ಉತ್ತರ ಹೇಳು ಸಖ

ಕಾವ್ಯ ಸಂಗಾತಿ

ಉತ್ತರ ಹೇಳು ಸಖ

ಶಂಕರಾನಂದ ಹೆಬ್ಬಾಳ

ನಿಬಿಡಾರಣ್ಯದಲಿ
ಒಬ್ಬಂಟಿ ನಾನು
ಬೋಳು ಮರದಂತೆ,
ನಿಶ್ಚಲ ಭಾವ
ವಿಷಣ್ಣತೆಯಲಿ
ಗೊಣಗುತಿರುವೆ…

ಜಾರಿದ ಸಮಯಕ್ಕೂ
ಗೊತ್ತಾಗಲಿಲ್ಲವೆ..?
ಉಳಿದ ನೆನಪುಗಳು
ತೊಗಲು ಬೊಂಬೆಯಂತೆ
ಥೈತಕ ಕುಣಿಯುತ್ತಿವೆ….

ಬೇಗೆಯಲಿ ದಿಗ್ಗನೆದ್ದು
ಬಂದಂತೆ ಭಾಸವಷ್ಟೆ
ನಿಂತ ಜಾಗ ಕುಸಿದಂತೆ
ಕೊಂಚ ಅಳುಕು
ಎದ್ದು ಕುಳಿತೆ
ಬುದ್ದನಂತೆ
ಶಾಂತಿಯಿಲ್ಲದೆ…

ಈಗ ಹೊರಟಿದ್ದೇನೆ
ಧ್ರುವಕೆ ವಿಮುಖನಾಗಿ
“ದಾರಿಯಾವುದಯ್ಯಾ
ವೈಕುಂಠಕೆ ಎಂದು”
ದಾಸ ಮಾರ್ಗವನು
ಹಿಡಿದು,
ಸತ್ಯವನರಸಿ
ಮೋಕ್ಷಾಪೇಕ್ಷಿಯಾಗಿ
ಅಲೆವ ಯೋಗಿನಂತೆ
ನಡೆದಿದ್ದೇನೆ ದಿನ
ದಿನಗಳ ಸವೆಸಿ
ಸವೆದ ಚಪ್ಪಲಿಯಾಗಿದ್ದೇನೆ….

ದುಗುಡವಾವರಿಸಿ
ದುಃಖದೊಳು ತೇಲಿ
ಪರಿಹಾರವಿಲ್ಲದ
ಫಲಾನುಭವಿ ನಾನು
ಉತ್ತರವೆಲ್ಲಿದ ಸಖ
ನನ್ನ ಮನದ ಪ್ರಶ್ನೆಗೆ….?


Leave a Reply

Back To Top