ಶಮಾ ಗಜಲ್

ಪುಸ್ತಕ ಸಂಗಾತಿ

ಶಮಾಜೀ ಎಂಬ ಭಾವುಕ ಜೀವಿಯ

ಗಜಲ್ ಸುತ್ತ ಸುಳಿದು….

ನಾವು ಈಗೀಗ ಎಂತ ಕಾಲಗಟ್ಟದಲ್ಲಿ ಇದ್ದೀವಿ ಅಂದ್ರ್ ನಮ್ಮನ್ನ ನಾವು ಅತ್ಯಂತ ಶುಷ್ಕ ಮಾತುಗಳಲ್ಲಿ ಕಳೆದು ಕೊಳ್ಳುವ,ತೀರಾ ಸಂವೇದನ ರಹಿತ, ಭಾವದೊಸುಗೆ ಬತ್ತಿರುವ,ಜಿಡ್ಡು ಗಟ್ಟಿದ ಚರ್ಮ ಸುತ್ತಿಕೊಂಡಿರುವ,ಅಪಾಯದಲ್ಲಿ ಇದ್ದೀವಿ.ಇಂತಹ ಸುಕ್ಕಿಗೆ,ಒಣಗಿರುವ ಎದೆಗಳಿಗೆ ಸೂಜಿ ಚುಚ್ಚುವುದು ಕಾಲದ ಅಗತ್ಯ.ಅಂತಹ ಅಗತ್ಯವನ್ನು ತುಸು ಮಟ್ಟಿಗೆ ಮಾಡುವ ಸಂಕಲನ ಶಮಾ ಗಜಲ್.

ಇಂದು ನಾನು ಮಾತನಾಡಲು ಹೊರಟಿರುವುದು ಶಮಾ ಜಮಾದಾರ ಎಂಬ ಸೂಕ್ಷ್ಮ ಬರಹಗಾರ್ಥಿಯ ಕುರಿತು. ಅವರು ಮೊನ್ನೆ ತಾನೇ ಪ್ರಕಟಿಸಿರುವ ಗಜಲ್ ಪುಸ್ತಕ “ಶಮಾ ಗಜಲ್ ” ಕುರಿತು.ಅವರು

ಹೃದಯದಲಿ  ಬಿಕ್ಕಿದ್ದನ್ನು, ಉಕ್ಕಿದ್ದನ್ನು, ಸಿಕ್ಕಾಗಿ ಉಳಿದಿದ್ದನ್ನು, ಅಳಿದಿದ್ದನ್ನು,ಮೆದ್ದಿದ್ದನ್ನು ಅತ್ಯಂತ ಆಪ್ತ ಭಾಷೆಯ ಸೊಗಡಿನಲ್ಲಿ ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ ಈ ಗಜಲ್ ಸಂಕಲನದಲ್ಲಿ. ಅವರ ಅವ್ವನ ಕುರಿತು ಗಜಲ್ ಉದಾಹರಣೆಗೆ

ಪ್ರತಿ ಸೂರ್ಯೋದಯವೂ  ಸೂತಕ ಹೊತ್ತು ಬರುವುದು ನಿನ್ನ ಹೊರತು

ಬೆಂಗಾವಲುಗಿದ್ದ ದುವಾಗಳು ನಿನ್ನೊಂದಿಗೆ ಮೌನವಾದವು ಅವ್ವಾ

ಅವರು ಈ ಸಮಾಜದ ಆಗು ಹೋಗುಗಳಿಗೂ ಸ್ಪಂದಿಸಿ ಅನೇಕ ಗಜಲ್ ಗಳ ಬರೆದಿದ್ದಾರೆ ಆ ಮೂಲಕ ಲೇಖಕಿ ತನ್ನ ಜವಾಬ್ದಾರಿಯ ಅತ್ಯಂತ ಕಾಳಜಿಯಿಂದ ನಿರ್ವಹಿಸಿದ್ದಾರೆ. ಉದಾಹರಣೆಗೆ ನಿರ್ಭಯ ಪ್ರಕರಣದ ಕುರಿತ ಅವರ ಗಜಲ್ ಓದಿ.

ನೋವಿನ ಕಡತವನ್ನು ಶಾಶ್ವತ ಮುಚ್ಚಲಾಯಿತು ಹೋಗಿ ಬಾ

ಹೂವಿನ ಹಾರವನ್ನು ಎದೆಗೆ ಹೊಚ್ಚಲಾಯಿತು ಹೋಗಿ ಬಾ

ತೀಟೆಗೆ ಮೀಸೆ ತಿರುವಿದರೆ ಪುರುಷಾರ್ಥವಲ್ಲ ಶಂಡರೇ

ಮನೆಯ ಮಗಳ ಮಾನಹರಣವಾದರೆ ನ್ಯಾಯ ಎಲ್ಲಿದೆ

ನಿನ್ನವರನ್ನು ಕೂಗಿದರು ಮಾರ್ನುಡಿ ಕಿವಿಗೆ ಕೇಳಲಿಲ್ಲವೇ

ಕೊನೆಯ ಸ್ನಾನ ಅಶ್ರುಗಳಲಿ ಮಾಡಿಸಲಾಯಿತು ಹೋಗಿ ಬಾ

ಹೀಗೆ ಅವರ ಗಜಲ್ ನ ಕೆಲವು ಶೇರ್       ಗಳು ಮತ್ತೆ ಮತ್ತೆ ಕಾಡುತ್ತವೆ. ಕಣ್ಣಾಲಿ ತುಂಬುವಷ್ಟು. ವೈಯಕ್ತಿಕ ಹಿನ್ನೆಲೆಯ ನೋವನ್ನು ಸಾರ್ವತ್ರಿಕ ಗೊಳಿಸುವ ಮತ್ತು ಸಾರ್ವತ್ರಿಕ ನೋವನ್ನು ವೈಯಕ್ತಿಕ ನೆಲೆಯಲ್ಲಿ ಕಟ್ಟಿಕೊಡುವಲ್ಲಿ ಶಮಾಜಿ ಯಶಸ್ವಿಯಾಗಿದ್ದಾರೆ ಅಂತಾ ಖಂಡಿತ ಹೇಳಬಲ್ಲೆ. ಅವರು ಈ ಜಿಹಾದ್, ಭಯೋತ್ಪಾದಕತೆ, ಪತ್ವಾ ಹಿನ್ನೆಲೆಯ ಈ ಗಜಲ್ ಒಮ್ಮೆ ಓದಿ ಅವರ ದಿಟ್ಟ ತನಕ್ಕೆ ಇದು ಸಾಕ್ಷಿ…..

ಬೀಸುವ ಗಾಳಿಯಲ್ಲಿ ಚೂರಿಗಳು ಅಡಗಿವೆ ಕೊರಳು ಕೊಯ್ಯಲು

ನಮ್ಮವರಿಂದಲೇ ಜೀವಂತ ದಫನ್ ಆಗುವ ನಸೀಬಿದು ಸಾಕಿ

ತಾಯುಣಿಸಿದ ಅಮೃತ ವಿಷವಾಯಿತು

ಒಡಲು ಬಂಜೆಯಾಗುವುದಕೆ ಬಯಸುವ ಯುಗವಿದು ಸಾಕಿ

ಈ ರೀತಿಯ ಗಜಲ್ ಗಳಿಗೆ ಶಭಾಷ್ ಎನ್ನದೆ ಆಯ್ಕೆ ಇರುವುದಿಲ್ಲ. ಒಂದು  ದೀರ್ಘ ನಿಟ್ಟುಸಿರಿನೊಂದಿಗೆ ಅಷ್ಟೇ..

ಹೀಗೆ ಸಶಕ್ತ ಶೇರಗಳಲಿ ತಲ್ಲಣಗಳಿಗೆ ಮಿಡಿದು ಬರೆಯಬಲ್ಲ ಶಕ್ತ ಬರಹಗಾರ್ಥಿ ಶಮಾಜಿ. ಪ್ರತಿ ಹೆಣ್ಣಿಗೂ ಕಾಡುವ ವಿರಹ, ನೋವು, ಪ್ರೇಮ,ಒಂಟಿತನ ಎಲ್ಲವೂ ಅವರಿಗೂ ಕಾಡಿದ್ದು ಅವುಗಳನ್ನು ಅವರು ಹೊರ ಹಾಕಿದ ಗಜಲ್ ಗಳೂ ಕಣ್ಣ ಕುಕ್ಕದೆ ಇರಲಾರವು, ಅಲ್ಲದೇ ಮತ್ತೆ ಮತ್ತೆ ಓದಿಸಿಕೊಳ್ಳುವವು. ಉದಾಹರಣೆಗೆ..

 ” ಹರವಿ ತಿರುಗದಿರು ಕೇಶ ಹಗಲಲ್ಲಿ ಕತ್ತಲಾಗುವುದು

ತಿರುಗಿ ನೋಡದಿರು ಹೋಷ್ ಸಂತೆಯಲ್ಲಿ ಹಾರುವುದು

ಕಣ್ಣ ಕೊಳದ ತುಂಬ ಮೋಹದ ಮದಿರೆ ತುಳುಕಿದೆಯಲ್ಲಾ

ನಿನ್ನ ಕಾಯದ ತುಂಬಾ ಮಾಯದ ಗೀರೇ ತುಂಬಿದೆಯಲ್ಲಾ

ನಿನ್ನ ನೆನಪಿನ ಮದಿರೆಯ ಹೂಜಿ ಬರಿದಾಗುವುದೇ ಇಲ್ಲ ಗೆಳೆಯ

ನನ್ನ ಮನಸಿನ ಮನೆಯ ಪೂಜೆ ನೆರವೇರುವುದೇ ಇಲ್ಲ ಗೆಳೆಯ

ನಿನ್ನೊಲವಿನಲಿ ತೇಲದಿದ್ದರೆನಂತೆ ಮಸ್ತಾನಿಯಾಗಿರುವೆ ಪ್ರೀತಿಯಲ್ಲಿ

ನಿನ್ನನೆನಪಲಿ ಮುಳುಗದಿದ್ದರೇನಂತೆ

ದಿವಾನಿಯಾಗಿರುವೆ ಪ್ರೀತಿಯಲ್ಲಿ

ಈ ಎಲ್ಲ ಶೇರ್ ಗಳು ಅವರು ಅತ್ಯಂತ ಭಾವುಕರು, ಅಷ್ಟೇ ದಿಟ್ಟರೂ, ನಿರ್ಭಿಡರು ಎಂದು ಹೇಳುತ್ತವೆ.ಹೆಣ್ಣು ಭೋಗದ ವಸ್ತುವಾಗಿರುವ ಬಗ್ಗೆ ಕೂಡ ಅತ್ಯಂತ ಸೂಕ್ಷ್ಮ ರೀತಿಯಲ್ಲಿ ತಮ್ಮ ಗಜಲ್ ಗಳಲ್ಲಿ ಹೇಳಿದ್ದಾರೆ.ಉದಾಹರಣೆಗೆ

ಜೊಲ್ಲು ಸುರಿವ ನೆದರುಗಳ ಬಾಣಿನೇಟು ರೂಢಿಯಾಗಿದೆ

ನೋಟದಲ್ಲಿ ಸಾವು ಅನುಭವಿಸುವುದು ಹೊಸದಲ್ಲ ಸಖಿ

 ” ಒಲಿದ ಮೇಲೆ ತಲೆಯ ಮೇಲೆ ಸವಾರಿ ಇಂದಿನ ಮಜನೂಗಳದ್ದು

ಪ್ರೀತಿಯೆಂದರೆ ಉಬ್ಬು ತಗ್ಗುಗಳಲಿ ಪಯಣ ಎಂದು ತಿಳಿದೆಯಾ

ಪ್ರಸಕ್ತ ರಾಜಕೀಯ ಸನ್ನಿವೇಶ, ಹಗರಣ, ಲಂಚ, ವಂಚನೆ, ದುರಾಸೆ ಇವುಗಳಿಗೂ ಗಜಲ್ ಗಳ ಬರೆದು ತಣಿಸಿದ್ದಾರೆ ಶಮಾಜಿ. ಎಚ್ಚರಿಕೆಯ ಕರೆಗಂಟೆ ಕೊರಳಿಗೆ ಕಟ್ಟಿಕೊಂಡವರಂತೆ ನುಡಿದಿದ್ದಾರೆ… ಉದಾಹರಣೆಗೆ…

ವೋಟು ನೋಟು ವಿನಿಮಯಕೆ ದೇಶ ಮಾರಾಟವಾಗಿದೆ

ಕಕ್ಕಸಿನ ಕೋಣೆಯೇ ಬೊಕ್ಕಸವಾಗುತಿದೆ

ದಾರ್ಶನಿಕರ ನಾಮಾವಶೇಷಗಳ ಮುಂದೆ ಕುಳಿತು ಬಿಕ್ಕುತಿರುವೆ

ಬದ್ಧತೆಯಿರದ ಸಮಾಜದಲ್ಲಿ ಎದೆಯ ಮಾತನು ಹುಡುಕುತಿರುವೆ

ಸಾಮ್ರಾಜ್ಯ ಶಾಹಿಗಳ ಮನೋಸ್ಥಿತಿಯ ಕುರಿತು ಆಧುನಿಕತೆ ತಂದೊಡ್ಡಿದ ಅಪಾಯ ರೈತರ ಬದುಕು ಬವಣೆ ಇವುಗಳ ಕುರಿತು ಬರೆದ ಗಜಲ್ ಗಳು ಗಮನ ಸೆಳೆಯುತ್ತವೆ…ಉದಾಹರಣೆಗೆ

ದಬ್ಬಾಳಿಕೆ ಸಹಿಸುತ್ತ ದಮನವಾಗುವುದೇ ಬದುಕಾಗಿದೆ

ನೀಡಿದ ಅನ್ನದಾತನಿಗೆ ಅಳುಕುತ್ತ ಕೈಯೊಡ್ಡುವುದೇ ಬದುಕಾಗಿದೆ

ಬಿರುಕು ಭೂಮಿಯಲಿ ನಿರೀಕ್ಷೆಗಳನು ಹುಗಿಯುವುದೇ ಕಾಯಕ

ಕಳೆದ ಬಾಳನ್ನು ಕೈಯಾಡಿಸುತ್ತ ಹುಡುಕುವುದೇ ಬದುಕಾಗಿದೆ

ಜೀವಪರ ನಿಲುವಿನ ಗಜಲ್ ಗಳು ಅಲ್ಲಲ್ಲಿ ಗೋಚರಿಸಿ ಒಂದು ಭರವಸೆಯ ಕಿರಣ ಹೊತ್ತಿಸುವ ಗಜಲ್ ಗಾರ್ಥಿಯ ಆಶಯಗಳು  ಅದೆಷ್ಟು ಸೂಕ್ಷ್ಮವಾಗಿವೆ ಅಂತಾ ಕೂಡ ಅರುಹಿದ್ದಾರೆ… ಉದಾಹರಣೆಗೆ

ತೊಲೆಬಾಗಿಲ ಚೌಕಟ್ಟಿನಲ್ಲಿ ಸೌಹಾರ್ದ ಶಮೆ ಬೆಳಗಬೇಕಿದೆ

ಮೇಲುಕೀಳಿನ ಮಸಿಯನ್ನು ಮತಿಯಿಂದ ತೊಳೆಯೋಣ ಬಾ

ವಿಜಾತಿ ಬೀಜವನು ಬಾಳಿಸದೆ ಹೊರ ನೂಕುತಿದೆ ಧರೆಯ ಗರ್ಭ

ನೆಲ ಹೊತ್ತಿ ಉರಿಯದಂತೆ ಒಲವಿಗೊಂದು ಓಲೆ ಬರಿಯೋಣ ಬಾ

ಫರಕು ಮಾಡದ ಒಂದೇ ರಕುತ ನಮ್ಮೆಲ್ಲರ ನರಗಳಲಿ

ನೆರಳು ಕೊಡುವ ಆಲದಂತೆ ಒಲುಮೆಯನು ತೋರುವೆಯೇನು ನೀನು

ಹೀಗೆ ಹೊಸ ಮಗ್ಗುಲಿನ ಆಶಯ, ಜೀವನ ಪ್ರೀತಿ,ಭರವಸೆ ಕೂಡ ತುಂಬುವ ಬರಹಗಾರ್ಥಿಯ ಈ ಗಜಲ್ ಸಂಕಲನವನ್ನು ಖಂಡಿತ ಓದಬೇಕು. ಒಟ್ಟು 73 ಗಜಲ್ ಗಳು ಈ ಸಂಕಲನದಲ್ಲಿ ಇವೆ. ಈ ಸಂಕಲನ ಕ್ಕೆ ಶ್ರೀ ಯುತ ಅಬ್ದುಲ್ ಹೈ ತೋರಣಗಲ್ಲು ಸರ್ ರವರು ಮುನ್ನುಡಿ ಬರೆದು ಹಾರೈಸಿದ್ದಾರೆ.ಆದರೆ ಅವರು ಹೇಳಿರುವ ಪದಗಳ ದುಂದುವೆಚ್ಚ ಮಾಡದ ಗಜಲ್ ಗಾರ್ಥಿ ಎಂಬುದನ್ನು  ನಾನು ಒಪ್ಪುವುದಿಲ್ಲ ಅನಿಸುತ್ತೆ. ಕಾರಣ ಇಷ್ಟೇ ಅತ್ಯುತ್ತಮ ಗಜಲ್ ಗಳ ಬರೆದಿರುವ ಗಜಲ್ ಗಾರ್ಥಿ ಎಲ್ಲೋ ಒಮ್ಮೊಮ್ಮೆ ಅವಸರಕ್ಕೆ ಬಿದ್ದು ಬರೆದಂತೆಯೂ  ದ್ವಂದ್ವಕ್ಕೆ ಸಿಲುಕಿದಂತೆಯೂ ಅನಿಸಿದ್ದು ಸುಳ್ಳಲ್ಲ.ಇನ್ನಷ್ಟು ಸಂಕೇತಗಳ ಬಳಕೆ ಇರಲಿ ಅಂತಾ ಆಶಯ ಕೂಡ ನನ್ನದು. ಅಷ್ಟಾಗಿಯೂ ಗಜಲ್ ಗಳು ಸಶಕ್ತವಾಗಿ ಇವೆ.ಹೃದಯದ ವೀಣೆ ಮೀಟಿ ಬರೆವ ಶಮಾಜಿ ಗಜಲ್ ಗಳು ಇರುಳಿಗೆ ಹಿಡಿದ ಕೈ ಗನ್ನಡಿಯಾಗಿವೆ..

ಶಮಾಜಿ ಅಂದರೆ ಬತ್ತದ ತೊರೆ ಅವರು ಬರೆದಷ್ಟು ನಮಗೆ  ಬೀಗುವ ಸಂಧರ್ಭ ಕಾರಣ…. ಇದ ಓದಿ ಒಮ್ಮೆ ಸುಮ್ನೆ…

ಮರೆತರೆ ನನ್ನ ವಿಳಾಸ ಕೇಳು ಮಸಣದ ಮಜಾರಗಳಿಗೆ

ಪೈಗಾಮ ಕೇಳಲು ದೇಹ ಸತ್ತರೂ ಕಿವಿ ಕಾಯುವುದು ಸಖಿ

ಅದೆಷ್ಟು ಅಜರಾಮರ ಪ್ರೀತಿಯ ಸಾಲುಗಳ ಮತ್ತಾರು ಬಿಕ್ಕರು ನಮ್ಮ ಶಮಾಜಿಗೆ ಮಾತ್ರ ಅದು ಸಾಧ್ಯ. ಇಂತಿಷ್ಟು ನನ್ನ ಮಾತು. ಕೊನೆಯಲ್ಲಿ ಸಶಕ್ತ, ಪ್ರಸಕ್ತ..

ಗಯಾದ ಗಾಳಿಗೂ ವಿಷಪ್ರಾಷನವಾಗಿದೆ

ಭೋಧಿವೃಕ್ಷವೂ ಕಣ್ಣೀರು ಇಡುತಿದೆ ಬುದ್ಧ “


ದೇವರಾಜ ಹುಣಸಿಕಟ್ಟಿ.

One thought on “ಶಮಾ ಗಜಲ್

  1. ನನ್ನ ಗಜ಼ಲ್ ಸಂಕಲನದ ಕುರಿತು ಅತ್ಯಂತ ಪ್ರೀತಿಯಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಶ್ರೀ. ದೇವರಾಜ ಹುಣಸೀಕಟ್ಟಿ ಅವರಿಗೆ ಧನ್ಯವಾದಗಳು. ತುಂಬಾ ಖುಷಿಯಾತು ಓದಿ..

Leave a Reply

Back To Top