ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ

hand holding a rose with no petals isolated

ಇರುಳು ಮಲ್ಲೆ ಮಾಲೆ ಹಿಡಿದು ಅಮಲೇರಿಸಲು ಇದಾರು ಬಂದರು
ತುಂಟ ಕಣ್ಣಲಿ ಮಿಂಚಿನ ಕನಸು ತೋರಿಸಲು ಇದಾರು ಬಂದರು

ವಾರದ ಪೇಟೆಯಲ್ಲಿ ಅಲೆಯುತಿರುವೆ ಕಳೆದ ಹೃದಯ ಹುಡುಕುತಾ
ಸಂತೆಯಾ ಗದ್ದಲದಲಿ ಸಂಪಿಗೆ ಮುಡಿಸಲು ಇದಾರು ಬಂದರು

ಹೃದಯ ವೀಣೆಯ ಮೀಟಿ ದೂರಾದ ವೈಣಿಕನಿಗೆ ಹಂಬಲಿಸಿದೆ
ಮುರಿದ ಎದೆ ತಂಬೂರಿಗೆ ಶ್ರುತಿ ಸೇರಿಸಲು ಇದಾರು ಬಂದರು

ನೆನಪಿನ ಮೊಗ್ಗುಗಳು ಬಿರಿದು ಏನೋ ಹೇಳಿ ಜಗವ ಮರೆಸಿದವು
ಮೆಲು ಹೆಜ್ಜೆ ಇಡುತ ನಯನ ಮುಚ್ಚಿ ಕಾಡಿಸಲು ಇದಾರು ಬಂದರು

ಬದುಕ ಬಂಡಿ ಪಯಣ ರಣ ಬಿಸಿಲಿಗೆ ಬಾಯಾರಿ ದಣಿಯಿತು ಜೀವ
ಬಳಲಿದ ಮೈ ಮನಕೆ ಅಧರ ಜೇನು ಕುಡಿಸಲು ಇದಾರು ಬಂದರು

ಕ್ರೂರ ಕಾಲಚಕ್ರ ಸುಳಿಗೆ ಸಿಲುಕಿ ಬಾಳ ನೌಕೆ ಹೊಯ್ದಾಡಿತು
ಅನುರಾಗದ ಬದುಕಿನ ಒಳ ಗುಟ್ಟನು ತಿಳಿಸಲು ಇದಾರು ಬಂದರು

ಶಶಿ ಇಲ್ಲದ ಏಕಾಂತದ ನಿಶೆ ಧಗೆಯಲಿ ಜೀವನವು ಸವೆಯಿತು
“ಪ್ರಭೆ” ಯ ತುಟಿ ಅಂಚಿನಲಿ ನಗೆ ಹೂ ಅರಳಿಸಲು ಇದಾರು ಬಂದರು

**************

ಪ್ರಭಾವತಿ ಎಸ್ ದೇಸಾಯಿ

ಕಂಗಳಲಿ ಪ್ರೀತಿಯ ಬಟ್ಟಲಿದೆ ಕುಡಿಸಲು ಇದಾರು ಬಂದರು
ಬಾಹುಗಳಲಿ ಪ್ರೀತಿಯ ಜೋಗುಳ ಹಾಡಲು ಇದಾರು ಬಂದರು

ಹುಡುಕಲೇನಿದೆ ಈ ಹೃದಯ ನಿನ್ನ ಎದೆಯಲ್ಲಿ ಮಿಲನವಾಗಿದೆ
ಏಕಾಂತದಿ ಅಧರಕ್ಕೆ ಅಧರ ಸೇರಿಸಲು ಇದಾರು ಬಂದರು

ದೂರಾಗುವ ಮಾತು ಕನಸಲ್ಲೂ ಕನವರಿಸದಿರು ಮುದ್ದು ಮರಿ
ಆಲಿಂಗನದ ಬಿಸಿ ಅಂಟನ್ನು ಲೇಪಿಸಲು ಇದಾರು ಬಂದರು

ಮರೆತವನಿಗೆ ನೆನಪುಗಳು ಊರುಗೋಲು ಆಗಬಲ್ಲವು ಗೆಳತಿ
ಹೆಜ್ಜೆ ಮೇಲೆಜ್ಜೆಯಿಟು ಸಪ್ತಪದಿ ತುಳಿಯಲು ಇದಾರು ಬಂದರು

ನಿನ್ನ ಸಾಂಗತ್ಯದಿ ದಣಿವೆನ್ನುವ ಭಾವ ಚಿರ ನಿದ್ರೆಯಲ್ಲಿದೆ
ಮೈ ಸೋಕದೆ ಮನದಿ ಪ್ರೇಮರಸ ಬೆರೆಸಲು ಇದಾರು ಬಂದರು

ಒಲವಿನ ದಡ ಸೇರದೆಯೆ ಸಂಸಾರ ನೌಕೆ ಮುಳಗದು ಬೇಗಂ
ಸುಮೆಯ ಕಂಪನು ನನ್ನಯ ಬದುಕಲಿ ಹರಡಲು ಇದಾರು ಬಂದರು

ಬನದ ತುಂಬೆಲ್ಲ ಅನುರಾಗದ ಮಣ್ಣಿದೆ ಮಲ್ಲಿಗೆಯ ಸಸಿ ನೆಡು
‘ಮಲ್ಲಿ’ಯ ಬಾಳಿನ ಉಯ್ಯಾಲೆಯನು ತೂಗಲು ಇದಾರು ಬಂದರು

******

ರತ್ನರಾಯ ಮಲ್ಲ


4 thoughts on “ಗಜಲ್ ಜುಗಲ್ ಬಂದಿ

  1. ಎರಡೂ ಗಜಲ್ ಗಳು ಭಾವನಾತ್ಮಕ, ಸುಂದರ ಹಾಗೂ ಸೊಗಸು..

    1. ತುಂಬು ಹೃದಯದ ಧನ್ಯವಾದಗಳು ಜೀ ಮೇಡಂ

  2. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಜುಗಲ್ಬಂದಿ ಅದಕ್ಕೆ ಇಬ್ಬರು ಗಜಲಕಾರರಿಗೆ ಹಾರ್ದಿಕ ಅಭಿನಂದನೆಗಳು

  3. ಒಂದರ ಭಾವ ತುಂಬಿ ಇನ್ನೊಂದು ಭಾವ ಮೂಡಿ ಬಂದ ಗಜಲ್ ಗಳು ಚೆಂದ.. ಇಬ್ಬರಿಗೂ.. ಅಭಿನಂದನೆಗಳು

Leave a Reply

Back To Top