ಸರಣಿ ಬರಹ

ಅಂಬೇಡ್ಕರ್ ಓದು

ಭಾಗ-10

ಸಾಮಾಜಿಕ ಕ್ರಾಂತಿ

Dr Babasaheb Ambedkar's Original Photos/Images | Velivada

1923 ರ ಏಪ್ರೀಲ್ ತಿಂಗಳಲ್ಲಿ ಇಂಗ್ಲಂಡನಿಂದ ಮರಳಿ ಮುಂಬಯಿಗೆ ಬರುವರು. ವಿಧ್ಯಾಭಾಸ ಪೂರ್ಣಗೊಳಿಸಿದ ಸಂತಸ ಅವರಲ್ಲಿ ಎದ್ದು ಕಾಣುತ್ತಿತ್ತು. ಅದ್ದೂರಿಯಾಗಿ  ಸ್ವಾಗತ ಮಾಡಿ ಅಂಬೇಡ್ಕರರನ್ನು ಬರ ಮಾಡಿ ಕೊಳ್ಳಲಾಯಿತು. ಪತ್ನಿ ರಮಾಬಾಯಿರವರು ಪತಿಯನ್ನು ಸ್ವಾಗತಿಸಲು ಹೋಗಬೇಕೆಂದರೆ ತೊಟ್ಟ ಸೀರೆ ಹರಿದು ಹೊಗಿತ್ತು, ಬೇರೆ ಸೀರೆ ಉಡಬೇಕೆಂದರೆ ಇನ್ನೊಂದು ಸೀರೆ ಮನೆಯಲ್ಲಿ ಇರಲಿಲ್ಲ, ಅಂತಹ ಸಂದರ್ಭದಲ್ಲಿ ಅಂಬೇಡ್ಕರರಿಗೆ ಕಾರ್ಯಕ್ರಮ ಒಂದರಲ್ಲಿ ತೊಡಿಸಿದ್ದ ರೂಮಾಲನ್ನೆ ಸೀರೆಯನ್ನಾಗಿ ಉಟ್ಟುಕೊಂಡು ಪತಿಯನ್ನು ಸ್ವಾಗತಿಸಲು ಬರುತ್ತಾರೆ. ಮನೆಗೆ ಬಂದ ಅಂಬೇಡ್ಕರರು ಸರಕಾರಿ ನೌಕರಿ ಸೇರಲು ಯೋಚನೆ ಮಾಡುವರು. ನೌಕರರಿಗೆ ಸೇರಿಕೊಂಡರೆ ಕೋಟಿ ಕೋಟಿ ಶೋಷಿತ ಜನರ ಜೀವನ ಸುಧಾರಿಸಲು ಸಾದ್ಯವಾಗಲಾರದೆಂದು ನೌಕರಿಗೆ ಸೇರಿಕೊಳ್ಳದೆ ಶೋಷಿತ ಜನರ ಏಳ್ಗೆಗೆ ಹೊರಾಡಲು ಪಣ ತೊಡುವರು. ಹೊರಾಟಕ್ಕೆ ಧೂಮುಕುತ್ತಾರೆ. ಅಂದು ದೇಶದಲ್ಲಿ ರಾಜಕಿಯವಾಗಿ ಸ್ವಾತಂತ್ರ್ಯ ಚಳುವಳಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅಂಬೇಡ್ಕರರು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಶೋಷಿತ ಜನರ ಬದುಕು ಹಸನ ಮಾಡಲು ಹೋರಾಟ ಆರಂಭಿಸುತ್ತಾರೆ.

ಮುಂಬಯಿ ಮಹಾನಗರದ ದಾಮೋದರ ಹಾಲಿನಲ್ಲಿ ಸಭೆಯೊಂದನ್ನು ಕರೆದು ಮುಖಂಡರೊಂದಿಗೆ ಚರ್ಚಿಸಿ ಸಾಮಾಜಿಕ ಕ್ರಾಂತಿಕಾರಿ ಚಳುವಳಿಗೆ ಮುನ್ನುಡಿ ಬರೆಯುತ್ತಾರೆ. 1924 ಜುಲೈ 20 ರಂದು “ಬಹಿಷ್ಕೃತ ಹಿತಕಾರಿಣಿ ಸಭೆ” ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಬಹಿಷ್ಕೃತ ಹಿತಕಾರಿಣಿ ಸಭೆಯ ಮುಖ್ಯ ತತ್ವ ಶಿಕ್ಷಣ, ಸಂಘಟನೆ, ಹೋರಾಟ, ಎಂಬುವುದಾಗಿ ಘೋಷಣೆ ಮಾಡುತ್ತಾರೆ. ಶಿಕ್ಷಣ, ಸಂಘಟನೆ, ಹೋರಾಟ ಇವುಗಳ ಗುರಿ ಸಾಧನೆಗಾಗಿ ನಿಮ್ನವರ್ಗದ ಜನರು ಶಿಕ್ಷಣ ಪಡೆಯುವಂತಾಗಲು ಶಿಕ್ಷಣ ಪ್ರಸಾರ ಮಾಡುವುದು, ಹಾಸ್ಟೇಲ್ ಗಳನ್ನು ಸ್ಥಾಪಿಸುವುದು, ನಿಮ್ನವರ್ಗದ ಜನರು ಸಾಂಸ್ಕೃತಿಕ ಕಲೆ, ವಿದ್ಯೆ ಅರಿತು ಪ್ರಜ್ಞಾವಂತರಾಗಲು ಗ್ರಂಥಾಲಯಗಳನ್ನು ಆರಂಭಿಸುವುದು, ಆರ್ಥಿಕವಾಗಿ ಸಶಕ್ತರಾಗಲು ಕೈಗಾರಿಕಾ ಮತ್ತು ಕೃಷಿ ತರಬೇತಿ ಶಾಲೆಗಳನ್ನು ತೆರೆವುದು, ಅಸ್ಪೃಶ್ಯರ ಜನರ ಮೇಲೆ ನಡೆಯುವ ದಿನನಿತ್ಯ ಅನ್ಯಾಯ – ಅತ್ಯಾಚಾರಗಳನ್ನು ನಿಯಂತ್ರಿಸಲು ಕುಂದು ಕೊರತೆಗಳನ್ನು ಕೇಳಲು ಸಂಸ್ಥೆ ಶೋಷಿತ ಜನರ ಪ್ರತಿನಿಧಿಯಾಗಿ ಕೆಲಸ ಮಾಡುವುದು ಎಂಬುದಾಗಿ ಸಂಸ್ಥೆಯ ಮುಖ್ಯ ಕಾರ್ಯಸೂಚಿಗಳನ್ನು ಅಂಬೇಡ್ಕರರು ಪ್ರಕಟಿಸುತ್ತಾರೆ. ಕೋಟಿ ಕೋಟಿ ಶೋಷಿತ ಜನರಿಗೆ ಶಿಕ್ಷಣ-ಸಂಘಟನೆ-ಹೋರಾಟಗಳ ಮೂಲಕ ಜಾಗೃತಿಗೋಳಿಸುವುದು ಅವರ ಮುಖ್ಯ ತತ್ವಗಳಾದವು.

ಜಾತಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ಮೂಡನಂಬಿಕೆಗಳನ್ನು ತೊಡೆದು ಹಾಕಿ ಸಮಾಜಿಕ ಸುಧಾರಣೆ ತರಲು ದೇಶದಲ್ಲಿ ಈಗಾಗಲೇ ಸಮಾಜಿಕ ಸುಧಾರಣಾ ಚಳುವಳಿಗಳು ಆರಂಭಗೊಂಡಿದ್ದವು. 1828 ರ ಅಗಷ್ಟ 20 ರಂದು ಕೊಲ್ಕತ್ತಾದಲ್ಲಿ ರಾಮಮೋಹನರಾಮ ಮತ್ತು ದೇವೇಂದ್ರನಾಥ ಟ್ಯಾಗೋರರು ಬ್ರಹ್ಮ ಸಮಾಜವನ್ನು ಸ್ಥಾಪಿಸುತ್ತಾರೆ. ಮೊದಲು ಆತ್ಮಿಯ ಸಭಾ ಆರಂಭಿಸಿ ನಂತರ ಬ್ರಹ್ಮ ಸಮಾಜ ಸ್ಥಾಪಿಸಿ ಏಕೇಶ್ವರವಾದಿ, ಸುಧಾರಣಾವಾದಿ ಚಳುವಳಿಯನ್ನು ಆರಂಭಿಸುತ್ತಾರೆ. 1856 ರಲ್ಲಿ ಈಶ್ವರಚಂದ್ರ ವಿದ್ಯಾಸಾಗರ ವಿಧವಾ ಮರು ಮದುವೆ ಮತ್ತು 1872 ರಲ್ಲಿ ಕೇಶವಚಂದ್ರಸೇನರು ಮ್ಯಾರೇಜ್ ಆ್ಯಕ್ಟ ಕಾನೂನುಗೊಳಿಸಲು ಹೋರಾಡುತ್ತಾರೆ. ಆರ್.ಜಿ.ಭಂಡಾರ್ಕರ, ಎಮ್.ಜಿ.ರಾನಡೆ ಮತ್ತು ನಾರಾಯಣ ಚಂದಾವರ್ಕರರವರು ಬ್ರಹ್ಮ ಸಮಾಜ ದಿಂದ ಪ್ರಭಾವಿತರಾದ ಪ್ರಮುಖ ಸುಧಾರಕರಾಗಿದ್ದು ಪ್ರಾರ್ಥನಾ ಸಮಾಜದ ಮುಖಂಡರಾಗಿದ್ದಾರೆ. ಆತ್ಮರಾವ ಪಾಂಡುರಂಗರವರ ನೇತೃತ್ವದಡಿ 1867 ರಲ್ಲಿ ಮುಂಬಯಿಯಲ್ಲಿ  ಪ್ರಾರ್ಥನಾ ಸಮಾಜವನ್ನು ಸ್ಥಾಪಿಸುತ್ತಾರೆ. ಪ್ರಾರ್ಥನಾ ಸಮಾಜವು ವಿಧವಾ ವಿವಾಹ, ಸ್ತ್ರೀ ಶಿಕ್ಷಣ ಮತ್ತು ಸಹಬೋಜನೆ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುತ್ತದೆ. ಮಹಾತ್ಮ ಜೋತಿಬಾ ಪೂಲೆ ಅವರು 1873 ರಲ್ಲಿ ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸಿ ಜಾತಿ ಶೋಷಣೆಯ ವಿರುದ್ದ ಹೋರಾಡುತ್ತಾರೆ. ಗುಜರಾತಿನ ಸ್ವಾಮಿ ದಯಾನಂದ ಸರಸ್ವತಿ ಅವರು 10 ಏಪ್ರೀಲ್ 1875 ರಲ್ಲಿ  ಗಿರಗಾಂವ್, ಮುಂಬಯಿಯಲ್ಲಿ ‘ಆರ್ಯಸಮಾಜವನ್ನು ಸ್ಥಾಪಿಸಿ’ ವೇಧಗಳ ಶುದ್ದಿಕರಣ ಚಳುವಳಿ ಆರಂಭಿಸುತ್ತಾರೆ.  “ಸತ್ಯಾರ್ಥ ಪ್ರಕಾಶ”  ಎಂಬ ಕೃತಿಯನ್ನು ಬರೆದು ವೇದಗಳಿಗೆ ಹಿಂತಿರುಗಿ ಎಂದು ಕರೆಕೊಡುತ್ತಾರೆ. ರಾಮಕೃಷ್ಣ ಪರಮಹಂಸರು  ಉದಾರಿಕರಣ ಮತ್ತು ಎಲ್ಲ ಧರ್ಮಗಳ ಏಕತೆಗೆ ತಿಳುವಳಿಕೆ ಕೊಡುತ್ತಾರೆ. ಇವರ ಶಿಷ್ಯ ಸ್ವಾಮಿ ವೀವೆಕಾನಂದರು 1893 ರಲ್ಲಿ ಚಿಕಾಗೋದಲ್ಲಿ ಭಾಷಣ ಮಾಡಿ ಪ್ರಸಿದ್ದರಾಗುತ್ತಾರೆ. 1896 ರಲ್ಲಿ ‘ರಾಮಕೃಷ್ಣ ಮಿಷನ್’ ಸ್ಥಾಪನೆಯಾಗಿ ಜಾತಿ ವ್ಯವಸ್ಥೆ, ಧಾರ್ಮಿಕ ಆಚರಣೆಗಳು ಮೂಡ ನಂಬಿಕೆಗಳನ್ನು ಖಂಡಿಸುತ್ತಾರೆ. 1875 ರಲ್ಲಿ ಹಿಂದೂ ತತ್ವಶಾಸ್ತ್ರದ ಕಡೆಗೆ ಆಕರ್ಷಿಸಿ ಅಮೇರಿಕಾದಲ್ಲಿ ಮ್ಯಾಡಮ್ ಬ್ಲಾವಟ್ಸ್ಕ ಓಲ್ಕಾಟ ಎಂಬ ರಷ್ಯಾದ ಪಾರಮಾರ್ಥಿಕರ ಕೂಡಿ ‘ಥಿಯಾಸಾಫಿಕಲ್ ಸೊಸೈಟಿ’ ಸ್ಥಾಪಿಸುತ್ತಾರೆ. ಭಾರತದಲ್ಲಿ 1886 ರಲ್ಲಿ ಮದ್ರಾಸ ಬಳಿ ಅಡ್ಯಾರ ಎಂಬಲ್ಲಿ  ‘ಥಿಯಾಸಾಫಿಕಲ್ ಸೊಸೈಟಿ’ (ಬ್ರಹ್ಮ ವಿಧ್ಯಾ)ಯನ್ನು ಪ್ರಾರಂಭಿಸುತ್ತಾರೆ. ಆ್ಯನಿಬೇಸೆಂಟರು 1893 ರಲ್ಲಿ ಭಾರತಕ್ಕೆ ಬಂದು ಥಿಯಾಸಾಪಿಸ್ಟ್ ಚಳುವಳಿಯಲ್ಲಿ ಭಾಗವಹಿಸುತ್ತಾರೆ. ವೈದಿಕ ತತ್ವ ಶಾಸ್ತ್ರ ಮತ್ತು ಸಂಸ್ಕೃತಿಯನ್ನು ಪ್ರಸಾರಮಾಡುತ್ತಾರೆ. ಬರೋಡಾದ ಸಯ್ಯಾಜಿರಾವ್ ಗಾಯಕವಾಡ ಮಹಾರಾಜರು, ಕೊಲ್ಲಾಪುರ ಸಂಸ್ಥಾನದ ಸಾಹು ಮಹಾರಾಜರು ಹಾಗೂ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರವರು ನಿಮ್ನ ವರ್ಗದ ಜನರ ಏಳ್ಗೆಗೆ ಶ್ರಮಿಸುತ್ತಾರೆ. ಗಾಂಧಿಜಿ ಅವರು ಅಸ್ಪೃಶ್ಯತೆ ಎಂಬುವುದು ದೇಶಕ್ಕೆ ಅಂಟಿದ ಕಳಂಕವೆನ್ನುತ್ತಾರೆ. ಸಾವರಕರರು ಅಸ್ಪೃಶ್ಯತೆಯನ್ನು ಹೋಗಲಾಡಿಸಿದಿದ್ದರೆ ಹಿಂದೂ ಸಮಾಜ ಗಟ್ಟಿಯಾಗಿ ಉಳಿಯಲು ಸಾದ್ಯವಿಲ್ಲ ಎನ್ನುತ್ತಾರೆ.

           ದೇಶದ ಅನೇಕ ನಾಯಕರುಗಳು ದೇಶದಲ್ಲಿ ಬದಲಾವಣೆ ತರಲು, ಸಮಾಜ ಸುಧಾರಿಸಲು ಪ್ರಯತ್ನಿಸಿದರೇ ಹೋರತು : ಅಸ್ಪೃಶ್ಯತೆಯನ್ನು ಸಮಾಜದಿಂದ ಕಿತ್ತು ಹಾಕಲು ಹೋರಾಡಲಿಲ್ಲ ಒಬ್ಬ ಮನುಷ್ಯ ಮೇಲು ಇನ್ನೊಬ್ಬ ಮನುಷ್ಯ ಕೀಳು ಎಂಬುವು ಜಗತ್ತಿನಲ್ಲೆಯೇ ಇಲ್ಲವೆಂದು ಹೇಳಲಿಲ್ಲ. ಮನುಷ್ಯ ಮುಟ್ಟಿದರೆ ವಸ್ತುಗಳು ಮೈಲಿಗೆ, ಅಪವಿತ್ರವಾಗುತ್ತಿವೆ ಎಂಬುವುದು ಸುಳ್ಳು ಎಂದು ಸಾಬಿತು ಪಡಿಸಲಿಲ್ಲ. ಅಸ್ಪೃಶ್ಯತೆ ಹೋಗಲಾಡಿಸಲು ಅಂತರಜಾತಿ ವಿವಾಹ, ಬೋಜನ ಕೈಗೊಳ್ಳಲಿಲ್ಲ. ಮಹಾತ್ಮ ಗಾಂಧಿಜಿ ಅವರು ವರ್ಣಾಶ್ರಮ  ವ್ಯವಸ್ಥೆಯಲ್ಲಿ ನಂಭಿಕೆ ಇಟ್ಟವರಾಗಿದ್ದು, ಜಾತಿ ವ್ಯವಸ್ಥೆಯಲ್ಲೆ ಇದ್ದುಕೊಂಡು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಇದು ಹಳೆಯ ಮನೆಯನ್ನು ಸುಣ್ಣ, ಬಣ್ಣ ರೀಪೇರಿ ಮಾಡಿದಂತೆ ಇತ್ತು ಎಂದು ಅಂಬೆಡ್ಕರರು ಅಭಿಪ್ರಾಯ ಪಡುತ್ತಾರೆ. ಅಂಬೇಡ್ಕರ್ ಹಳೆಯ ಮನೆಯನ್ನು ಕೇಡುವಿ ಹೊಸ ಮನೆಯನ್ನು ಕಟ್ಟುವ ಕಾರ್ಯ ಆರಂಭಿಸುವುದಾಗಿ ಹೇಳುತ್ತಾರೆ. ಅವರು ಅಸ್ಪೃಶ್ಯರ ಜಾತಿಯಲ್ಲಿ ಹುಟ್ಟಿ ನೋವು, ಅವಮಾನ ಕಷ್ಟಗಳನ್ನು ಅನುಭವಿಸಿದವರು. ಹೀಗಾಗಿ ಬೇರು ಸಮೇತ ಜಾತಿ ವ್ಯವಸ್ಥೆಯನ್ನು ಕಿತ್ತು ಹಾಕಲು ಪಣ ತೊಡುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಲು ಊರೂರು ತಿರಗುತ್ತಾರೆ. ಸಭೆ ಸಮಾರಂಭಗಳಿಗೆ ಮೊದಮೊದಲು ಜನರು ಸೇರುತ್ತಿರಲಿಲ್ಲ. ಜನರನ್ನು ಸೇರಿಸಿ ಶಿಕ್ಷಣ, ಸಂಘಟನೆ, ಹೋರಾಟ ಕುರಿತು ಹೇಳಿಕೊಡಿತ್ತಾರೆ. ಗುಲಾಮನನ್ನು ಗುಲಾಮ ಎಂದು ನಿಂದಿಸಿದಾಗಲೇ ಅವನಿಗೆ ಗುಲಾಮತನದ ಅರಿವು ಆಗುವುದು ಎನ್ನುತ್ತಾರೆ. ಸ್ವಾಭಿಮಾನದ ಬದುಕನ್ನು ನಡೆಸಲು ಕರೆಕೊಡುತ್ತಾರೆ. ಯಾವ ಮಹತ್ಮರು, ಯಾವ ದೇವರು, ಹೊಟ್ಟೆಯನ್ನು ತುಂಬಿಸುವುದಿಲ್ಲ. ತನ್ನ ಏಳ್ಗೆ ತನ್ನಿಂದಲೇ ಮಾತ್ರ ಸಾದ್ಯ ಎಂದು ಗರ್ಜಿಸುತ್ತಾರೆ. ನಿಮ್ಮ ದುಃಖಪೂರಿತ ಧ್ವನಿ ಕೇಳಿದಾಗ ನನ್ನ ಎದೆ ಬಿರಿಯುತ್ತದೆ. ನಿಮ್ಮ ಬಾಡಿದ ಮುಖಗಳನ್ನು ನೋಡಿದಾಗ ನೀವು ಏಕೆ ಇನ್ನು ಬುದಕಿದ್ದಿರಿ. ಗುಲಾಮರಾಗಿ ಇನ್ನು ಎಷ್ಟು ದಿನ ಅಸಹಾಯಕರಾಗಿ ಏಕೆ ಕುಳಿತಿರುವಿರಿ? ಇಂಥ ಜಿವನ ಜೀವಿಸುವುದಕ್ಕಿಂತ ತಾಯಿಯ ಗರ್ಭದಲ್ಲಿ ಇದ್ದಾಗಲೇ ನೀವು ಸತ್ತು ಹೋಗಬೇಕಿತ್ತು. ಎಂದು ನಿಮ್ನ ವರ್ಗದ ಜನರನ್ನು ಕಂಡಾಗ ಬಯ್ದು ಬಿಡುತ್ತಿದ್ದರು. ಈ ಜಗತ್ತಿನಲ್ಲಿ ಪ್ರತಿಯೊಬ್ಬನು ಆಹಾರ, ಬಟ್ಟೆ ಮತ್ತು ವಸತಿ ಪಡೆಯುವ ಹಕ್ಕು ಇದೆ. ಶತಶತಮಾನದ ಅಮಾನವೀಯ ಗುಲಾಮಗಿರಿಯಿಂದ ಹೊರಬನ್ನಿ. ಜಾಗೃತರಾಗಿ, ಎಚ್ಚರಾಗಿ, ಶಿಕ್ಷಣವಂತರಾಗಿ ಎಂದು ಸಿಂಹದಂತೆ ಗುಡುಗುತಿದ್ದರು.

ಅಂಬೇಡ್ಕರ್ ನಿಪ್ಪಾಣಿ,  ಮಾಳವಾನ್, ಗೋವಾ ಮುಂತಾದ ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸಿ ದೀನದಲಿತರಿಗೆ ಧ್ವನಿಯಾಗಿ ಬೆನ್ನೆಲುಬಾಗಿ, ರಕ್ಷಕನಾಗಿ ಭರವಸೆ ಮೂಡಿಸುತ್ತಾರೆ. ತುಳಿತಕ್ಕೆ ಒಳಪಟ್ಟ ಆರುಕೋಟಿ  ನಿಮ್ನ ಜನರಿಗೆ ಅಂಭೇಡ್ಕರರು “ಬಾಬಾ ಸಾಹೇಬ ರಾಗಿ” ಬದುಕು ಉದ್ದರಿಸುವ ತಂದೆಯಾಗಿ ನಿಲ್ಲುತ್ತಾರೆ. ಬಹಿಷ್ಕೃತ ಹಿತಕಾರಿಣಿ ಸಭಾ ಸ್ಥಾಪನೆಯೊಂದಿಗೆ ಆಂಬೇಡ್ಕರರು ಘೋಷಿಸಿದ “ಶಿಕ್ಷಣ-ಸಂಘಟನೆ-ಹೋರಾಟ” ಇದು ಅಸ್ಪೃಶ್ಯರ ಜೀವನದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟ ಘೋಷಣೆಯಾಗಿದೆ.

                                            (ಮುಂದುವರೆಯುವುದು)


                                        ಸೋಮಲಿಂಗ ಗೆಣ್ಣೂರ.

Leave a Reply

Back To Top