ಅಶೋಕ್ ಹೊಸಮನಿಯವರ ಕವಿತೆಗಳು
ದಿನದ ನಾಯಿಯೂ
ಒಣಗಿದೆ ಆಕಾಶ ದಿನದ ಅನ್ನಕ್ಕೆ
ಬತ್ತಿದೆ ನಾಲಿಗೆ ಪರಿತಪಿಸುತ್ತಲೇ
ದಿನದ ಉಸಿರು
ಅರಸುತ್ತಲೇ ಒಲೆ ದಿನದ ತಾಯಿಯೂ
ಉಣ್ಣುತಿದ್ದಾಳೆ ಬಯಲ ಹುಡಿ ಕಿಡಿ
ಪ್ರತಿಧ್ವನಿಸಿವೆ ನದಿಗಳು ದಿನದ ದನಿಗೆ
ಮಗುಚಿದೆ ತೊಟ್ಟಿಲು ದಿನದ ಕಾಯಕೆ
ರಚ್ಚೆ ಹಿಡಿದಿದೆ ಭ್ರಂಹಾಂಡ ದಿನದ ಮಿಲನಕೆ
ಕಾಣೆಯಾಗಿದ್ದಾನೆ ದಿನದ ಒಡನಾಡಿ
ಉಗುಳುತಿದೆ ಆತ್ಮವ ಬೊಗಳಿ ಬೊಗಳಿ ದಿನದ
ನಾಯಿಯೂ
ಆದಿ ಅನಾದಿಯ ಗರ್ಭಕ್ಕಿಳಿದಿವೆ ದಿನದ ಕಪ್ಪು ಅಕ್ಷರಗಳೂ
******************
ಹೊಳೆ ಸುಳಿ ರೆಕ್ಕೆಗಳು
ನೀ ನಡೆದ ದಾರಿಯಲ್ಲಾದರೂ ಯಾವ ದೇವರಿದ್ದಾನೆ ಹೇಳು
ಎಂಥ ಕರುಳಾದರೂ ಅಂಟಿದೆ ನಿನ್ನ ಬೇರಿಗೆ ಹೇಳು
ಗಾಯದಿಂದ ಗಾಯವ ಸ್ಪರ್ಶಿಸಿದೆಯಾ ಹೇಳು
ಅದೆಂಥ ಮಾಯಕಾರನ ನಗೆ ಸೂಸಿದೆ ಹೇಳು
ನಕ್ಷತ್ರ ನಕ್ಷತ್ರವ ದರ್ಶಿಸುವುದ ಹೇಗೆ ಹೇಳು
ಚಹಾದ ಹಬೆಯನ್ನಾದರೂ ಹುಟ್ಟಿದ ಕ್ವಾಣಿ ಕುಡಿದೀತು ಹೇಗೆ ಹೇಳು
ಹೊಳೆ ಸುಳಿ ರೆಕ್ಕೆಗಳೆಷ್ಟು ಹೇಳು
ನಿರೀಕ್ಷೆಯ ದಿನವನ್ನಾದರೂ ದಾಟಿಸುವುದ ಹೇಗೆ ಹೇಳು
ಮಾರ್ಮಿಕವಾಗಿವೆ… ಅಭಿನಂದನೆಗಳು ಗೆಳೆಯ