ಅಂಕಣ ಬರಹ
ದೇಗುಲದಲ್ಲಿ ದೆವ್ವ
ದೇಗುಲದಲ್ಲಿ ದೆವ್ವ
ಮೂಲ : ಗೂಗಿ ವಾ ಥಿಯಾಂಗೋ ಕನ್ನಡಕ್ಕೆ : ಬಂಜಗೆರೆ ಜಯಪ್ರಕಾಶ್
ಆಫ್ರಿಕಾದ ಪ್ರಸಿದ್ಧ ಕಾದಂಬರಿಕಾರ ಗೂಗಿ ವಾ ಥಿಯಾಂಗೋ ಅವರು ಮೂಲತಃ ಅವರ ಗಿಕುಯು ಭಾಷೆಯಲ್ಲಿ ಬರೆದ ಕಾದಂಬರಿಯಿದು. ಅವರು ಸ್ವತಃ ತಾವೇ ಅದನ್ನು ಇಂಗ್ಲಿಷಿಗೆ ‘ದ ಡೆವಿಲ ಆನ್ ದ ಕ್ರಾಸ್’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದರು. ಅದರ ಸುಂದರವಾದ ಕನ್ನಡ ಅನುವಾದವನ್ನು ಬಂಜಗೆರೆ ಪ್ರಕಾಶ್ ಕನ್ನಡಕ್ಕೆ ಮಾಡಿದ್ದಾರೆ.
೧೯೬೩ರಲ್ಲಿ ಬಿಳಿಯರ ಬಿಗಿಮುಷ್ಟಿಯಿಂದ ಸ್ವತಂತ್ರವಾದ ಕಿನ್ಯಾದ ವಸಾಹತೋತ್ತರ ಬದುಕಿನ ಎದೆ ನಡುಗಿಸುವ ಘಟನೆಗಳ ಚಿತ್ರಣ ಇಲ್ಲಿದೆ. ಜೆಸಿಂತಾ ವರಿಂಗಾ, ಗಟೂರಿಯಾ, ವಂಗಾರಿ, ಮುಟೂರಿ, ವಿರೇರಿ ಎಂಬ ಐದು ಮಂದಿ ವಾರಾ ಎಂಬವನ ಹಳೆಯ ಟೆಂಪೋ ಒಂದರಲ್ಲಿ ನೈರೋಬಿಯಿಂದ ಇಲ್ ಮೋರೋಗೋ ಪಟ್ಟಣದ ತನಕ ರಾತ್ರಿಯಿಡೀ ಜತೆಗೆ ಕುಳಿತು ಪ್ರಯಾಣ ಮಾಡುವ ದೃಶ್ಯದೊಂದಿಗೆ ಕಾದಂಬರಿಯ ನಿರೂಪಣೆ ಆರಂಭವಾಗುತ್ತದೆ. ಜೆಸಿಂಟಾ ವರಿಂಗಾಳದ್ದು ಇಲ್ಲಿ ಮುಖ್ಯ ಪಾತ್ರ. . ಸ್ವಾತಂತ್ರ್ಯಕ್ಕಾಗಿ ಜೀವದ ಹಂಗನ್ನೇ ತೊರೆದು ಹೋರಾಡಿದ ವಂಗಾರಿಯ ಎರಡೆಕರೆ ಭೂಮಿಯನ್ನು ಸಹ, ಬ್ಯಾಂಕಿನ ಸಾಲ ತೀರಿಸಲಿಲ್ಲವೆಂಬ ಕಾರಣಕ್ಕೆ ವಶ ಪಡಿಸಿಕೊಳ್ಳಲಾಗಿದೆ. ವರಿಂಗಾ ಈ ಹಿಂದೆ ಚಿಕ್ಕ ಹುಡುಗಿಯಾಗಿದ್ದಾಗಲೇ ಶ್ರೀಮಂತನಾದ ಬಿಳಿಯ ಮುದುಕನೊಬ್ಬನಿಂದ ಮೋಸಕ್ಕೊಳಗಾಗಿ ಒಂದು ಮಗುವಿಗೂ ಈಗಾಗಲೇ ಜನ್ಮವಿತ್ತವಳು. ಓದಿನಲ್ಲಿ ಜಾಣೆಯಾಗಿದ್ದರೂ ಶಾಲೆಯನ್ನು ಬಿಡಬೇಕಾದ ಅನಿವಾರ್ಯತೆಗೆ ಸಿಕ್ಕಿಹಾಕಿಕೊಂಡವಳು . ಆಕೆ ಬಿಳಿಯ ಮುದುಕನೊಬ್ಬನಿಂದ ಶೋಷಣೆಗೆ ಗುರಿಯಾಗಿದ್ದಾಳೆ. ಅವನೊಂದಿಗಿನ ದೈಹಿಕ ಸಂಪರ್ಕದಿಂದ ಆಕೆಗೆ ಮಗುವೂ ಆಗಿದೆ. ಅನಂತರ ಆತ ಆಕೆಯನ್ನು ತೊರೆಯುತ್ತಾನೆ. ಧೃತಿಗೆಡದ ವರಿಂಗಾ ಮೊದಲಿನಂತೆ ತನ್ನ ಶಾಲಾವೃತ್ತಿಯಲ್ಲಿ ತೊಡಗುತ್ತಾಳೆ ಆದರೆ ಆ ಹೊಸಜಾಗದಲ್ಲೂ ಮತ್ತೆ ಆಕೆ ಪುರುಷರ ಕಾಟದಿಂದ ಭಯದ ಬದುಕನ್ನು ಎದುರಿಸುತ್ತಾಳೆ. ಕೊನೆಗೆ ಜೀವನದಲ್ಲಿ ಜುಗುಪ್ಸೆ ಹೊಂದಿ ರೈಲು ಕಂಬಿಗೆ ತಲೆಕೊಟ್ಟು ಸಾಯಲು ಹೊರಡುತ್ತಾಲೆ. ಅಲ್ಲಿಗೆ ಬರುವ ಒಬ್ಬ ವ್ಯಕ್ತಿ ಅವಳನ್ನು ಸಾವಿನಿಂದ ತಪ್ಪಿಸಿ’ ನೀನು ನಿನ್ನ ಹುಟ್ಟೂರಿನ ಬಳಿಯೇ ನಡೆಯುವ ಒಂದು ‘ಪಿಶಾಚಿಗಳ ಔತಣಕೂಟಕ್ಕೆ ಹೋಗು. ಅಲ್ಲಿ ಬದುಕಿನ ಬಗ್ಗೆ ಕೆಲವು ಹೊಸ ವಿಚಾರಗಳನ್ನುತಿಳಿದುಕೊಳ್ಳುತ್ತೀ’ ಎಂದು ನಿರ್ದೇಶವೀಯುತ್ತಾನೆ. ಆ ಪ್ರಕಾರ ಅವಳು ಒಂದದು ಟೆಂಪೋದಲ್ಲಿ ಅಲ್ಲಿಗೆ ಹೊರಡುತ್ತಾಳೆ. ಟೆಂಪೋದ ಒಳಗೆ ಉಳಿದ ಪ್ರಯಾಣಿಕರೊಂದಿಗೆ ಅವಳ ಗೆಳೆತನ ಬೆಳೆಯುತ್ತದೆ.
ಕೆನ್ಯಾದ ಕರಿಯರು ಇನ್ನು ಹೇಗೆ ಸಾಂಸ್ಕೃತಿಕವಾಗಿ, ಆರ್ಥಿಕವಾಗಿ , ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಎಲ್ಲ ಕ್ಷೇತ್ರಗಳಲ್ಲೂ ಇನ್ನೂ ಬಿಳಿಯರ ಕೈಕೆಳಗೇ ಇದ್ದಾರೆ ಎನ್ನುವುದು ಇವರೆಲ್ಲರೂ ಪರಸ್ಪರ ಮಾತನಾಡಿಕೊಳ್ಳುವಾಗ ತಿಳಿಯುತ್ತದೆ.ಎಲ್ಲರ ಹಿಂದೆಯೂ ಒಂದೊಂದು ಅನುಭವ, ಒಂದೊಂದು ಕಥೆಗಳಿರುತ್ತವೆ. ಗಟೂಟಿಯಾ ಒಂದು ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದಾನೆ. ಪಾಶ್ಚಾತ್ಯ ಸಂಸ್ಕೃತಿಯ ದಾಳಿಗೆ ಸಿಕ್ಕಿ ಎಲ್ಲೋ ಕಳೆದು ಹೋಗುತ್ತಿರುವ ಆಫ್ರಿಕಾದ ಬುಡಕಟ್ಟು ಸಂಸ್ಕೃತಿಯ ಕುರಿತು ಸಂಶೋಧನೆ ನಡೆಸುತ್ತಿದ್ದಾನೆ. ವಂಗಾರಿ ಕಾರ್ಮಿಕರ ಪರವಾಗಿ ಹೋರಾಟ ನಡೆಸುವವನು. ಎಲ್ಲರೂ ಇಲ್ ಮೋರೋಗಿನ ಗುಹೆಯೊಂದರಲ್ಲಿ ನಡೆಯುತ್ತಿದ್ದ ಪಿಶಾಚಿಗಳ ಔತಣಕೂಟ ಮತ್ತು ಕಳ್ಳ-ಲೂಟಿಕೋರರನ್ನು ಚುನಾಯಿಸುವ ಸ್ಪರ್ಧೆಯನ್ನು ವೀಕ್ಷಿಸಲೆಂದು ಹೋಗುತ್ತಾರೆ. ಅಲ್ಲಿ ಆಧುನಿಕ ಕೆನ್ಯಾದ ಒಂದು ಭಯಾನಕ ಚಿತ್ರಣವೇ ಇದೆ. ಎಲ್ಲವನ್ನೂ ಲೇಖಕರು ವಿಡಂಬನೆಯ ರೂಪದಲ್ಲಿ ಚಿತ್ರಿಸಿದ್ದಾರೆ. ಔತಣಕೂಟದ ಸ್ಥಳದಲ್ಲಿ ನಡೆಯುವ ಯಾವುದೇ ವಿದ್ಯಮಾನಗಳಲ್ಲಿ ವರಿಂಗಾ ಮತ್ತು ಗಟೂರಿಯಾ ಭಾಗವಹಿಸದೆ ದೂರ ಕುಳಿತುಕೊಳ್ಳುತ್ತಾರೆ. ಅವರಿಬ್ಬರೂ ಪರಸ್ಪರ ಪ್ರೇಮದಲ್ಲಿ ಸಿಲುಕಿ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ.
ಗಟೂರಿಯಾನ ಪ್ರೋತ್ಸಾಹದಿಂದ ವಂಗಾರಿ ಮುಂದೆ ಇನ್ನಷ್ಟು ಓದಿ ಮೆಕ್ಯಾನಿಕ್ ಆಗುತ್ತಾಳೆ. ಎರಡು ವರ್ಷಗಳ ಬಳಿಕ ಗಟೂರಿಯಾನನ್ನು ಮದುವೆಯಾಗಿ ಆತನ ಮನೆಗೆ ಹೋದಾಗ ಅವನ ತಂದೆ ಈ ಹಿಂದೆ ತನ್ನನ್ನು ವಂಚಿಸಿದ ಆ ಬಿಳಿಯ ಮುದುಕನೇ ಎಂಬುದನ್ನು ತಿಳಿದು ಅವಳಿಗೆ ಆಘಾತವಾಗುತ್ತದೆ. ಅವನ ಮೇಲಿನ ಸಿಟ್ಟಿನಿಂದ ವಂಗಾರಿ ಅವನನ್ನು ಕೊಂದು ಜೈಲು ಸೇರುವುದರೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ. ಬಿಳಿಯ ಮುದಕನು ಕರಿಯರನ್ನು ಶೋಷನೆಗೆ ಗುರಿಯಾಗಿಸುವ ಪಿಶಾಚಿಯೆಂದೂ ಅಂಥವರನ್ನು ಶಿಲುಬೆಗೇರಿಸುವ ಹೊನೆ ಓದುಗರದ್ದೆಂದೂ ಸೂಚ್ಯವಾಗಿ ಕಾದಂಬರಿ ಹೇಳುತ್ತದೆ. ಒಟ್ಟಿನಲ್ಲಿ ವರ್ಣ ದ್ವೇಷವು ಕರಿಯರ ಬದುಕನ್ನು ದಯನೀಯ ಸ್ಥಿತಿಗೆ ತಳ್ಳುವ ಚಿತ್ರಣವು ಈ ಕೃತಿಯಲ್ಲಿ ಮನಕಲಕುವಂತಿದೆ. ಬಂಜಗೆರೆಯವರ ಅನುವಾದ ಬಹಳ ಚೆನ್ನಾಗಿ ಬಂದಿದೆ.
******************************************