ಅಂಕಣ ಸಂಗಾತಿ

ನೆನಪಿನದೋಣಿಯಲಿ

ಗೃಹಭಂಗ”ದ ಗುಂಗು

Reading. Reviewing. Sharing!: Book Review #51: Gruhabhanga By Dr. S.L.  Bhyrappa

ನಾನು ಪದೇಪದೆ ಓದಿರುವ ನನ್ನ ಮನಸ್ಸಿನಲ್ಲಿ ಮೇಲೆ ಅತ್ಯಂತ ಪ್ರಭಾವ ಬೀರಿರುವ ಕಾದಂಬರಿಯ ಬಗ್ಗೆ ಇಂದು ಹೇಳಲು ಬಯಸುವೆ.  ಅದೇ ಎಸ್ಎಲ್ ಬೈರಪ್ಪನವರ ಗೃಹಭಂಗ ಕಾದಂಬರಿ. ಇದನ್ನು ಅದೆಷ್ಟು ಬಾರಿ ಓದಿದ್ದೇನೋ ನನ್ನ ಹೇಳಿಕೆಗೆ ಸಿಕ್ಕಿಲ್ಲ ಒಂದೊಂದು ಬಾರಿ ಓದಿದಾಗ ಒಂದೊಂದು ವಿಷಯ ತಲೆಯೊಳಗೆ ಗುಂಗಿ ಹುಳುವಿನಂತೆ ಹರಿಯಲು ಆರಂಭಿಸುತ್ತದೆ ಎಲ್ಲಾ ಭೈರಪ್ಪನವರ ಕಾದಂಬರಿಗಳು ಓದಿದ ವಾರಾನುಗಟ್ಟಲೆ ತಮ್ಮ ಪ್ರಭಾವವನ್ನು ಮೂಡಿಸಿ ಚಿಂತನ ಮಂಥನ ನಡೆಸುವಂತೆ ಮಾಡಿದರೆ ಈ ಕಾದಂಬರಿಯ ಪ್ರತಿ ಓದು ಆ ಕೆಲಸ ಮಾಡುವುದು ಅದೇಕೋ ನನಗೂ ಗೃಹಭಂಗಕ್ಕೂ  ಏನೋ 1ಅವಿನಾಭಾವ ಸಂಬಂಧವಿದೆ ಎನಿಸುವಂತೆ ಮಾಡಿಬಿಟ್ಟಿದೆ.  

೧೯೨೦ ರಿಂದ ೧೯೪೫ರ ಕಾಲಘಟ್ಟದಲ್ಲಿ ನಡೆಯುವ ಕಥೆ . ಶಾನುಭೋಗಿಕೆ ಕಳೆದುಕೊಂಡಿದ್ದ ವಿಧವೆ ತಾಯಿ 2ಗಂಡು ಮಕ್ಕಳು.  ಈ ಮನೆಗೆ ಸೊಸೆಯಾಗಿ ಬರುವ ಸುಸಂಸ್ಕೃತ ಜೀವಿ ನಂಜಮ್ಮ. ಸ್ವಾಭಿಮಾನಿ : ಅಮ್ಮ ಮಕ್ಕಳ ಅವಿವೇಕದಲ್ಲಿ ಇರುವ ಆಸ್ತಿಯೆಲ್ಲ ಕಳೆದುಕೊಂಡರೂ ತನ್ನ 3ಮಕ್ಕಳ ಬದುಕಿಗಾಗಿ ಎಲೆ ಹಚ್ಚಿ  ಶಾನುಭೋಗಿಕೆ ನಡೆಸಿ ಕಷ್ಟಪಟ್ಟು ಊರಿನಲ್ಲಿ ಒಳ್ಳೆಯ ಹೆಸರು ತೆಗೆದುಕೊಂಡಿರುವ ಆಕೆಯ ಗಂಡ ನಿಷ್ಪ್ರಯೋಜಕ ಬೇಜವಾಬ್ದಾರಿ ಹಾಗೂ ಸ್ವಾರ್ಥವೇ ಮೂರ್ತಿವೆತ್ತಂತಹ ಮುಠ್ಠಾಳ . .ಅಂತಹ ವನ ಜತೆ ಏಗಿಕೊಂಡು ಮಗನನ್ನು ಮಾಧ್ಯಮಿಕ ಶಾಲೆ ಓದಿಸುತ್ತಾಳೆ ಮಗಳಿಗೆ ಮದುವೆ ಮಾಡುತ್ತಾಳೆ. ಮುಂದೆ ಪ್ಲೇಗು ಬಂದು ಮಗ ಹಾಗೂ ಮಗಳು ಸಾಯುತ್ತಾರೆ . ಕಡೆಯ ಮಗ ವಿಶ್ವ ಮಾತ್ರ ಉಳಿಯುತ್ತಾನೆ ಅವನು ತನ್ನ ಬಳಿ ಇದ್ದರೆ ವಿದ್ಯೆ ಕಲಿಯುವುದಿಲ್ಲವೆಂದು ತನ್ನ ತಂದೆಯ ಮನೆಗೆ ಕಳಿಸುತ್ತಾಳೆ . ನಂತರ ಇವಳೂ ಸಹ  ಪ್ಲೇಗ್ ಬಂದು ಸಾಯುತ್ತಾಳೆ. ಇಲ್ಲಿ ಇವಳ ಸಹಾಯಕರಾಗುವ ಬಂಧುಗಳಾಗುವ ಜನರೂ ಇದ್ದಾರೆ ಹಾಗೆಯೇ ತಮ್ಮ ಮಾತು ಕೇಳಲಿಲ್ಲವೆಂದು ಅಜ್ಜಿ ತಂದೆಯರೇ ಇವಳನ್ನು ತೊರೆಯುವ ಕಥೆ ನಿಜಕ್ಕೂ ಮನ ಕರಗುವಂತೆ ಮಾಡುತ್ತದೆ . ಅಂದಿನ ಕಾಲದ ಎಷ್ಟೋ ಹೆಣ್ಣುಗಳ ಕಥೆ ಇದು . ಆದರೆ ಇಲ್ಲಿ ವಿಶಿಷ್ಟವೆನಿಸುವುದು ನಂಜಮ್ಮನ ಸ್ವಾಭಿಮಾನ, ಕಷ್ಟಪಟ್ಟು ದುಡಿಯುವ ಬಗೆ ಹಾಗೂ ಅಲ್ಲಲ್ಲಿ ತೋರಿಸುವ ಬುದ್ಧಿವಂತಿಕೆ .ಆದರೆ ಏನಾದರೂ ನಂಟು ತೊರೆದು ಹಾಗೂ ಏನಾದರೂ ಗಂಡನ ನ್ನು ತೊರೆಯದ ಅವಳ ಸ್ವಭಾವ ಕಷ್ಟ ಸಹಿಷ್ಣುತೆ ಧರ್ಮಭೀರುತನ ಹಾಗೂ ಅಂದಿನ ಕಾಲದ ಹೆಚ್ಚಿನ ಮಟ್ಟಿಗೆ ಇಂದಿನ ಎಲ್ಲಾ ಭಾರತೀಯ ನಾರಿಯರ ಸ್ವಭಾವದ ಪ್ರತಿನಿಧಿಯಾಗುತ್ತದೆ. 

ಈ ಕಾದಂಬರಿಯ ಪ್ರಥಮ ಓದು ನಾನು  ಪುಸ್ತಕ ರೂಪದಲ್ಲಿ ಓದಲಿಲ್ಲ .ಈ ಹಿಂದೆ ಇದು  ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ಭಾಗಗಳನ್ನು ಕತ್ತರಿಸಿ 1 ಪುಸ್ತಕದ ಮೇಲೆ ಅಂಟಿಸಿ ಇಟ್ಟಿದ್ದರು ನೆರೆಯ ತಾತ ಒಬ್ಬರು . ಅದನ್ನು ನಾನು ಮೊದಲು ಓದಿದ್ದು ಮೊಟ್ಟಮೊದಲು ಅವರಲ್ಲಿನ ಕೆಟ್ಟ ಬೈಗುಳಗಳು ತುಂಬಾ ಹೊಸದು ಎನಿಸಿದ್ದವು.  ನಮ್ಮ ಮನೆಯಲ್ಲಿ ಎಂದೂ ಓದಲಿಕ್ಕೆ ಅಡ್ಡಿ ಆತಂಕ ಇಲ್ಲದ್ದರಿಂದ ನಾನು ಅದನ್ನು ಓದುತ್ತಿದ್ದನ್ನು ಮ ಗಮನಿಸಿದ ನಮ್ಮ ಅಣ್ಣ (ತಂದೆ) ಅವರಿಗೆ ಇದು ಕೆಟ್ಟದ್ದು ಅಲ್ಲವಾ ಓದಬಾರದು ಬರೀ ಕೆಟ್ಟ ಬೈಗುಳಗಳು ಇದೆ ಎಂದು ಕೇಳಿದ್ದೆ . ಆಗ ನಾನು ಮೂರನೆಯ ಕ್ಲಾಸಿನಲ್ಲಿ ಓದುತ್ತಿದ್ದೆ . ಆಗ ನಮ್ಮ ತಂದೆ ಹೇಳಿದ್ದು ಇನ್ನೂ ನನ್ನ ನೆನಪಿನಲ್ಲಿದೆ “ಕೆಟ್ಟದ್ದನ್ನು ತಿಳಿಯಬೇಕು ಏಕೆಂದರೆ ನಾವು ಆ ರೀತಿ ಮಾಡಬಾರದು ಎಂದು ಕಲಿಯಲಾದರೂ”. 

ಮೊದಲ ಬಾರಿ ಓದಿನಲ್ಲಿ ನನಗೆ ನಂಜಮ್ಮ  ಅಷ್ಟಾಗಿ ಪ್ರಭಾವಿಸಿರಲಿಲ್ಲ ಪಾರ್ವತಿಯ ಪಾತ್ರದ ಜೊತೆಗೆ ಸಮೀಕರಿಸಿಕೊಂಡಿತು ತಮ್ಮ ತಂಗಿ ಪ್ರೀತಿ ಹೀಗೆ ಇರುತ್ತಿತ್ತು ಅವರು ರಾಮು ಮತ್ತು ಪಾರ್ವತಿ ಸತ್ತ ಸಂದರ್ಭ ಓದುವಾಗಲಂತೂ ಬಿಕ್ಕಿಬಿಕ್ಕಿ ಅತ್ತಿದ್ದೆ . ಯಾಕೋ ನನ್ನ ತಂಗಿಯರು ಸತ್ತುಹೋಗಿಬಿಟ್ಟರೆ ಎಂಬ ಭಯ ಆವರಿಸಿ ರಾತ್ರಿಯೆಲ್ಲ ಬಿಕ್ಕುತ್ತಿದ್ದೆ . ಆಗ 1 ಕಥೆ ಅದು ಅಷ್ಟೇ . 

ನಂತರದ ಓದುಗಳಲ್ಲಿ ನಂಜಮ್ಮನ ಪಾತ್ರ ತುಂಬಾ ಪ್ರಭಾವಿಸಿತು ..ಅವಳದೇ ಓರಿಗೆಯ ಅತ್ತಿಗೆ ಕಮಲು ಸೇರಿದ ಮನೆಯಲ್ಲಿ ಎಷ್ಟೇ ಅನುಕೂಲಗಳಿದ್ದರೂ ಹಳ್ಳಿ ಎಂಬ ಒಂದೇ ಕಾರಣಕ್ಕೆ ಮನೆಯನ್ನು ನರಕ ಮಾಡುತ್ತಿರುತ್ತಾಳೆ ಹೊಂದಿಕೊಂಡಿರುವುದಿಲ್ಲ ..ಇವಳ ಓರಗಿತ್ತಿ ಸಾತು ಹೊಂದಲು ಮೊದಲಿಗೆ ಕಷ್ಟಪಟ್ಟರೂ ಕಡೆಗೆ ಸರಿಹೋಗದೆ ದೂರವಾಗಿ ತನ್ನದೇ ದಾರಿ ಹುಡುಕಿಕೊಳ್ಳುತ್ತಾಳೆ . ಬೇರೆಯವರು ಹೀಗೆ ಸುಲಭದ ದಾರಿಗಳನ್ನು ಕಣ್ಣೆದುರಿಗೆ ಹಿಡಿಯುವುದು ಕಾಣುತ್ತಿದ್ದರೂ ತಾನು ಮಾತ್ರ ಸತ್ಯದ ದಾರಿಯಲ್ಲಿ ನಡೆದು ಶ್ರಮಪಡುತ್ತಾ ಸಂಸಾರವನ್ನು 1 ಹಂತಕ್ಕೆ ತರಲು ಶ್ರಮಿಸುವ ನಂಜಮ್ಮನ  ಬಗ್ಗೆ 1ರೀತಿಯ ಕುತೂಹಲ ಆಸಕ್ತಿ ಬೆಳೆಯತೊಡಗಿತ್ತು. ಕಷ್ಟಗಳು ಕಳೆದು ಸ್ವಲ್ಪ ಸುಖ ಕಾಣುವ ವೇಳೆಗೆ ಮಕ್ಕಳನ್ನು ಕಳೆದುಕೊಂಡಾಗ ಅವಳು ಪಡುವ ದುಃಖ ;ಮಕ್ಕಳು ಸತ್ತ ದಿನ ಸತ್ತ ಮೇಲೆ ಸ್ಮಶಾನಕ್ಕೆ ಹೋಗಿ ಬೂದಿ ಆರಿಸಿಕೊಂಡು ತಾನೂ ಸಾಯುವೆನೆಂದು ಬಾವಿಯ ತನಕ ಹೋಗಿ ಕಡೆಯ ಮಗನನ್ನು ನೆನೆಸಿಕೊಂಡು ವಾಪಸ್ ಬರುವ ದೃಶ್ಯವಂತೂ ಮನ ಕಲಕಿಬಿಟ್ಟಿತ್ತು.ಹಾಗೆಯೇ ಪಾರ್ವತಿಯು ಬುದ್ಧಿವಂತೆ ಮನೆ ಕೆಲಸ ಬೊಗಸೆ ಹಾಡುಹಸೆ ಎಲ್ಲವನ್ನೂ ಕಲಿತು ಎರಡನೆಯ ಮದುವೆಯಾದರು ಮಲ ಮಗುವನ್ನು ಚೆನ್ನಾಗಿ ಹಚ್ಚಿಕೊಂಡಿದ್ದಳು. ಸಂಸಾರ ಆರಂಭಿಸುವ ಮೊದಲೇ ಪ್ಲೇಗ್ ಮಾರಿಗೆ ತುತ್ತಾಗುತ್ತಾಳೆ. ದೇವರು ಯಾಕಿಷ್ಟು ಕ್ರೂರಿ ಎಂದೆನಿಸಿತ್ತು.ತಂದೆಯ ಸ್ವಭಾವ ಹೊತ್ತುಕೊಳ್ಳದೆ ಮಗ ರಾಮು ಆ ವಯಸ್ಸಿಗೆ ಜವಾಬ್ದಾರಿಯ ಮಾತುಗಳನ್ನಾಡುವುದು ಹೆಂಗರುಳು ತೋರಿಸುವುದು ಅವನನ್ನು ದೂರ ಮಾಡಿದ ದೇವರ ಮೇಲೆ ಕೋಪ ಬರುವಂತೆ ಆಗುತ್ತಿತ್ತು .

ನಾವು ಹುಟ್ಟುವ ಅಷ್ಟು ಮೊದಲಿನ ಆ ಜಮಾನಾದ ಸಾಮಾಜಿಕ ಜೀವನದ ಬಗ್ಗೆ 1ಬೆಳಕು ಮೂಡುವಂತೆ ಮಾಡಿತ್ತು ಕಾದಂಬರಿಗಳು ಆಯಾ ಕಾಲಮಾನದ ದರ್ಪಣ ಎನ್ನುವುದು ಇದಕ್ಕೆ ತಾನೇ ……

ಇನ್ನೂ ಸ್ವಲ್ಪ ಕಾಲ ಕಳೆದ ನಂತರದ ಓದುಗಳಲ್ಲಿ ಬೇರೆ ಪಾತ್ರಗಳ ಬಗ್ಗೆ ಮನ ಚಿಂತಿಸಲು ಆರಂಭಿಸಿತ್ತು ಅಕ್ಕಮ್ಮ ತನ್ನ ಉಳಿದ 2ಮೊಮ್ಮಕ್ಕಳ ಯೋಗಕ್ಷೇಮವನ್ನು ಚೆನ್ನಾಗಿ ನೋಡುವ ಆಕೆ ತನ್ನ ಮೊಮ್ಮಗನಿಗೆ ಮರಿ ಮಗಳನ್ನು ಕೊಡಲಿಲ್ಲವೆಂದು ಸಿಟ್ಟು ಮಾಡಿಕೊಳ್ಳುವುದು ಆದರೂ  ನಂಜಮ್ಮನ ಮಕ್ಕಳು ಸತ್ತಾಗ ಮನಕರಗಿ ಓಡಿ ಬರುವುದು ಮೊಮ್ಮಗಳು ಸತ್ತನಂತರ ಜೀವಿಸಲು ಮನಸ್ಸಾಗದೆ ಔಷಧಿ ಕುಡಿಯದೆ ತಾನೂ ಸಾಯುವುದು; ಇದೆ ಅಲ್ಲದೆ ಕರುಳಿನ ಸಂಬಂಧ ಅಂತಃಕರಣ ಎಂದರೆ ? ಇನ್ನು ನಂಜಮ್ಮಳ ಸದಾಕಾಲದ ಆಪ್ತಸಖಿ ಸರ್ವಕ್ಕ ತನ್ನ ಕಷ್ಟ ಸುಖಗಳನ್ನೆಲ್ಲಾ ಹೇಳಿಕೊಳ್ಳುವುದು ಅವಳ ಮಗಳು ರುದ್ರಾಣಿ ಸತ್ತಾಗ ನಂಜಮ್ಮ ಮತ್ತು ಸರ್ಖ್ಕ  ಮಾತನಾಡುತ್ತಾರೆ ಏನಿದೆ ಎಂದು ಈ ಬದುಕು ಬದುಕಬೇಕು ? ಇಡಿ ಹೆಣ್ಣಿನ ಜೀವನದ ದುರಂತವನ್ನೆಲ್ಲ ಕಣ್ಮುಂದೆ ತಂದು ನಿಲ್ಲಿಸುವಂತಹ ಮಾತುಗಳು. ಕೆಟ್ಟ ಹೆಸರು ಹೊತ್ತುಕೊಂಡು ಬಾಳುವ ಸರಸಿಯ ಎದೆಯಲ್ಲೂ ಕರುಣೆದಯ ಸೆಲೆ, ನಂಜಮ್ಮಮತ್ತು ಅವಳ ಮಕ್ಕಳಿಗಾಗಿ ಅವಳ ಎದೆ ಮಿಡಿಯುವುದು. ನಿಜಕ್ಕೂ ಆ ಪಾತ್ರದ ಚಿತ್ರಣ ತುಂಬ ಪ್ರಭಾವಶಾಲಿಯಾಗಿ ಮೂಡಿಬಂದಿದೆ.ಸುಲಭ ಜೀವನದ ದಾರಿಯನ್ನು ಹುಡುಕಿಕೊಂಡು ಹೋಗುವ ಸಾತು ಸಹ 1ಪಾಠ ಹೇಳುತ್ತಾಳೆ.  ಇದ್ದುದರಲ್ಲಿ ಸುಖವಾಗಿರದೇ ಜೀವನವನ್ನೇ ನರಕ ಮಾಡಿಕೊಳ್ಳುವ ಕಮಲುವಿನಿಂದಲೂ ಕಲಿಯುವುದಿದೆ.

ಇಡೀ ಕಾದಂಬರಿಯ ಭಾವ ಸೇತುವಾಗಿ ಹೊಸೆದು ಕೊಳ್ಳುವವರು ಕಂತೆಭಿಕ್ಷೆ ಮಹದೇವಯ್ಯನವರು.  ಊರಿನಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದರೂ ಎಲ್ಲರ ಕಷ್ಟಸುಖಗಳಿಗೆ ನೋವು ನಲಿವುಗಳಿಗೆ ಸ್ಪಂದಿಸುವ ಧೈರ್ಯ ಸಾಂತ್ವನ ಹೇಳುವ ಹಿರಿಯ ಜೀವಿ.  ಕಡೆಯಲ್ಲಿ ನಂಜಮ್ಮನ ಮಗ ವಿಶ್ವ ಬೀಳುವುದೂ ಸಹ ಇವರ ಆಸರೆಗೇ. ನಂಜಮ್ಮನ ಮಕ್ಕಳು ಸತ್ತಾಗ ಇವರು ಹೇಳುವ 1ತತ್ವ ಪದ ಎಷ್ಟು ಅರ್ಥಪೂರ್ಣ ನೋಡಿ .

ಹಳ್ಳಕೊಳ್ಳದ ಬಳಿ ತನುವು ತಂಪಿದ ಬಳಿ

ಗುಳ್ಳದ ಹಣ್ಣು ಫಲಮಾದುದು 

ಗುಳ್ಳದ ಹಣ್ಣು ನೆಲಕುದುರಿ ಬೀಳುವಾಗ 

ಅದರ ಬಳ್ಳಿಗೆ ಹೇಳಿ ಹೋಯಿತೆ ಒಂದು ಮಾತ 

ಇನ್ನು ಗಂಗಮ್ಮನ ಪಾತ್ರದ ಬಗ್ಗೆ ಏಕೋ ಈಗ ಚಿಂತನೆ ಹೊರಳುತ್ತಿದೆ.  ವಯಸ್ಸಾದ ಶಾನುಭೋಗರಿಗೆ ಎರಡನೆಯ ಹೆಂಡತಿಯಾಗಿ ಬಂದು 2ಮಕ್ಕಳು ಹುಟ್ಟಿ ಶ್ಯಾನುಭೋಗರು ಗತಿಸಿದ ಮೇಲೆ ಅಂಕೆಶಂಕೆಯಿಲ್ಲದ ಕಡಿವಾಣವಿಲ್ಲದ ಕುದುರೆಯಂತೆ  ಮಕ್ಕಳನ್ನು ಸಹ ನೆಟ್ಟಗೆ ಬೆಳೆಸದೆ 1 ರೀತಿ ಎಲ್ಲಾ ಅನರ್ಥಗಳ ಮೂಲ ಕಾರಣವಾಗುವ ಈ ಪಾತ್ರ ಮೊದಲಿಗೆ ಕೋಪ ಹುಟ್ಟಿಸಿದರೂ ಈಗ ಏಕೋ ಅವಳ ಅಂತರಾಳವನ್ನು ಅರಿಯುವ ಬಯಕೆಯಾಗುತ್ತಿದೆ.  ಸೊಸೆ ಕಾಯಿಲೆ ಬಿದ್ದು ನರಳುವ ಸಮಯದಲ್ಲಿ ಅವಳ ಔಷಧೋಪಚಾರದ ಜವಾಬ್ದಾರಿಹತ್ತು ಕಡೆಗೆ ಸಾಯುವಾಗ ಗಂಗೋದಕವನು ಹಾಕುವಳೂ ಅವಳೇ. ಮುಂದೆ ಆ ಪಾತ್ರದ ವಿಶ್ಲೇಷಣೆ ಮಾಡುವಷ್ಟು ಪ್ರಬುದ್ಧತೆ ಬಂದಾಗ ಖಂಡಿತ ಅದರ ಬಗ್ಗೆ ಬರೆಯುತ್ತೇನೆ..

ಇನ್ನು ನಂಜಮ್ಮನ ಗಂಡ ಚೆನ್ನಿಗರಾಯ ಹಾಗೂ ಮೈದುನ ಅಪ್ಪಣ್ಣ ಇಂತಹ ಬೇಜವಾಬ್ದಾರಿ  ಮನುಷ್ಯರ ಪಾತ್ರ ಸೃಷ್ಟಿಸುವ ಮೂಲಕ ಭೈರಪ್ಪನವರು ಸಮಾಜದಲ್ಲಿನ ಅಂತಹ ಅದೆಷ್ಟೋ ಗಂಡಸರ ಸ್ವಭಾವದ ಮೇಲೆ ಕ್ಷಕಿರಣ ಬೀರಿದ್ದಾರೆ . ಹೇಗಿರಬಾರದು ಎಂದು ತಿಳಿಯುವುದಕ್ಕೆ ಇವರು ಸೊಗಸಾದ ಉದಾಹರಣೆಗಳು.  

ಕಡೆಯಲ್ಲಿ ಕಾಯಿಲೆ ಆಗಿದ್ದಾಗ  ನಂಜಮ್ಮ ಮಹದೇವಯ್ಯನವರ ಬಳಿ ಹೇಳುತ್ತಾಳೆ “ಚಿಕ್ಕಂದಿನಲ್ಲಿ ಒಮ್ಮೆ ತಂದೆ ಕೋಪಗೊಂಡು ತೊಟ್ಟಿಲನ್ನೇ ಮಳೆಯಲ್ಲಿ ಇಟ್ಟಿದ್ದರಂತೆ ಪುಣ್ಯವಶಾತ್ ಕಾಲು ಮಾತ್ರ ಮಳೆಗೆ ಸಿಕ್ಕು ಪ್ರಾಣ ಉಳಿಯಿತು. ಆದರೆ ಆಗಲೇ ಸತ್ತುಹೋಗಬೇಕಿತ್ತು. ಇಂತಹ ಗಂಡನನ್ನು ಕಟ್ಟಿಕೊಂಡು ಎಷ್ಟೆಲ್ಲಾ ಕಷ್ಟಪಟ್ಟು ಮುತ್ತಿನಂತಹ ಮಕ್ಕಳನ್ನು ನೋಡಿ ಸಂತೋಷಪಡುವ ಸಮಯದಲ್ಲಿ ಅವರನ್ನು ಕಳೆದುಕೊಂಡು ಕಡೆಯ ಮಗನಿಗಾಗಿ ಎಂದು ಬದುಕಿ ಈಗ ಅದನ್ನೂ ಪೂರೈಸಲಾಗದೆ ಹೋಗುತ್ತಿದ್ದೇನೆ ಈ ಬದುಕಿಗೇನು ಅರ್ಥ?” ಹೌದು ಎಷ್ಟೋ ಹೆಣ್ಣುಮಕ್ಕಳ ಹೃದಯದ ಕೂಗು ಅಂತರಂಗದ ಆಲಾಪ ಅದುವೇ ತಾನೆ?

ಆದರೆ ಬದುಕು ಎಲ್ಲರಿಗೂ ಹೂವಿನ ಹಾಸಿಗೆಯಾಗಿರುವುದಿಲ್ಲ ಮುಳ್ಳಿನ ನಡುವೆಯೂ ಅಲ್ಲಲ್ಲಿ ಸುಖ ಕಾಣುತ್ತಾ ಹೋಗುವುದೇ ಬದುಕು. ಚಿಕ್ಕಪುಟ್ಟ ಸಂತೋಷಗಳಲ್ಲಿ ನೆಮ್ಮದಿ ಅರಸುವುದೇ ಬದುಕು .ಜೀವನದಲ್ಲಿ ಯಾವುದೇ ಕಷ್ಟಬರಲಿ ಎದುರಿಸುತ್ತ ಹೋಗಬೇಕು ಅಂಜಿ ಹೇಡಿಗಳಾಗಬಾರದು ಎಂಬ ಪಾಠವನ್ನು ನಂಜಮ್ಮ ಕಲಿಸುತ್ತಾಳೆ ಗೃಹಭಂಗ ತಿಳಿಸುತ್ತದೆ .

 ಬೇಸರವಾದಾಗ ಒಮ್ಮೆ ಸುಮ್ಮನೆ ಕಣ್ಣಾಡಿಸಿದರೆ ಮತ್ತೆ ಹೊಳಹುಗಳು ಮತ್ತೆ ಏನೇನೋ ಚಿಂತನೆಗಳು ಸದ್ಯಕ್ಕೆ ಮನ ಕಾಡುವ ಚಿಂತೆಯನ್ನು ದೂರಮಾಡುತ್ತದೆ . ಮತ್ತೆ ಯಾವುದೋ ಪಾತ್ರದ ಬಗ್ಗೆ  ಆಳವಾಗಿ ಯೋಚಿಸುವ ಹಾಗಾಗುತ್ತದೆ. ಮತ್ತೆ ಮತ್ತೆ ನನ್ನ ಮನದಲ್ಲಿ ನಂಜಮ್ಮ ಪಾರ್ವತಿ ರಾಮು ಆವರಿಸುತ್ತಾರೆ . ನಮ್ಮ ಅಣ್ಣ ಹೇಳಿದ ಮಾತುಗಳೇ ನೆನಪಿಗೆ ಬರುತ್ತದೆ “ಎಂದೂ ಹಂಸಕ್ಷೀರ ನ್ಯಾಯದಂತೆ ಬದುಕು.  ನೋಡುತ್ತಾ ಹೋಗಬೇಕು. ಕೆಲವರನ್ನು ನೋಡಿ ಹೀಗಿರಬೇಕು

ಎಂದು ಅರಿಯಬೇಕು ; ಕೆಲವರನ್ನು ಕಂಡು ಹೀಗಿರಬಾರದು ಎಂಬ ಪಾಠ ಕಲಿಯಬೇಕು . 

ತುಂಬ ಚಿಕ್ಕ ವಯಸ್ಸಿನಲ್ಲೇ ಓದಿದ್ದರಿಂದಲೋ ಏನೋ ಇದರರ್ಥ ದಿನದಿಂದ ದಿನಕ್ಕೆ ಹೊಸ ಹೊಸ ಆಯಾಮ ಪಡೆಯುತ್ತದೆ. ಒಂದು ರೀತಿಯ ಗುಂಗಿನ ನಶೆ  ಬಿಡಿಸಲಾರದ ಗಂಟು ಅಳಿಸಲಾಗದ ನಂಟು ನನಗೂ ಈ ಪುಸ್ತಕಕ್ಕೂ ತನ್ಮೂಲಕ ನಂಜಮ್ಮನಿಗೂ……….


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top