ಲೇಖನ
ನೆನಪಿನಂಗಳ
ಪ್ರವಚನಕಾರರು, ಆಧ್ಯಾತ್ಮಿಕ ಚಿಂತಕರು, ಸರ್ವಧರ್ಮ ಪ್ರಚಾರಕರು ಎಂದೇ ಪ್ರಖ್ಯಾತರಾದ ಇಬ್ರಾಹಿಂ ಎನ್ ಸುತಾರ ಅವರು ನಬಿಸಾಹೇಬ್ ಮತ್ತು ಅಮೀನಾಬೀ ದಂಪತಿಗಳ ಮಗನಾಗಿ 1940ರ ಮೇ10 ರಂದು ಜನಿಸಿದರು. ಇವರ ತಂದೆಯ ವೃತ್ತಿ ಬಡಿಗೆತನ ಹೀಗಾಗಿ ಬೇರೆ ಬೇರೆ ಊರುಗಳಿಗೆ ಸುತ್ತಾಡುತ್ತಿದ್ದರು ಜೊತೆಗೆ ಬಡತನದ ಕಾರಣದಿಂದಾಗಿ ಇಬ್ರಾಹಿಂರವರ ವಿದ್ಯಾಭ್ಯಾಸ ಕೇವಲ ಮೂರನೇ ತರಗತಿವರೆಗೆ ಓದಬೇಕಾಯಿತು. ಬಾಲ್ಯದಿಂದಲೂ ಎಲ್ಲಾ ಧರ್ಮ ಗ್ರಂಥಗಳನ್ನು ಓದಿ ತಿಳಿಯುವ ಆಸಕ್ತಿ ಮತ್ತು ಕುತೂಹಲ ಹೀಗಾಗಿ ಮಹಾಲಿಂಗಪುರದಲ್ಲಿಯೇ ಖುರಾನ್, ಹದೀಸ್, ಭಗವತಗೀತೆ, ಉಪನಿಷತ್, ವಚನಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಎಲ್ಲಾ ದೈವಿಕ ಗ್ರಂಥಗಳಲ್ಲಿ ಪರಮಾತ್ಮನ ಸ್ವರೂಪ, ಧರ್ಮದ ಸ್ವರೂಪ ಒಂದೇ ಎಂದು ಅರಿತುಕೊಂಡ ಮೇಲೆ ಪ್ರವಚನವನ್ನು ಕೈಗೊಂಡರು.
ಶ್ರೀ ಗುರುಪಾದಪ್ಪ ಕಕ್ಕೆಮರಿ, ಬಸಪ್ಪ ಹಾಗಿನಕಟ್ಟೆ, ಭರವತ್ ಗಿರಿ ಜಮಾದಾರ, ಮಲ್ಲಪ್ಪ ಶಿರೋಳ್ ಇವರಿಂದ ಭಜನಾ ಕಾರ್ಯಕ್ರಮ ಕಲಿತು, ಬಸವಾನಂದ ಮಹಾಸ್ವಾಮಿಗಳ ಬಳಗದಲ್ಲಿ ಸೇರ್ಪಡೆಯಾದರು. ಶಾಸ್ತ್ರಅಭ್ಯಾಸವನ್ನು ಶ್ರೀ ರಾಮಚಂದ್ರ ಶಾಸ್ತ್ರಿಗಳು, ಶಂಭುಲಿಂಗ ಶಾಸ್ತ್ರೀಗಳು, ಸಹಜಾನಂದ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿ, ಶಾಂತಾನಂದ ಸ್ವಾಮೀಜಿ ಸಿದ್ದಾರೂಡ ಸ್ವಾಮೀಜಿಯವರುಗಳಿಂದ ಕಲಿತು ತತ್ವಪದಗಳನ್ನು ಹಾಡುತ್ತ ಕ್ರಿ. ಶ. 1970ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳ, ಆಧ್ಯಾತ್ಮ ಸಂವಾಧ ತರಂಗಿಣಿ, ಭಾವೈಕ್ಯ ಭಕ್ತಿ ರಸ ಮಂಜರಿ ಸಂಘಗಳನ್ನು ಸ್ನೇಹಿತರನ್ನೊಳಗೂಡಿ ಕಟ್ಟಿದರು. ಜೊತೆಗೆ ಹಿಂದಿ ಭಕ್ತಿ ಗೀತೆಗಳನ್ನು ಹಾಡಿ ಸೂಫಿ ಭಜನಾಕಾರರಾದರು.
ಇವರು ಭಾವೈಕ್ಯತೆಯನ್ನು ಮಾನವ ಮನಸ್ಸುಗಳಿಗೆ ತಲುಪಿಸುವಂತಹ ಪ್ರಾಮಾಣಿಕ ಕಾರ್ಯ ಗುರುತಿಸಿ 1995ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರ ವೃತ್ತಿ ನೇಕಾರಿಕೆಯಾದರು ಧರ್ಮ -ಧರ್ಮಗಳ ನಡುವಿನ ಸೇತುವೆಯಾಗಿ ನೆಲೆ ನಿಂತರು. ಆಧುನಿಕ ಸೂಫಿಸಂತ, ಕನ್ನಡದ ಕಬೀರ್ ಎಂದೇ ಜನ ಮನ್ನಣೆ ಪಡೆದರು. ಆಧ್ಯಾತ್ಮಿಕ ಚಿಂತಕರಾಗಿ ಪರಮಾತ್ಮನೂ ಒಂದೇ ಧರ್ಮವೂ ಒಂದೇ ಮಾನವ ಕುಲವು ಒಂದೇ ಎಂದು ಅರಿತುಕೊಂಡರು. ದೇವರು ನಿರಾಕಾರ, ನಿರ್ಗುಣ, ಸಚ್ಚಿದಾನಂದ, ಪರಿಪೂರ್ಣನೂ ಆಗಿರುವನು. ಆದರೆ ನಾವುಗಳು ಮಾಡುವ ಆರಾಧನೆ ಬೇರೆ ಬೇರೆ ಆಗಿದೆ ಎನ್ನುವ ಭಾವ ಮನದಲ್ಲಿ ಆಳವಾಗಿ ಮೂಡಿತು.
ಭಾರತ ದೇಶ ಒಂದು ಹೂದೋಟ ಅದರಲ್ಲಿರುವ ಹಲವು ಬಗೆಯ ಹೂಗಳಂತೆ ಮತಗಳು. ಆ ಮತಗಳು ಮಕರಂಧ ಬೀರಲಿ. ಪ್ರಕೃತಿಯಲ್ಲಿ ಇರದ ಭೇಧ ಭಾವ ಮಾನವರಲ್ಲಿ ಏಕೆ ಎಂದು ತಮ್ಮ “ನಾವೆಲ್ಲ ಭಾರತೀಯರು” ಎಂಬ ಕವಿತೆಯಲ್ಲಿ ಭಾವೈಕ್ಯತೆಯ ಸುಂದರ ಭಾವನೆ ಮೂಡಿದೆ. ದಯೆಯೇ ಭಾರತೀಯರ ಧರ್ಮ ಎಂದು ಎತ್ತಿ ತೋರಿಸಿದ್ದಾರೆ.
ಭಾ — ಎಂದರೆ ಪ್ರಕಾಶ – ಪರಮಾತ್ಮನ ಪ್ರಕಾಶ
ರತೀ — ಎಂದರೆ ಪ್ರೀತಿ
ಸ್ವಯಂ ಪ್ರಕಾಶನಾದ ಪರಮಾತ್ಮನಿಗೆ ವಿಶೇಷ ಪ್ರೀತಿಯುಳ್ಳವರು ಭಾರತೀಯರು — ಎನ್ನುವ ಇವರ ವಿಚಾರ ಯಾವ ತತ್ವಜ್ಞಾನಿಗೂ ಕಮ್ಮಿ ಇಲ್ಲ.
ವಿಶಾಲ ಮನೋಭಾವನೆ, ಅದ್ಬುತ ವಿಚಾರಧಾರೆಯ, ವಿಶ್ವ ಕನ್ನಡಿಗ, ಮಹಾನ್ ಚೇತನವನ್ನು ಕಳೆದುಕೊಂಡ ನಾವುಗಳೇ ದುರಾದೃಷ್ಟರು. ಅನಾಥ ಆಶ್ರಮ, ವೃದ್ಧಾಶ್ರಮಗಳನ್ನು ಕಟ್ಟಿಸಬಹುದು, ದಾನ ಮಾಡಬಹುದು, ಬಡಬಗ್ಗರಿಗೆ ಸಹಾಯ ಮಾಡಬಹುದು. ಆದರೆ ಧರ್ಮ ಧರ್ಮಗಳ ನಡುವಿನ ಬೆಸುಗೆಯಾಗಿ, ಶಾಂತಿಧೂತರಾಗಿ, ಸಂಸಾರದಲ್ಲಿದ್ದು ಮುಕ್ತಿ ಪಡೆಯುವ ಮಾರ್ಗದಲ್ಲಿ ನಡೆಯುವುದು ಅಸಾಮಾನ್ಯರೆ ಮಾಡುವ ಸಾಧನೆ. ಸಂತರಲ್ಲಿ ಸಂತರಾಗಿ ಬಾಳಿದ ಈ ಸಂತ, ಎಲ್ಲಾ ಮತದವರ ಹೃದಯದಲ್ಲಿ ಮಕರಂಧವಾಗಿ ಉಳಿದು, ಕಣ್ಣುಗಳಲ್ಲಿ ಕಣ್ಣೀರು ಹರಿಸಿ ನಿಷ್ಕಲ್ಮಶ, ಸುಂದರ ನಗೆಯ ಮಿಂಚು ಕೋಲ್ಮಿಂಚಾಗಿ ಮರೆಯಾಯಿತು. ನೀತಿ ಬೋಧನೆ, ಅದ್ಬುತ ವಿಚಾರಗಳು, ದೇವರು, ಸಂತರ ಸಂದೇಶ ಒಳಗೊಂಡ ಇವರ ಪ್ರವಚನ, ಮನೋರಂಜನೆಯಿಂದ ಕೂಡಿದ ಸಂವಾದಗಳನ್ನು ಕಳೆದುಕೊಂಡಿದ್ದೆವೆ
ಮಾಜಾನ್ ಮಸ್ಕಿ