ಮಂಗಳ ಮುಖಿಯರ ಸಂಗದಲ್ಲಿ

ಪುಸ್ತಕ ಸಂಗಾತಿ

ಮಂಗಳ ಮುಖಿಯರ ಸಂಗದಲ್ಲಿ

ಈಗ್ಗೆ ಒಮ್ಮೆ ರಾಗಂ (ರಾಜಶೇಖರ ಮಠಪತಿ) ಅವರ ಹತ್ತಿರ ಮಾತನಾಡುವಾಗ ಸಾಹಿತ್ಯ ಎಂದರೆ ಏನು ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಸಹ್ಯವಾಗದೆ ( ಬಹುತೇಕ ಬಾರಿ ನಮಗೆ ನಾವು ಹಾಗೆ ಅಂದುಕೊಂಡಿರುತ್ತೇವೆ) ಇದ್ದುದ್ದನ್ನು ಸಹ್ಯ ವಾಗಿಸುವುದೇ, # ಸಾಹಿತ್ಯ # ಎಂದು ಹೇಳಿದ್ದರು.. ಯಾಕೋ ನಾನು ಇದನ್ನು ಪದೇ ಪದೇ ಮನನ ಮಾಡಿಕೊಳ್ಳುತ್ತಾ ಇರುತ್ತೇನೆ..

ಇತ್ತೀಚೆಗೆ ನಾನು ಓದಿದ ಸಂತೋಷ ಕುಮಾರ್ ಮೆಹಂದಳೆ ಅವರ # ಮಂಗಳ ಮುಖಿಯರ ಸಂಗದಲ್ಲಿ # ” ಹಿಜಡಾ ಜಗತ್ತಿನ ಅನುಭವ ಕಥನ” ಓದಿದಾಗ ರಾಗಂ ಅವರು ಹೇಳಿದ ಮಾತು ಎಷ್ಟು ಸರಿ ಎಂದು ಮತ್ತೊಮ್ಮೆ ಅನ್ನಿಸಿದ್ದು ಸುಳ್ಳಲ್ಲ…

ನನಗೆ ವ್ಯಯಕ್ತಿಕವಾಗಿ ಹೆಚ್ಚಿಗೆ ಅಲ್ಲದೆ ಇದ್ದರೂ, ತಕ್ಕಮಟ್ಟಿನ ಆಪ್ತತೆ ಎನ್ನಿಸುವಷ್ಟು ಪರಿಚಯ/ ಒಂದಷ್ಟು ಸಲುಗೆ ಎರಡೂ ತೃತೀಯ ಲಿಂಗಿಗಳ ಜೊತೆ ಇದ್ದಾಗಲೂ, ಇವರುಗಳ ತುಮುಲಗಳು, ಒಳ ತುಡಿತ ಗಳು,  ಕುಟುಂಬದಲ್ಲಿ ಸಾಧಾರಣ ಮಗುವಾಗಿ ಹುಟ್ಟಿ, ಈ ಹಿಜಡಾ ಸಮುದಾಯದ ಒಳಗೆ ಬರುವಂತೆ ಆಗುವ ಹಾದಿಯ ಕಷ್ಟ – ನಷ್ಟಗಳು, ಅಷ್ಟೆ ಅಲ್ಲ ಬಂದ ಮೇಲೂ ಅನುಭವಿಸುವ ಮಾನಸಿಕ ತೋಳಲಾಟಗಳ ಮಾಹಿತಿಗಳೂ ಇದ್ದರೂ, ಮೆಹಂದಳೆ ಇವರ ಬಗ್ಗೆ ಬರೆಯುತ್ತಿದ್ದಾರೆ, ಎಂದಾಗ ಏನನ್ನೂ, ಸುಮ್ಮನೆ ಬೇಕಾ ಬಿಟ್ಟಿಯಾಗಿ ಬರೆಯದ ಇವರು ತುಸು ಹೆಚ್ಚೇ ವೈಜ್ಞಾನಿಕ ವಿವರಣೆ ಬೇಡುವ ವಿಷಯವನ್ನು ಹೇಗೆ ನಿರೂಪಿಸಬಹುದು? ಎಂಬ ಕುತೂಹಲವಿತ್ತು.. ಈ ಪುಸ್ತಕದಲ್ಲಿ ಅ ನನ್ನ ನಿರೀಕ್ಷೆಯನ್ನು ಪೂರ್ಣವಾಗಿದೆ ‌‌.‌….‌

ಅಸ್ಯಹಿಸಿಕೊಳ್ಳುವವರೆ ಹೆಚ್ಚಿರುವವರ ಮಧ್ಯೆ ಅವರುಗಳ ವಿಶ್ವಾಸ ಗಳಿಸಿ, ಅವರ ಕಷ್ಟ- ಸುಖಗಳಿಗೆ ಕಿವಿಯಾಗುವುದಷ್ಟೆಯಲ್ಲಾ, ಅವರ ಭಾವನೆಗಳಿಗೆ , ಕಷ್ಟ ಕಾರ್ಪಣ್ಯಗಳಿಗೆ ಲೇಖನಿಯಾಗಿ ದುಡಿದಿದ್ದಾರೆ.. ಓದುತ್ತಾ ಓದುತ್ತಾ ಮಾತನಾಡಲೇ ಮುಜುಗರ ಪಟ್ಟಿಗೊಳ್ಳುವಂತಹ ವಿಷಯಗಳನ್ನು, ಅದೆಷ್ಟು ನಿಸೂರಾಗಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಅಲ್ಲವೇ? ಅನ್ನಿಸುತ್ತದೆ ‌. ಹಾಗಂತ ಎಲ್ಲೊ ಇವರೊಬ್ಬ ನಿರ್ಭಾವುಕ ಲೇಖಕ ಎಂದು ನಿಮಗೆ ಅನ್ನಿಸುವುದಿಲ್ಲ…‌‌ಏಕೆಂದರೆ ಅಲ್ಲಲ್ಲಿ ಅವರ ಭಾವುಕತೆ ಕಟ್ಟೆಯೊಡೆದು ತೃತೀಯ ಲಿಂಗಿಗಳನ್ನು ಅವಹೇಳನಕಾರಿಯಾಗಿ ನೆಡೆದುಕೊಳ್ಳುವವರ ಬಗ್ಗೆ ತಮ್ಮ ಬರಹದ ಉದ್ದಕ್ಕೂ ಸಿಡಿಮಿಡಿಗೊಳ್ಳುವುದು ನಿಮಗೆ ಕಾಣಿಸುತ್ತದೆ….

ಇವರುಗಳನ್ನು ಯಾವುದಾದರೂ ಕೆಲಸಕ್ಕೊ, ಇತ್ಯಾದಿಗಳಿಗೊ  ಪಕ್ಕಾಗಿಸಿ, ನಿಸೂರಾಗಿಸಬಹುದಾಗಿದ್ದ ಇವರ ಸಮುದಾಯದ ಬದುಕಿನ ಪಾಸಿಟಿವ್ ಸಾಧ್ಯತೆಯನ್ನು ನಾವಾಗಿ ಕೈಯಾರೆ ಹಾಳು ಮಾಡಿರುವ/ ಮಾಡುತ್ತಲೇ ಅವರನ್ನು ಮತ್ತೆ ಬೀದಿಗೆ ದೂಡಿದ್ದು ಮಾತ್ರ ಎಲ್ಲಾ ಬಲ್ಲ ನಮ್ಮ ಜನರೇ ಎನ್ನುವುದು ವಿಷಾದಕರ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ…‌‌

ಲೇಖಕರು ಲೇಖನದ ಉದ್ದಕ್ಕೂ ಮನೆಯವರ ಬೆಂಬಲವೇ ಸಿಗುವುದೇ ದುಸ್ತರವಾದ ಒಂದು ಸಮುದಾಯದ ಜನ,  ಸಂಪೂರ್ಣ ಬೆಂಬಲವನ್ನು ಸೊಸೈಟಿ ನೀಡುತ್ತದೆ ಎಂದು ಆಶಿಸೋದೊ ಎಷ್ಟು ಮೂರ್ಖತನ..‌‌

ಅವರುಗಳು ಬಿಕ್ಷೆ ಬೇಡುವುದು, ಸೆಕ್ಸ್ ವರ್ಕರ್ ಆಗುವುದು ತಪ್ಪು ಎಂದು ಪುಕ್ಸಟ್ಟೆ ಉಪದೇಶವನ್ನು ಮಾಡವವರಿಗೆನೂ ಇಲ್ಲಿ ಕಮ್ಮಿ ಇಲ್ಲ.. ಅವರನ್ನು  ಇದ್ದಂತೆ ಒಪ್ಪಿಕೊಳ್ಳದ ಕುಟುಂಬ, ಸಮಾಜ ಇರುವವರೆಗೂ ಇವನ್ನೂ ಬಿಟ್ಟು ಬೇರೆ ಏನು ತಾನೇ ಮಾಡಬೇಕು ಅವರು? ನಿಮ್ಮಂತೆ ಬದುಕುವ ಹಕ್ಕು ನಮಗೂ ಇದೆ ಎಂದು ಅವರು ಹೇಳಿದರೂ ಅರ್ಥಮಾಡಿಕೊಳ್ಳದೆ, ಅಥವಾ ಅರ್ಥ ಮಾಡಿಕೊಂಡರೂ, ಅದ್ಕೆ ಸ್ಪಂದಿಸಿದ ಜನರ ನಡುವೆ ಅವರು ಬೇರೆಯದೇ ರೀತಿಯ ನಡುವಳಿಕೆ ತೋರಿಸಬೇಕು ಎಂಬ ಆಶಯ ಇಟ್ಟುಕೊಳ್ಳುವುದು ಎಷ್ಟು ಸರಿ ಎಂಬ ಆತ್ಮವಿಮರ್ಶೆಗೆ ಒಡುತ್ತಾರೆ..

 ಇಂತಹವರೊಡನೆ ಸಹ್ಯವಾದ ಸಹಬಾಳ್ವೆ ನೆಡೆಸುವುದರ ಬಗ್ಗೆ ಯೋಚಿಸುವುದರ ಜೊತೆ ಜೊತೆಗೆ ಪುಕ್ಸಟ್ಟೆ ಸಲಹೆ ಮತ್ತು ಜಡ್ಜಮೆಂಟ್ ಕೊಡುವ ಮೊದಲು ಮನುಷ್ಯರಾಗೋಣ, ಇಲ್ಲದಿದ್ದರೆ ಎಲ್ಲೊ ಒಂದೆಡೆಯಲ್ಲಿ ಅವರಿಗಿಂತಲೂ ಮೊದಲು ನಾವು ಹಿಜಡಾಗಳು ಎನ್ನಿಸಿಕೊಂಡು ಬಿಡುತ್ತೇವೆ ಎಂದು ಮೊನಚಾಗೆ ಎಚ್ಚರಿಸುವ ಪರಿ ಅನನ್ಯವಾಗಿದೆ… (ಲೇಖನದ ಉದ್ದಕ್ಕೂ ನನಗೆ ಅರುಣ್ ಜೋಳದಕೂಡ್ಲಿಗಿ ಅವರು ನಿರೂಪಿಸಿರುವ ಮಂಜಮ್ಮ ಜೋಗತಿ ಅವರ # ಒಳಗೆ ಸುಳಿವಾತ್ಮ ಹೆಣ್ಣು ಅಲ್ಲ ಗಂಡು# ಪುಸ್ತಕದ ಸಾಲುಗಳು ಕಾಡುತ್ತದೆ.. ಓದುಗರು ದಯವಿಟ್ಟು ಮೆಹಂದಳೆ ಅವರ # ಮಂಗಳಮುಖಿಯರ ಸಂಗದಲ್ಲಿ ಓದಿದ ನಂತರ ಮುಂದಿನ ಪುಸ್ತಕವಾಗಿ ಅದನ್ನು ಓದಬೇಕಾಗಿ ವಿನಂತಿಸಿಕೊಳ್ಳುತ್ತೇನೆ..)

ಸಾಕಷ್ಟು ವಿಸ್ತೃತವಾಗಿ ಮತ್ತು ಅಷ್ಟೇ ನಿಖರವಾದ ಮಾಹಿತಿಯನ್ನು ( ಕೆಲವು ಕಡೆ ಹೆಚ್ಚಿನ ಮಾಹಿತಿಗಾಗಿ ಒಂದಿಷ್ಟು ವೆಬ್ ಸೈಟ್ ವಿಳಾಸ ಕೊಟ್ಟಿರುತ್ತಾರೆ . ಆಸಕ್ತರು ದಯವಿಟ್ಟು ಗಮನಿಸಿ) ಒಳಗೊಂಡಿರುವ ಈ ಕೃತಿ ನಿಜವಾಗಿಯೂ ಶ್ಲಾಘನೀಯವೆ ಆದರೂ ನನಗೆ ವೈಯಕ್ತಿಕವಾಗಿ ಅನ್ನಿಸಿದ್ದು, ಮನೆಯವರಿಂದ ಸಮಾಜದಿಂದ ಕೊನೆಗೆ ನಮ್ಮ ರಕ್ಷಣೆಗೆಂದೇ ಇರುವ ಪೋಲೀಸರಿಂದಲೂ ನಾನಾ ರೀತಿಯ ಅವಮಾನಕ್ಕೆ, ದೌರ್ಜನ್ಯಕ್ಕೆ ಒಳಗಾಗುವ ಇವರ ಬದುಕು ದುಸ್ತರವೇ, ಅದನ್ನು ಕಥನಗಳ ರೂಪದಲ್ಲಿ ಕಟ್ಟಿಕೊಟ್ಟಿರುವ ಲೇಖಕರು ಎಲ್ಲೊ, ಅಲ್ಲೊಂದು ಇಲ್ಲೊಂದು ಅನ್ನುವಂತೆಯೇ ಆಗಲಿ ಇದ್ದನ್ನೆಲ್ಲಾ ಮೀರಿ ಜೀವನದಲ್ಲಿ ಯಶಸ್ಸು ಕಂಡಿರುವುದು ಬಗ್ಗೆ ಬರೆಯಬಹುದಿತ್ತೇನೊ!!! ಮರುಮುದ್ರಣದಲ್ಲಿ ಇದನ್ನು ಸೇರಿಸಲಿ ಎಂಬ ಆಶಯ ನನ್ನದು.‌.‌

##ಇದಿಷ್ಟು ಓದಿದ ಮೇಲೆ ನಿಮಗೆ ಮೊದಲನೇ ಪ್ಯಾರಾ ಕ್ಕೂ ಈ ಪುಸ್ತಕ ವಿಮರ್ಶೆಗೂ ಏನು ಸಂಬಂಧ ಇದೆ ಅನ್ನಿಸಬಹುದು!!!!  ಇದಕ್ಕೊ ಮೊದಲು ನಿಮಗೆ ಮಂಗಳಮುಖಿಯರನ್ನು ಕಂಡಾಗ ನಿಮ್ಮ ಮನದಲ್ಲಿ ಮೂಡುತಿದ್ದ ಭಾವಕ್ಕೊ ಈ ಪುಸ್ತಕ ಓದಿ ಹಿಜಡಾ ಸಮುದಾಯದ ಒಳಹೊರಗಿನ ಸಮಗ್ರ ಪರಿಚಯದ ನಂತರ ಉಂಟಾಗುವ ಭಾವಕ್ಕೂ ಖಂಡಿತ ವ್ಯತ್ಯಾಸ ಇರುತ್ತದೆ.‌ ಯಾರನ್ನು ಕಂಡು ಅಸಹ್ಯಿಸಿಕೊಳ್ಳುತ್ತಿದ್ದೇವೂ ಅಂತವರು ಕೂಡ ನಮ್ಮಂತೆ ಬದುಕುವ ಹಕ್ಕು ಉಳ್ಳವರು ಅನ್ನಿಸಲು ಶುರುವಾಗುತ್ತದೆ… ಅದ್ಕೆ ನಾನು ಹೇಳಿದ್ದು ಸಹ್ಯ ಅಲ್ಲದನ್ನೂ ಸಹ್ಯ ಮಾಡುವುದೇ ಸಾಹಿತ್ಯ ಅಂತ.##

ಮುಗಿಸುವ ಮುನ್ನ # ಇಂದಿನ ಯುವ ಪೀಳಿಗೆಗೆ ಮುಕ್ತ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ ಎಂಬ ಕೂಗು ಕೇಳಿ ಬರಕತ್ತೀರುವ ಈ ದಿನಮಾನದಲ್ಲಿ ಹದಿ ಹರೆಯಕ್ಕೆ ಕಾಲಿಡುತ್ತಿರುವ ಪ್ರತಿಯೊಬ್ಬ ಹುಡುಗ/ ಹುಡುಗಿಯರಿಗೆ ಈ ಪುಸ್ತಕ ಓದಲು ಪ್ರೇರೇಪಿಸುವುದರ ಜೊತೆ ಜೊತೆಗೆ ಈ ತೃತೀಯ ಲಿಂಗಿಗಳು ಕೂಡ ನಮ್ಮಂತೆ ಬದುಕುವ ಹಕ್ಕವುಳ್ಳವರು ಎಂಬ ಭಾವನೆ ಬೇರೂರುವಂತೆ ಮಾಡಿದರೆ ಅಷ್ಟರ ಮಟ್ಟಿಗೆ ಈ ಕೃತಿಯ ರಚನೆಗೆ ಲೇಖಕರು ಪಟ್ಟ ಶ್ರಮ, ಪ್ರಕಟಿಸಿದ ಪ್ರಕಾಶಕರ ಶ್ರಮ ಸಾರ್ಥಕವಾದಂತೆ… ಅ ಬಗ್ಗೆ ಒಂದಿಷ್ಟು ಸಕಾರಾತ್ಮಕವಾಗಿ ಯೋಚಿಸುವುದು ಈಗ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ……


ಸಂಗೀತ ಶ್ರೀಕಾಂತ

Leave a Reply

Back To Top