“ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ”

ಪುಸ್ತಕ ಸಂಗಾತಿ

“ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ”

ಇತ್ತೀಚೆಗೆ, ಸುಜಾತ ಲಕ್ಷ್ಮೀಪುರ ಅವರು ತಮ್ಮ ಮೂರು ಕೃತಿಗಳ ಬಿಡುಗಡೆ ಮಾಡಿದರು:

(1) ಕವನಸಂಕಲನ: ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ.

(2) ಪಿಎಚ್ ಡಿ ಮಹಾಪ್ರಬಂಧ: ನವೋದಯ ವಿಮರ್ಶಾಸಾಹಿತ್ಯದ ಸ್ವರೂಪ

(3) ವಿಮರ್ಶಾ ಕೃತಿ: ವಿಚಾರವಾದಿ ಕುವೆಂಪು

••••••••••••••••••••••••••••••••••••••

ಈ “ಚೊಚ್ಚಲ ತ್ರಿವಳಿ” ಕೃತಿಗಳ ಮೂಲಕ ಸುಜಾತ ಅವರು ಕವಿ ಮತ್ತು ವಿಮರ್ಶಕರಾಗಿ ದ್ವಿಪಾತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಕ್ಕೆ ಹೃತ್ಪೂರ್ವಕ ಶುಭಾಶಯಗಳು. ಪ್ರಸ್ತುತ ಇಲ್ಲಿ ಕಾವ್ಯ ಕುರಿತು ನನ್ನ ಅಭಿಪ್ರಾಯವನ್ನು ಹಂಚಿ

ಕೊಳ್ಳಲಿಚ್ಛಿಸುತ್ತೇನೆ. ಕಾವ್ಯದ ಶೀರ್ಷಿಕೆಯು ಧ್ವನಿಪೂರ್ಣವಾಗಿದೆ. ಯಾಂತ್ರಿಕವಾದ ಮತ್ತು ತಾಂತ್ರಿಕವಾದ ಅಡಚಣೆಗಳಿಂದ ಅಗತ್ಯಕ್ಕೆ ಒದಗದ ಮತ್ತು ಜೀವಸಂವಾದಕ್ಕೆ ಸಿಗದ ಮಾನವಸಂಬಂಧಗಳನ್ನು ಸೂಚಿಸುತ್ತಲೇ ಬದುಕಿನಲ್ಲಿ ಹದಗೆಟ್ಟಿರುವ ವ್ಯಕ್ತಿ ಮತ್ತು ಸಮಾಜದ ರೂಪಕವಾಗಬಲ್ಲ ಬಹುಮುಖಿ ಸಾಧ್ಯತೆಯೊಂದು ಶೀರ್ಷಿಕೆಯಲ್ಲಿ ಅಡಗಿದೆ. ಜೈವಿಕವಾಗಿ ಬೇರಾದ ಹೆಣ್ಣು ಮತ್ತು ಗಂಡು ಕೂಡಿ ಬಾಳಬೇಕಾದ, ಭಿನ್ನತೆಯನ್ನೆಲ್ಲಾ ಕಳಚಿ ಹಾಕಿ ಒಂದಾಗಲೇ ಬೇಕಾದ ಅದ್ವೈತಭಾವವುಸುಜಾತ ಕವನಗಳಲ್ಲಿ ಎದ್ದು ಕಾಣುತ್ತದೆ:

ಎಣ್ಣೆ ಸೀಗೆಕಾಯಿ: ಹುಟ್ಟಬೇಕು ಎಂಬ ಕವನ, ಎಣ್ಣೆ ಸೀಗೆಕಾಯಿಯ ಅಂಟುನಂಟಿನ ಜಟಾಪಟಿಯು ಸದ್ದಿಲ್ಲದಂತೆ ಹರಿವ ನೀರಿನೊಡನೆ ಜಾರಿಹೋಗುವುದು ; ಹರಡಿದ ಕೇಶರಾಶಿಯಲ್ಲಿ ಬೆರಳಾಡಿಸುತ್ತ ಗಾಳಿಗುದ್ದಾಟ ಸಹಿತ ಮುದ್ದಾಟಕ್ಕೆ ಇಳಿವ ಗೆಳೆಯ ಬಿಸಿಲರಾಯನ ಚಿತ್ರಣದಲ್ಲಿ ಮತ್ತೆ ಮತ್ತೆ ಹುಟ್ಟಬೇಕೆನಿಸುವ ಜೀವೋತ್ಸಾಹದ ಉಮೇದಿದೆ. 

ಹದ್ದು ಮೊಲ: ಕುಕ್ಕುವ ಹದ್ದಿನ ಅನುಭವ ಮತ್ತು ಅಪ್ಪುವ ಮೊಲದ ಅನುಭವ ಬೇರೆ ಬೇರೆಯಾದರೂ ಪರಿಣಾಮ ಫಲದಲ್ಲಿ ಹದ್ದು ಮೊಲ ಒಂದರೊಳಗೊಂದು ಕರಗಿಹೋಗುವ ಬಗೆಯೇ ಬದುಕು. ಇದರೊಳಗೆ ನೈಜ ಯಾವುದೆಂಬ ಗೊಡವೆಗೆ ಹೋಗದೆ ಸುಮ್ಮನೆ ಅನುಭವಿಸುವ ಜಿದ್ದು ಬಾಳಗತಿಯಲ್ಲಿದೆ.

ಸೂರ್ಯ ನೀರು: ಗಗನವಿಹಾರಿ ಸೂರ್ಯ ಇಳಿಯಲಾರ. ನೆಲದಲ್ಲಿ ಹರಿವ ನೀರು ಏರುವುದಿಲ್ಲ. ಗಗನದಾಚೆಗಿನ ರಂಗುರಂಗಿನ ಮೋಹಕತೆಗೆ, ದೂರದ ಬೆಟ್ಟದ ನುಣುಪಿಗೆ, ಏರಲಾರದ ನೀರೇ ಅವಳು. ರಣರಣ ಉರಿವ ಸೂರ್ಯನನ್ನು ಗುರಿಯಾಗಿಸಿ, ಕುದುರೆಯೇರಿ ಹಾರುವ, ಗಳಿಸುವ ಹಂಬಲದ ಅವನು ಬೇರೆ ಬೇರೆಯಾದರೂ “ಏರದ ಇಳಿಯದ ನಡುವಿನಂತರದಲೆ” ಇಳೆಯಲ್ಲಿ ಮಳೆ ಬೆಳೆ ಆಗುವ ಸೃಷ್ಟಿಲೀಲೆಯಿದೆ.

ಕಡಲಜಲ ದಡದ ಬಂಡೆ: ಕಲ್ಲು ಸ್ಥಾವರ ನೀರು ಜಂಗಮ. ಕಡಲ ಅಲೆಗಳ ನಿತ್ಯ ಸಂಗದಿಂದ ಮಾತ್ರ ಬಂಡೆ ಒದ್ದೆಯಾಗುತ್ತದೆ. ಬಂಡೆಮೈಗೆ ಬೇಸಿಗೆಯ ಬೇಗೆಯಲ್ಲಾದ ಹುಣ್ಣುಗಳನ್ನು ತೊಳೆಯುವುದು ನೀರೇ! ಕಡಲಗರ್ಭದಲ್ಲಿ ಮುತ್ತುರತ್ನಗಳು ಸಹಜವಾಗಿವೆ. ಈ ಬಂಡೆ ನೀರಿನಾಟದಲ್ಲೇ ಬದುಕು ನವೆಯುತ್ತದೆ, ಮಾಗುತ್ತದೆ. ‘ಕಡಲ ಬದುಕು’ ಎಂಬ ಕವನವು ದಡದ ಸ್ಥಿರಭಾವ ಮತ್ತು ಕಡಲ ನಿರಂತರ ಜಂಗಮತೆಗಳ ಸಾಂಗತ್ಯದಲ್ಲಿ ಬದುಕಿನ ಸತ್ಯಾನ್ವೇಷಣೆಯನ್ನು ನಿರೂಪಿಸಿದೆ. ‘ಅವನು ಅವಳು’ ಎಂಬ ಕವನದಲ್ಲಿ ನದಿ ಮತ್ತು ದಡದ ರೂಪಕವಿದೆ. ಅವನಾಡುವ ನದಿ ದಡ ಆಟದಲ್ಲಿ ಸಮರಸವಿಲ್ಲದೆ, ಒಂದಾದರೂ ಪ್ರತ್ಯೇಕವಾಗುವ ಹೆಣ್ಣು ಗಂಡಿನ ಸತ್ಯವಿದೆ. ಆದರೂ,’ಬನ್ನಿ ದುಡಿಯುವ’ ಎಂಬ ಕವನವು ದುಡಿಮೆ ಯೋಗದಲ್ಲಿ ಸಾರ್ಥಕವಾಗುವ ದೇಹ ಮತ್ತು ಬದುಕಿನ ಕಡೆಗೆ ಮುಖಮಾಡಿಸಿದೆ.

ಲಿಂಗಭೇದವುಳ್ಳ ಸಮಾಜ: ಹೆಣ್ಣು ಗಂಡು ಎಂಬ ನಿಸರ್ಗಸಹಜ ಲಿಂಗವನ್ನು ಪುರುಷ ಪ್ರಧಾನ ಸಂಸ್ಕೃತಿಯು ತನ್ನ ಅಗತ್ಯಕ್ಕೆ ತಕ್ಕಂತೆ ರೂಪಿಸುವುದನ್ನು ಸುಜಾತ ಮತ್ತೆ ಮತ್ತೆ ಹಲವು ಬಗೆಗಳಲ್ಲಿ ನಿರೂಪಿಸಿದ್ದಾರೆ. ‘ಸುಮ್ಮನಿರಬೇಕಂತೆ’ ಎಂಬ ಕವನದಲ್ಲಿ ಮಕ್ಕಳ ಪಾಲನೆ ಪೋಷಣೆಯಲ್ಲೇ ಇರುವ ಲಿಂಗಭೇದ ಮತ್ತು ಅಸಮಾನತೆಯು ಹೆಣ್ಣು ಮಗುವನ್ನು ಸುಮ್ಮನಾಗಿಸುವ ಪ್ರಕ್ರಿಯೆ ಹೇಗೆ ಎಳವೆಯಿಂದಲೇ ಶುರುವಾಗುತ್ತದೆ ಎಂಬುದರ ಅಭಿವ್ಯಕ್ತಿಯಾಗಿದೆ. ‘ಅವಳು ತೊಡುವ ಬಟ್ಟೆ’ ಎಂಬ ಕವನವು ವಸ್ತ್ರ ಸಂಹಿತೆಯ ಹಿಂದೆ ಅಡಗಿರುವ ಪುರುಷಾಪೇಕ್ಷೆ ಹೇಳುತ್ತಲೇ ಈಗ ಬದಲಾಗುತ್ತಿರುವ ಪರಿಯನ್ನು ಚಿತ್ರಿಸಿದೆ. ‘ಜಾನಕಿಯರು’ ಎಂಬ ಕವನವು ಪುರುಷಪ್ರಧಾನ ಕುಲುಮೆಯಲ್ಲಿ ಕೆಂಪಗೆ ಕಾಯುವ ಕಬ್ಬಿಣವಾಗುವ ಹೆಣ್ಣು ಪುರುಷಾಪೇಕ್ಷೆಗೆ ಅನುಗುಣವಾಗಿ ಬದಲಾಗಿ ತನ್ನದೇ ಆಕಾರವಿಲ್ಲದೆ ತಿದ್ದಿ ತೀಡಿಸಿಕೊಂಡು ಬಡಿಸಿಕೊಂಡು ಕೆಂಪಾಗುತ್ತಲೇ ತಣ್ಣಗಾಗುವ

ಮಾರ್ಮಿಕಚಿತ್ರಣವನ್ನು ಕೊಡುತ್ತದೆ. ‘ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ’ ಎಂಬ ಕವನವು ದೂರವಿದ್ದೂ ಹತ್ತಿರವಾಗದವರು ಮತ್ತು ಹತ್ತಿರವಿದ್ದೂ ದೂರವಾದವರು ಎಂಬ ಅಸಂಗತ ಸತ್ಯವನ್ನು ಹೇಳುತ್ತಾ ಪುರುಷ ಪ್ರಧಾನ ಸಾಮಾಜಿಕ ರಚನೆಯೆಂಬ ವ್ಯಾಪ್ತಿಯಿಂದ ಹೆಣ್ಣನ್ನು ಹೊರಗಿಟ್ಟಿರುವ ಬಗೆಯನ್ನು ಬಿಂಬಿಸುತ್ತದೆ. ‘ದ್ರೌಪದಿಯ ಸ್ವಗತ’ ಎಂಬ ಕವನವು ಪಂಪನ ಸುಪ್ರಸಿದ್ಧ “ಸಾಮಾನ್ಯಮೇ ಬಗೆಯೆ ಭವತ್ ಕೇಶಪಾಶ ಪ್ರಪಂಚಂ”- ಎಂಬ ಆಪಾದನೆಗೆ ಕೊಟ್ಟ ಸ್ತ್ರೀವಾದಿ ಉತ್ತರವಾಗಿದೆ. ಬಳಸಿ ಬಿಸಾಡುವ ಗಂಡಿನ ಅಗತ್ಯಗಳಿಗೆಲ್ಲಾ ಒದಗುವ ಹೆಣ್ಣಿನ ಮೇಲೆ ಗೂಬೆ ಕೂರಿಸುವುದರ ಖಂಡನೆ ಇಲ್ಲಿದೆ. ಗಂಡು ಜೀವಶಕ್ತಿಯ ಗಾಳಿಯಾಗದೆ ಬಿರುಗಾಳಿಯಾಗಿ ಮತ್ತು ವಿಷಗಾಳಿಯಾಗಿ ಬಿರುಸಾಗಿ ಬೀಸುವಾಗ ಅದೇ ಪ್ರೀತಿ ಸತ್ತ ದಿನವಾಗುತ್ತದೆ. ಜಗವೆಲ್ಲಾ ‘ಸೂತಕ’ ವಾಗಿ ಪರಿಣಮಿಸುತ್ತದೆ. ‘ಬೇಕೆಂದೇ’ ಹಿಂಸಿಸುವ ಗಂಡಿನ ಮನೋಧರ್ಮದಲ್ಲಿ ಬದಲಾಗದ ಪುರುಷ ಅಹಂಕಾರದ ನಿರೂಪಣೆಯಿದೆ. ‘ಮತ್ತೆ ಹೇಳುವುದೇನಾದರೂ ಇದೆಯಾ’ ಎಂಬ ಕವನವು ಪುರುಷಯಜ್ಞದ ಬಲಿಪಶು ಆಗಲು ಹೊರಡುತ್ತಿರುವ ಹೆಣ್ಣಿನ ಪ್ರಶ್ನೆಯಾಗಿ ಕಾಡುತ್ತದೆ. ಪುರುಷಪ್ರಧಾನ ಸಂಸ್ಕೃತಿಯಲ್ಲಿ ಯಾರ ಮೇಲೂ ನೇರವಾಗಿ ತಪ್ಪು ಹೊರಿಸಲಾಗದು! ಇಂಥ ಸಮಾಜದಲ್ಲಿ ಭಾಷೆ ಕೂಡಾ ಪಂಜರವಾಗಿ, ಆಯುಧವಾಗಿ ಹೆಣ್ಣನ್ನು ಬಂಧಿಸುವ ಮತ್ತು ಇರಿಯುವ ಬಗೆಯನ್ನು ‘ಭಾಷೆ ಮತ್ತು ಅವರು’ ಹೇಳಿದೆ. ಇದರಿಂದಾಗಿ ಜೀವಚೈತನ್ಯವಾಗುವ ಪರಿವರ್ತನೆ ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಆಗಬೇಕು. ಇದಕ್ಕೆ ಹಲವು ದೃಷ್ಟಾಂತಗಳನ್ನು ಸುಜಾತ ‘ಆಕೃತಿ’ಯಲ್ಲಿ ಕೊಟ್ಟಿದ್ದಾರೆ: ಬೀದಿಯ ಕಲ್ಲು ಉಳಿಪೆಟ್ಟು ಸಹಿಸಿ ಶಿಲೆಯ ಕಲೆಯಾಗುವುದು ; ಬೀಜ ಮಣ್ಣಗರ್ಭದಲ್ಲಿ ಬಿರಿದು ಚಿಗುರಾಗಿ ಬೇರು ಇಳಿಸುತ್ತಾ ಹಸಿರಾಗುವುದು ; ಧಾನ್ಯ ಒಕ್ಕಣೆಯಾಗಿ ಬಡಿಸಿಕೊಂಡು ಒಡಲಹಸಿವು ನೀಗುತ್ತಾ ಅನ್ನಮಯ ಪ್ರಾಣಮಯವಾಗುವುದು ; ಹೊಸೆದ ಹತ್ತಿಯು ಬತ್ತಿಯಾಗಿ ಉರಿದು ತನ್ನನ್ನು ಸುಟ್ಟುಕೊಳ್ಳುತ್ತಲೇ ಬೆಳಕಾಗಿ ತಮದ

ನಾಶಮಾಡಿ ಬೆಡಗಾಗುವುದು ; ಮಣ್ಣು ಹದವಾಗಿ ತುಳಿಸಿಕೊಂಡು ತಿಗರಿಯಲ್ಲಿ ಆಕಾರ ಪಡೆದು ಮಡಕೆಯಾಗಿ ಪರಿಪಾಕ ಆಗುವುದು ; ಭೂಗರ್ಭದಿಂದ ಜಿಗಿದ ಅದಿರು ಸಂಸ್ಕರಣಗೊಂಡು ವಿವಿಧ ವಿನ್ಯಾಸದ ಚಿನ್ನದ ಆಭರಣಗಳಾಗುವುದು – ಇಂಥ ಬದಲಾವಣೆ ಇಲ್ಲದಿದ್ದರೆ ಮನಸ್ಸು ….. “ಕಹಿ ಕಸರೆ ಬರಿ ಹೋಳು” ಎಂಬುದನ್ನು ಸಾರಿ ಹೇಳಿದ್ದಾರೆ. 

“ಬದಲಾಗೆನೆನ್ನುವ ಸೊಲ್ಲು ಸುಡು

ಬದಲಾವಣೆ ಜಗದ ನಿಯಮ”…. ಎಂಬಬದುಕಿನ ನಿತ್ಯ ಪರಿವರ್ತನಶೀಲ ಸತ್ಯವನ್ನು ‘ಪರಿವರ್ತನೆ’ ಕವನವು ನಿರೂಪಿಸಿದೆ. ಇಂಥ ಪರಿವರ್ತನೆಗೂ ಅವಕಾಶವಿಲ್ಲದಿದ್ದರೆ, ಮನಸ್ಸು ಅಗ್ನಿಕುಂಡವಾಗಿ ದೇಹದ ಆಲಯ ಮೀರಿ, ಬಯಲಾಗುವ ಬಗೆಯನ್ನು ‘ಬಯಲು ಆಲಯ’ ಎಂಬ ಕವನವು ನಿರೂಪಿಸಿದೆ. ಇಂಥ ಭವ್ಯ ದಿವ್ಯ ಅನಿಕೇತನ ಚೇತನರಾಗಿ ಬಾಹುಬಲಿ, ಅಕ್ಕಮಹಾದೇವಿ, ಬುದ್ಧ , ಅಲ್ಲಮ, ಬಸವಣ್ಣ , ಮಹಾತ್ಮ ಗಾಂಧಿ ಮುಂತಾದ ವ್ಯಕ್ತಿಚಿತ್ರಗಳಿವೆ. ಈ ಸಾಲಿನಲ್ಲೇ ಅಮ್ಮ ಎಂಬ “ಸಾಮಾನ್ಯತಾ ಶ್ರೀ”ಯು ಕಂಡುಬಂದು ಸುಜಾತ ಅವರನ್ನು ಗಾಢವಾಗಿ ಕಲಕಿದೆ. ಅಮ್ಮಾ , ಸೋಜುಗ, ಅವ್ವ , ಕಾಣುವ ದೈವ ಎಂಬ ಕವನಗಳಲ್ಲಿ ಸ್ವೀಯ + ಪರಕೀಯ ಎಂಬ ಭೇದವಿಲ್ಲದೆ, ಇಡೀ ಜಗದ ಬವಣೆಗೆ ಸ್ಪಂದಿಸುವ ಕರುಣಾಮೈತ್ರಿಯ ಕರುಳಿನ ಅರಿವು ಮೂಡಿಬಂದಿದೆ. 

‘ಕರೋನಾ ಬಿಡಿ ಬಿಡಿ ಚಿತ್ರಗಳು’ ಕೂಡಾ ಇಲ್ಲಿವೆ. ಪರಸ್ಪರ ಜೀವಸಂವಾದ ಮತ್ತು ಜೀವಸಂಪರ್ಕವನ್ನೇ ಕಡಿದುಹಾಕಿದ ಸೂಕ್ಷ್ಮ ವೈರಾಣುವಿನ ವಿರಾಟ್ ಸ್ವರೂಪದ ಹಿನ್ನೆಲೆಯಲ್ಲಿ ನೋಡಿದರೆ ‘ಮುಟ್ಟು’ ಎಂಬ ಕವನದ ವಿಶಿಷ್ಟತೆ ಅರಿವಾಗುತ್ತದೆ. ನಾಮಪದ ಮತ್ತು ಕ್ರಿಯಾಪದ ಎರಡೂ ಅರ್ಥಗಳನ್ನು ಒಳಗೊಂಡಿರುವ ‘ಮುಟ್ಟು’ ಅರ್ಥಗರ್ಭಿತ ಕವನವಾಗಿದೆ. “ರವಿಕಿರಣವದು ಧರೆಯ ಮುಟ್ಟಿದರೇನೇ ಜೀವ ಚಟುವಟಿಕೆ” ಎಂದು ಆರಂಭವಾಗುವ ಈ ಕವನ ಎಲ್ಲಾ ಬಗೆಯ ಅಸ್ಪೃಶ್ಯತೆಗಳನ್ನು ಖಂಡಿಸುತ್ತಾ …….

” ವಿಷ ಕಕ್ಕುವ ಮಂದಿಗೇನು ಗೊತ್ತು ? ಮುಟ್ಟಿನಿಂದಲೇ ಎಲ್ಲಾ ಹುಟ್ಟು ” ಎನ್ನುತ್ತಾ ಆಷಾಡಭೂತಿ ಮನಸ್ಸುಗಳನ್ನು ಪ್ರಶ್ನಿಸುತ್ತದೆ. ಹೀಗೆ ಪ್ರಶ್ನಿಸಬಲ್ಲ ಮನಸ್ಸಿಗೆ ಮಾತ್ರ ಇಡೀ ವಿಶ್ವವ್ಯಾಪಿಯಾದ ಅದ್ವೈತ ಭಾವದ ದರ್ಶನ ಸಾಧ್ಯ. ಇದು ‘ಅದ್ವೈತ’ ಎಂಬ ಕವನದಲ್ಲಿದೆ.

ಆಧುನಿಕ ಮನುಷ್ಯನ ತೀರದದಾಹವನ್ನು ಹೇಳುವ ‘ಒಲೆ ಹತ್ತಿ ಉರಿಯುತ್ತಿದೆ’ ಎಂಬ ಕವನದ ಕೊನೆಯ ಸಾಲುಗಳಿವು:

ಒಲೆ ಆರುವುದು ಎಂದಿಗೆ ?

ಕೊನೆಯಿರದ ನಾಲಿಗೆ ಚಪಲಕೆ

ಮಿತಿಯಿರದ ಬೇಕುಬೇಕೆಂಬ

ಬಡಿವಾಣಕೆ

ಸುಡುವ ಒಡಲ ತಾಪಕೆ

ಒಲೆ ಆರುವುದೇ ಇಲ್ಲಾ!” …… ಭೂಮಿಯ ತಾಪಮಾನ (=ಗ್ಲೋಬಲ್ ಥರ್ಮಲೈಸೇಷನ್) ಇತ್ಯಾದಿ ವೈಜ್ಞಾನಿಕ ನಿರೂಪಣೆಯಿಲ್ಲದೆ, ಕಾವ್ಯಭಾಷೆಯ ಮೂಲಕವೇ ಸಾಧಿಸಿರುವ ಧ್ವನಿರಮ್ಯತೆಗೆ ಈ ಕವನ ನಿದರ್ಶನವಾಗಿದೆ. ಇಲ್ಲಿ ಭೂಮಿ ಮತ್ತು ಹೆಣ್ಣು ಒಂದಾಗಿಬಿಡುವ Geo-Feminism ಆಶಯ ಸುಜಾತ ಕಾವ್ಯದಲ್ಲಿ ಎದ್ದು ಕಾಣುತ್ತದೆ. ಕ್ಷಮಯಾ ಧರಿತ್ರಿಯ ಪ್ರತೀಕವಾದ ‘ಕಮಲದ ಹೂ ಅರಳಿದೆ’ ಎಂಬ ಕವನವು ಕ್ಷಮಾಶೀಲ ಮನಸ್ಸಿನ ಹಾರೈಕೆಯನ್ನು ಒಳಗೊಂಡಿದೆ.

ಕೆಡಹುವ ಜನರು: ಕೆಡವದೆ ಕಟ್ಟುವ ಜೀವನ ಮಾರ್ಗ ಸುಜಾತ ಕಾವ್ಯದ ಮುಖ್ಯ ಆಶಯ. ‘ಕಟ್ಟುವುದು’ ಎಂಬ ಕವನವು ಇದನ್ನೇ ಎತ್ತಿ ಹಿಡಿದಿದೆ. ನಡೆ – ನುಡಿಯಿಲ್ಲದ ಬರಿಯ ಬೂಟಾಟಿಕೆಯ ಜನರೇ ‘ಧರೆಗೆ ದೊಡ್ಡವರು’ ಎಂಬ ನಿರೂಪಣೆಯಿದೆ. ‘ಕಣ್ಣುಗಳು’ ಎಂಬ ಕವನವು ಕಾಣಲೆಂದೇ ಇರುವ ಕಣ್ಣುಗಳನ್ನು ಹಿಂಸೆ ಮತ್ತು ಕ್ರೌರ್ಯದ ಅನಾವರಣಕ್ಕಾಗಿ ಬಳಸುತ್ತಿರುವ ಕೆಡುಕರನ್ನು ಕುರಿತದ್ದಾಗಿದೆ. ‘ಮಾತು ಮಾತಿಗೆ’ ಎಂಬ ಕವನದಲ್ಲಿ ಮಾತು

ಕಾಳ್ಗಿಚ್ಚಾಗಿ ಹಬ್ಬುತ್ತಾ ಸಂಬಂಧಗಳೆಲ್ಲಾ ಸುಟ್ಟು ಅರಣ್ಯನಾಶವಾಗುವ ಪರಿಯನ್ನು ನಿರೂಪಿಸಲಾಗಿದೆ. ಪ್ರಾರ್ಥನೆಯ ನಿರರ್ಥಕತೆ ಮತ್ತು ಕ್ರಿಯಾತ್ಮಕ ಕಾರ್ಯಾಚರಣೆಯ ವ್ಯತ್ಯಾಸವನ್ನು ಹೇಳುವ ‘ಅನಾಥ ಹೆಣ’ ಎಂಬ ಕವನವು ಮತಧರ್ಮದ ನೆಲೆಗಿಂತಲೂ ಬೇರೆಯಾದ ಮಾನವೀಯತೆಯನ್ನು ಹೇಳಿದೆ. ‘ರಾಮನಿದ್ದಾನೆ’ ಎಂಬ ಕವನ ಕೂಡಾ ಮಾನವ ದಯಾಮೃತ ಧಾರೆಯಲ್ಲಿರುವ, ಶ್ರಮಜೀವಿಗಳ ಬೆವರಿನಲ್ಲಿರುವ ರಾಮಾವತಾರದ ನಿರೂಪಣೆಯಾಗಿದೆ.

ಜೀವದಯೆ ಮತ್ತು ವಿಶ್ವಕುಟುಂಬ:

ಸೃಷ್ಟಿಯ ಅನರ್ಘ್ಯ ರತ್ನವೆಂದು  ಹೇಳಿಕೊಳ್ಳುವ ಮನುಷ್ಯರಲ್ಲಿ ಜೀವದಯೆ ಮತ್ತು ವಿಶ್ವಕುಟುಂಬದ ಭಾವೋದಯವಾಗಬೇಕು. ಈ ದಿಸೆಯಲ್ಲಿ ‘ಹಕ್ಕಿಯ ಗೂಡು’ ಎಂಬ ಕವನವನ್ನು ಗಮನಿಸಬೇಕು. ಅನುವರ್ತನೆ (Adaptation) ಚಿತ್ರಣವಿರುವ ಈ ಕವನವು ಜೀವದಯಾಭಿವ್ಯಕ್ತಿಯಾಗಿದೆ. ಇದು ಎಳವೆಯಿಂದ ಬರಬೇಕಾದ ಜೀವಭಾವ.

ಲೋಹಿಯಾ ಹೇಳಿದಂತೆ ನಾವೀಗ ಆಯ್ಕೆ ಮಾಡಿಕೊಳ್ಳಬೇಕಾದ್ದು ಎರಡರಲ್ಲೊಂದು: ಬಾಂಬು ಅಥವಾ ಗಾಂಧಿ! ಯುದ್ಧ ಅಥವಾ ಶಾಂತಿ! ‘ಶಾಂತಿಗಾಗಿ’ ಎಂಬ ಕವನದಲ್ಲಿ ಇದೇ ಪ್ರಶ್ನೆಯನ್ನು ಮುಂದಿಟ್ಟು ತನ್ಮೂಲಕ ವಿಶ್ವಕುಟುಂಬ ತತ್ವವನ್ನು ಪ್ರತಿಪಾದಿಸಲಾಗಿದೆ. ‘ಸಮಾನ ಮನಸ್ಕ’ ಎಂಬ ಕವನದಲ್ಲಿ ಮಕ್ಕಳು ಚಿಗುರುಗಳಾಗಿ, ತಂದೆಯರು ಬೇರುಗಳಾಗಿ, ತಾಯಂದಿರು ಎಲೆಗಳಾಗಿ ವಿಶ್ವಕುಟುಂಬವನ್ನು ನಿರ್ವಹಣೆ ಮಾಡಬೇಕಾದ ಬಗೆಯನ್ನು ನಿರೂಪಣೆ ಮಾಡಲಾಗಿದೆ.  ಇಂಥ ವಿಶ್ವಕುಟುಂಬ ತತ್ವದಿಂದ ಬದುಕು ಧನ್ಯವಾಗುತ್ತದೆ.

ಇದಿಷ್ಟು ಸುಜಾತಕಾವ್ಯ ಕುರಿತು ನನ್ನ ಮೊದಲ ಓದು. ನನ್ನ ಮೇಲಿನ ಪ್ರೀತಿ ಸ್ನೇಹಗಳಿಂದ ಸುಜಾತ ಲಕ್ಷ್ಮೀಪುರ ಅವರು ತಮ್ಮ ಚೊಚ್ಚಲ ತ್ರಿವಳಿ ಕೃತಿಗಳನ್ನು ನನಗೆ ತಲುಪಿಸಿದ್ದಾರೆ. ಈ ಟಿಪ್ಪಣಿ ಮೂಲಕ ಸುಜಾತ ಅವರಿಗೆ ಮುಂಬರುವ ದಿನಗಳಲ್ಲಿ ಯಶಸ್ಸು ಮತ್ತು ಕುಟುಂಬ ವರ್ಗಕ್ಕೆ ಶುಭವನ್ನು ಹೃತ್ಪೂರ್ವಕವಾಗಿ ಹಾರೈಸಿ ವಿರಮಿಸುತ್ತೇನೆ.

————————————–

 ವಿ.ಚಂದ್ರಶೇಖರ ನಂಗಲಿ

One thought on ““ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ”

Leave a Reply

Back To Top