ಅಂಕಣ ಬರಹ

ಹೊಸ ದನಿ ಹೊಸ ಬನಿ-೧೨.

ಚದುರಿದ ಚಿತ್ರಗಳಲ್ಲೇ ಅರಳುವ ಹೂವುಗಳಂಥ

ನರಸಿಂಹ ವರ್ಮ ಕವಿತೆಗಳು

ವಿಟ್ಲದ ನರಸಿಂಹ ವರ್ಮ “ಆಕಾಶದ ಚಿತ್ರಗಳು” ಹೆಸರಿನ ಕವನ ಸಂಕಲನವನ್ನು ೨೦೧೯ರಲ್ಲಿ ಪ್ರಕಟಿಸುವುದರ ಮೂಲಕ ಈಗಾಗಲೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅವರ ಕವಿತೆಗಳಲ್ಲಿ ಹುಡುಕಿದರೂ ವಾದ ವಿವಾದಗಳಾಗಲೀ, ವ್ಯವಸ್ಥೆಯ ಪರ ಅಥವ ವಿರೋಧದ ನಿಲುವಾಗಲೀ ಇಲ್ಲದೇ ಇರುವುದು ವಿಶೇಷ. ಜೊತೆಗೇ ವರ್ತಮಾನದ ಸಂಗತಿಗಳಿಗೆ ಥಟ್ಟನೆ ಪ್ರತಿಕ್ರಯಿಸಿ ಪದ್ಯವೊಂದನ್ನು ಹೊಸೆಯುವ ಅವಸರದ ಧಾವಂತ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ವಿಚಾರವೊಂದನ್ನು ಮೇಲೆತ್ತುವ ಅಥವ ಇನ್ನಿಲ್ಲದಂತೆ ಅದನ್ನು ಆಕ್ಷೇಪಿಸುವ ರೀತಿಯಿಂದಲೂ ಅವರು ಮುಕ್ತರು. ಮತ್ತು ಆ ಕಾರಣದಿಂದಲೇ ಅವರು ಪ್ರಕಟಿಸುವ ಕವಿತೆಗೆ ಚಿದ್ವಿಲಾಸದ ಬಗ್ಗೆ ಅನನ್ಯ ಕಕ್ಕುಲತೆ ಮತ್ತು ಇಬ್ಬಂದಿತನದ ಬಗ್ಗೆ ವಿಶೇಷ ಕಾಳಜಿ. ಪ್ರಾಯಶಃ ಈ ಕಾರಣಕ್ಕೇ ನರಸಿಂಹ ವರ್ಮರ ಕಾವ್ಯ ಕೃಷಿಗೆ ವರ್ತಮಾನದ ಸಂಗತಿಗಳಿಗಿಂತಲೂ ಪೌರಾಣಿಕ ಮತ್ತು ಐತಿಹಾಸಿಕ ವ್ಯಕ್ತಿಗಳೂ ಘಟನೆಗಳೂ ಸಾದೃಶ ಪ್ರತಿಮೆಗಳಾಗಿ ಅವರ ಕವಿತೆಗಳ ವಕ್ತಾರಿಕೆಯನ್ನೂ ನಿಭಾಯಿಸುತ್ತವೆ.‌ ಮತ್ತು ಈ ಇದೇ ಕಾರಣಕ್ಕಾಗಿ ಜನ್ಮತಃ ಇರುವ ರಾಜಮನೆತನದ ಪ್ರಭಾವಳಿಯನ್ನು ಕಳಚಿಟ್ಟು ಸಾಮಾನ್ಯನಾಗಿ ನಡೆದು ಹೋದ ತಥಾಗತ ಬುದ್ಧನ ಹಾದಿ ಇವರಿಗೆ ಪ್ರಿಯವಾದುದಾಗಿದೆ.

ಅವರ ಕವಿತೆಗಳು ಒಂದು ಸಾಮಾಜಿಕ ಚೌಕಟ್ಟು ಅಥವ ಬಂಧಗಳಿಂದ ದೂರ ಇರುವ ಕಾರಣ ಅವರ ಕವಿತೆಗಳಲ್ಲಿ ಅಧ್ಯಯನಶೀಲತೆ ಮತ್ತು ಪ್ರಾಮಾಣಿಕ ದರುಶನಗಳು ಪ್ರಕಟವಾಗುತ್ತವೆ. ಯಾವ ಕವಿ ಸತತ ಅಧ್ಯನಶೀಲನಾಗಿ ಇರುತ್ತಾನೆಯೋ ಅವನು ಯಾವತ್ತೂ ಯಾರನ್ನಾಗಲೀ ಅಥವ ಯಾವ ಒಂದು ನಿರ್ದಿಷ್ಟ ವಾದಕ್ಕಾಗಲೀ ಕಟ್ಟು ಬೀಳದೇ ಸ್ವತಃ ಸೃಜಿಸಿದ ಅನುಭವದ ಮೂಸೆಗಳಲ್ಲಿ ತನ್ನ ಅನಿಸಿಕೆಗಳನ್ನು ಬೆರೆಸಿ ಲೋಕದ ಕಣ್ಣಿಗೆ ಹಿಡಿಯುತ್ತಾನೆ. ಆ ಲೋಕವು ಹೀಗೇ ಇದೆ ಎಂದಾಗಲೀ ಹೀಗೇ ಇರಬೇಕು ಎಂಬ ವಾದವಾಗಲೀ ಆ ಅಂಥ ಜಿಜ್ಞಾಸುವಿಗೆ ಇರುವುದಿಲ್ಲ. ನನಗೆ ಅನಿಸಿದ್ದನ್ನು ಹೇಳಿದ್ದೇನೆ, ಒಪ್ಪುವುದು ಬಿಡುವುದು ಲೋಕದ ಸಂಗತಿ ಎಂದು ಮುಂದುವರೆಯುತ್ತಾನೆ. ಲೋಕ ಒಪ್ಪಿದರೂ ಅಷ್ಟೆ, ಒಪ್ಪದೇ ಇದ್ದರೂ ಅಷ್ಟೆ. ಲೋಕಾಂತದ ಅಗ್ನಿದಿವ್ಯಗಳನ್ನು ಅನುಲಕ್ಷಿಸದೇ ತನ್ನ ಪಾಡಿಗೆ ತಾನಿರುವ ನರಸಿಂಹ ವರ್ಮರಂತೆಯೇ ಅವರ ಪದ್ಯಗಳಲ್ಲೂ ಅಂಥದೇ ವಿವೇಕ ಸದಾ ಸರ್ವದಾ ಜಾಗೃತವಾಗಿರುವುದನ್ನು ಓದುಗ ಗಮನಿಸಬಹುದು. ಈ ಮಾತಿಗೆ ಉದಾಹರಣೆಯಾಗಿ ಅವರ ಈ ಕವಿತೆಯನ್ನು ನೋಡಬಹುದು.

ಬಾಣಲೆಗೆ ಸುರಿವಾಗ

ಸಾಸಿವೆಯೊಂದು ಪುಟಿದು

ಹಾರಿ ಹೋಯಿತು

ಛಲವಿಟ್ಟು ಹುಡುಕಿದರೆ

ಸಾಸಿವೆಯೂ ದೊರಕೀತು :

ಸೂಕ್ಷ್ಮವನೂ ಶೋಧಿಸಿದೆನೆಂದು

ಬೀಗಿದೆ

ಬುದ್ಧ ನಕ್ಕ :

ನೀನು ಹುಡುಕಿದ್ದು

ಬರಿಯ ಸಾಸಿವೆ ,

ಸಾವಿಲ್ಲದ ಮನೆಯ ಸಾಸಿವೆಯಲ್ಲ

ಬಾಣಲೆಮನದ  ನೆಲೆಯಿಲ್ಲೀಗ

ಸಾಸಿವೆಯ ಚಟಪಟ

ಮತ್ತು

ಒಗ್ಗರಣೆಯ ಘಮ .

ಪದ್ಯದ ನೇಯ್ಗೆಯಲ್ಲಿ ವಿಶೇಷ ಇರದಿದ್ದರೂ ಸಾಸುವೆಯ ಪ್ರತಿಮೆಯ ಮೂಲಕ ಸಾವನ್ನು ಧೇನಿಸುವ ಕವಿ, ಕಾದ ಬಾಣಲೆಯಾದ ಮನದಲ್ಲಿ ಚಟಪಟಿಸುತ್ತಲೇ ಒಗ್ಗರಣೆಯ ಘಮಕ್ಕೆ ಅಂದರೆ ಬದುಕಿನ ಸಾರವನ್ನೂ ಗ್ರಹಿಸುತ್ತಾನಲ್ಲ ಅದು ವಿಶೇಷವೇ. ಕವಿತೆಯ ಎರಡನೆಯ ಪ್ಯಾರ “ದೊರಕೀತು” ದೊರಕಿತು ಆದರೆ ಮಾತ್ರ ಪದ್ಯಕ್ಕೆ ಮತ್ತಷ್ಟು ಝಳ ಬಂದೀತು‌.

ಸದ್ಯಕ್ಕಿಲ್ಲಿ ಯಾವುದೂ

ಸರಾಗವಲ್ಲ :

ಹಳೆಯ ರಾಗ ಬದಲಾಗಿಲ್ಲ ,

ಅಬ್ಬರಿಸಿ ಬೊಬ್ಬಿರಿಯುವುದನ್ನು

ರಾಗವೆನ್ನಲಾಗುವುದಿಲ್ಲ.

ಎಂದು ಕೊನೆಯಾಗುವ ಅವರ ಕವಿತೆಯೊಂದು ನಮ್ಮನ್ನು ಆಕರ್ಷಿಸುವ ವಿವಿಧ ಇಸಂಗಳನ್ನು ಕುರಿತು ಹೇಳುತ್ತಲೇ ಕಡೆಗೆ ಯಾವ ಸಿದ್ಧಾಂತವೂ ಸರಾಗ ಒಲಿಯದು ಮತ್ತು ಎಲ್ಲ ವಾದ ಮತ್ತು ಸಿದ್ಧಾಂತಗಳಲ್ಲೂ ಮತ್ತದೇ ಹಳೆಯದೇ  ರಾಗದ ಛಾಯೆ ಇರುವಾಗ ಅಬ್ಬರಿಸಿ ಕೂಗಿದ ಮಾತ್ರಕ್ಕೆ ಅದನ್ನು ಹೊಸ ರಾಗ ಎನ್ನಲಾಗುವುದಿಲ್ಲ ಎಂಬ ತೀರ್ಮಾನ ಕೂಡ ಎಲ್ಲ ಸಿದ್ಧಾಂತಗಳ ತಲಸ್ಪರ್ಶೀ ಅಧ್ಯಯನದಿಂದ ಪಡೆದ ಕಾಣ್ಕೆಯೇ ಆಗಿದೆ.

ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ

ಯಾವ ಕವಿತೆಗೂ ಜಾಗವಿಲ್ಲ :

ಒಂಟಿ ‍ಅರಮನೆಯಲ್ಲೂ

ತಕ್ಷಕನ ನೆನಪು

ಯಾವ ಫಲದಲ್ಲಿ ಯಾವ ಹುಳವೋ

ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ.

ಎನ್ನುವ ಸಶಕ್ತ ಅಂತ್ಯವಿರುವ ಕವಿತೆಯಲ್ಲಿ ಕರೋನಾದ ಭೀತಿಯನ್ನು ಪದ್ಯವಾಗಿಸಿರುವ ರೀತಿಗೆ ಕೂಡ ತಕ್ಷಕ ಮತ್ತು ಪರೀಕ್ಷಿತರು ಇಣುಕುವುದರಿಂದ ನಮ್ಮೊಳಗೇ ಇರುವ ಯಯಾತಿ ಕೂಡ ಭಯದಿಂದ ನಡುಗುತ್ತಾನೆ.

ನೀವು ನನ್ನತ್ತ ಎಸೆದ 

ಕಲ್ಲುಗಳನ್ನು ಆಯ್ದು

ಜೋಪಾನವಾಗಿ 

ಕಾಯ್ದಿರಿಸಿದ್ದೇನೆ

ತುಕ್ಕು ಹಿಡಿಯುತ್ತಿದೆಯೇನೋ

ಬದುಕಿಗೆ ಎಂದೆನಿಸಿದಾಗಲೆಲ್ಲ‌ಾ

ಬಾಳುವ ಹೊನ್ನಛಲವೀಯುವ

ಪರುಷಮಣಿಗಳವು

ಕಲ್ಲೆಸವ ಕೈಗಳಿಗೂ

ಒಂದು ಸಲಾಮ್

ಇದೊಂದು ಮುಂಗಾಣ್ಕೆಯ ಕವಿತೆ. ಕವಿತೆಗಳು ಕೂಡ ಬದುಕಿನ ಭಾಷ್ಯ ಎಂದು ಲಾಕ್ಷಣಿಕರು ಹೇಳಿದ ಮಾತು ಈ ಇಂಥ ಸಾಲುಗಳಲ್ಲಿ ಜೀವಂತವಾಗಿದೆ. ಯಾರು ಯಾರೋ ಯಾವುದೋ ಕಾರಣಕ್ಕೆ ಹೊಡೆದ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟು ಕೊಂಡ ಕವಿ ಬದುಕು ಉಧ್ವಸ್ತಗೊಂಡಾಗಲೆಲ್ಲ ಆ ಪರುಷಮಣಿಯಂಥ ಮುಟ್ಟಿಸಿದೊಡನೆಯೇ ಬಂಗಾರವಾಗಿ ಬದಲಾಗುವ ಸರಕಾಗಿಸುವುದು ಕೂಡ ಕೌತುಕವೇ ಹೌದು.

ಹೀಗೆ ಕಣ್ಣು ಕೆಂಪಾಗಿಸಿ

‌ಅವಳು ಸುಳಿದಾಡುವುದು

ಹೊಸತೇನಲ್ಲ ಕವಿಗೆ :

ಆದರೂ ವಾಡಿಕೆಯಂತೆ ಕೇಳಿದ

‘ಏನಾಯಿತು’ ಎಂದು

‘ ಕಣ್ಣಿಗೆ ಯಾವುದೋ

ಹುಳ ಬಿದ್ದಿರಬೇಕು ‘ ಅಂದಳು

ನೋಡಿದರೆ ಏನೂ ಇಲ್ಲ

‘ನಿನ್ನ  ತಲೆಯೊಳಗಿರುವ ಹುಳ

ಕಣ್ಣಿಗೆ ಹೊಕ್ಕಿರಬಹುದು’ ‌ಎಂದದ್ದು

ಕವಿಯ ಕಾವ್ಯಾತ್ಮಕ ಪ್ರಯೋಗ

‘ನಿಮ್ಮ ಕವಿತೆಯ ಹಾಗೆ ‘ಅಂದಳು

ನಿಟ್ಟುಸಿರ ನಂತರ ಮತ್ತೆ ಉಸುರಿದಳು :

‘ನಿನ್ನೆ ಇಡೀ ದಿನ ಇಡೀ ರಾತ್ರಿ ಕಾದೆ

ನಮ್ಮ ಮದುವೆಯ ದಿವಸ

ನಿಮಗೆ ನೆನಪಾಗುವುದೇ ಎಂದು ,

ನಿಮ್ಮ ತಲೆಯೊಳಗಿನ  ಕವಿತೆ

ಹುಳದಂತೆ ಕಣ್ಣಿಗಿಳಿದಿದ್ದರೂ ಪರವಾಗಿರಲಿಲ್ಲ

ಪೊರೆಯಂತೆ  ಕಣ್ಣನ್ನೇ ಕಾಡಿತು ‘ ಅಂದಳು

ಕವಿತೆಯ ಪೊರೆ ಒಮ್ಮೆಲೇ

ಕಳಚಿತು.

ಪ್ರಾಯಶಃ ಈ ಕವಿತೆಯ ಯಾವುದೇ ಸಾಲನ್ನು ಕತ್ತರಿಸಿ ಇಲ್ಲಿ ಕೋಟ್ ಮಾಡಿದ್ದಿದ್ದರೆ ಇಡಿಯ ಪದ್ಯದ ಮೂಲಕ ಕವಿ ಹೇಳ ಹೊರಟದ್ದೇನು ಎನ್ನುವುದು ಶೃತಪಡಿಸಲಿಕ್ಕೆ ಆಗದ ಕಾರಣ ಇಡೀ ಪದ್ಯವನ್ನು ಇಲ್ಲಿ ಓದಿಸಿದ್ದೇನೆ. ಏಕೆಂದರೆ ಇದು ಈ ಕವಿಯೊಬ್ಬನ ತಪ್ಪಲ್ಲ, ಬಹಳಷ್ಟು ಜನ ನಾವು ನಮ್ಮದೇ ಜರೂರುಗಳಲ್ಲಿ ಕಳೆದು ಹೋಗುತ್ತ ನಿಜಕ್ಕೂ “ಶುಭಾಷಯ” ಹೇಳಲೇ ಬೇಕಾದ ಕನಿಷ್ಠ ಸಂತೈಸಬಹುದಾದ ಸಂಗತಿಗಳನ್ನ ಮರೆತು ಬಿಡುತ್ತೇವಲ್ಲ ಅದರ ಅಭಿವ್ಯಕ್ತಿ ಇಲ್ಲಿ ಸಲೀಸಾಗಿ ಬಂದಿದೆ‌. ಒಂದು ಸಣ್ಣಕತೆಯೇ ಆಗಿ ಬದಲಾಗಿದೆ.

ಬಯಲಲ್ಲಿ ಬಯಲೆನಿಸಿಕೊಂಡ

ಜಂಗಮ ಬೆಳಕು

ಎಲ್ಲಿ  ಹೋಯಿತು ?

ಎಂದು ಎಲ್ಲವೂ ವ್ಯಾಪಾರವೇ ಆಗಿ ಬದಲಾಗಿರುವ ವರ್ತಮಾನದ ಬದುಕನ್ನು ಪ್ರಶ್ನಿಸುವ ಕವಿಯ ಈ ಪ್ರಶ್ನೆ ನಮ್ಮೆಲ್ಲರದ್ದೂ ಆಗ ಬೇಕಾದ ತುರ್ತು ಸಮಯ ಇದಾಗಿದೆ.

“ಆಕಾಶದ ಚಿತ್ರಗಳು” ಶೀರ್ಷಿಕೆಯ ಪದ್ಯದ ಈ ಸಾಲುಗಳು

ಅಲ್ಲೊಬ್ಬಳು ಹಳೇ ನೈಟಿಯ ಆಂಟಿಗೆ

ಗೊರಕೆ ಗಂಡನ ಪಕ್ಕದಲ್ಲಿ ಮಲಗಿ

ನೂರು ನಿಟ್ಟುಸಿರುಗಳ

ಕಾದ ನಟ್ಟಿರುಳಲ್ಲೂ ಇಂದ್ರಚಾಪದ ಬೆನ್ನೇರಿ

ಆಗಸಕ್ಕೇರುವ ಕನವರಿಕೆ,

ಬೆಚ್ಚೆದ್ದ ಗಂಡನ ಸಂಶಯದ ಕಂಗಳಲ್ಲಿ

ಗೌತಮನ ಶಾಪದ ಪಳೆಯುಳಿಕೆ

ಎನ್ನುವ ಅದ್ಭುತ ರೂಪಕವಾಗಿದೆ. ಒಂದೇ ಒಂದು ಹೊಸ ರೂಪಕವೊಂದನ್ನು ಒಬ್ಬ ಹೊಸ ಕವಿ ಸೃಷ್ಟಿಸಿದರೆ ಆ ಕವಿ ಬಹಳ ಕಾಲ ಉಳಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಶ್ರೀ ನರಸಿಂಹ ವರ್ಮನೆಂಬ ಈ ಕವಿ ಬಹುಕಾಲ ಉಳಿಯುವರು ಎಂಬುದಕ್ಕೆ ಸಾಕ್ಷಿಯೂ ಆಗಿದೆ ಈ ಸಾಲುಗಳು.

ತಮ್ಮದೇ ಓದಿನಿಂದ ಕಂಡುಕೊಂಡ ದಾರಿಯಲ್ಲೇ ಸಾಗುವ ಈ ಕವಿ ಅಪರೂಪಕ್ಕೆ ಎಂಬಂತೆ “ಸ್ಪರ್ಶವೆಂದರೆ ಮುಟ್ಟುವಿಕೆಯಲ್ಲ ತಟ್ಟುವಿಕೆ” ಎಂದೂ ಕಾಣಿಸಬಲ್ಲ ಛಾತಿ ಉಳ್ಳವರು. ದೂರದ ಬೆಟ್ಟವನ್ನು ಕಣ್ಣ ಮುಂದೆ ಹಿಡಿಯ ಬಲ್ಲಂತೆಯೇ ತಮ್ಮೊಳಗಿನ ದೇವರನ್ನೂ ಕಾಣಿಸ ಬಲ್ಲವರು‌‌.

ಶ್ರೀ ನರಸಿಂಹ ವರ್ಮರು ಕಾನೂನು ಕಟ್ಟಳೆ ಅರಿತ ಕಾರಣ ಅವರಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಸೈದ್ಧಾಂತಿಕ ಕಾರಣಗಳಾಚೆಯ ಅವರವರ ಲೋಕದ ಅರಿವು ಸಿದ್ಧಿಸಿದೆ‌. ಪ್ರಾಯಶಃ ಆ ಅರಿವೇ ಅವರೆಲ್ಲ ಕವಿತೆಗಳಿಗೂ ಹೊದಿಸಿದ ಅರಿವೆಯೂ ಆಗಿದೆ. ಆದರೆ ನಾವು ಹೊದ್ದ ಅರಿವೆಗಳನ್ನು ಕಳಚದೇ ನಿಜದ ನಗ್ನತೆಗೆ ಇರುವ ಚೆಲುವು ಮತ್ತು ಗಟ್ಟಿತನ ಅಲಂಕಾರದಲ್ಲಿ ಮರೆವೆಯಾಗಿ ಬದಲಾಗಬಾರದು. ಅವರ ಮುಂದಿನ ಪದ್ಯಗಳ ಬಗ್ಗೆ ಭರವಸೆ ಮತ್ತು ಅಪರೂಪದ ತಿಳುವಳಿಕೆಯ ಗಂಧದ ಪರಿಮಳ ಸೂಸುತ್ತಲೇ ಆಳದಾಳದ ತಿಳಿವನ್ನು ಪುನರ್ಮನನ ಮಾಡಿಸುವ ಅವರ ಕಾವ್ಯ ಕೃಷಿಗೆ ಶುಭಾಷಯ ಹೇಳುತ್ತ ಅವರ ಆಯ್ದ ಕವಿತೆಗಳನ್ನು ನಿಮ್ಮ ಓದಿಗೆ ಶಿಫಾರಸು ಮಾಡುತ್ತ ಈ ಟಿಪ್ಪಣಿ ಮುಗಿಸುತ್ತೇನೆ.


ನರಸಿಂಹ ವರ್ಮರ ಆಯ್ದ ಕವಿತೆಗಳು.

1.

ಹೊರಗೆ ‌ಅಡ್ಡಾಡುವುದಿಲ್ಲ

ಈಗ ಕವನ :

ಹಾಳೆಯಲ್ಲೇ ತೆವಳುತ್ತದೆ

ಕದಲದಂತೆ ಕದಲಿ

ಕದಲಿಸುತ್ತಿದೆ

‍‌‍ಅವ್ಯಕ್ತ ‌‌ಹುಳದ ಧ್ಯಾನ

‌ಕವಿತೆಗೂ ಬೇಕು ಮಾರುಕಟ್ಟೆ

‍‌ಅಕ್ಷರಗಳಿಗೆ ಮೆರವಣಿಗೆ :

ಈಗ ಮ‌ಾತ್ರ ಬೇಡವೇ ಬೇಡ

ವಿಮರ್ಶೆ, ಹೊಗಳಿಕೆ

ಕೋವಿದ ಎಂದು ಬಣ್ಣಿಸಿದರೆ

ಕೋವಿಡ ಎಂದಂತೆ  ಭಾಸವಾಗಿ

ಭಾಷೆ  ಭಯ ಹುಟ್ಟಿಸುತ್ತಿದೆ

ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ

ಯಾವ ಕವಿತೆಗೂ ಜಾಗವಿಲ್ಲ :

ಒಂಟಿ ‍ಅರಮನೆಯಲ್ಲೂ

ತಕ್ಷಕನ ನೆನಪು

ಯಾವ ಫಲದಲ್ಲಿ ಯಾವ ಹುಳವೋ

ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ.

2.

ಟ್ರಾಫಿಕ್ ಜಂಜಾಟದಲ್ಲಿ

ಕಾರು ಚಲಾಯಿಸುತ್ತಾ ಅವನು

ಧ್ಯಾನಕೇಂದ್ರದ ಬಗ್ಗೆ ಧ್ಯಾನಿಸುತ್ತಾನೆ :

ಧ್ಯಾನ ಕೇಂದ್ರದೊಳಗೆ ಕಾಲಿಟ್ಟೊಡನೆ

ಧ್ಯಾನ ಮಾಯವಾಗುತ್ತದೆ

ಬಣ್ಣಬಣ್ಣದ ದಿರಿಸುಗಳ  

 ಸಾಲಿನಿಂದ ತೇಲಿ ಬಂದ

ಲಘು ಅತ್ತರಿಗೆ ತತ್ತರಿಸಿ

ಅವನು ಮಾಯೆಯ ಬಗ್ಗೆ

ಗಾಢವಾಗಿ ಚಿಂತಿಸುತ್ತಾನೆ :

ಧ್ಯಾನಕೇಂದ್ರದೊಳಗೆ ನಿಧಾನವಾಗಿ

ಮಾಯೆ ಆವರಿಸತೊಡಗುತ್ತದೆ

ಹೊರಗೆ ಕಾರಿನಲ್ಲಿ

ಎಸಿಯಿಂದ ಬೇಸತ್ತ ಶ್ವಾನ

ಅತಂತ್ರಗೊಂಡು

ಹಣಕಲು ಹವಣಿಸುತ್ತಿದೆ  :

ರಸ್ತೆಯ ‌ಆಚೆ ಬದಿಯಲ್ಲಿ

ಹೆಣ್ಣುಸೊಣಗವೊಂದು

ಸ್ವತಂತ್ರವಾಗಿ ಸಂಚರಿಸುತ್ತಿದೆ

ಜಗದೊಳಗಿನ ಎಲ್ಲಾ ಮಾಯೆಗಳೂ

ಉದರಂಭರಣಕ್ಕೆ

ಪ್ರವಚನಗಳಾಗಿ

ಗೋಡೆಗಳೊಳಗೆ ಪ್ರವಹಿಸುತ್ತಿವೆ

“ಮನದ ಮುಂದಣ ಆಸೆಯೇ ಮಾಯೆ ಕಾಣಾ”

ಎಂಬ ಸರಳ ಅಧ್ಯಾತ್ಮ

ಅಲ್ಲೇ ಪಕ್ಕದ

ಸೆಕೆಂಡ್ ಹ್ಯಾಂಡ್

ಪುಸ್ತಕದಂಗಡಿಯಲ್ಲಿ ಬಯಲಾಗಿ

ಬಿದ್ದಿದೆ.

3.

ಬಯಲೊಳಗಿದ್ದ ಯೋಗದ ಬಟ್ಟಲುಗಳೀಗ

‌ಅಂಗಡಿಯೊಳಗೆ ದೊರೆವುದೆಂದು

ದಾಂಗುಡಿಯಿಡುವ

ಜನರು ಎಲ್ಲೆಡೆಗೂ

ಹುಯಿಲೋ ಹುಯಿಲು

ಬಯಲೊಳಗಿದ್ದ ಬಟ್ಟಲುಗಳೊಳಗೆ

ಬೆಟ್ಟದಷ್ಟು ಕುತೂಹಲಗಳು

ಒಂದು ನಂಬಿಕೆಗೆ

ಹಲವು ನಾಮರೂಪಗಳು

ಬಸಿರುಸಿರ ಬಿಗಿ ಹಿಡಿದು

ಜಗದುಸಿರೊಳಗೊಂದಾಗುವ

ಕನಸ ಸಾಹಸಗಳು

ತನುವಿನೊಳಗೊಂದು ಹಾವು

ಹಾವಿನೊಳಗೆ ಹೂವುಗಳನಿಟ್ಟು

ತಲೆ ದಾಟಬಲ್ಲ ನರ ಕಲ್ಪನಾ ವ್ಯೂಹಗಳು

ಬದಲಾದ ಕಾಲದಲಿ

ಅಂಗಡಿ ಮುಂಗಟ್ಟುಗಳಲಿ

ಮೂಟೆ ಮೂಟೆ ಹಣ ಸುರಿದು

ನಕಲಿ ಬಟ್ಟಲುಗಳನೂ

ಕೊಳ್ಳಬಲ್ಲ  ಭೋಗಿಗಳು :

ಕೊಳ್ಳೆ ಹೊಡೆವ ವ್ಯಾಪಾರಕ್ಕಿಳಿದ

ನಕಲಿ ಯೋಗಿಗಳು

ಬಯಲಲ್ಲಿ ಬಯಲೆನಿಸಿಕೊಂಡ

ಜಂಗಮ ಬೆಳಕು

ಎಲ್ಲಿ  ಹೋಯಿತು ?

4. ಕರೆ

ಶೂನ್ಯದಲ್ಲೇ ದೃಷ್ಟಿ ನೆಟ್ಟು

ಕಂಗೆಟ್ಟು ಕಣ್ಣ ಬೆಳಕನ್ನೇ

ಕಳಕೊಂಡವರ ಕಡೆಗೆ

ಕಡೆಗಣ್ಣನಾದರೂ ಹಾಯಿಸು;

ಕಣ್ಣಿಂದ ಕಣ್ಣಿಗೆ

ಸುಳಿಯಲಿ ಭರವಸೆಯ ಮಿಂಚು

ಹರಿಸು ಭರವಸೆಯ ಬೆಳಕು!

ಸಕಲ ಸ್ನಾಯುಗಳನ್ನೂ ಬಿಗಿಗೊಳಿಸಿ

ಹುಬ್ಬುಗಂಟಿಕ್ಕಿ ಬೊಬ್ಬಿರಿಯುವ

ಸದಾ ಉದ್ವಿಗ್ನ ಮಂದಿಯೂ

ಬಿದ್ದು ಬಿದ್ದು ನಗುವಂತೆ

ಖುದ್ದು ನಗು, ನಗಿಸು, ನಗುತ ಬಾಳು ಹಬ್ಬಿಸು ನಗೆಯ ಬೆಳಕು!

ಜಡ್ಡುಗಳೂ ಗೊಡ್ಡುಗಳೂ

ಬಡ್ಡಾದ ಹೆಡ್ಡುಗಳೂ

ಸಿಡಿದು ಚೂರಾಗುವಂತೆ

ಹೊಡೆದೊಡೆಯುವ

ವಿವೇಚನೆಯ ಪಟಾಕಿಗಳ

ಹಂಚು ಜನ ಮಾನಸಕೆ

ಉಬ್ಬಿಸು ಸ್ವಾಭಿಮಾನದ ಬೆಳಕು!

ತಮಸೋಮ‌ಾ ಜ್ಯೋತಿರ್ಗಮಯ ಎಂಬ

ಚಿಂತನೆಯ ಬೆಳಕು

ಜಾತಿ ಮತ ಕಾಲ ದೇಶಗಳ ಮೀರಿ

ದಿಸೆದಿಸೆಗಳಿಗೂ ಹರಿದಾಗ

ಜಗದ ತುಂಬೆಲ್ಲ ನಿತ್ಯ ದೀಪಾವಳಿ!

ಅದಕ್ಕಾಗಿ ನೀನು

ದಯವಿಟ್ಟು

ಬೆಳಕು ಹಚ್ಚು

ಕಿಚ್ಚು ಹಚ್ಚಬೇಡ!

5. ಆಕಾಶದ ಚಿತ್ರಗಳು

 ಯಾವುದೋ ‌ಅವ್ಯಕ್ತ ಶಕ್ತಿ      

 ನೇತು ಬಿಟ್ಟಂತಿರುವ ಕಲಶ

 ಕಳಚಿ ಬೀಳದ ಆಕಾಶ

******

 ಶತಮಾನಗಳಿಂದ

 ಕವಿಗಳ ಬಗೆ ಬಗೆ ಬಣ್ಣನೆಗೆ ಬಾಗದಂತೆ,

 ಖಗೋಳಜ್ಞರ ದುರ್ಬೀನು ದೃಷ್ಟಿಯ ಸೋಂಕಾಗದಂತೆ,

ಮತ್ತೆ ಈಗೀಗ ಬೆಳಂಬೆಳಗ್ಗೆಯೇ ಠೀವಿ ಜ್ಯೋತಿಷ್ಯ

ಮಹಾ ಗುರುಗಳ ತರಾವರಿ ವಿಶ್ಲೇಷಣೆಗೆ ತಲೆಕೆಟ್ಟು ಪಥಭ್ರಷ್ಟರಾಗದಂತೆ

ಆ ಸೂರ್ಯ ಚಂದ್ರ ತಾರಾಗ್ರಹಗಳ ಗುರುತ್ವವ ಕಾಪಾಡಿದ್ದು ಆಕಾಶದ ಅದ್ಭುತ

*******

 ಅಲ್ಲೊಬ್ಬಳು ಹಳೇ ನೈಟಿಯ ಆಂಟಿಗೆ

ಗೊರಕೆ ಗಂಡನ ಪಕ್ಕದಲ್ಲಿ ಮಲಗಿ

ನೂರು ನಿಟ್ಟುಸಿರುಗಳ

 ಕಾದ ನಟ್ಟಿರುಳಲ್ಲೂ ಇಂದ್ರಚಾಪದ ಬೆನ್ನೇರಿ

ಆಗಸಕ್ಕೇರುವ ಕನವರಿಕೆ,

ಬೆಚ್ಚೆದ್ದ ಗಂಡನ ಸಂಶಯದ ಕಂಗಳಲ್ಲಿ

ಗೌತಮನ ಶಾಪದ ಪಳೆಯುಳಿಕೆ

********

 ಧೂಮಕೇತುಗಳು ಉಲ್ಕೆಗಳು ಭುವಿಗಪ್ಪಳಿಸಲಿವೆಯೆಂಬ

ತಾಜಾ ಹಲ್ಕಾ ಸುದ್ದಿಗಳಿಗೂ ಜನರೀಗ ನಿರಾಳರಾಗಿರುವುದ ಕಂಡು

 ಅನಂತ ಆಕಾಶ ಹಲ್ಕಿರಿಯುತ್ತಿದೆ.

6. ಸ್ಪರ್ಶ

ಸ್ಪರ್ಶವೆಂದರೆ ಮೈಯಲ್ಲ ಮನಸ್ಸು

ದೇಹದುದ್ದಕೂ ಹೊರಟ ಗಂಡನ ಬೆರಳ ಸವಾರಿ

ಎದೆಹಾಲಿಗೆ  ತಡಕಾಡು‌ವ ಹಸುಳೆಯ ಪರಿ

ಹೆರಿಗೆ ಮಾಡಿಸುವ ಪುರುಷ ಡಾಕ್ಟರು

ವೈದ್ಯೋ ನಾರಾಯಣೋ ಹರಿ:

ಫುಟ್ ಪಾತಿನಲ್ಲಿ ಕೈಗಳಿಗೆ ಹಚ್ಚೆ ಹಾಕುವ

ಹುಡುಗ ಲುಚ್ಚನಲ್ಲವೆಂಬ ಖಾತರಿ

ಹೆಣ್ಣಿಗೆ ಸ್ಪರ್ಶವೆಂದರೆ

ನೂರು ಅನುಭವದ ದಾರಿ

ಸ್ಪರ್ಶವೆಂದರೆ ಮುಟ್ಟುವಿಕೆಯಲ್ಲ ತಟ್ಟುವಿಕೆ

ಪ್ರೇಯಸಿಯ ಕಣ್ಣ ನೋಟದ ಕಚಗುಳಿ

ಚುಚ್ಚುವ ನೆನಪು ತಬ್ಬುವ ಮೌನ

ಮಂಚದಿಂದೆತ್ತೆತ್ತಿ ಎಸೆಯುವ

ಮುಖಭಗ್ನ ನೆನಪುಗಳ ಕಬಂಧ ಬಾಹು

ಅನಾಸ್ತೇಶಿಯಾ  ಇಳಿದ ಬಳಿಕ

ಅಂಗಾಂಗ ಪಡೆವ ಪುನಶ್ಚೇತನ

ಧ್ಯಾನ ಸಮಾಧಿ ನಿರ್ವಾಣ

ಶಬ್ದಸ್ಪರ್ಶರೂಪರಸಗಂಧಾತೀತ

ಆತ್ಮನ ಸುಳಿವು ಆಧ್ಯಾತ್ಮದ ಹೊಳಹು!

7. ನನ್ನೊಳಗಿನ ದೇವರು

ನನ್ನೊಳಗಿನ ದೇವರು

ದುಃಖದ ಕ್ಷಣಗಳಲ್ಲಿ

ಬಿಗಿಯುಸಿರಾಗಿ

ಸಂತಸದ ಕ್ಷಣಗಳಲ್ಲಿ

ನಿರಾಳ ನಿಟ್ಟುಸಿರಾಗಿ

ನನ್ನ ಪ್ರಾಣ ಶಕ್ತಿಗೆ ತಾನೇ

ಸ್ವಾಭಾವಿಕ ಆಯಾಮವಾಗಿದ್ದಾನೆ

ನನ್ನೊಳಗಿನ ದೇವರು

ಮಕ೯ಟಾಸನವೇ ವ್ಯಸನವಾದ ಮನಸ್ಸಿಗೆ

ಎಲ್ಲಿ ಕೈಕಾಲು ಮಡಚಬೇಕು

ಎಲ್ಲಿ ಚಾಚಬೇಕು

ಎಲ್ಲಿ ತಲೆ ಎತ್ತಬೇಕು

ಎಲ್ಲಿ ಬಾಗಬೇಕೆಂಬ

ಸಹಜಾಸನಗಳನ್ನು

ಕ್ಷಣಿಕ ಭೋಗ

ಸುಯೋಗ ಸಂಯೋಗ

ಯೋಗಾಯೋಗಗಳ

ನಶ್ವರತೆಯ ಅನುಭವಗಳಿಂದ

ಅಂತಯೋ೯ಗವನ್ನೂ

ಕಲಿಸುತ್ತಿದ್ದಾನೆ

ಕಲಿಯುಗದಲ್ಲಿ

ಉಚ್ಚ್ವಾಸ ನಿಶ್ವಾಸ

ಧ್ಯಾನಯೋಗ ಆಧ್ಯಾತ್ಮಗಳು

ರಾಜಕೀಯದ ಆಡುಂಬೊಲದಲ್ಲಿ

ಮಾರಾಟದ ಸರಕಾದಾಗ

ನೀನು ಸಂತೆ ಪಾಲಾಗದೇ

ತನಗೆ ತಾನೇ ಗುರುವಾಗುವ

ಸ್ವಂತಿಕೆಯೇ ತಾನಾಗಬೇಕೆಂಬ

ಷರತ್ತಿನ ಮೇರೆಗೆ

ಜೀವನೋಪನಿಷತ್ತನ್ನು

ನನ್ನೊಳಗಿನ ದೇವರು

ನನಗೆ ಕಲಿಸುತ್ತಿದ್ದಾನೆ.

**********************************************

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ

Leave a Reply

Back To Top