ಅಂಕಣ ಸಂಗಾತಿ

ಗಜಲ್ ಲೋಕ

ಸಾಲಿಯವರ ಗಜಲ್ ಉದ್ಯಾನವನ…

ನಮಸ್ಕಾರ…

ಎಂದಿನಂತೆ ಇಂದೂ ಸಹ ನಾಡಿನ ಖ್ಯಾತ ಗಜಲ್ ಕಾರರೊಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಬಂದಿದ್ದೇನೆ. ಓದಲು ತಾವು ಕಾತುರರಾಗಿದ್ದೀರೆಂದು ಬಲ್ಲೆ. ಸಮಯವನ್ನು ಹಾಳು ಮಾಡದೆ, ನೇರವಾಗಿ ವಿಷಯಕ್ಕೆ ಬರುತ್ತೇನೆ.

ಪ್ರೇಮಿಯ ಕಾರಣ ಇತರ ಎಲ್ಲ ಕಾರಣಗಳಿಂದ ಪ್ರತ್ಯೇಕವಾಗಿದೆ ಪ್ರೀತಿಯು ದೇವರ ರಹಸ್ಯಗಳ ಖಗೋಳ

                                   –ರೂಮಿ

             ಉರ್ದು ತುಂಬಾ ಕಾವ್ಯಾತ್ಮಕ ಭಾವದ ಭಾಷೆ.‌ ‘ಕಾವ್ಯಾತ್ಮಕ ಭಾಷೆ’ ಎಂದರೆ ಆ ಭಾಷೆಯೂ ಶಬ್ಧಗಳಿಗಿರುವ ಅರ್ಥಬಾಹುಳ್ಯ ಎಂದರ್ಥ. ಇದು ಶಿಷ್ಟತೆಯ-ಸಭ್ಯತೆಯ ಸಂಸ್ಕೃತಿಯನ್ನು ಒಳಗೊಂಡಿದ್ದು, ಸುಸಂಸ್ಕೃತರ ಭಾಷೆಯಾಗಿದೆ. ಇದು ಶಾಯರಿಗೆ, ಅದರಲ್ಲೂ ಗಜಲ್ ಗೆ ಹೇಳಿ ಮಾಡಿಸಿದಂತಹ ಭಾಷೆ!! ಅದರ ಮೃದುತ್ವ, ಆರ್ತತೆ, ಲಾಲಿತ್ಯ, ನಾಲಿಗೆಯ ಮೇಲೆ ಸಕ್ಕರೆಯಂತೆ ಕರಗುವ, ಕಿವಿಗಳಲ್ಲಿ ಗಾಜಿನ ಗೆಜ್ಜೆಯಂತೆ ಕುಣಿಯುವ ಅದರ ಬಾಗು ಬಳಕು ಬೇರೆ ಯಾವ ಭಾಷೆಗೂ ದಕ್ಕಿಲ್ಲ!! ಈ ಹಿನ್ನೆಲೆಯಲ್ಲಿ ಗಜಲ್ ಪ್ರತಿ ಓದುಗನ ಹಾಗೂ ಪ್ರತಿ ಕೇಳುಗನ ಹೃದಯದೊಂದಿಗೆ ಸಂವಾದ ಮಾಡುತ್ತದೆ. ಇಂತಹ ಉರ್ದು ಗಜಲ್ ಪರಂಪರೆಯ ಚೌಕಟ್ಟನ್ನು ಮೀರದೆ, ಕನ್ನಡಕ್ಕೆ ಅತ್ಯಂತ ಸುಂದರವಾದ ಹಾಗೂ ರಸಪೂರ್ಣವಾದ ಗಜಲ್ ಗಳನ್ನು ನೀಡಿದ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು. ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಇವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

       ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸಾಲಿಯವರು ಕವಿಗಳಾಗಿ, ಕಥೆಗಾರರಾಗಿ, ಅನುವಾದಕರಾಗಿ, ಗಜಲ್ ಕಾರರಾಗಿ  ಹಾಗೂ ಉತ್ತಮ ಸಂಪಾದಕರಾಗಿ ಹೆಸರು ಮಾಡಿದ್ದಾರೆ. ಇವರ ಒಟ್ಟು 26 ಕೃತಿಗಳಲ್ಲಿ 13 ಕೃತಿಗಳು ಸೃಜನಶೀಲತೆಗೆ ಸಾಕ್ಷಿಯಾಗಿದ್ದರೆ 10 ಕೃತಿಗಳು ಅನುವಾದವಾಗಿವೆ. ಇನ್ನೂ ಉಳಿದ 03 ಕೃತಿಗಳು ಸಂಪಾದನೆಯಾಗಿವೆ. ಇವರ ‘ಮೌನ’ ಎಂಬ ಗಜಲ್ ಸಂಕಲನವು ಓದುಗರ ಹೃದಯವನ್ನು ಗೆದ್ದು ಹಲವು ಪ್ರಕಟಣೆಗಳನ್ನು ಕಂಡಿದೆ. ಇನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ‘ಕನ್ನಡ ಗಜಲ್’ ಎಂಬ ಸಂಪಾದಿತ ಕೃತಿಯು ಗಜಲ್ ಸಾಹಿತ್ಯ ಲೋಕದಲ್ಲಿ ಒಂದು ಮೈಲಗಲ್ಲಾಗಿದೆ. ಇದು ಹಲವಾರು ಗಜಲ್ ಕಾರರ ಗಜಲ್ ಗಳನ್ನು ಒಳಗೊಂಡಿದ್ದು ಗಜಲ್ ಕಾರರಿಗೆ ಆಕರ ಗ್ರಂಥವಾಗಿದೆ. ಗಜಲ್ ನ ಸರಿಯಾದ ಮಾದರಿಯನ್ನು ತಿಳಿಸಿಕೊಡುವ, ಈ ಪ್ರಕಾರವನ್ನು ಎಲ್ಲ ನೆಲೆಗಳಿಂದ ಪರಾಮರ್ಶನಕ್ಕೊಳಪಡಿಸಿರುವ ವಿದ್ವತ್ಪೂರ್ಣ ಪ್ರಬಂಧಗಳು ಮತ್ತು ಪ್ರಾತಿನಿಧಿಕ ರಚನೆಗಳ ಸಂಗ್ರಹ, ಸಂಪಾದನೆಯೇ ‘ಗಾಳಿಗೆ ಬಳುಕಿದ ಬೆಳಕು’ ಕೃತಿ. ಇದು  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್ … ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಇವರು ಅನ್ಯ ಭಾಷೆಯ ಹಲವು ಮೌಲ್ಯಿಕ ಕೃತಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಅವುಗಳಲ್ಲಿ ‘ಇಂದ್ರಸಭಾ’ವೂ ಒಂದು. ಇದು ಉತ್ತಮ ಸದಭಿರುಚಿಯ ಗಜಲ್ ಗಳಿಂದ ಕೂಡಿದ್ದು, ಓದುಗರ ನೆಚ್ಚಿನ ಕೃತಿಯಾಗಿದೆ.

       ಸಾಲಿಯವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಲವು ಪ್ರಶಸ್ತಿ, ಪುರಸ್ಕಾರಗಳು, ಗೌರವ, ಸನ್ಮಾನಗಳು ಲಭಿಸಿವೆ. ಅವುಗಳಲ್ಲಿ ಕಣವಿ ಕಾವ್ಯ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಗುಲ್ಬರ್ಗಾ ವಿ.ವಿ ರಾಜ್ಯೋತ್ಸವ ಪುಸ್ತಕ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ (ಎರಡು ಸಲ) ಕಟ್ಟಿಮನಿ ಯುವ ಸಾಹಿತ್ಯ ಪ್ರಶಸ್ತಿ, 2020ನೇ ಸಾಲಿನ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ…. ಮುಂತಾದವುಗಳು. ಇವರ ಬರವಣಿಗೆಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇವರ ಕೆಲವು ಬಿಡಿ ಬಿಡಿ-ಕತೆಗಳು ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷಿಗೆ ಅನುವಾದಗೊಂಡಿವೆ.

       ಗಜಲ್ ಕಾವ್ಯ ಪ್ರಕಾರವು ಇಂದು ಸಾಹಿತ್ಯ ಪ್ರೇಮಿಗಳಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸುತ್ತಿದೆ, ಅದೂ ತನು-ಮನಗಳೆರಡಕ್ಕೂ!! ಈ ನೆಲೆಯಲ್ಲಿ ಗಜಲ್ ಗಜಲ್ ಗೋ ಅವರ ಅಹಮಿಕೆಯನ್ನು ನಿರಸನಗೊಳಿಸುತ್ತದೆ. ಯಾವ ಶ್ರೇಷ್ಠ ಗಜಲ್ ಅಹಮಿಕೆಯಿಂದ ರೂಪುಗೊಳ್ಳುವುದಿಲ್ಲ. ಅಹಮಿಕೆ ಯಾವ ಮಹತ್ವದ ವಸ್ತುವಿಗೂ ಜನ್ಮ ನೀಡದು. ಅಂತೆಯೇ ಗಜಲ್ ಎಂದರೆ ಬದುಕುವ ಕಲೆ, ಉಸಿರಾಡುವ ವಿಧಾನ, ಪ್ರೀತಿಯ ಊರುಗೋಲು! ಹೃದಯವನ್ನು ವಿಹ್ವಲಗೊಳಿಸುವ ಅನುಕ್ತ ವ್ಯಥೆಯಲ್ಲಿ ಮೀಯುತ್ತಲೇ ಪ್ರೇಮ ಮತ್ತು ಸೌಂದರ್ಯದ ಬಿಸಿಲು ನೆರಳಿನ ಬೀದಿಯಲ್ಲಿ ವಿಹರಿಸಿದಂತಹ ಮಧುರಾನುಭವವನ್ನು ಗಜಲ್ ನೀಡುತ್ತದೆ. ತನ್ನ ಕೊರಳ ಇನಿದನಿಯಿಂದಲೇ ಜಗದ ಕರುಳಿನ ಮಿಡಿತವನ್ನು ಆಲಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಮಧುಬಾಲೆಯ ಅಂತಃಕರಣದ ಬೊಗಸೆಯಲ್ಲಿ ಇಡೀ ಬ್ರಹ್ಮಾಂಡವೇ ಇದೆ. ಕನ್ನಡ ಗಜಲ್ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವವರಲ್ಲಿ ಸಾಲಿಯವರೂ ಪ್ರಮುಖರು. ಇವರ ಗಜಲ್ ಗಳಲ್ಲಿ ಭಾವತೀವ್ರತೆ, ರೂಪಕಗಳ ದಿಬ್ಬಣವಿದೆ, ಸಂಯಮದ ನೆಲೆಯಲ್ಲಿ ಹುಡುಕುವ ಸತ್ಯದ ಹುಡುಕಾಟವಿದೆ. ಇಡೀ ಪರಪಂಚವೇ ತಮ್ಮ ತಮ್ಮ ನಿರಾಳತೆಯನ್ನು ಅರಸುತ್ತ ದೂರ ಉಳಿದ ಮಾನವೀಯ ದುರಂತವನ್ನು ಸಾಲಿಯವರು ತಮ್ಮ ಗಜಲ್ ಗಳಲ್ಲಿ ಸೆರೆ ಹಿಡಿದಿದ್ದಾರೆ.

ಜೋರು ಬಿರುಗಾಳಿಗೆದುರಾಗಿ ಪುಟ್ಟ ಹಣತೆಯನಿಟ್ಟಿದ್ದು ನಿಮ್ಮದೇ ತಪ್ಪು

ಬೀಸು ಪ್ರವಾಹಕ್ಕೆದುರು ಸಣ್ಣ ನಾವೆಯ ತೇಲಿಬಿಟ್ಟಿದ್ದು ನಿಮ್ಮದೇ ತಪ್ಪು

ಈ ಷೇರ್ ಸಾಮಾಜಿಕ ವ್ಯವಸ್ಥೆಯ ಅಸಮಾನತೆಯ ವಿರುದ್ಧ ಮೌನ ಪ್ರತಿಭಟನೆ ಮಾಡುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಜೋಶ್ ಜೊತೆಗೆ ಹೋಶ್ ಬೇಕು ಎಂಬುದನ್ನು ಅರಹುತ್ತಿದೆ. ಈ ಹಿನ್ನೆಲೆಯಲ್ಲಿ ‘ನಿಮ್ಮದೇ ತಪ್ಪು’ ಎಂಬ ರದೀಫ್ ತುಂಬಾ ಸಶಕ್ತವಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವಂತಿದೆ.

ಸಾಲಿ ಆಡಿದ ಮಾತಿಗೇನುಂಟು? ಒಂದೇ ಹುಟ್ಟು, ಅರ್ಥ ಮತ್ತು ಸಾವು

ಸುಮ್ಮನಿದ್ದೇ ಸಾವಿರ ಮಾತಾಡುತನೂರು ಭಾವಗಳ ಮೆರೆಸಿಹುದು ಮೌನ

ಎನ್ನುವ ಮಕ್ತಾ ಮೌನದೊಂದಿಗೆ ಮಾತಿಗಿಳಿಯುತ್ತದೆ.‌ ಮಾತು ಬದುಕಿನಲ್ಲಿರುವ ವೈರುಧ್ಯಗಳನ್ನು ತೋರಿಸಿದರೆ, ಮೌನ ವೈರುಧ್ಯಗಳನ್ನು ಪರಿಚಯಿಸುತ್ತದೆ. ಅಂತೆಯೇ ಬಿಶರ್ ಇಬ್ನ್ ಹರೀತ್ ರವರು ಹೇಳಿದ ಮಾತೊಂದನ್ನು ಇಲ್ಲಿ ಉಲ್ಲೇಖಿಸಬಹುದು.

“ನಿಮಗೆ ಮಾತಾಡುವುದು ಖುಷಿಯಾಗುತ್ತದೆಂದು ಅನಿಸಿದಾಗ ಮೌನವಾಗಿರಿ! ಮೌನ ಖುಷಿ ಕೊಡುವಾಗ ಮಾತಾಡಿ!” ಸಿರಿ ಸಂಪತ್ತು ಇರುವಾಗಲೂ ಬಡತನವನ್ನು ಅನುಭವಿಸುವುದು, ಅಧಿಕಾರವಿದ್ದಾಗಲೂ ವಿನೀತ ಭಾವ ಹೊಂದಿರುವಂತಹ ಸೂಫಿ ನೆಲೆಯ ಚಿಂತನೆಯನ್ನು ಪ್ರತಿಧ್ವನಿಸುತ್ತದೆ!!

       ಪ್ರೀತಿ, ಪ್ರೇಮ, ಪ್ರಣಯ, ಮಧುಶಾಲೆ… ಮುಂತಾದ ಮೂಲ ಗುಣಗಳೊಂದಿಗೆ ಕಾಲಕ್ಕನುಗುಣವಾಗಿ ತನ್ನನ್ನು ತೆರೆದುಕೊಳ್ಳುತ್ತಿರುವ ಗಜಲ್ ನ ಹೆಜ್ಜೆ ಗುರುತುಗಳನ್ನು ಚಿದಾನಂದ ಸಾಲಿಯವರ ಗಜಲ್ ಗಳಲ್ಲಿ ಗುರುತಿಸಬಹುದು. ಇಂತಹ ನೂರಾರು ಗಜಲ್ ಗಳು ಇವರಿಂದ ಹೂರಬರಲಿ, ಅಕಾಡೆಮಿಕ ಕಾರ್ಯಾಗಾರಗಳು ನಡೆಯುವಂತಾಗಲಿ ; ಅವುಗಳು ಪ್ರಕಟವಾಗಿ ಓದುಗರ ಜ್ಞಾನದ ದಾಹವನ್ನು ತಣಿಸಲಿ ಎಂದು ಶುಭಕೋರುತ್ತನೆ.

ಪ್ರೇಮದಲಿ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳಿತು

ಇಲ್ಲವಾದರೆ ಬಳಿಕ ಪಶ್ಚಾತ್ತಾಪ ಪಡಬೇಕಾದಿತು

                     -ಬುಲ್ಲೇ ಶಾ

ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೂ ಧನ್ಯವಾದಗಳು…


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top