ಅಂಕಣ ಬರಹ
ಎಲ್ಲಾ ಒಳ್ಳೆಯದೇ ಆಗುತ್ತೆ…
ಈ ಥರದ ಮಾತುಗಳನ್ನ ನಾವು ಬಹಳಷ್ಟು ಸಾರಿ ಕೇಳಿರ್ತೇವೆ. “ಒಳ್ಳೇವ್ರಿಗೆ ಒಳ್ಳೆಯದೇ ಆಗುತ್ತೆ”, “ನಾವು ಒಬ್ರಿಗೆ ಒಳ್ಳೇದು ಮಾಡಿದ್ರೆ ದೇವರು ನಮಗೆ ಒಳ್ಳೇದು ಮಾಡ್ತಾನೆ”, “ತಾತ ಮಾಡಿದ ಪಾಪ ಮೊಮ್ನೊಗನಿಗೆ”… ಹೀಗೆ ಹಲವಾರು ಮಾತುಗಳು… ಇವೆಲ್ಲ ಬರಿಯ ಮಾತುಗಳಲ್ಲ, ಅದೊಂದು ದೈತ್ಯ ಶಕ್ತಿಯ ನಂಬಿಕೆ, ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿ.
ನನ್ನ ತಂದೆ ಒಬ್ಬ ಪ್ರಾಮಾಣಿಕ ಹೈಸ್ಕೂಲ್ ಗಣಿತದ ಮೇಷ್ಟ್ರು. ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ರೀತಿಯಲ್ಲೇ ಭಾವಿಸಿ ಪಾಠ ಹೇಳಿಕೊಟ್ಟವರು. ಅವರ ಬದುಕಿನುದ್ದಕ್ಕೂ ಅವರು ನಂಬಿದ್ದು ಒಂದೇ ಒಂದು. ನಾನು ಈ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡಿದರೆ ದೇವರು ಮುಂದೆ ನನ್ನ ಮಕ್ಕಳನ್ನ ಚನ್ನಾಗಿಟ್ಟಿರ್ತಾನೆ ಎನ್ನುವುದು. ಅದಕ್ಕೆ ಸರಿಯಾಗಿ ನಾನು ನನ್ನ ತಮ್ಮ ಓದಿ ನೌಕರಿಗೆ ಸೇರಿದ ಮೇಲೆ ಅವರಿಗೆ ಅವರ ನಂಬಿಕೆ ಮತ್ತೂ ಬಲವಾಯ್ತು. ಆದರೆ ನಮಗೆ ನಿಜ ಗೊತ್ತಿತ್ತು. ನನ್ನ ತಂದೆ ನಮಗೆ ತಿಳಿದ ಹಾಗೆ, ನಮಗೆ ಬುದ್ಧಿ ಬಂದಾಗಿನಿಂದಲೂ ಎಂದೂ ಸಂಜೆ ಮತ್ತು ಬೆಳಗಿನ ಹೊತ್ತು, ಸಮಯವನ್ನು ವ್ಯರ್ಥವಾಗಿ ಕಳೆದವರಲ್ಲ. ಬೆಳಗ್ಗೆ ಮನೆ ಪಾಠಕ್ಕೆ (ಒತ್ತಯಕ್ಕೆ ಮಣಿದು ಉಚಿತವಾಗಿ ಪಾಠ ಮಾಡುತ್ತಿದ್ದರೇ ಹೊರತು, ಅವರೆಂದೂ ಫೀಸಿಗೆ ಮನೆ ಪಾಠ ಮಾಡಿದವರಲ್ಲ… ಯಾರೋ ಕೆಲವರು ಒತ್ತಾಯ ಪೂರ್ವಕವಾಗಿ ಉಡುಗೊರೆ ಕೊಡುತ್ತಿದ್ದರಷ್ಟೇ..) ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು, ಸಂಜೆ ನಾವಿಬ್ಬರು ಮಕ್ಕಳಿಗೆ. ಅವರು ನಾನು ಮತ್ತು ನನ್ನ ತಮ್ಮ ಬೆಳೆದು ಪಿಯುಸಿ ದಾಟುವವರೆಗೂ ಎಂದೂ ಟೀವಿಯನ್ನೇ ನೋಡಲಿಲ್ಲ, ಯಾವ ಮೋಜು ಅದು ಇದು ಎಂದು ಕಾಲಾಯಾಪನೆಯನ್ನೇ ಮಾಡಲಿಲ್ಲ. ಅವರು ಮೊದಲ ಬಾರಿ ನಿರುಮ್ಮಳವಾಗಿ ಟೀವಿ ನೋಡಲು ಶುರು ಮಾಡಿದ್ದೇ, ನಾನು ನೌಕರಿ ಸೇರಿ ಮತ್ತು ನನ್ನ ತಮ್ಮ ತನ್ನ ಹೆಚ್ಚಿನ ಓದಿಗಾಗಿ ಅಂತ ಮನೆ ತೊರೆದಾಗಲೇ. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಆದರೆ ತಮ್ಮ ಇಡೀ ಬದುಕನ್ನೇ ಅವರ ವೃತ್ತಿ (ಸೇವೆ) ಮತ್ತು ಮಕ್ಕಳ ಬದುಕಿಗಾಗಿ ಮುಡುಪಾಗಿಟ್ಟ ರೀತಿ ಮಾತ್ರ ಈಗಲೂ ನನಗೊಂದು ಅಚ್ಚರಿ. ನನಗೂ ಸಹ ನನ್ನ ಮಕ್ಕಳಿಗೆ ಅಷ್ಟು ಸಮಯ ಕೊಡಲು ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾನು ನನ್ನ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವಾ ಎನ್ನುವ ಅನುಮಾನವೂ ನನಗೆ ಕಾಡಿಬಿಡುತ್ತದೆ. ಆದರೆ ಅವರ ಒಟ್ಟಾರೆ ಬದುಕೇ ಒಂದು ಪಾಠವಾಗಿ ನನ್ನ ಮುಂದಿದೆ. ನನ್ನ ಅವಶ್ಯಕತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುತ್ತಾ ನಡೆಯಬೇಕಿದೆ.
ಒಂದಂತೂ ನಿಜವಾಯಿತು. ನನ್ನಪ್ಪ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಅವರಿಗೆ ಏನನ್ನೋ ಸಾಧಿಸಬೇಕು ಎನ್ನುವ ಹಂಬಲವಿರಲಿಲ್ಲ. ಆದರೆ ತಮ್ಮ ಮಕ್ಕಳು ಸನ್ನಡತೆಯುಳ್ಳವರಾಗಿರಬೇಕು, ಸದ್ಗುಣಗಳನ್ನು ಕಲಿತಿರಬೇಕು, ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದಷ್ಟೇ ಅವರಿಗೆ ಮುಖ್ಯವಾಗಿತ್ತು. ಬೇರೆಯವರ ಒಂದು ಸಣ್ಣ ಐದು ಪೈಸೆಯನ್ನೂ ಮುಟ್ಟಬಾರದು ಎಂಬ ಪಾಠ ನಮಗೆ ಸಿಕ್ಕಿದ್ದು ಅತಿ ಸಣ್ಣ ವಯಸ್ಸಿನಲ್ಲಿ. ಇವತ್ತಿಗೂ ನಮಗಿರುವುದರಲ್ಲಿ ನಾವು ತೃಪ್ತರೇ ವಿನಃ ಮತ್ತೊಬ್ಬರ ಹಣಕ್ಕೆ ಆಸೆ ಪಡಬೇಕು ಎಂದು ಯಾವತ್ತು ಅನಿಸಿಯೇ ಇಲ್ಲ ನಮಗೆ. ಅವರು ಕೊಟ್ಟಿರುವ ಸಂಸ್ಕಾರ ಅಷ್ಟು ಗಟ್ಟಿಯಾದದ್ದು. ಇವತ್ತು ಅಪ್ಪ ಅಮ್ಮನಿಂದ ಬಹಳ ದೂರದಲ್ಲಿದ್ದು ಬದುಕುತ್ತಿದ್ದರೂ ಅವರು ಕಲಿಸಿದ ಗುಣಗಳು ಸದಾ ನಮ್ಮನ್ನು ಕಾಯುತ್ತಿವೆ, ನಡೆಸುತ್ತಿವೆ. ಕೆಟ್ಟದ್ದರ ನಡುವೆಯೂ ಒಳ್ಳೆಯದನ್ನು ಆರಿಸಿಕೊಂಡು ನಡೆಯುವುದನ್ನು ಹೇಳಿಕೊಡುತ್ತಿವೆ. ಅದರೆ ಈಗಲೂ ಅಪ್ಪ ನಂಬುತ್ತಾರೆ, “ನಾನು ನನ್ನ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಹೇಳಿಕೊಟ್ಟ ನಾಲ್ಕು ಅಕ್ಷರಗಳಿಂದಾಗಿಯೇ ದೇವರು ನನ್ನ ಮಕ್ಕಳನ್ನ ಕಾಪಾಡಿದಾನೆ” ಅಂತ. ಆದರೆ ನಾನು ನಂಬುವುದು ಮಾತ್ರ ಅವರ ಪ್ರಾಮಾಣಿಕತೆ, ನಿಸ್ವಾರ್ಥತೆ, ಪರಿಶ್ರಮ, ತ್ಯಾಗ, ಮುಗ್ಧತೆ ಮತ್ತು ಪ್ರಂಜಲ ಮನಸಿನ ಪ್ರೀತಿಯನ್ನು ಮಾತ್ರ….
ಈಗ ಯೋಚಿಸುವುದಿಷ್ಟೇ ನಾನು ನನ್ನ ಮಕ್ಕಳನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದ್ದೇನೆ?! ಅವರ ಒಂದಿಡೀ ಘನ ಬದುಕಿಗಾಗುವಷ್ಟು ದಟ್ಟ ಅನುಭವಗಳನ್ನು ನಾನು ಕಟ್ಟಿಕೊಡುತ್ತಿರುವೆನಾ?! ಅವರಿಗೆ ಎಂತಹ ಮಾರ್ಗವನ್ನು ತೋರಿಸುತ್ತಿದ್ದೇನೆ ನಾನು?! ಇವತ್ತಿನ ಅಂತರ್ಜಾಲದ ಯುಗದಲ್ಲಿ ನಮಗೆ ಮೊಬೈಲಿಗಿಂತಲೂ ಪ್ರಿಯವಾದದ್ದು ಬೇರೊಂದಿಲ್ಲ. ಕಂಪ್ಯೂಟರ್, ಟೀವಿಯನ್ನೂ ಹಿಂದಿಕ್ಕಿದೆ ಈ ಮೊಬೈಲು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವೆನಿಸತೊಡಗಿದೆ. ಊಟ ನಿದ್ರೆಯ ಜೊತೆಗೆ ನಮ್ಮ ಆಯುಷ್ಯವನ್ನೂ ಕಸಿಯುತ್ತಿವೆ ಈ ಮೊಬೈಲುಗಳು. ಸಾಮಾಜಿಕ ತಾಣಗಳೆನ್ನುವ ವರ್ಚುವಲ್ ಪ್ರಪಂಚವನ್ನೇ ಅತಿಯಾಗಿ ಹಚ್ಚಿಕೊಂಡು ಅದನ್ನೇ ಸತ್ಯ ಎನ್ನುವಂತೆ ಬದುಕುತ್ತಿದ್ದೇವೆ ನಾವು.
ಮೊನ್ನೆ ಒಂದು ಕತೆ ಓದಿದೆ. ಅದು ಬಹಳಷ್ಟು ಕಡೆ ಬಹಳಷ್ಟು ಸಮಯದಿಂದ ಹರಿದಾಡುತ್ತಿದ್ದು ನನ್ನ ಗಮನಕ್ಕೂ ಬಂದಿತ್ತು. ಅದೊಂದು ಶಾಲೆ. ಅಲ್ಲೊಬ್ಬ ಶಿಕ್ಷಕಿ. ಒಂದು ದಿನ ಆಕೆ ತನ್ನ ವಿದ್ಯಾರ್ಥಿಗಳಿಗೆ “ಮುಂದೆ ನಿಮಗೆ ಏನಾಗಬೇಕೆಂದು ಆಸೆ ಇದೆ ಎನ್ನುವುದನ್ನು ಒಂದು ಪೇಪರ್ ನಲ್ಲಿ ಬರೆದು ಕೊಡಿ” ಎನ್ನುತ್ತಾಳೆ. ಎಲ್ಲ ಮಕ್ಕಳೂ ಬರೆದುಕೊಡುತ್ತಾರೆ. ಶಿಕ್ಷಕಿ ಅವನ್ನು ಕರೆಕ್ಷನ್ ಮಾಡಲಿಕ್ಕಾಗಿ ಮನೆಗೆ ತರುತ್ತಾಳೆ. ಮನೆಕೆಲಸ, ಅಡುಗೆ, ಊಟ ಎಲ್ಲ ಮುಗಿಸಿ, ದಿನನಿತ್ಯದಂತೆ ಒಂದಷ್ಟು ಹೊತ್ತು ಮೊಬೈಲ್ ನೋಡಿ, ಮಲಗುವ ಮುನ್ನ ಆ ಪೇಪರ್ ಗಳನ್ನು ಓದಲು ಶುರುಮಾಡುತ್ತಾಳೆ. ಪಕ್ಕದಲ್ಲಿ ಅವಳ ಗಂಡ ಮೊಬೈಲ್ ನಲ್ಲಿ ಮುಳುಗಿರುತ್ತಾನೆ. ಇದ್ದಕ್ಕಿದ್ದ ಹಾಗೆ ಅವಳು ಒಂದು ಪೇಪರ್ ಓದುತ್ತಾ ಅಳಲು ಶುರು ಮಾಡುತ್ತಾಳೆ. ಆಗ ಅವಳ ಗಂಡ ಯಾಕೆ ಅಳ್ತಿದಿ ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ, ಇಲ್ಲೊಂದು ವಿದ್ಯಾರ್ಥಿಯ ಬರೆಹ ನೋಡಿ ಅಳು ಬಂತು ಎನ್ನುತ್ತಾಳೆ. ಆಗ ಗಂಡ ಏನಂಥದ್ದು ಬರೆದಿದ್ದಾನೆ ಆ ಹುಡುಗ ಎಂದು ಕೇಳುತ್ತಾನೆ. ಆಗ ಆ ಶಿಕ್ಷಕಿ ಆ ಬರೆಹವನ್ನು ಓದತೊಡಗುತ್ತಾಳೆ, “ಮಿಸ್ ನನಗೆ ದೊಡ್ಡವನಾದ ಮೇಲೆ ಒಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಯಾಕಂದ್ರೆ ಅಪ್ಪ ಅಮ್ಮ ನಂಗಿಂತ ಮೊಬೈಲನ್ನೆ ತುಂಬ ಪ್ರೀತಿಸ್ತಾರೆ. ರಾತ್ರಿ ಮಲಗುವಾಗಲು ಅದನ್ನೇ ನೋಡ್ತಾರೆ, ಬೆಳಗ್ಗೆ ಕಣ್ಣು ಬಿಟ್ಟಾಗಲೂ ಅದನ್ನೇ ನೋಡ್ತಾರೆ. ನಂಜೊತೆ ಎರೆಡು ಮಾತಾಡೋದಿಲ್ಲ, ಪ್ರೀತಿಯಿಂದ ಇರೋದಿಲ್ಲ. ಸದಾ ಮೊಬೈಲಿನಲ್ಲೇ ಮುಳುಗಿರ್ತಾರೆ. ಇನ್ನು ಕಾಲ್ ಬಂದುಬಿಟ್ಟರೆ ಮುಗೀತು. ನಾನೊಬ್ಬ ಇದೀನಿ ಎನ್ನುವುದೇ ನೆನಪಿರೋದಿಲ್ಲ ಅವರಿಗೆ. ಅದಕ್ಕೆ ನಾನೊಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಆಗ ಅಪ್ಪ ಅಮ್ಮ ನನ್ನನ್ನೇ ಪ್ರೀತಿಸ್ತಾರೆ” ಎಂದು ಓದಿ ಮುಗಿಸುತ್ತಾಳೆ. ಅಷ್ಟು ಹೊತ್ತಿಗಾಗಲೇ ಗಂಡನ ಕಣ್ಣೂ ತುಂಬಿರುತ್ತದೆ. ಎಂಥದೋ ತಪ್ಪಿತಸ್ಥ ಭಾವ ಅವನನ್ನೂ ಕಾಡತೊಡಗಿರುತ್ತದೆ. ಮತ್ತೆ ಗೊಗ್ಗರು ದನಿಯಲ್ಲಿ ಆ ಹುಡುಗ ಯಾರು ಎಂದು ಕೇಳುತ್ತಾನೆ. ಆ ಹುಡುಗ ಬೇರೆ ಯಾರೂ ಅಲ್ಲ ನಮ್ಮ ಮಗನೇ ಕಣ್ರೀ ಎನ್ನುತ್ತಾ ಮತ್ತೂ ಜೋರಾಗಿ ಅಳತೊಡಗುತ್ತಾಳೆ ಆ ಶಿಕ್ಷಕಿ.
ಇದಂತೂ ಬಹುತೇಕ ನಮ್ಮಲ್ಲರಿಗೂ ಅನ್ವಯಿಸುವ ಕತೆಯೇನೋ ಅನಿಸಿಬಿಟ್ಟಿತು ನನಗೆ. ನಾವು ನಮ್ಮ ಮಕ್ಕಳಿಗೆ ನ್ಯಾಬದ್ಧವಾಗಿ ಅವರಿಗೆ ಸಿಗಬೇಕಾದ ಸಮಯವನ್ನ ಕೊಡುತ್ತಿಲ್ಲದ ಅಪರಾಧಿಗಳು. ಇನ್ನು ಆ ಮಕ್ಕಳು ಬೆಳೆದಾದ ಮೇಲೆ ಇನ್ನೆಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಾನೆ ಸಾಧ್ಯ. ಮಕ್ಕಳು ನೋಡ ನೋಡುತ್ತಲೇ ಬೆಳೆದುಬಿಡುತ್ತಾರೆ. ಅವರ ಬೆಳವಣಿಗೆಯ ಪ್ರತಿ ಹಂತವನ್ನೂ ನಾವು ಅಚ್ಚರಿಯಿಂದ ಕಂಡು ಆನಂದಿಸಿ ಪ್ರೀತಿಸಬೇಕು. ಅದನ್ನೇ ಮಾಡದೆ ಹೋದರೆ ಮುಂದೆ ಆ ಮಕ್ಕಳು ನಮ್ಮನ್ನು ಯಾವ ಕಾರಣಕ್ಕಾಗಿ ನೆನಪಿಡಬೇಕು…
ಪೇರೆಂಟಿಂಗ್ ಕೂಡ ಬಹಳ ಜವಾಬ್ದಾರಿಯುತ ಕೆಲಸ. ಹೆತ್ತರೆ ಮಾತ್ರ ಸಾಕಾಗುವುದಿಲ್ಲ. ಮಕ್ಕಳ ಅವಶ್ಯಕತೆಗೆ ಮೀರಿ ಸೌಲಭ್ಯಗಳನ್ನು ಕೊಟ್ಟು ಗಿಲ್ಟ್ ಕಳೆದುಕೊಳ್ಳುವುದಲ್ಲ, ಅವರಿಗೆ ಕೊಡಬೇಕಾದ ಸಮಯ ಕೊಟ್ಟು ಅವರನ್ನ ಪ್ರೀತಿಯಿಂದ ಪ್ರಭಾವಿಸಬೇಕಿದೆ. ಸರಿ ತಪ್ಪುಗಳನ್ನು ಗುರುತಿಸಿ ಸರಿದಾರಿ ಕಂಡುಕೊಂಡು ನಡೆಯುವುದನ್ನು ಕಲಿಸಿಕೊಡಬೇಕಿದೆ. ಇನ್ನದಾರೂ ಒಂದಷ್ಟು ಹೊತ್ತು ಮೊಬೈಲ್ ಬಿಸಾಕಿ ನಮ್ಮ ಮಕ್ಕಳ ಜೊತೆ ಕೂತು ಒಂದಷ್ಟು ಚಂದದ ಸಮಯವನ್ನು ಕಳೆಯಬೇಕಿದೆ ಅಂತ ಅನಿಸುತ್ತಿರುವುದನ್ನು ನನ್ನಿಂದಲೇ ಶುರುಮಾಡಬೇಕಿದೆ. ಮತ್ತೆ ಎಲ್ಲಾ ಒಳ್ಳೆಯದೇ ಆಗುತ್ತೆ ಎನ್ನುವ ನಂಬಿಕೆಯ ಬೀಜವನ್ನು ಬಿತ್ತಿಕೊಂಡು ಅದು ಮೊಳೆತು ಬೆಳೆದು ಹೆಮ್ಮರವಾಗುವುದನ್ನು ಇಂಚಿಂಚೂ ಕಾಣಬೇಕಿದೆ…
**********************************
–ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಬಹಳ ಆಪ್ತವಾಗಿ ಬರೆದಿದ್ದೀರಿ….ಆಶಾ….ನಿಮ್ಮೆಲ್ಲರಿಗೂ ಇದೇ ಕಥೆ…..ಇದೇ ಅಪರಾಧಿ ಭಾವ….ಇದೇ ಚಿಂತನೆ..
ನಮ್ಮೆಲ್ಲರಿಗೂ… ಆಗಬೇಕು
ಚೆನ್ನಾಗಿ ಬರೆದಿದ್ದೀರಿ ಆಶಾ! ಅಭಿನಂದನೆಗಳು