ಕಾವ್ಯ ಸಂಗಾತಿ
ಮಾಗಿದಾಗಲೆಲ್ಲ ಚಿತ್ರಗಳು
ಅದೊ
ಮಾಂಸ ಮಜ್ಜೆಯ ಚಿತ್ರ
ಅಲುಗಾಡುತ್ತಿದೆ ಗಾಳಿ ಬಿರುಗಾಳಿಗೆ
ಕಂಪಿಸುತ್ತಿದೆ ಚರ್ಮ
ಗೂಡಿನ ಗಂಟ ಗುಟುರು
‘ಕಸಿದುಕೊಳ್ಳುವೆ
ಸ್ಥೂಲ ಶರೀರ
ಬಾ ಹತ್ತಿರ’
ನೇತ್ರಗಳ ನೆರಳು ಪಾರಿಜಾತದ ಘಮಲು
ಖಾಲಿಯಾಗಿವೆ ಅತಿಥಿ ಗೃಹಗಳು
ದೂರದಲೆಲ್ಲೊ ಹಕ್ಕಿ ಚಿತ್ರ ಹಾಡುತ್ತದೆ
ಭಾಗ್ಯದ ಬಾಗಿಲು ತೆರೆದಿದೆ
ಮುಚ್ಚುವ ಮುನ್ನವೇ
ಪುಟ ಪುಟದ ನೆತ್ತರ ದನಿಯಲ್ಲೂ
ಹಾಳು ಹರಟೆಗಳು
ಆತ್ಮೋದ್ಧಾರ ಗೀತಗಳ
ಸೂರ ಮುರುಟಿಹ ಚಿತ್ರಗಳು
ಪರವಾನಿಗೆ ಗುಳ್ಳೆಗಳ
ರವಾನೆಯ ಹೊರಳುಗಳು
ನೆನಪಿಸುತ್ತವೆ
ತಾಯ್ನೆಲದ ರೈಲು ಚಿತ್ರ
ಅನಂತ ಮೆಟ್ಟಿಲ ಇಬ್ಬನಿಯೊ
ತುಂಬಿದೆ ಬಣ್ಣ
ಮಗುವಿನ ಚಿತ್ರಕ್ಕಾಗುವಷ್ಟು
ಒತ್ತೆಯಾಳು ಕಣ್ಣ ಬೆಳಕಿನ ಕೂಳು
ಉಣ್ಣುವಾಗಲೆಲ್ಲ ನಾಲಿಗೆ ಚಿತ್ರವೂ
ಅಣಕಿಸುತ್ತದೆ
ಸಂಧಿಸುವಾಗಲೆಲ್ಲ ಧೃವ ಧೃವಗಳು
ಕಣ್ಣೊದ್ದೆಯಾದ ಚಿತ್ರಗಳು
ಮೌನಕ್ಕೆ ಜಾರುವ ಕವಿತೆಗಳು
ಮಾತಿಗಿಳಿದಾಗಲೆಲ್ಲ ಅಮ್ಮನ ಹಾಲುಣಿಸೊ ಚಿತ್ರ
ಸ್ಥಬ್ದವಾಗುತ್ತದೆ
ಹರಿದು ಬಿಸಾಡು ಎಡ ಪಾರ್ಶ್ವವನ್ನಾದರೂ
ನೀರವ ಇರುಳಲ್ಲೂ ಕಾಡುವ ಮಗ್ಗುಲು
ಗೆಲ್ಲಲಾಗದ ಬಲೆಯ ಹಕ್ಕಿ ಹಾಡು
ಮೂಕನ ಚಿತ್ರದ ಮಾತು
ಎದೆಗಿಳಿಯುತ್ತವೆ
ಮಾಗಿದಾಗಲೆಲ್ಲ
ಅಶೋಕ ಹೊಸಮನಿ