳಮುಖಿಯರಿಗೆ ಬೇಡವಾದ ಅಂಗವನ್ನು ತೆಗೆದುಹಾಕುವ ಈ ಜನಸಮುದಾಯದ ಸಂಪ್ರದಾಯವನ್ನು “ಖತ್ನಾ” ಎನ್ನುತ್ತಾರೆ. ನಿಗದಿತ ದಿನದಂದು ಅಮ್ಮ ಅಥವಾ ಗುರುವಿನ ಮುಂದಾಳತ್ವದಲ್ಲಿ ವರುಷಕ್ಕೊಮ್ಮೆ ನಿಗದಿತ ದಿನ ಸಮಯದಂದು ನಡೆಯುವ ಶುಚಿ ಕಾರ್ಯದಿಂದ ಪ್ರಾರಂಭವಾಗಿ, ಮುಹೂರ್ತದವರೆಗೆ ಖತ್ನಾ ಮಾಡಿಸಿಕೊಳ್ಳಲು ಸಿದ್ಧರಾದ ಎಲ್ಲರೂ ಅನುಸರಿಸುವ ವಿಧಿವಿಧಾನಗಳು ಅತಿ ಭಯಾನಕ ವೆನಿಸುತ್ತವೆ. ಅದರ ಭೀಕರತೆಯನ್ನು ನಾವು ಊಹಿಸಲು ಸಾಧ್ಯವಿಲ್ಲ ವೇನೋ. ಅಂತಹ ಕ್ರಿಯೆ ಅದಾಗಿರುತ್ತದೆ. ಅಂಗವನ್ನು ಕತ್ತರಿಸಲು ಬೆಂಕಿಯಲ್ಲಿ ಕಾಯಿಸಿದ ಕೆಂಪಾದ ಹರಿತವಾದ ಚಾಕು,ಬ್ರೇಡ್,ಮಚ್ಚು,ಎಡ್ಜ್
ಮುಂತಾದ ಆಯುಧ ಬಳಸುವುದನ್ನು ನೆನೆಸಿಕೊಂಡರೆ ನಿಜಕ್ಕೂ ದೇವರು ಇವರಿಗೆ ಯಾಕೆ ಇಂತಹ ಅನ್ಯಾಯ ಮಾಡಿದ್ದಾನೆ ಎನಿಸುತ್ತದೆ. ಖತ್ನಾಗೆ ಅನುಸರಿಸುವ ಕ್ರಿಯೆಗಳು, ಅದಕ್ಕೆ ಒಳಪಟ್ಟವರು ಅನುಭವಿಸುವ ನರಕಯಾತನೆ, ಚೀರಾಟ, ಗೋಳಾಟ, ಓದುತ್ತಿದ್ದರೆ ಮೈ ಜುಮ್ಮೆನ್ನುತ್ತದೆ. ಇದನ್ನೆಲ್ಲ ಲೇಖಕರು ವಿವರಿಸಿರುವ ಪರಿಯನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಲಿಂಗ ತೆಗೆದ ಮೇಲೆ ಅದು ವಾಸಿಯಾಗುವ ವರೆಗೂ ಅವರು ಅನುಭವಿಸುವ ದೈಹಿಕ ಮಾನಸಿಕ ನೋವು ಅಷ್ಟಿಷ್ಟಲ್ಲ. ಇದರ ವಿಸ್ತಾರವಾಗಿ ತಿಳಿಯಲು ನೀವೊಮ್ಮೆ ಪುಸ್ತಕವನ್ನು ಓದಲೇಬೇಕು. ಈ ಪ್ರಕ್ರಿಯೆಯಲ್ಲಿ ಸಾವುಗಳು ಸಂಭವಿಸುತ್ತವೆ ಎನ್ನುವ ಲೇಖಕರು ಸತ್ತವರನ್ನು ಮೊದಲೆ. ಸಿದ್ದಪಡಿಸಿಟ್ಟುಕೊಂಡಿದ್ದ ಗುಂಡಿಯಲ್ಲಿ ಮುಚ್ಚಿ ಬಿಡುತ್ತಾರೆ ಎಂದು ದಾಖಲಿಸಿದ್ದಾರೆ.
ಸ್ವಲ್ಪ ಸಮಾಧಾನದ ವಿಚಾರ ಎಂದರೆ ಇತ್ತೀಚೆಗೆ ವೈದ್ಯಕೀಯ ಶಸ್ತ್ರಚಿಕಿತ್ಸಾ ಪರಿಣಿತರ ಮೂಲಕ ಅಂಗ ತೆಗೆದುಹಾಕಲಾಗುತ್ತದೆ. ಇಲ್ಲಿ ಅರವಳಿಕೆಯನ್ನು ಕೊಡುವುದರಿಂದ ನೋವಿನ ಅರಿವು ಅವರಿಗೆ ಬಾಧಿವುದಿಲ್ಲ. ಇಂತಹ ವೈದ್ಯಕೀಯ ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ತೆಗೆದು ಹಾಕಿಸಿಕೊಂಡ ಮೊದಲ ಮಹಿಳೆ ಎಂದರೆ ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಹೋರಾಟದ ಮುಂಚೂಣಿಯಲ್ಲಿ ನಿಂತು ಯಶಸ್ವಿಯಾದ “ಅಕ್ಕಯ್ ಪದ್ಮಶಾಲಿ” ಯವರು.
ಲಿಂಗಪರಿವರ್ತನೆ ಮಂಗಳಮುಖಿಯರ ಪ್ರಮುಖ ಆಸೆಯಾಗಿದೆ . “ವ್ಯಕ್ತಿಗೆ ತಾನೇ ದೈಹಿಕವಾಗಿ ಬದಲಾಗಬೇಕು ಎನಿಸಿದ ಮೇಲೆ ಆಯಾ ಮನಸ್ಥಿತಿಗೆ ತಕ್ಕಂತೆ ದೇಹವನ್ನು ಮರು ಪರಿವರ್ತಿಸುವ ಕ್ರಿಯೆಯೇ ಲಿಂಗಪರಿವರ್ತನೆ”ಈ ಪ್ರಕ್ರಿಯೆಯನ್ನು ಸವಿಸ್ತಾರವಾಗಿ ವೈದ್ಯಕೀಯ ಮತ್ತು ವೈಜ್ಞಾನಿಕ ಮಾಹಿತಿಯನ್ನು ಸಮಗ್ರವಾಗಿ ಓದುಗರ ಮುಂದಿಟ್ಟಿದ್ದಾರೆ. ಲಿಂಗಪರಿವರ್ತನೆ ವಿಧಾನಗಳು ಕೌನ್ಸಿಲಿಂಗ್ ಮೂಲಕ ಹಾರ್ಮೋನುಗಳ ಉತ್ಪತ್ತಿ ಚಿಕಿತ್ಸೆಯ ಮೂಲಕ, ಬದಲಾವಣೆಗೆ ನಿಂತಿರುವ ವ್ಯಕ್ತಿಯ ಮಾನಸಿಕ ದೃಢತೆ ,ನಿಲುವು ,ಗೊಂದಲ ಎಲ್ಲವನ್ನು ಖಚಿತಪಡಿಸಿಕೊಂಡು ಕುಲಂಕುಶವಾಗಿ “ಅಂತರಾಷ್ಟ್ರೀಯ ಮಾನದಂಡದ ಪಾಲನೆ”ಯ ಮೂಲಕ ತಜ್ಞರು ವೈದ್ಯಕೀಯ ಆವಿಷ್ಕಾರದ “ವೆಜಿನಾ ಪ್ಲಾಸ್ಟಿ” , “ವೆಜಿನಾ ರೀ ಕನ್ಸ್ಟ್ರಕ್ಷನ್” , “ಬ್ರೆಸ್ಟ್ ಬಿಲ್ಡಿಂಗ್” ಆಪರೇಷನ್ನು ಮಾಡುತ್ತಾರೆ ಎನ್ನುವ ವಿಶ್ಲೇಷಣೆಯೊಂದಿಗೆ ಲಿಂಗ ಪರಿವರ್ತನೆಯ ಗ್ರಾಫಿಕಲ್ ಮಾದರಿಯ ಚಿತ್ರಣಗಳನ್ನು ನೋಡಲು ಅಗತ್ಯ ಲಿಂಕ್ ಗಳನ್ನು ನೀಡಿದ್ದಾರೆ. ಇದು ಹಲವರ ಕುತೂಹಲ ತಣಿಸುವ ವಿಷಯವಾಗಿದೆ.
ಇಷ್ಟೆಲ್ಲಾ ನೋವು, ಹತಾಶೆ, ನಿರಾಶೆ, ದೌರ್ಜನ್ಯ, ಶೋಷಣೆ, ಅವಮಾನ ಗಳ ನಡುವೆಯೂ ಕಾರಂಜಿಯಂತೆ ಪುಟಿದೆದ್ದು ಸಾಧನೆ ಮಾಡಿದ ಮಂಗಳಮುಖಿಯರಿಗೇನು ಕಡಿಮೆ ಇಲ್ಲ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಅವರ “ಅಕ್ಕಯ್,ಕರುಣೆಗೊಂದು ಸವಾಲ್” ಆತ್ಮಕಥೆ ಒಂದೆಡೆ ಮೂಡಿಬಂದಿದೆ, ಮಂಜಮ್ಮ ಜೋಗತಿ ಕರ್ನಾಟಕದ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮೊದಲ ಟ್ರಾನ್ಸ್ ವ್ಯುಮೆನ್ ಆಗಿದ್ದು ಪದ್ಮಶ್ರೀ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ಪದ್ಮಿನಿ ಪ್ರಕಾಶ್ ಟಿವಿ ನಿರೂಪಕಿಯಾಗಿ ಕೆಲಸ ಮಾಡಿದ್ದರೇ,ಮಧುಬಾಯ್ ಅವರು ಛತ್ತಿಸ್ಗಢ ನಲ್ಲಿ ಮೇಯರ್ ಆಗಿ ಕೆಲಸ ಮಾಡಿದ್ದಾರೆ. ಮಧ್ಯಪ್ರದೇಶದ ಶಾಸಕಿಯಾಗಿ ಶಭನಮ್ ರವರು ಗುಜರಾತ್ನ ಎಂ. ಎಲ್.ಎ ಆಗಿ ಸೋನಿಯಾರವರು ಕರ್ತವ್ಯ ನಿರ್ವಹಿಸಿದ್ದಾರೆ. ನ್ಯಾಯಾಧೀಶರಾಗಿ ಬೆಂಗಾಲಿಯ ಜೋಯಿತ ಮಂಡಲ್ , ತಮಿಳುನಾಡಿನ ಶರ್ಮಿಳಾ, ಪೊಲೀಸ್ ಅಧಿಕಾರಿಯಾಗಿ ಪ್ರೀತಿಕಾ ಯಾಸ್ಮಿನ್ ಸಾಧನೆ ಮೆರೆದಿದ್ದಾರೆ. ಈ
ಎಲ್ಲ ಮಂಗಳಮುಖಿಯರ ಸಾಧನೆ ಇತರ ಎಲ್ಲರಿಗೂ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.
ಸ್ನೇಹಿತರೆ ಈ ಪುಸ್ತಕದಲ್ಲಿರುವ ಮಾಹಿತಿಯನ್ನು ನನ್ನ ವಿಶ್ಲೇಷಣೆಯ ಮೂಲಕ ನಿಮ್ಮ ಮುಂದೆ ಸಮಗ್ರವಾಗಿ ತೆರೆದಿಡುವ ಸಾಧ್ಯವಿಲ್ಲ. ಅಷ್ಟೊಂದು ವಿಚಾರಗಳು, ಚಿಂತನೆಗಳು ,ವಿವರಣೆಗಳು, ವಿಶ್ಲೇಷಣೆಗಳು, ಸಂವಾದಗಳು, ಚರ್ಚೆಗಳು ಪುಂಖಾನುಪುಂಕವಾಗಿ ಹರಿದಿವೆ. ಆ ಜಗತ್ತಿನ ಬಗ್ಗೆ ಪ್ರತಿಯೊಬ್ಬರು ತಿಳಿಯಲೇಬೇಕು. ನಮಗೆ ತಿಳಿದ ಅರ್ಧಂಬರ್ಧ ಮಾಹಿತಿಗಳೇ ಅವರ ಶೋಷಣೆಗೆ ಮತ್ತಷ್ಟು ವೇದಿಕೆಯಾಗುತ್ತವೆ. ಅವರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವುದು ಮಾನವೀಯತೆಯನ್ನು ಬೆಳೆಸಿಕೊಂಡು ಮನುಷ್ಯರಂತೆ ನಾವು ವರ್ತಿಸಬೇಕಾದ ಅಗತ್ಯವಿದೆ ಎಂಬುದು ನನ್ನ ಅಭಿಪ್ರಾಯ.
ಒಟ್ಟಾರೆ ಹೇಳುವುದಾದರೆ ಮಂಗಳಮುಖಿಯರ ಕಡೆ ಒಂದು ಕಿರು ನೋಟ ಬೀರಿದರು ಸಾಕು ಅನುಮಾನಿಸುವ ಜನರ ಮಧ್ಯೆ ಕೆಚ್ಚೆದೆಯಿಂದ ಅವರು ಇರುವ ಅಡ್ಡಗಳಿಗೆ ಹೋಗಿ ಅವರೊಂದಿಗೆ ಗಂಟೆಗಟ್ಟಲೆ ಚರ್ಚಿಸಿ, ನಿಸ್ಸಂಕೋಚವಾಗಿ ಅನೇಕ ಮಾಹಿತಿಗಳನ್ನು ಸಂಗ್ರಹಿಸಿ, ಅವುಗಳನ್ನು ವೈಜ್ಞಾನಿಕವಾಗಿ ವೈದ್ಯಕೀಯ ಅಂಶಗಳ ಅಡಿಯಲ್ಲಿ ಬಂಧಿಸಿ, ಶೋಷಿತ ಮತ್ತು ನಿರ್ಲಕ್ಷಿತ ಸಮುದಾಯವೊಂದರ ನೋವಿನ ಪರಿಯನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಅವರ ಬಗ್ಗೆ ಒಂದು ಸಹಾನುಭೂತಿ ಮೂಡುವಂತೆ, ಮನುಷ್ಯತ್ವದ ಗುಣಗಳು ಬೆಳೆಯುವಂತೆ ಮಾಡಿದ ಲೇಖಕರಾದ ಸಂತೋಷ್ ಕುಮಾರ್ ಮೆಹಂದಳೆ ಇವರಿಗೆ ಮಂಗಳಮುಖಿಯರ ಪರವಾಗಿ ಮನದಾಳದ ಒಂದು ನಮನವನ್ನು ಹೇಳಿಬಿಡೋಣ..
ಅನುಸೂಯ ಯತೀಶ್
Where to get the book?.