ಕವಿತೆ
ಗಾಂಧಿ
ಡಾ.ಕಾತ್ಯಾಯಿನಿ ಕುಂಜಿಬೆಟ್ಟು.
ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂ
ಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತ
ಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆ
ಹೇ ರಾಮ್… ಹೇ ರಾಮ್… ಎನ್ನುತ್ತ…
ಎಷ್ಟೋ ಬಾರಿ
ಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟು
ಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟು
ಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆ
ಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿ
ಹಗಲು ರಾತ್ರಿ ಶುಶ್ರೂಷೆ ಮಾಡಿ
ಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆ
ಬಸುರಿ ಸೀತೆ ಹೊಟ್ಟೆಯೊಳಗೆ ಅವಳಿ
ಭ್ರೂಣಗಳ ಹೊತ್ತು ತಿರುಗಿದಂತೆ
ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿ
ತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ ಆಡು ಕುರಿ ಕೋಳಿಗಳ
ನಡುವೆ ಹಿಟ್ಟು ನಾದಿ ಮೊಟ್ಟೆಯಾಕಾರದಲ್ಲಿ ಲಟ್ಟಿಸಿ
ಬೆಂಕಿಯಲ್ಲಿ
ಅಹಿಂಸಾ… ಅಹಿಂಸಾ… ಎಂದು
ಚೀರುತ್ತಲೇ ಸುಟ್ಟ ರೊಟ್ಟಿಯಂತಹ ಹೃದಯ ಹೊತ್ತು ಒಣಕಲು ರೊಟ್ಟಿಯಂತಹ ದೇಹದ ದಂಟು ಕೈ ಕಾಲುಗಳಲ್ಲಿ ಹಾರು ನಡಿಗೆಯಲ್ಲಿ ಓಡುತ್ತಿದ್ದಾನೆ
ಕಡಲ ತಡಿಯಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಕುಳಿತವನ ಹೃದಯ
ಬಾಯ್ಬಾಯ್ ಬಿಡುತ್ತಿರುವ ಬಂಗುಡೆ ಮೀನಿನ ಮೈಗೆ ಉಪ್ಪು ಖಾರ ಹಚ್ಚಿದಂತೆ ಬೇಯುತ್ತ ಚೀರುತ್ತಿದೆ
ಕೃತ ತ್ರೇತಾ ದ್ವಾಪರ ಕಲಿ ಕಾಲಗಳು
ಯುದ್ಧ ಕೊಲೆ ರಕ್ತಪಾತದಲ್ಲಿ ನೆಂದು
ಪೂವ೯ದಲ್ಲಿ ಮೂಡಿದ ಸೂಯ೯ನನ್ನೇ ನುಂಗಿ ಪಶ್ಚಿಮಕ್ಕೆ ಉಗುಳುತ್ತಿವೆ
ನೀಲಿ ಆಗಸದಲ್ಲಿ ನೀಲಿ ಕಡಲಲ್ಲಿ
ಕೆಂಪು ಬಟ್ಟೆಯ ಹೆಣಗಳ ರಾಶಿ
ತೇಲುತ್ತಿವೆ
ಕೈಗಳನ್ನು ಚಾಚುತ್ತ ಅಹಿಂಸೆ ಅಹಿಂಸೆ… ಹೇ ರಾಮ್ ಹೇ ರಾಮ್ ಎಂದು ಚೀರುತ್ತಲೇ ಇವೆ
ಅಡ್ಡೆ ಹೊತ್ತ ತಾತ ನಡೆಯುತ್ತಲೇ ಇದ್ದಾನೆ
ಅವನ ಎದೆಯೊಳಗಿನ ಅಹಿಂಸೆಯ
ಬೆಂಕಿಯ ಬೇಗೆ ಸಹಿಸಲಾಗದೆ
ಫರಂಗಿಗಳು ಹೊರಗೆ ಓಡಿ ಹೋಗಿದ್ದಾರೆ…
ಗೋಡ್ಸೆ ಕೋವಿ ಸಹಿತ ಒಳ ನುಗ್ಗಿದ್ದಾನೆ
ಹೇ ರಾಮ್….!
ಕಣ್ಣು ಮುಚ್ಚಿದಾಗೆಲ್ಲ
ಎವೆಗಳ ಪರದೆಯ ಒಳಗೆ
ಬಿಳಿ ಕಚ್ಚೆಯ ಸಣಕಲು ಕಪ್ಪು ಮೈಯ ಆತ ಬೀಸ ಬೀಸ
ಓಡು ನಡಿಗೆಯಲ್ಲಿ ನಡೆಯುತ್ತಲೇ ಇರುತ್ತಾನೆ
ಮೆದುಳಿನಿಂದ ಹೃದಯಕ್ಕೆ
ಹೃದಯದಿಂದ ಮೆದುಳಿಗೆ
ಬೆಳಕು ಹೊತ್ತ ಮಿಣುಕು ಹುಳದಂತೆ
ಇಡೀ ಲೋಕದ ಹೃದಯ ಹೊಕ್ಕು
ಅಲ್ಲಿಂದ ಮೆದುಳಿಗೇರುತ್ತ ಇಳಿಯುತ್ತ ಏರುತ್ತ ಇಳಿಯುತ್ತ
ನಡೆಯುವ ಮೊದಲು
ಆತ ತನ್ನೊಳಗೆೇ ಕವುಚಿ ಬಿದ್ದು ಹೊಟ್ಟೆ ಎಳೆದು ಅಂಬೆ ಹರಿದು
ಕುಳಿತು ನಿಂತು ಬಿದ್ದು ಎದ್ದು
ನಡಿಗೆ ಕಲಿತಿದ್ದನಂತೆ
ಅದನ್ನು ನೋಡಲೆಂದು ಅವನೊಳಗೇ
ಸೂಯ೯ ಮೂಡಿದ್ದನಂತೆ
ಬೆಳಕು ಕೋಲನು ಊರಿ
ಕತ್ತಲ ಕೋಲ್ಮಿಂಚಂತೆ
ಬೀಸ ಬೀಸ ನಡೆಯುವ ಈ ಅಜ್ಜ
ಅಜ್ಜನಲ್ಲ… ಗಲ್ಲದಲ್ಲಿ ಮೊಲೆಹಾಲುಕ್ಕಿಸುತ
ಬೊಚ್ಚು ಬಾಯಲ್ಲಿ ನಗುವ ಮಗು
ಎದೆ ಎದೆಗಳಲ್ಲಿ ಹರಿಯುವ ಶಾಂತಿಗೊಂದು ರೂಪ ಕೊಟ್ಟು ನೋಡಿರಿ…
ಅವ ಗಾಂಧಿ
ಮನೆ ಮನೆಯಲ್ಲೂ ಗಾಂಧಿಯು
ಹುಟ್ಟುತ್ತಲೇ ಇರುತ್ತಾನೆ
ಬೊಚ್ಚು ಬಾಯಲ್ಲಿ ಮುದ್ದು ಮುದ್ದಾಗಿ ನಗುತ್ತ
ಮನೆ ಮನೆಯಲ್ಲೂ ಗಾಂಧಿ ಸಾಯುತ್ತಲೇ ಇರುತ್ತಾನೆ
ಬೊಚ್ಚು ಬಾಯಲ್ಲಿ ಹೇರಾo ಎನ್ನುತ್ತ
ಗೋಡ್ಸೆಯ ಗೋಡೆ ಗೋಡೆಗಳ ನಡುವೆ ಹಿಂಸೆಯ ಗೋಲಿಗಳಿಗೆ ಎದೆಯೊಡ್ಡಿ… ಇವನನ್ನು ಕ್ಷಮಿಸು ಎಂದು ಯೇಸು ವಾಗುತ್ತ
ಅಂಗುಲೀ ಮಾಲನ ಕಂಬನಿಯಲ್ಲಿ ತೊಯ್ದ ಬುದ್ಧನಾಗುತ್ತ
***********************
ವಾಹ್ ವಾಹ್… ಧನ್ಯೋಸ್ಮಿ