ಕಾಲ
ಆ ಕಾಲವೊಂದಿತ್ತು ನಮ್ಮ ಕಾಲ ಚಿನ್ನದಂತ ಕಾಲ
ಈಗ ಕಾಲ ಕಸವಾಗಿದೆ
ಎಂದು ಅಪ್ಪ ಜಂಭ ಕೊಚ್ಚುತ್ತಲೆ ಇದ್ದ
ಅದಿನ್ನೆಂತ ಬಂಗಾರ ಕಾಲ ಬಿಡು ಈಗಲೂ ಕಾಲ
ಕಾಸಾರವೇ …..ಎಂದೆ
ಮತ್ತಿನ್ನೇನು ಈಗ ಕಾಲ ಯಾರಬಳಿ ತಾನೇ ಇದೆ?
ತಿನ್ನಲಿಕ್ಕೆ, ಮಾತಾಡಲಿಕ್ಕೆ
ಏನಾದರೂ ಹೇಳಲಿಕ್ಕೆ ಇಲ್ಲಾ ಕೇಳಲಿಕ್ಕೆ
ನೋಡಲಿಕ್ಕೆ, ಹೋಗಲಿ ನೆನಪಿಗೆ ?
ಯಾರ ಬಳಿಯೂ ನಿಲ್ಲದಂತೆ ಕಾಲನ
ಕಾಲಿಲ್ಲದ ಓಟ ನಾಗಲೋಟ….
ಎಲ್ಲರ ಕಾಲೆಳೆಯುತ್ತೆ ಕಾಲ
ಎನ್ನುವುದ ಮರೆತಂತೆ
ಕಾಲದ ಕೈಗೆ ಬುದ್ದಿ ಕೊಟ್ಟು
ಕಾಲವಲ್ಲದ ಕಾಲದ ವಕಾಲತ್ತು ಬರಿದೇ ವಹಿಸಿದೆ
ಇದು ಆ ಕಾಲ ಅಲ್ಲ
ಅಕಾಲವೇ ಸರಿ
ಅಕಾಲ ಜನ್ಮ
ಅಕಾಲ ಬುದ್ದಿ
ಅಕಾಲ ಮಳೆ
ಅಕಾಲ ಹೊಳೆ
ಅಕಾಲ ಜೀವನ
ಅಕಾಲ ಮರಣ
ಶಿವನೇ ಹೌದು
ಅಕಾಲ ಕಾಲವನ್ನು
ಕಾಲವೆನ್ನಬಹುದು ಹೇಗೆ?
*************
ಸೊತ್ತು
ಆಕಾಶ ನನ್ನದೂನು
ಎಂಬಂತೆ ಹಾರುತಿದೆ ಹಕ್ಕಿ ಬಾನಿನಲ್ಲಿ
ಕಾನನದ ಗಿಡ ಮರಗಳ ಗುಂಪು
ಹಕ್ಕಿಗಳ ಗೂಡು ಒಂದೂ ಕಾಣದು
ಅದರ ಕಣ್ಣಿಗೆ
ಹಾದಿಯ ತುಂಬಾ ತೆರೆದ ನೀಲಾಕಾಶ
ಬೇಡನ ಬಿಲ್ಲು ಮೋಸದ ಬಲೆ
ಹಸಿದ ಹೊಟ್ಟೆಯ
ತುತ್ತುಡುಕುತ್ತಿರುವುದರ ಅರಿವು ಅದಕಿಲ್ಲ…
ರೆಕ್ಕೆ ಬಿಚ್ಚಿದಾ ಹಕ್ಕಿ ಕಂಡನವನು
ಬಿಟ್ಟೊಂದು ಬಾಣ ಕಾಯುತ ನಿಂತ
ತುತ್ತಿನ ಚೀಲ ತುಂಬಿಸಲು
ಬಿತ್ತಲ್ಲ ಹಕ್ಕಿ ಅವನ ಮಡಿಲಲ್ಲಿ
ಹಾರುವ ತನಕವಷ್ಟೆ
ಆಕಾಶ ಅದರ ಸೊತ್ತು…
ಬಾಣ ತಗುಲಿದ ಹೊತ್ತು
ಅದು ಬೇಡನಾ ತುತ್ತು…
**********
ನದೀ ಪಾತ್ರ
ನಗರಗಳ ಹಡೆದ ನದಿ
ಬತ್ತಿಹೋದ ಮುದಿ ತಾಯಿ
ಕಣ್ಣು ಕಾಣದ ಗಾವಿಲನಾಗಿ
ಮರೆಗೆ ಹುದುಗಿ ಹೋಗಿ
ಬೆಳೆದು ಮೆರೆದ ಝಗಮಗಿಸೊ
ನಗರಗಳ ನರ್ತನಕ್ಕೆ ನಲುಗಿ ಮೌನವಾಗಿ ಹೋಯ್ತು…
ಈಗ ಹಾದಿ ನೆನಪಾಗಿ ಹರಿಯಬಂದಳು
ಕಾಣಲೊಲ್ಲದು ಮುಚ್ಚಿಕೊಂಡ ಹಾದಿ
ಗುರುತು ಸಿಗದ ಗಗನಚುಂಬಿ ಬೀದಿ
ಕಂಗೆಟ್ಟ ತಾಯಿ
ಆಕಾಶ ನೋಡುತ್ತಾ ಕಣ್ಣೀರಿಟ್ಟು ಬೇಡಿದಳು
ದಾರಿ ತೋರೆಂದು
ಯಾವ ಮಾತಿನ ಮೋಹನ
ಕರಗಿ ಹೋಯಿತು ಗಗನ
ಹೃದಯ ಗಳಗಳನೆ ಅತ್ತ ಗೋಳಿಗೆ
ಧರೆಯ ತುಂಬಾ ನೀರು ನೀರು….
ಕಳೆದು ಹೋಗದು ನದೀ ಪಾತ್ರ
ಎಂದಿಗೂ ಅಲ್ಲವೇ…..
ಮಮತಾ ಶಂಕರ್
Madam
Super poems
I enjoed well
Thanq
ಧನ್ಯವಾದಗಳು ಮೇಡಂ
Super mam..
ಧನ್ಯವಾದಗಳು
Super putta
ಥ್ಯಾಂಕ್ಯೂ ಅಕ್ಕಾ…