ಅಂಕಣ ಬರಹ
ಹುಣಿಸೆ ಮರದ ಕತೆ
ಹುಣಿಸೆ ಮರದ ಕತೆ
ತಮಿಳು ಮೂಲ : ಸುಂದರ ರಾಮಸ್ವಾಮಿ
ಅನುವಾದ : ಕೆ.ನಲ್ಲತಂಬಿ
ಪ್ರ : ಲಂಕೇಶ್ ಪ್ರಕಾಶನ
ಪ್ರಕಟಣೆಯ ವರ್ಷ : ೨೦೧೭
ಬೆಲೆ : ರೂ.೧೫೦
ಪುಟಗಳು : ೧೯೨
ಪರಿಸರ ಕಾಳಜಿಯನ್ನು ಹೊಂದಿದ ಒಂದು ವಿಶಿಷ್ಟ ಕಾದಂಬರಿಯಿದು. ಅದೊಂದು ಪುಟ್ಟ ಹಳ್ಳಿಯಲ್ಲಿ, ಮೂರು ರಸ್ತೆ ಕೂಡುವ ಸ್ಥಳದಲ್ಲಿ ಆ ಹುಣಿಸೆ ಮರವಿತ್ತು. ಆ ಜಾಗ ಜನರ ಓಡಾಟ-ಗಿಜಿ ಗಿಜಿಗಳಿಂದ ತುಂಬಿ ಲವಲವಿಕೆಯಿಂದ ಕೂಡಿತ್ತು. ತನ್ನಷ್ಟಕ್ಕೆ ಹುಟ್ಟಿಕೊಂಡ ಆ ಹುಣಿಸೆ ಮರವು ಮಾನವನ ಲೆಕ್ಕವಿಲ್ಲದ ಆಟಗಳಿಗೆ ಮೂಕ ಸಾಕ್ಷಿಯಾಗಿ ಮನುಷ್ಯನ ಸುಖ-ದುಖ, ಸ್ವಾರ್ಥ-ತ್ಯಾಗ, ಪ್ರೀತಿ-ದ್ವೇಷ-ಅಸೂಯೆಗಳನ್ನು ಮೌನವಾಗಿ ಗಮನಿಸುತ್ತಿತ್ತು. ಮನುಷ್ಯರಿಗಾಗಿ ಎಲೆ ಚಿಗುರಿಸಿ, ಹೂ ಬಿಟ್ಟು, ಕಾಯಿಗಳನ್ನು ಕೊಡುತ್ತಿತ್ತು. ಎತ್ತರೆತ್ತರಕ್ಕೆ ಬೆಳೆಯುತ್ತ ಹೋದ ಅದರ ಕೊಂಬೆಗಳು ಬಾನಿಗೂ ಬೇರುಗಳು ಮಣ್ಣಿನೊಳಗಣ ಆಳಕ್ಕೂ ಚಾಚಿಕೊಂಡವು. ಆದರೆ, ದೇಶವನ್ನೂ ಹಣವನ್ನೂ ಸ್ತ್ರೀ ಯರನ್ನೂ ಅಧಿಕಾರವನ್ನೂ ಹಿರಿಮೆಯನ್ನೂ ಅಂಕೆಯಲ್ಲಿರಿಸಿಕೊಂಡು ಆಟ ಆಡಿದ ಮನುಷ್ಯ ಅದನ್ನು ಪಗಡೆಯ ಕಾಯಿಯಾಗಿಸಿ ಉರುಳಿಸಿದ ಪರಿಣಾಮವಾಗಿ ಆ ವೃಕ್ಷ ನಾಶವಾಯಿತು. ದಾಮೋದರ ಆಸಾನ್ ಎಂಬ ತತ್ವಜ್ಞಾನಿಯು ವೇದಾಂತಿಯಂತೆ ಮಾತನಾಡುತ್ತ ಆ ಹುಣಿಸೆ ಮರದ ಕಥೆಯನ್ನು ಕಾದಂಬರಿಯ ನಿರೂಪಕನಿಗೆ ಹೇಳುತ್ತ ಹೋಗುತ್ತಾನೆ.
ಹುಣಿಸೆ ಮರ ಹಿಂದೆ ಇದ್ದದ್ದು ಒಂದು ದೊಡ್ಡ ಕೊಳದ ನಡುವೆ. ಜನರು ಅದನ್ನು ಪುಳಿಕೊಳ ಅನ್ನುತ್ತಿದ್ದರು. ಅದರ ಸುತ್ತ ಹುಟ್ಟಿಕೊಂಡಿದ್ದ ಕಥೆಯನ್ನು ದಾಮೋದರ ಆಸಾನ್ ನಿರೂಪಕನಿಗೆ ಹೇಳುತ್ತಾನೆ. ಸೆಲ್ಲತ್ತಾಯಿ ಎಂಬವಳು ಆ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಯಾರೋ ಒಬ್ಬ ಅತಿಮಾನುಷ ಶಕ್ತಿಯನ್ನು ಹೊಂದಿದ್ದ ವ್ಯಕ್ತಿ ಅವಳನ್ನು ಎತ್ತಿಕೊಂಡು ಕಾಡೊಳಗೆ ಒಯ್ದಿದ್ದ. ಅವನನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ಆ ವ್ಯಕ್ತಿಯಿಂದ ಸೆಲ್ಲತ್ತಾಯಿ ವಶೀಕರಣಕ್ಕೊಳಗಾಗಿ ಆತನ ಧ್ಯಾನದಲ್ಲೇ ಕಳೆಯುತ್ತ ಕೊನೆಗೆ ಅದೇ ಹುಣಿಸೆಮರಕ್ಕೆ ನೇತಾಡಿ ಸತ್ತು ಹೋದಳು.
ಆಸಾನ್ ಹೇಳಿದ ಇನ್ನೊಂದು ಕಥೆ ಒಬ್ಬ ರಾಜನದ್ದು. ರಾಜ ಆ ಊರನ್ನು ಸಂದರ್ಶಿಸುತ್ತಾನೆಂದು ಇಡೀ ಊರನ್ನು ಅಲಂಕರಿಸಿ ಸಿದ್ಧ ಪಡಿಸಿದ ಜನರು ಪುಳಿಕ್ಕೊಳವನ್ನು ಮಾತ್ರ ಸ್ವಚ್ಛಗೊಳಿಸದೆ ಹಾಗೆಯೇ ಬಿಟ್ಟರು. ಪರಿಣಾಮವಾಗಿ ಅದರೊಳಗಿಂದ ಬಂದ ದುರ್ವಾಸನೆಯು ರಾಜನನ್ನು ಅಸಮಾಧಾನಗೊಳಿಸುತ್ತದೆ. ಅದನ್ನು ಗಮನಿಸಿದ ಅಧಿಕಾರಿಗಳು ಭಯಗೊಂಡು ರಾಜನ ಕ್ಷಮೆ ಬೇಡುತ್ತಾರೆ. ಆದರೆ ರಾಜನು ಅವರನ್ನು ಕ್ಷಮಿಸದೆ ಕೆಲಸದಿಂದ ವಜಾ ಮಾಡುತ್ತಾನೆ. ಆದರೆ ರಾಜನು ತನ್ನ ಅರಮನೆಗೆ ಮರಳುವ ಯಾತ್ರೆಯ ಸಂದರ್ಭದಲ್ಲಿ ಊರವರೆಲ್ಲ ಒಟ್ಟಾಗಿ ಆ ಪುಳಿಕ್ಕೊಳದ ಪಕ್ಕವಿದ್ದ ಎತ್ತರದ ಪರೈಯನ್ ಗುಡ್ಡವನ್ನು ಕಡಿದು ನೆಲಸಮ ಮಾಡಿ ಆ ಮಣ್ಣನ್ನು ಪುಳಿಕ್ಕೊಳಕ್ಕೆ ತುಂಬಿಸಿ, ಕೊಳವನ್ನು ಮುಚ್ಚಿ, ಆ ಜಾಗದಲ್ಲಿ, ಉದ್ಯಾನವನ್ನು ನಿರ್ಮಿಸಿ ಅಲಂಕರಿಸಿ ಸುಂದರವಾಗಿಸುತ್ತಾರೆ. ಮುಂದೆ ಊರು ಒಂದು ಪಟ್ಟಣವಾಗಿ ಹುಣಸೆ ಮರವಿದ್ದ ಜಾಗದಲ್ಲಿ ಮೂರು ರಸ್ತೆಗಳು ಕೂಡಿ, ಅದಕ್ಕೆ ಹುಣಸೆಮರ ಜಂಕ್ಷನ್ ಎಂದು ಹೆಸರಾಗುತ್ತದೆ. ಮುಂದೊಂದು ದಿನ ಆ ಹುಣಿಸೆ ಬುಡಕ್ಕೂ ಕೊಡಲಿ ಹಾಕಿ ’ಒಬ್ಬ ಸುಮಂಗಲಿಯ ತಿಲಕವನ್ನು ಅಳಿಸಿದಂತೆ’ ಆ ಜಾಗವನ್ನು ಬೋಳಾಗಿಸುತ್ತಾರೆ.
ಸ್ವಾರ್ಥಿಯಾದ ಮನುಷ್ಯನು ತನ್ನ ಸ್ವಂತ ಲಾಭಕ್ಕೋಸ್ಕರ ಆಧುನಿಕತೆ-ಅಭಿವೃದ್ಧಿ- ಪ್ರಗತಿಗಳ ಹೆಸರಿನಲ್ಲಿ ಪರಿಸರ ನಾಶ ಮಾಡುವ ವೈರುದ್ಧ್ಯದತ್ತ ಈ ಕಾದಂಬರಿಯು ಬೊಟ್ಟು ಮಾಡಿ ತೋರಿಸುತ್ತದೆ. ಹುಣಿಸೆ ಮರದ ರೂಪಕದ ಮೂಲಕ ಆಡಳಿತಾರೂಢ ಅಧಿಕಾರಿಗಳ ರಾಜಕೀಯದ ವ್ಯಂಗ್ಯ ಚಿತ್ರಣವನ್ನು ಕಾದಂಬರಿ ನೀಡುತ್ತದೆ. ಒಂದು ಒಳ್ಳೆಯ ಕಾದಂಬರಿಯನ್ನು ಕನ್ನಡಕ್ಕೆ ನೀಡಿದ ಹಿರಿಮೆ ನಲ್ಲತಂಬಿಯವರದ್ದಾಗಿದೆ.
***********************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ