ಸೋಮಣ್ಣನ ಸಂಕಟಗಳು

ಹಾಸ್ಯ ಲೇಖನ

ಸೋಮಣ್ಣನ ಸಂಕಟಗಳು

Seller, Jaipur Milk Market | India photography, Figure photography, Indian  photography

ಸೋಮಣ್ಣ ನಮ್ಮ ಮನೆಗೆ ಹಾಲು ಹಾಕಲು ಬರುತ್ತಾರೆ.ಮನೆ ಕಡೆ ಹೊಲ,ಗದ್ದೆ ,ತೋಟ ಅಂತ ಜಮೀನು ಕೂಡ ಚೆನ್ನಾಗಿದೆ.ಒಂದಷ್ಟು ಮನೆ ಕಟ್ಟಿ ಬಾಡಿಗೆ ಕೂಡ ಕೊಟ್ಟಿದ್ದಾರೆ.ಇಷ್ಟು ಆದಾಯ ಸಾಲದು ಅಂತ ಡೈರಿ ಏಜೆನ್ಸಿ ಕೂಡ ತೊಗೊಂಡು ಮನೆ ಮನೆಗೆ ಹಾಲು ಹಾಕುತ್ತಾರೆ.ಒಟ್ಟಾರೆಯಾಗಿ ಮನೆ ಕಡೆ ಚೆನ್ನಾಗಿದ್ದಾರೆ.

ಸೋಮಣ್ಣ ಒಳ್ಳೆ ಹಸನ್ಮುಖ ವ್ಯಕ್ತಿ.ಹಾಲು ಕೊಡಲು ಬಂದಾಗ ,ನನಗೆ ರಜೆಯಿದ್ದ ದಿನವಾಗಿ, ಒಂದಷ್ಟು ಬಿಡುವಿದ್ದರೆ ಒಂದು ನಾಲ್ಕು ಕಷ್ಟ ಸುಖದ ಮಾತನಾಡಿ ಹೋಗುತ್ತಾರೆ.ಅಂತಹ ಒಂದು ದಿನ ಮಾತಾಡಿಕೊಂಡು”ಏನ್ ಸೋಮಣ್ಣ ,ಚೆನ್ನಾಗಿದ್ದೀರಾ? ಮಕ್ಳು  ಏನ್  ಮಾಡ್ಕೊಂಡವ್ರೆ?” ಅಂತ ಕೇಳಿದೆ.

ಸೋಮಣ್ಣ ನಿಟ್ಟುಸಿರು ಬಿಡುತ್ತಾ,”ಏನ್ ಚಂದ ಬುಡಿ ಮೇಡಂ,ಯಾಕಾದ್ರೂ ಮದ್ವೆಯಾಗಿ ಮಕ್ಳು ಮಾಡ್ಕೊಂಡೆ ಅಂತ  ಆಗ್ಬುಟ್ಟದೆ”  ಎಂದರು.

ನನಗೆ ಆಶ್ಚರ್ಯವಾಯಿತು.” ಅಲ್ಲ ಸೋಮಣ್ಣ,ಇಬ್ರೂ ಮಕ್ಳನ್ನ  ಎಂಜಿನಿಯರಿಂಗ್  ಓದ್ಸಿದ್ದಿರಾ,ಒಳ್ಳೆ ಮಕ್ಳು ನಿಮ್ಮವು, ಅದ್ಯಾಕೆ  ಹಂಗಂತಿರ.?” ಅಂದೆ.

ಸೋಮಣ್ಣ,” ಓದಕ್ಕೇನೋ ಓದ್ದೋ,ಆದ್ರೆ ಕೆಲ್ಸವೇ  ಸಿಕ್ಕಿಲ್ಲ  ನೋಡಿ, ಏನ್ಮಾಡೋದು?”  ಅಂದ್ರು.

ನನಗೆ  ಯಾವಾಗಲೋ  ಒಂದು  ಸಾರಿ  ಅವರು ” ಮಗ ಕ್ಲಾಸ್ ಒನ್ ಕಂಟ್ರಾಕ್ಟರ್  ಆಗಿ ಕೆಲ್ಸ ಮಾಡ್ತಾ  ಅವ್ನೆ,” ಅಂದಿದ್ದು  ನೆನಪಾಯಿತು. ಅದಕ್ಕೆ  ಕೇಳಿದೆ, “ಯಾಕೆ? ಕಾಂಟ್ರಾಕ್ಟ್  ಮಾಡ್ಸೋದು  ಬಿಟ್  ಬಿಟ್ನ,” ಎಂದಿದ್ದಕ್ಕೆ

” ಕಾಂಟ್ರಾಕ್ಟ್ ಏನೋ  ಮಾಡುಸ್ತ  ಅವ್ನೆ, ದುಡ್ಡು  ವಸಿ ಪರವಾಗಿಲ್ಲ ಮಾಡವ್ನೆ , ಆದ್ರೆ  ಅವರವ್ವಂಗೆ  ಸಮಾಧಾನ್ವೆ ಇಲ್ಲ. ದಿನಾ ಬೆಳಿಗ್ಗೆ ಎದ್ರೆ,” ಮಗಂಗೆ ಗೋರ್ ಮೆಂಟ್  ಕೆಲ್ಸ  ಕೊಡುಸ್ನಿಲ್ಲ  ನೀನು,” ಅಂತ ಹಂಗುಸ್ತಳೆ..ನೀವೇ  ಹೇಳಿ  ಮೇಡಂ  ಈಗ  ಗೋರ್ ಮೆಂಟ್ ಕೆಲ್ಸ ಅಷ್ಟು ಸುಲಭಕ್ಕೆ ಸಿಕ್ಕದಾ? ಕಿರಿಮಗನೂ ಎಸ್ ಐ ಆಗ್ಬೇಕು ಅಂತ ಮೂರ್ ಸತಿ ಪರೀಕ್ಷೆ ಬರ್ದ,ಫಿಸಿಕಲ್ ಆಯ್ತದೆ, ಬರೆಯೋದ್ರಲ್ಲಿ ಹೊಯ್ತದೇ,ಇವ್ಳು ‘ನಮ್ಮ ಕಡೆವ್ರು ಮಿನಿಸ್ಟ್ರು ಆಗವ್ರಲ್ಲ ಅವ್ರ ಕೇಳಿ ಕೊಡ್ಸಿ’,ಅಂತ ಜೀವ ತಿಂತಾವ್ಳೆ.”ಲೆ, ಈಗ ಕಾಲ ಕೆಟ್ಟೋಗದೆ  ಕಣೆ,ಹಿಂದ್ಲಂಗಲ್ಲ, ಎಲ್ಲಾ ಆನ್ಲೈನ್ ಮಾಡ್ಬುಟ್ಟವ್ರೆ. ಯಾರಿಗ್  ಕೆಲ್ಸ ಕೊಟ್ಟವ್ರೆ,ಮೆರಿಟ್  ಎಷ್ಟು ,ಎಲ್ಲಾ ಕಂಪ್ಯೂಟ್ರು ತೋರಿಸಿ ಬುಡ್ತದೆ. ಹಂಗೆ  ಹಿತ್ಲು ಬಾಗ್ಲಿಂದ ಕೆಲ್ಸ ಕೊಡ್ಸಕ್ಕೆ  ಹೋದ್ರೆ ಬಾಕಿ ಹೈಕ್ಳು ಬುಡಕ್ಕಿಲ್ಲ,ಕೇಸ್ ಹಾಕೊತ್ತವೆ, ಆ ಮಿನಿಸ್ಟ್ರು ಅವನ ಹಕ್ಕಳಿಗೇ ಕೆಲ್ಸ ಕೊಡ್ಸಕ್ಕಾಕ್ಕಿಲ್ಲ, ಇನ್ನು ನಮ್ ಹೈಕ್ಳಿಗೆ ಎಲ್ಲಿಂದ  ಕೊಡ್ಸಾನು? ,ಸುಮ್ನಿರು  ಅಂದ್ರೂ  ಕೇಳಕ್ಕಿಲ್ಲ,”  ಎಂದು ಬೇಜಾರಿಂದ  ಹೇಳಿದರು.

” ನಿಮ್ಮ ಮನೆದೇ ಮಸ್ತಾಗಿ  ಅದಲ್ಲ,ಅದು ಸಾಲ್ದ, ಒಬ್ಬ ಕಾಂಟ್ರಾಕ್ಟ್ ಮಾಡುಸ್ಲಿ, ಇನ್ನೊಬ್ಬುನ್ನ  ಜಮೀನಿಗ್  ಬುಡಿ,” ಎಂದೆ.

“ಮೇಡಂ,ಅದು ಆಕ್ಕಿಲ್ವಂತೆ  ಅವಳ್ಗೆ, ‘ಹುಡ್ಗ  ಕೆಲ್ಸದ್ ಮೇಲವ್ನೆ  ಅಂದ್ರೆ  ಒಳ್ಳೆ  ಕಡೆ  ಹೆಣ್  ಕೊಡ್ತರೆ,ಇಲ್ದಿದ್ರೆ ಯಾರ್  ಕೊಡ್ತರೆ?’  ಅಂತಳೆ.’ ಈಗ ನಾನ್  ಕೆಲ್ಸದಲ್ಲಿ ಇಲ್ದಿದ್ರೂ  ನೀನು  ನನ್ನ  ಮದ್ವೆ ಆದ್ಯಲ್ಲ, ಹಂಗೇ ಅವುಕ್ಕೂ ಯಾರಾದ್ರೂ ಸಿಕ್ತಾರೆ ಬುಡು’,ಅಂದ್ರೆ, “ನಮ್ಮಪ್ಪಂಗೆನೋ ತಲೆ ಕೆಟ್ಟಿತ್ತು ,ನಿಂಗ್ ಕೊಟ್ಟ, ಈಗ್ಲವ್ರು  ಕೊಟ್ಟಾರಾ?” ಅಂತಳೆ ಮೇಡಂ, ಹೆಚ್ಗೆ  ಓದಿಲ್ಲ  ಮೇಡಂ  ಅವ್ಳು, ಆದ್ರೂ ಮಾತಾಡ್ ಬೇಕಾದ್ರೆ ಬರೀ ಲಾ ಪಾಯಿಂಟೇ  ಬತ್ತವೆ .ನಾನ್  ಏನ್ ಹೇಳಿದ್ರೂ  ಕೇಳಕ್ಕಿಲ್ಲ. ನಂಗೆ ರೋಸಿ ಹೋಗದೆ.ಯಾಕಾದ್ರೂ ಮದ್ವೆಯಾಗಿ ಮಕ್ಳು ಹುಟ್ಟುಸ್ದೆ,ಅಂತ  ದಿನಾ  ಕೊರಗಂಗ್  ಆಗದೆ,” ಅಂತ ಹೇಳಿ, “ಬತ್ತಿನೀ ಮೇಡಂ, ಇನ್ನೂ ಸುಮಾರ್ ಮನೆಗೆ ಹಾಲ್ ಹಾಕ್ಬೇಕು.” ಅನ್ನುತ್ತಾ ಹೋದರು.ನಾನು ನಗು ತಡೆದುಕೊಂಡು ಒಳಬಂದೆ.


3 thoughts on “ಸೋಮಣ್ಣನ ಸಂಕಟಗಳು

  1. ಸಮತ ಮೇಡಂ ಹಳ್ಳಿ ಭಾಷೆ ಆಳಕ್ಕೆ ಇಳಿದು ಹಳ್ಳಿಗರ ಮನದಲ್ಲಿ ಮನೆ ಮಾದ್ದೀರಾ. ನಿಮ್ಮ ಭಾಷಾ ಕೌಶಲ್ಯ ಅಮೋಘ.ತುಂಬಾ ಚೆನ್ನ್ನಾಗಿದೆ.

Leave a Reply

Back To Top