ಕವಿತೆ
ಮುಗುಳು
ಎಸ್ ನಾಗಶ್ರೀ
ಏನೂ ಹೇಳದೆಯೂ
ತಿಳಿದು ಹೋಗುವುದು
ನಿನಗೆ ಮಾತ್ರವೇ ಹೇಳು
ಅರೆಬರೆ ಉಳಿದ ಭಾವಗಳ
ಚಿಲ್ಲರೆ ಮೂಟೆಕಟ್ಟಿ
ಸಂತೆಯೊಳಗೆ ಸೋರಿಹೋಗುವ
ಮುಸ್ಸಂಜೆಯೊಂದರಲ್ಲಿ
ಮೆಲ್ಲ ಮೂಡುವ ಮುಗುಳು
ಆಗಸದಲಿ ಬಿದಿಗೆ ಚಂದ್ರ
ಎಂದೋ ಮರೆತ ಹಾಡೊಂದು
ಪಲ್ಲವಿಸುವುದು ಮಂದ್ರದಲಿ
ತೀರದ ಉಸುಕಲ್ಲಿ
ಮರಳುಗೂಡಿನ ಹೊಸಕನಸು
ಕೊಚ್ಚಿಹೋಗುವ ಹಲವಲ್ಲಿ
ಶೋಕವೂ ಸೇರಿದ್ದು ನೋಡು
ಮತ್ತೆ ಮತ್ತೆ ನಗುವೊಂದು
ಎದೆಯೊಳಗೆ ಹುಟ್ಟುವುದು
ಬೇಲಿಹೂವಿನ ರಂಗು
ಬಂಧನವ ಮರೆಸುವುದು
ಸಣ್ಣಗಿನ ಮಿಡುಕು ಧೈರ್ಯದಲಿ
ಅಡಗಿ
ಹೊಸದೊಂದು ಆಸೆ
ಪ್ರತಿದಿನದ ಕಡೆಗೆ
ಬದುಕಿದ್ದರೆ ಹೀಗೆ ಸಾಕು
ಮೌನಕೂ ನಗೆಯ ಬೆಳಕು
***************
Very nice..
Thank you…
ನಗೆಯ ಬೆಳಕು
ಸದಾನಿನ್ನದಾಗಲಿ
ಮುಗಳು ಕವಿತೆ
ಚೆನ್ನಾಗಿದೆ
Very Nice