ಕವಿತೆ
ಹಣೆಗೆ ಹಣೆ ಹಚ್ಚಿ
ನಾಗರಾಜ ಹರಪನಹಳ್ಳಿ
ಹಣೆಗೆ ಹಣೆ ಹಚ್ಚಿ
ಪಿಸುಮಾತಾನಾಡೋಣ
ಜಗಕೆ ಪ್ರೀತಿಯ ಹಾಡ ಹಾಡೋಣ
ಇರುವಷ್ಟು ದಿನಹಗಲು
ಜೀವ ಕಾರುಣ್ಯದ ಹಾಡ ಹಾಡಿ
ನೆಲದ ಜನಕೆ ಬದುಕ ಹಾಡೋಣ
ಸುಖವೋ ದುಃಖವೋ ಸಮನಾಗಿ ಸ್ವೀಕರಿಸಿ
ಹಣೆ ತುಂಬ , ಮನ ತುಂಬ ಸಿಹಿಯ ಹಂಚೋಣ
ಬದುಕೆಂಬುದು ಸುಖದ ಹಾಸಿಗೆಯಲ್ಲ
ಕಡು ಕಷ್ಟವನೆ ಹೊದ್ದ ದಾರಿಯೂ ಅಲ್ಲ
ಎಂಬುದು ಸಾರಿ ಹೇಳೋಣ
ಹಗಲು ಸೂರ್ಯನ ಪಯಣ
ಇರುಳು ಚಂದ್ರನ ಗಗನ
ಸುಳಿವ ಗಾಳಿಗೆ ದಣಿವಿಲ್ಲದಿರುವಾಗ
ದುಡಿಮೆ ಒಲುವೆ ಜೊತೆ ಜೊತೆಗೆ ಎಂಬ ತತ್ವ ಸಾರೋಣ
ಮಗನ ಹಣೆಗೆ ಹಣೆಯಿಟ್ಟು
ಬದುಕ ಪ್ರೀತಿಸುವುದ ಕಲಿಸೋಣ
ಪಿಸುಮಾತು ಎದೆಯೊಳಗೆ
ನುಡಿಗಟ್ಟು ಕಣ್ಣೊಳಗೆ
ಹಾಡಾಗುವ ಗುಟ್ಟ
ನಲಿಸಿ ಕಲಿಸೋಣ
ಪ್ರೀತಿ ಎಂಬುದು ಹಿಗ್ಗು
ಬದುಕು ಎಂಬುದು ಸುಗ್ಗಿ
ಹೋರಾಡಿ ಪಡೆದ ಸುಖವು
ಕೊನೆತನಕ ಎಂಬ ಗುಟ್ಟ
ಕಲಿಸೋಣ
ಹಣೆಗೆ ಹಣೆ ಹಚ್ಚಿ ಪ್ರೀತಿಸೋಣ
ಕೊನೆಯಿರದ ಬದುಕಿನ ಹಾಡ ಹಾಡೋಣ
ಕೊನೆಯಿರದ ಬದುಕಿನ ಪ್ರೀತಿ ಕಲಿಸೋಣ
**************************
ಆದರ್ಶ ದಾಂಪತ್ಯದ,ಸುಂದರ ಜೀವನದ ಸಂತೋಷದ ಕ್ಷಣಗಳ ಕೀಲಿಕೈ ಎಲ್ಲಿದೆ ಎಂಬುದನ್ನು ಭಾವಗೀತಾತ್ಮಕ ಶೈಲಿಯಲ್ಲಿ ಮೂಡಿ ಬಂದಿರುವ ಈ ಕವಿತೆ ತುಂಬಾ ಇಷ್ಟವಾಯಿತು.