ಕವಿತೆ
ವಿವೇಕ ವಾಣಿ
ಬಾಗೇಪಲ್ಲಿ ಕೃಷ್ಣಮೂರ್ತಿ
ಬೆಳಕು ಮೂಡುವಮುನ್ನ ನಡಿಗೆಗೆ ಹೊರಟೆ
ಬಿಳುಪಿಗೆ ಪರಿಕಲಿತ ಸೌಂದರ್ಯದ ಆಕಾಶ ಮಲ್ಲಿಗೆ ಹೂ ಕಂಡೆ ಮರದ ಎತ್ತರದಿ
ಆನಂದಿಸಲು ಬಿಡದ ಮನ ಹೇಳಿತು
ಆಕೆ ಇಷ್ಟೇ ಅಲ್ಲವೆ ನಿನಗೆ?
ಮುನ್ನಡೆದು ಹಾದಿಬದಿಯ ಗಿಡದ ಹೂ ಮೇಲೆ ಕುಂತ ಬಣ್ಣದಚಿಟ್ಟೆ ಕಂಡೆ
ಪ್ರಯಾಸದಿ ಹಿಡಿದೆ ಪಾಪವೆನಿಸೆ ಬದುಕಲ ಬಿಟ್ಟೆ
ಹಿಡಿದ ಬೆರಳಿಗೆ ಹತ್ತಿತ್ತು ರೆಕ್ಕೆಯ ಬಣ್ಣ
ಸಂತೋಷಿಪ ಮೊದಲೇ ಮನ ಹೇಳಿತು ಪುನಃ
ಆಕೆ ಇಷ್ಟೇ ಅಲ್ಲವೆ ನಿನಗೆ!
ಯೋಚನೆ ಹರಿವನು ಬದಲಿಸ ಲೆತ್ನಿಸಿ
ಮುಂದಿನ ಮರದ ರೆಂಬೆಯಲಿ ಕುಂತ ಹಕ್ಕಿಕಂಡೆ
ರಾತ್ರಿ ಓದಿದ ನೆನಪು ಇವು ನೈಲ್ ನದಿಯನು ಬಳಸಿ ವಲಸೆ ಬರವುದಂತೆ
ಮೂಬೈಲಿಗೆ ಕ್ಲಿಕ್ಕಿಸಿ ಕೊಂಡೆ ಚಿತ್ರ ಚನ್ನಾಗಿಯೇ ಮೂಡಿತ್ತು
ಸಂತೋಷಿಪ ಮುನ್ನ ಮನ ಹೇಳಿತು ಮತ್ತೊಮ್ಮೆ
ಆಕೆ ಇಷ್ಟೇ ಅಲ್ಲವೆ ನಿನಗೆ?
ಮನವ ಕೇಳಿದೆ ಹೀಗೇಕೆ ಹಿಂಸಿಸುತಿರುವೆ
ಮನ ಹೇಳಿತು
ನಿನ್ನ ಪ್ರಙ್ಞೆಯೊಂದಿಗೆ ನೀನೇ ಕಣ್ಣುಮುಚ್ಚಾಲೆ ಆಡಬೇಡ.
ಇಂದು ಬೇಗನೆ ನಡಿಗೆಗೆ ಬಂದುದೇಕೆ
ನೆನ್ನೆ ಕಂಡು ಮಾತನಾಡಿದ ಸುಂದರ ಗರತಿಯ ಕಾಣಲಲ್ಲವೇ?
ಅದಕೇ ಎಚ್ಚರಿಸುತಿರುವೆ ಸಭ್ಯನಾಗು
ಆಕೆ ಗರತಿ! ಎಟುಕದ ಹೂ ದಕ್ಕದ ಪಾತರಗಿತ್ತಿ
ಚಿತ್ರದೊಳಗಿನ ಸುಂದರ ಹೆಣ್ಣು
ಆಕೆಯ ಗುಂಗನು ಬಿಡು
ನಿರ್ಮಲ ಚಿತ್ತದಿ ನಡಿಗೆ ನಡಿ!
ನಾನೂ ಸಹಕರಿಸುವೆ ಅಂದಿತು.
************************