ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ ಖಜಾನೆ

ಹೊರಟು ಹೋದವರ ಮನನಕ್ಕೆ


Free Footprint Image, Download Free Footprint Image png images, Free  ClipArts on Clipart Library

— 1 —

ಬಂಧು
ಸುಂಟರಗಾಳಿಯಲಿ
ಕಿಟಕಿ ಗಾಜು ಪುಡಿಯಾದ ಹಾಗೆ
ಸರಕ್ಕನೆ ಬೆನ್ನು ತೋರಿಸಿ ಹೀಗೆ
ತಿರುಗಿ ಬಾರದ ದಿಗಂತದತ್ತ
ನಡೆದು ಹೋದವರ ರೀತಿ
ನೀ ಹೊರಟುಹೋದ ನಿಮಿತ್ತ
ಅದೆಂಥ ನೀತಿ?

ಮಾತುಗಳಲಿ ಇರಲಿಲ್ಲವೇ ಮಿಡಿವ
ಜೀವ?
ನೀ ಹೆಜ್ಜೆ ಕೀಳುವ ಮುನ್ನ
ಒಂದೋ ಎರಡೋ
ಕೊಂಕು ಮಾತಾಡಿದ್ದರೂ ಸಾಕಿತ್ತು
ಇದ್ದ ಇರದ ಗಂಟುಗಳನೆಲ್ಲ
ಮುತುವರ್ಜಿಯಲಿ
ಅಳಿಯಬಹುದಿತ್ತು…

ಸೋಲುತ್ತಿವೆ ಬಳಲಿ ವ್ಯಗ್ರ ಗುಂಡಿಗೆಗಳು
ಹೆಜ್ಜೆಗೆ ಹೆಜ್ಜೆ ಸೀರಿಸಿ ಓಡಲಾಗದೆ
ಇಂದಿನ ಸಮಯದ ಸಮ!

ನೂರರ ಮಾತು ಹಾಗಿರಲಿ
ಅದು ಕನಸಿನ ಪಿಂಡಿ
ಇನ್ನೆಷ್ಟು ವರುಷಗಳೋ ಏನೋ
ನಮ್ಮ ಪಾಲಿಗೆ ಬಂದಿರುವ
ಇಷ್ಟೇ ದಾರಿಯ ಈ ಸಾಮ್ರಾಜ್ಯದ
ಬಳುವಳಿ
ಏಕೆ ಪರಸ್ಪರ ಕ್ಷುಲ್ಲಕ ನಿಂದನೆ?
ಮತ್ತು ಈ ದಾರಿಯುದ್ದಕ್ಕೂ
ಲ್ಯಾಂಡ್ ಮೈನುಗಳ ಹೂಳುವ
ಮತ್ತೆ ಹುಡುಕಿ ಅಗೆದು ತೆಗೆದೆಸೆವ
ಈ ವ್ಯರ್ಥ ವ್ಯಾಪಾರ…?

— 2 —

ಒಮ್ಮೆಲೆ
ಸೂರಿನ ಸುತ್ತ ಹಾರಾಡುವ
ಆತ್ಮವಾಗಿಬಿಟ್ಟರೆ
ಒಂದೆರಡು ದಿನದ ಕಣ್ಣೀರು
ದೈವತ್ವದ ಪಟ್ಟಕ್ಕೇರಿಸಿ
ಭಾವಚಿತ್ರದೆದುರು ಕೈ
ಜೋಡಿಸಬಹುದಿತ್ತು
ಇದು ಹಾಗಲ್ಲ
ಬರಿದೆ ಕಣ್ಣೀರಿಗಿಲ್ಲಿ ಕಾರಣವಿಲ್ಲ
ಇಷ್ಟಕ್ಕೂ ನೀ ಹೊರಟು ಹೋದ
ರೀತಿಯೇ ಶೋಚನೀಯ ಅಲ್ಲವೇ:
ಹೊಂಗನಸ ನಿದ್ರೆಯಲಿದ್ದವನ
ಉಸಿರ ಬಳ್ಳಿ ಚಿವುಟಿ
ಒದ್ದೊಸಕಿ ಒಲೆಗೆಸೆದಂತೆ!

ಎದೆಗೆ ಚೂರಿ ತಾಕಿದ ಹದ್ದು
ನೋವಿನ ರೆಕ್ಕೆ ಬಿಚ್ಚಿ
ತುಂಬು ಮಳೆ ಮೋಡದ
ಸಂಜೆಯಾಗಸದಲ್ಲಿ
ಸದ್ದಿಲ್ಲದೆ ತೇಲಾಡುತ್ತಿದೆ
ಒಬ್ಬಂಟಿ
ಬೆರಗುಗಣ್ಣುಗಳಲ್ಲಿ
ನೆಲದ ಮೇಲೆಲ್ಲ ಶೋಧಿಸಿದೆ
ಅಂತರಾವಲೋಕನದ ಗುಂಗಲ್ಲಿ
ಗಾಯ ಚೆಲ್ಲಿದ ರಕ್ತದ ಕಲೆಗಳಲ್ಲಿ
ಕಳೆದುಹೋದ ಆಲಿಂಗನದ
ದೃಶ್ಯಗಳನ್ನ
ಉಳಿದಿರಬಹುದಾದ ಕನಸುಗಳ
ಚೈತನ್ಯಗಳನ್ನ
ದಾರಿಗಳನ್ನ…!

ಯಾವ ದಿಕ್ಕಿಗೆ ಹೊರಳಿ ಅರಸಿದರೂ
ಬರಿದೆ ದಿಗಂತ
ಅನಂತ
ದೂರ ದೂರ
ದಾರಿ…

***************

ಪ್ರಸಿದ್ಧಿ

135,992 Time art Stock Photos, Time art Images | Depositphotos®

ಎತ್ತಲಿಂದ
ಎಷ್ಟು ದೂರದಿಂದ
ಹಾರಿ ಬಂದದ್ದೋ ಕಾಣೆ
ನೇರ ಆತನ ಬೆಳ್ಳಿ ಬಣ್ಣದ
ಹೊಳೆವ ವಿರಳ ಕೂದಲ ತಲೆಮೇಲೆ
ಕೂತು ಹಾಡತೊಡಗಿತು
ಆ ಪುಟ್ಟ ಗುಬ್ಬಚ್ಚಿಯಂಥ
ಕಪ್ಪು ಬಿಳಿ ಪುಕ್ಕಗಳ
ಹಕ್ಕಿಯೊಂದು!
ಇಂಥ ಅಚ್ಚರಿ ಕಂಡ ಜನ
ಆರಂಭದಲಿ ನಂಬಲಿಲ್ಲ

ಆತ ಎತ್ತೆತ್ತ ಹೋದರೂ
ಬಿಡದೆ ಅತ್ತತ್ತಲೇ ಹಾರಿ
ಮತ್ತೆ ಮತ್ತೆ ಕೂತು ಹಾಡಿ
ರೆಕ್ಕೆ ತೆರೆದು ಕುಣಿವುದ
ನೋಡುವುದು
ಅದೆಂಥ ಸೋಜಿಗ!

ಆ ಊರಿಂದ ಬಂದರು
ಈ ಊರಿಂದ ಬಂದರು
ಕಂಡು ಕಂಡರಿಯದ
ಊರೂರುಗಳಿಂದೆಲ್ಲ ಬಂದಿಳಿದರು
ಆ ಅದ್ಭುತ ಹಕ್ಕಿಯ ಕಿರೀಟ ಹೊತ್ತ
ಆತನ ಕೈ ಮುಟ್ಟಲು
ಕೈ ಕುಲುಕಿ ಹೆಮ್ಮೆಪಡಲು
ತಮ್ಮೂರುಗಳಲಿ ಹೋಗಿ
ಬೆನ್ನು ತಟ್ಟಿಸಿಕೊಳ್ಳಲು!

ಕಾಲದುರುಳಿನ ಜತೆಜತೆಗೆ
ಆ ಹಕ್ಕಿ ಬಲಿಯತೊಡಗಿ
ಹದ್ದಾಯಿತು
ರಣಹದ್ದಾಯಿತು
ಹಂತಹಂತ ಭಾರವಾಗತೊಡಗಿತು

ಆತನಿಗೆ
ಹೊತ್ತು ಹೊತ್ತು ಸುಸ್ತಾಗತೊಡಗಿತು
ಮಟ್ಟಸ ಕೂತು
ಎದ್ದು ಎತ್ತಲೂ ಹಾರಲೊಲ್ಲದು
ಮತ್ತು
ಮೆಲ್ಲಮೆಲ್ಲ ಗಜಗಾತ್ರವಾದ ಆ ಹಕ್ಕಿ
ಈಗ ಆತನ ತಲೆಯಮೇಲಿಂದ
ಕೆಳಕ್ಕವನನ್ನು ಅದುಮುವ
ಭಾರಿಬಂಡೆ!

ಅದನ್ನವನು ಕೆಳಕ್ಕಿಳುಕಲೂ ಆಗದೆ
ಹೊತ್ತು ತಿರುಗಲೂ ಆಗದೆ
ಆತನ ಪ್ರಸಿದ್ಧ ಬದುಕೊಂದು
ರುದ್ರನಾಟಕ!


ಡಾ. ಅರಕಲಗೂಡು ನೀಲಕಂಠ ಮೂರ್ತಿ

3 thoughts on “ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ ಖಜಾನೆ

  1. ನಿಖಿತ ಮತ್ತು ಪ್ರಸನ್ನ ಇಬ್ಬರಿಗೂ ನನ್ನ ಧನ್ಯವಾದಗಳು.

Leave a Reply

Back To Top