ನೆನಪಾದವಳು

ಕಾವ್ಯ ಸಂಗಾತಿ

ನೆನಪಾದವಳು

ಶಾಲಿನಿ ರುದ್ರಮುನಿ

ಕನಸ ತೇರಲಿ
ದಣಿದ ತಣಿದ
ಮನದ ಹಾದಿಯಲಿ
ಸಿಹಿಲೇಪನದ
ಮುಗುಳ ಹೊತ್ತು
ಜೀವ ಭಾವದ
ಬಾಳು ಸಮರ್ಪಿಸುತ
ನಿಂತವಳು ನೆನಪಾದಳು
ಕನ್ನಡಿಯ ಮುಂದೆ…,

ಅಲ್ಲಲ್ಲಿ ಹಸಿಗಾಯ
ಮಾತು ಮೌನಗಳ
ತರಪರಚಿದ ಗೀಚು
ಒಸರಿದರು ಒಸರದಂತಿಹ
ರಕ್ತದ ಕಲೆಯ ಬಲೆ
ನೆಲೆ ಬಲೆಗೆ ಬಾಲೆ
ಹಸಿರುಣಿಸಿ ಮತ್ತೆ
ನೀರುಡಿಸುತಿಹ
ಹಾಡಿನ ಜಾಡಿನಲಿ
ಹಾಡು ತಾನಾಗಿ ನಲಿದು
ನಿಂತವಳು ನೆನಪಾದಳು
ಕನ್ನಡಿಯ ಮುಂದೆ…,

ಕೊಲ್ಮಿಂಚಿನ ಬಿಸಿಲಿಗೆ
ಚಂದ್ರಿಕೆಯ ಚೆಲುವಿಗೆ
ಕಾಣುವ ಸೊಬಗನು
ಇರುಳ ನರಳಿಗೆ
ಹೊರಳಿ ಜಾವಕೆ
ಕಾಣದಿಹ ಸೊಬಗನು
ಹಸಿರ ತೋರಣ ಮಾಡಿ
ಮನೆ ಮನ ಬಾಗಿಲಿಗೆ
ಸಿಂಗರಿಸಿ ಸಡಗರದಿ
ಬಾಳದಾಟ ಕೂಟಕೆ
ಸುಮ್ಮನೆ ಆರಾಧಿಸುತ
ನಿಂತವಳು ನೆನಪಾದಳು
ಕನ್ನಡಿಯ ಮುಂದೆ…,

ಅರಿವಿನ ಪಯಣದಲಿ
ಗುರು ತಾನಾಗಿಹಳು
ಬೆಳಕಿನ ಜಾಡಿನಲಿ
ಏನನೋ ಅರಸುವಳು
ಹರಿಯುವ ಅರಿವಿನ
ಹಸಿವ ಒಡಲಿಳಿಸಿ
ಭವದ ಬಂಧನಗಳ
ಒದೊಂದೆ ಕಳಚಿ
ಕದಳಿಯ ಬನದಲಿ
ನಿಂತವಳು ನೆನಪಾದಳು
ಕನ್ನಡಿಯ ಮುಂದೆ…,

ಒಳ ಹೊರಗಣ
ಅರಿದಲ್ಲದೆ ಹರಿಯದು
ಬಾಳ ಬಯಲು
ಧೇನು ಮನದಲಿ
ಧ್ಯಾನ ಛಲದ ಬದುಕು
ಒಲಿದ ಕಾಯದಲಿ
ಗೆಲಿದ ಮನದಲಿ
ಅವನ ಅರಸುತಲಿ
ಹಸಿರು ಗಿರಿ ವನದ ಮಧ್ಯೆ
ನಿಂತವಳು ನೆನಪಾದಳು
ಕನ್ನಡಿಯ ಮುಂದೆ…


One thought on “ನೆನಪಾದವಳು

Leave a Reply

Back To Top