ಕಾವ್ಯ ಸಂಗಾತಿ
ಸಾವಿನ ಸಾಂಗತ್ಯದಲಿ
ಮಧುಸೂದನ ಮದ್ದೂರು
ಸಾವೆಂಬ ಸೂತಕದ ಹಕ್ಕಿ ರಕ್ಕೆ ಬಿಚ್ಚಿ ಹಾರುತ್ತಿದೆ
ಯಾವ ಜೀವಗಳೆಂಬೋ ಹಣ್ಣ ಕಚ್ಚಿ ತಿಂದು ರಕ್ಕೆ ಪಟಪಟಿಸಿ
ಗಗನದ ಚಿಕ್ಕೆಯಾಗಲಿದೆಯೋ
ಬಲ್ಲವರು ಯಾರು ?
ಸಾವೆಂಬ ಮಾಂತ್ರಿಕನ
ಮಂತ್ರಬೂದಿಯ
ಸೆಳತೆಗೆ ಸಿಲುಕಿ ಮಾಯವಾಗುವ ಮಾಯಕಾರರೆಷ್ಟೋ
ಬಲ್ಲವರು ಯಾರು?
ಸಾವೆಂಬ ಬುಟ್ಟಿಯಲಿ
ಕಣ್ಕಟ್ಟಿನ ಯಕ್ಷಿಣಿಕಾರನ
ಯಕ್ಷಿಣಿ ಕೋಲಿನ
ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ
ಬಲ್ಲವರು ಯಾರು?
ಬಡವ-ಬಲ್ಲಿದ
ಅಧಿಕಾರಸ್ಥ-ವ್ಯವಹಾರಸ್ಥ
ಕಲೆಕಾರ-ಓಲೆಗಾರ
ಯಾಂತ್ರಿಕ-ಮಾಂತ್ರಿಕ
ವಿಜ್ಞಾನಿ-ಅಜ್ಞಾನಿ
ಎಂಬೋ
ಬೇಧ ಭಾವ ಎಣಿಸದ
ಸಾವೆಂಬೋ
ಸಾಹುಕಾರನೆದರು
ಚೆಲ್ಲಾಟಗಾರನೆದುರು
ಗೋಣು ಚೆಲ್ಲಲೇಬೇಕಲ್ಲವೇ…?
ಸಾವಿನ ಮುಂದೆ ಎಲ್ಲರೂ ಒಂದೇ ಎಂಬ ಸಂದೇಶವನ್ನು ಚನ್ನಾಗಿ ನಿರೂಪಿಸಿರುವಿರಿ.