ಕಾವ್ಯ ಸಂಗಾತಿ
ದೀಪಾವಳಿ
ಬಾಪು ಗ. ಖಾಡೆ
ತಳಿರು-ತೋರಣದ ಚಿತ್ತಾರ ಬಾಗಿಲು
ರಂಗವಲ್ಲಿಯ ಸಿಂಗಾರ ಬಯಲು
ಸಡಗರ ಸಂಭ್ರಮ ಸುಳಿಸುಳಿದಾಡಲು
ಮನೆ-ಮನೆಯಲ್ಲಿ ದೀಪೋತ್ಸವ
ಹೂ ಬಾಣ ಪಟಾಕಿ ಸುರು-ಸುರು ಬತ್ತಿ
ಆಕಾಶ ಬುಟ್ಟಿಯ ಮಿನುಗುವ ಜ್ಯೋತಿ
ಸಾಲು ದೀಪಗಳ ಹೊಣ್ಣಿನ ಕಾಂತಿ
ಮನೆ-ಮನೆಯಲ್ಲಿ ದೀಪೋತ್ಸವ
ನಗುಮೊಗದಿಂದಲಿ ನಾರಿಯರೆಲ್ಲರೂ
ಬಂಧು-ಬಳಗಕೆ ಆರತಿ ಬೆಳಗಿ
ಸವಿ ಸವಿ ಮಾತಲಿ ಸಿಹಿಯನು ಹಂಚಲು
ಮನೆ-ಮನೆಯಲ್ಲಿ ದೀಪೋತ್ಸವ
ಮಹಾಲಕುಮಿಗೆ ಮಂಗಳದಾರುತಿ
ಅಂಗಡಿಯಲ್ಲಿ ಹೊಸ ಲೆಕ್ಕದ ಪುಸ್ತಕ
ಶುಭ ಕಾರ್ಯಕ್ಕೆ ಬಲಿಪಾಡ್ಯಮಿ
ಮನೆ ಮನೆಯಲ್ಲಿ ದೀಪೋತ್ಸವ
ಕಾರ್ತಿಕ ಮಾಸದ ಮಾಗಿಯ ಚಳಿಗೆ
ಸಗ್ಗವೇ ಇಳಿದಿದೆ ನಮ್ಮೀ ಧರೆಗೆ
ಚಿಣ್ಣರ ಕಣ್ಣಲ್ಲಿ ಬೆಳ್ಳಿಯ ಮಿಂಚು
ಮನೆ-ಮನೆಯಲ್ಲಿ ದೀಪೋತ್ಸವ