ಕವಿ ಕಾವ್ಯ ಪರಿಚಯ

ವಾಣಿ ಭಂಡಾರಿ

ಇವರು ಮೂಲತಃ ಮಲೆನಾಡಿನ ಸಸ್ಯ ಸಮೃದ್ಧ ಮಡಿಲಾದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರ (1982 ಜುಲೈ14) ರಂದು ರತ್ನ ಭಂಡಾರಿ‌ ಹಾಗೂ ವೆಂಕಟ್ಟಪ್ಪ ಭಂಡಾರಿ ಅವರ ಸುಪುತ್ರಿಯಾಗಿ ಜನಿಸಿದ ಇವರು ಬಾಲ್ಯದಿಂದಲೇ ಸಾಹಿತ್ಯ ಸಂಗೀತ ಪ್ರಿಯರು.ಮನೆಯ ಪರಿಸರವು ಅದಕ್ಕೆ ತಕ್ಕುದಂತೆ ಇದ್ದ ಪ್ರಯುಕ್ತ ಚಿಕ್ಕಂದಿನಿಂದಲೇ ಆಟಪಾಠ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಿಟ್ಟಿಸಿ ಕೊಳ್ಳುತ್ತಿದ್ದ ಇವರು ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದುಕೊಂಡು ಉಪನ್ಯಾಸಕರಾಗಿ ಸೇವೆ‌ ಸಲ್ಲಿಸುತ್ತಲೇ ತಮ್ಮ ವಿದ್ಯಾರ್ಥಿಗಳಿಗೆ ಕಥೆ,ಕವನ ಚುಟುಕು ಭಾವಗೀತೆ ಹೀಗೆ ಹತ್ತಾರು ಪ್ರಕಾರಗಳನ್ನು  ವಿದ್ಯಾರ್ಥಿಗಳ ಕೈಯಲ್ಲಿ ಬರೆಸಿ ಅವರ ಸೃಜನಶೀಲತೆಯನ್ನು ಚಿಕಿತ್ಸಕ ಮನೋದೃಷ್ಟಿಗೆ ಒಳಪಡಿಸುತ್ತಿದ್ದರು.ತಮ್ಮ SSCL ವ್ಯಾಸಂಗ ಮುಗಿಯುತ್ತಿದ್ದಂತೆ ಓದಿನ ಜೊತೆಗೆ ಜ್ಯೋತಿಷ್ಯವನ್ನು ಗುರುಮುಖೇನ ಕಲಿತು ಹಾಗೂ ಸಂಗೀತ ಅಭ್ಯಾಸವನ್ನು ಮಾಡುತ್ತ, “ಬಹುಮುಖ ಪ್ರತಿಭೆ” ಪ್ರಶಸ್ತಿಯನ್ನು “ನಮ್ಮೂರ್ ಪೌಂಡೇಷನ್ ಹೈದರಾಬಾದ್” ಇವರಿಂದ ಪಡೆದಿರುವುದು ಇವರ ಸೃಜನಶೀಲತೆಗೆ ಮತ್ತೊಂದು ಗರಿ.

ಪ್ರವೃತ್ತಿಯಿಂದ DXN ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ ಇದರ ಜೊತೆಗೆ ಭಾವಗೀತೆ, ಕವನ,ಕಥೆಗಳು,ನ್ಯಾನೋಕಥೆ,ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ,ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು.ಸವಿನುಡಿ,

ಕವಯಿತ್ರಿ,ಅಂಕಣಗಾರ್ತಿ,ವಿಮರ್ಶಕಿ,ಲೇಖಕಿ,ಗಜಲ್ಗಾರ್ತಿ,ಜೊತೆಗೆ ಜ್ಯೋತಿಷ್ಯ ಅಧ್ಯಯನವನ್ನು ಗುರುಗಳಾದ ವೈ ಎಸ್ ಪ್ರೇಮನಾಥ್ ಅವರಲ್ಲಿ ಕಲಿತು

ಮತ್ತು‌ ಸಂಗೀತದಲ್ಲಿ ಜ್ಯೂನಿಯರ್ ಕಲಿಕೆ:-1-ಮೀನಾಕ್ಷಿ ಹೆಬ್ಬಾರ್(ಗುರುಗಳು)

2-ದಮಯಂತಿ( ಗುರುಗಳು) ಪ್ರಸ್ತುತ ಅವರ ಹತ್ತಿರ ಕಲಿಯುತ್ತಿದ್ದು,ಹಲವಾರು ಕ.ಸಾ.ಪ.ಮತ್ತು ಇತರೆ ಸಮ್ಮೇಳದ ಕಾರ್ಯಗಳಲ್ಲಿ‌ ಭಾಗವಹಿಸಿ ವಾಚನ ಉಪನ್ಯಾಸಗಳನ್ನು ನೀಡಿ,ಹಾಗೂ ಆಕಾಶವಾಣಿ ಯುವವಾಣಿ* ಕಾರ್ಯಕ್ರಮದಲ್ಲಿ ರೇಡಿಯೋ ಸಂದರ್ಶನದ ಮೂಲಕ ಇವರ ಮಾತಿನ ಝಲಕ್ ಸಹ‌ ಕೇಳಬಹುದು.ಈಗಾಗಲೇ ನಾಡಿನ ಹಲವಾರು ಪತ್ರಿಕೆಯಲ್ಲಿ ತಮ್ಮ “ವಿಮರ್ಶಾ ಅಂಕಣ”ಗಳು “ಸತ್ಯವಾಣಿ ಕಟೋಕ್ತಿ”,”ವ್ಯಕ್ತಿತ್ವ ವಿಕಸನ” ಅಂಕಣಗಳು ಪ್ರಕಟಗೊಳ್ಳುತ್ತಿದ್ದು ಸಹೃದಯರ ಮನೆಮನತುಂಬಿದೆ. ಹೀಗೆ ತಮ್ಮನ್ನು ಕೇವಲ ಒಂದು ವಿಚಾರಕಷ್ಟೆ ಸಿಮೀತಗೊಳಿಸಿಕೊಳ್ಳದೆ ಮನುಷ್ಯ ಪ್ರೀತಿ‌ ಹಂಚುತ್ತಾ,ಭಾವೈಕ್ಯತೆಯನ್ನು ಬಿತ್ತುವ ಇವರು ಸಾಹಿತ್ಯ ಸಂಗೀತ ತನ್ನ ಉಸಿರು ಜೀವನಾಡಿ ಎಂದು ಸದಾ ಧ್ಯಾನಸ್ಥರಾಗಿ ಅದರೊಳಗೆ‌ ತನ್ಮಯರಾಗಿ ಬಿಡುತ್ತಾರೆ.

       ಇನ್ನೂ ಹತ್ತಾರು ಕೃತಿಗಳನ್ನು ಬಿಡುಗಡೆಗೆ ಕೈಯಲ್ಲಿರಿಸಿ ಕಾಯುತ್ತಿರುವ ಇವರು “ಸಂತನೊಳಗಿನ ಧ್ಯಾನ”  ಚೊಚ್ಚಲ ಗಜಲ್ ಕೃತಿಯು ಕನ್ನಡ ಪುಸ್ತಕ‌ ಪ್ರಾಧಿಕಾರಕ್ಕೆ ಆಯ್ಕೆಗೊಂಡು ಅದರ ವಿಮರ್ಶಾಕೃತಿಯೇ “ಸಂತಸಮೀಕ್ಷೆ” ಎಂದು ವ್ಯಕ್ತಪಡಿಸಿ ಖುಷಿಯಿಂದ ತಮ್ಮ ಬೊಗಸೆ ತುಂಬಿಸಲು ಹೊರಟ್ಟಿದ್ದಾರೆ.

ಅಚ್ಚಿಗಾಗಿ ಕಾದಿರುವ ಪುಸ್ತಕಗಳು

ಅಂತರ್ ದೃಷ್ಟಿವಿಮರ್ಶಾ ಸಂಕಲನ

ತುಂಗೆ ತಪ್ಪಲಿನ ತಂಬೆಲರು ಭಾಗ:+

(ಸಂಶೋಧಾನ್ಮತಕಕೃತಿ)

ವಚನಗಳು

ಗಜಲ್ ಗಳು

ಸಾವನ್ನು ಮುಂದೂಡಿ ( ವ್ಯಕ್ತಿತ್ವ ವಿಕಸನ) ಕೃತಿ,,

ಸತ್ಯವಾಣಿಕಟೋಕ್ತಿ

ಇತ್ಯಾದಿ ಇತ್ಯಾದಿ,,,,,

*****

ವಾಣಿಭಂಡಾರಿಯವರ ಎರಡು ಕವಿತೆಗಳು

ಒಂಟಿತನ

ನಿನ್ನ ನೆನಪೇ ಒಂದು ಸುಡುಗಾಡು
ಸುಡಲು ಬೇರೇನು ಬೇಕಿಲ್ಲ
ನೊಂದು ಬೆಂದು ಸುಟ್ಟು
ಕರಕಲಾಗಿ ಬೂದಿಯಾದಾಗಲೂ
ನೀ ಮತ್ತೆ ಮತ್ತೆ ಮಸಣವೇ.

ಏನಿತ್ತು ನಿನ್ನಲ್ಲಿ ಒಳಗೊಳುವಂತಹದ್ದು
ಬಂದೆ ಮಿಡಿದಂತೆ ನಟಿಸಿ
ಮಿಟುಕಾಡಿ ಬತ್ತಿ ಹಚ್ಚಿ
ಹಾಕದೆ ಎಣ್ಣೆಯ
ಉರಿಸಿಬಿಟ್ಟೆಯಲ್ಲ.
ಸಿಲುಕಿ ನೆನಪುಗಳ ಜಾಲದಲಿ
ಒದ್ದಾಡುವಾಗೆಲ್ಲ ಮೀನಂತೆ
ನಿನ್ನ ಬೊಗಸೆ ಪ್ರೀತಿಗೆ ಕೈಚಾಚಿದ್ದು
ಮರೀಚಿಕೆಯಾಯ್ತು
ನಿನ್ನ ಕಾಮಾಲೆ ಭಾವಕೆ.
ಹಾದರದ ಮನಕೆ ಚಾದರವ
ಹೊದಿಸೊ ನಾಟಕದೊಳಗೆ
ಬೆಂದಿದ್ದು ಮಖಮಲ್ಲೆ.
ಏಳುತೂಕದ ಮಲ್ಲೆ ನೆನಪುಗಳು
ಮಕಾಡೆ ಮಲಗಿ
ರೋದಿಸಿದ್ದು ಸುಡುಗಾಡಲ್ಲೆ,,

ಬೆಳದಿಂಗಳ ರಾತ್ರಿಗೆ
ಸೋರಿದ್ದು ಕನಸಲ್ಲ‌
ತಿದ್ದಿ ತೀಡಿದ ನನಸುಗಳ ನಕ್ಷತ್ರಪುಂಜ
ತಣ್ಣನೆ ತಂಪಿರುಳಿಗೆ
ಕದ್ದಿಂಗಳಂತಹ ನೆನಪಮಾಲೆಗೆ
ಕೊರಳೊಡ್ಡಿದೆ ಇರುಳು.
ಕೈಚಾಚಿ ಅಪ್ಪಿ ಮುದ್ದಾಡಿದ‌
ಕೈಯೊಳಗು ಮನದೊಳಗೂ
ನಶೆಯ ಗುಡಾಣ
ಮತ್ತಿನಲೂ ಬಿತ್ತಿದ‌ ಬೀಜ
ಹಸನ ಪಸೆ ಒಡೆಯಲಿಲ್ಲ
ಪಸೆ ಆರಿಸಿ ರಸ ಹೀರಿದ ತೂತು
ಪ್ರೀತಿಯೊರತೆ ಚಿಮ್ಮಿಸದೆ
ನಖಶಿಖಾಂತ ಉರಿದು ಸುಡಾಗಿದೆ.

ಬೈಗು ಬೆಳಗು ಬಾನು‌ಭುವಿಯು
ನೆತ್ತಿಯೆತ್ತರ ಹತ್ತಿ ಕುಳಿತರೂ
ಸುಡುವ ನೆನಪ ಕಿಚ್ಚಿಗೆ ಒಂಟಿತನವೆ
ಉಪ್ಪು ಖಾರ ಮೆಣಸು.
ಮತ್ತೆಂದು ಮರಳಿ ಬಾರದಿರು
ಸುಟ್ಟ ನೆನಪು ಬೂದಿಯಷ್ಟೆ
ತೇಲಿಬಿಡುವೆ ತುಂಗೆಯಲಿ.

*****

ಬಹಳ ಹಿಂದುಳಿದುಬಿಟ್ಟೆ ನಾನು

ನನ್ನವ್ವನ ಹರಿದ ಸೀರೆಯಲಿ
ಅಂಟಿದ ಕಣ್ಣೀರ ಜಿಗುಟು,,
ನೊಂದ ನೋವ ಕೊಡದಲಿ
ತುಂಬಿದ ಹತಾಶೆ ಭಾವ
ಕಾಣಲಿಲ್ಲ ನನಗೆ.
ನನ್ನಪ್ಪನ ಬೆವರಿನ ಬಾವುಗಳು
ಅಡಗಿ ಕೂತು ಮರೆಮಾಚಿದ್ದು
ಹಾಳೆಟೊಪಿಯಲಿ ಆಂಟಿದ
ಹರಳೆಣ್ಣೆ ಮಂದತೆ
ಕಾವಿನ ನೋವು ತೋರಲಿಲ್ಲ‌
ಏಸು ಕಲಿತರೇನು
ಬಹಳ ಹಿಂದುಳಿದುಬಿಟ್ಟೆ ನಾನು.

ರೆಟ್ಟೆ ಮುರಿದು ಹೊಟ್ಟೆ
ಹಿಟ್ಟಾಗಿಸಿದ ಕರುಳ ಸಂಕಟ,,
ಭಾವಗಳಿಗೆ ಕೋಡಿಕಟ್ಟಿ
ಎದೆಯ ಒಳಗೆ ಪೇರಿಸಿದ್ದು
ತುತ್ತು ತುತ್ತಿಗೂ ಕಣ್ಣೀರೆ
ಒಲವ ಬಲವಾಗಿದ್ದು,,
ಮಡಲಿನೊಳಗೆ ಸುಖ
ನಿದಿರೆ ಜಾರುತ
ಅವ್ವನ ಒಡಲೊಳಗಿನ
ನಿಗಿ ನಿಗಿ ಕೆಂಡವಾಗಿ ಸುಟ್ಟಾ
ಬೂದಿ ನೋಡಲೇ ಇಲ್ಲ
ಏಸು ಬಲಿತರೇನು
ಬಹಳ ಹಿಂದುಳಿದುಬಿಟ್ಟೆ ನಾನು .

ಕಣದ ದೂಳಿನಲಿ
ಅಪ್ಪನ ಒಕ್ಕಲಾಟ
ಅವ್ವನ ನರಳಾಟ
ರಾಶಿ ರಾಶಿ ಗೊಣಬೆ
ನಚ್ಚಗಾದ ರೋಣಿನೊಳಗೆ
ಜಳ್ಳು ಭತ್ತಗಳ ನಡುವೆ
ಮೈ ಚೆಲ್ಲಿ ಕುಣಿದಿದ್ದೆ
ಗ್ವಾರೆಮಣಿಯಲಿ ಚದುರಿದ
ಅವರ ಕನಸುಗಳ ಮಧ್ಯೆ
ಕಣ್ಣಿನಲಿ ಮಸಣದ ಕಾವು
ಮೆತ್ತಿದ್ದು ಕಾಣಲಿಲ್ಲ
ಏಸು ಬೀರಿದರೇನು
ಬಹಳ ಹಿಂದುಳಿದುಬಿಟ್ಟೆ ನಾನು.

ಸೂರಿಗೆ ಕೈಚಾಚಿ ಮಳೆಗಾಲಕೆ
ದಬ್ಬೆ ಹಚ್ಚಿ ಹುಲ್ಲು ಮುಚ್ಚಿ,,
ಸೋರೊ ಮನೆಗೆ ಹಂಡೆ ಇಕ್ಕಿ
ಸೆರಗ ಬಿಚ್ಚಿ ಬಿಕ್ಕಿ ಮುಖ
ತೋಯದಂತೆ ತಡೆದ ನನ್ನವ್ವ,,,
ಮೋಟು ಬೀಡಿಗೆ ಬೆಂಕಿಗೀರದೆ
ಬಚ್ಚಿಟ್ಟು ನೆಲತಡವಿ
ನಾಳೆಗೆಂದ ಅಪ್ಪನ ಸಹನೆ
ಸುರಿವ ಜಡೀ ಮಳೆ
ಜೀರುಂಡೆಯ ನಾದ
ಕಪ್ಪೆಯ ಆಲಾಪನೆ
ನರಿಯ ಅಣಕ ಗೂಬೆ ಕುಹಕ
ಅಪ್ಪನ ಪದ‌ ಕಗ್ಗತ್ತಲ ನಡುವೆ
ಎದೆ ಬೀರಿದು ದಾಟಲೇ ಇಲ್ಲ.
ಅವ್ವನ ಭಾವ ಇರುಳ ಸೋನೆಯಲಿ
ಕರಗಿದ್ದು ಕಾಣಲೇ ಇಲ್ಲ
ಏಸು ಕಲಿತು ಬಲಿತು ಬೆರೆತು ತಿರುಗಿದರೇನು
ಬಹಳ ಹಿಂದುಳಿದುಬಿಟ್ಟೆ ನಾನು.


Leave a Reply

Back To Top