ಕಾವ್ಯ ಸಂಗಾತಿ
ಸಾಲವಾ(ದಾ)ದ ಕವಿತೆ
ಸರೋಜಾ ಶ್ರೀಕಾಂತ್ ಅಮಾತಿ
ಸಪ್ತಪದಿಯ ಪದಗಳೊಳಗೆ ಒಂದಾಗಿ
ಅರೆಗಳಿಗೆಯೂ ಅಗಲಿರಲಾರೆನೆನ್ನುವಾಗ
ನನ್ನರಿತಿರುವೆ ಅಂತನ್ನಿಸಿತ್ತು..
ಸುಮ್ಮನಿರುವ ಭಾವನೆಗಳನ್ನೆಲ್ಲ ಬರಸೆಳೆದು ಬಣ್ಣಿಸುವಾಗಲಾದರೂ
ನಾ… ಅರ್ಥವಾಗಬೇಕಿತ್ತು!
ಹುಸಿ ಮುನಿಸಿನಲ್ಲಿ ನನ್ನನಿಸಿಕೆ
ಅರುಹದಿದ್ದಾಗ ಮನದರಸಿಯ ಕೋರಿಕೆಯ ಕಾಣಿಕೆ ಸ್ವೀಕರಿಸಬಹುದಿತ್ತು…
ಬಸಿರ ಬಯಕೆಯೊಡಲಿನಲ್ಲಿ
ಉಸಿರೊಂದು ನಳನಳಿಸುವಾಗಲಾದರೂ
ಮುಗುಳ್ನಗೆಯ ಹಿಂದಿನ ಅರಿಕೆ ಆಗಬೇಕಿತ್ತು!
ನಿದ್ದೆಗಳಿರದ ರಾತ್ರಿಗಳಲ್ಲಿ ಕರುಳ ಕುಡಿಗೆ ಕೈತೊಟ್ಟಿಲಾಗುವಾಗ
ಬಳೆಗಳ ಸಪ್ಪಳದಲ್ಲಾದರೂ ಆಲಿಸಬಹುದಿತ್ತು…
ರಸ್ತೆ ದಾಟುವ ನೆಪದಲ್ಲಿ ಬೆರಳುಗಳು ಬೇಕಂತಲೇ ನಿನ್ನ ಸ್ಪರ್ಶಿಸುವಾಗ ಸಣ್ಣ ಸುಳುಹಾದರೂ ಸಿಗಬೇಕಿತ್ತು!
ಅಂತರಂಗದೊಳಗಿನಾತ್ಮಕ್ಕೂ ಅತ್ಯಂತ ಆತ್ಮೀಯನಾದವನಾರಾಧನೆಗೆ ಮತ್ಯಾವ ಕವಿತೆಯ ಸಾಲವೂ ಬೇಡವಾಗಿತ್ತು…
ತುಟಿಯಂಚಿನಿಂದ ಆಚೆ ಬರದ ಮೌನ ಅಕ್ಷರಳನ್ನೆಲ್ಲ ನೀ…
ಕಣ್ಣಂಚಲ್ಲೇ ಓದಬೇಕಿತ್ತು!!!