ಸಹನಾರವರ ನ್ಯಾನೊ ಕಥೆಗಳು
ಸಹನಾ ಪ್ರಸಾದ್
ಆಡಲಾಗದ ಮಾತು
“ಅಲ್ಲಕಣೆ, ಏನಾಗಿದೆ ನಿನಗೆ? ಮಾತಿಲ್ಲ, ಮೆಸೇಜು ಇಲ್ಲ. ಎಲ್ಲಿ ಅಡಗಿದ್ಯಾ?”ಅವಳಿಂದ ಬಂದ ೫ನೆ ಸಂದೇಶಕ್ಕೆ ಇಷ್ಟವಿಲ್ಲದೆ ಇದ್ರೂಪ್ರತಿಕ್ರಿಯಿಸಿದೆ. “ಏನಿಲ್ಲ, ಸ್ವಲ್ಪ ಹುಷಾರಿಲ್ಲ, ಸ್ವಲ್ಪ ದಿನ ಬಿಟ್ಟುಸಿಗ್ತೀನಿ” ಟೈಪಿಸಿದವಳಿಗೆ “ಹೋದ ತಿಂಗಳು ನೀ ಮಾಡಿದ ಮಿತ್ರದ್ರೋಹ ಮನಸ್ಸನ್ನು ಕೊರೆಯುತ್ತ ಇದೆ. ಅದರ ಹಿಂಸೆಯಿಂದ ಇನ್ನೂ ಹೊರಬಂದಿಲ್ಲ. ಯಾಕೆ ಹೀಗೆ ಮಾಡಿದೆ? ಮೊದಲು ಹೇಳು!” ಎನ್ನುವ ಮಾತುಗಳು ಮನದಲ್ಲೇ ಉಳಿದವು.
ಸೊಪ್ಪಿನವಳು
“ಅವಳು ಯಾವಾಗ್ಲೂ ಜಾಸ್ತಿನೇ ಹೇಳೋದು. ನಿನ್ನ ಬುದ್ದಿ ಎಲ್ಲಿ ಹೋಗಿತ್ತು? ಇಷ್ಟು ಸಣ್ಣ ಕಂತೆಗೆ ೨೦ ರೂಪಾಯಿಗಳಾ? ಹೂ, ಕೊಡು, ಕೊಡು, ನನ್ನ ಮಗ ದುಡಿದ್ದಿದ್ದೆಲ್ಲ ನಿನ್ನ ದುಂದುವೆಚ್ಚಕ್ಕೆ ಸರಿಹೋಗುತ್ತದೆ!” ಸೀತಮ್ಮ ಸೊಸೆಯನ್ನು ಗದರುತ್ತಿದ್ದದ್ದು ಇಡೀ ವಠಾರದಲ್ಲಿ ಕರ್ಕಶವಾಗಿ ಕೇಳಿಬರುತ್ತಿತ್ತು. ಮರುದಿನ ದೊಡ್ಡ ಕಂತೆ ಕೊತ್ತಂಬರಿಸೊಪ್ಪು ಸೊಸೆಯ ಕೈಲಿಟ್ಟು ಸೊಪ್ಪಿನವಳು ಮೆಲು ನುಡಿದಳು ”ನೀ ೧೦ ರೂಪಾಯಿ ಕೊಡು, ಸಾಕು” ಹೊರಗಿನವರ ಅಂತಃಕರಣ ಮನೆಯವರಿಗಿಲ್ಲವಲ್ಲ ಎಂದು ಹಲುಬುತ್ತಾ ಬಸುರಿ ಹೆಣ್ಣು ಭಾರವಾದ ಹೆಜ್ಜೆಹಾಕುತ್ತಾ ನಡೆದಳು.
ಹೊಸಸೀರೆ
“ಇದ್ಯಾವಗ್ರೂಪ್” ಅಕ್ಕನ ಫೋನಿನಲ್ಲಿರೋ ಫೋಟೋ ನೋಡುತ್ತಾ ಕೇಳಿದಳು ವಿನುತ. “ಹೊಸದುಕಣೆ, ಸೀರೆಗ್ರೂಪ್. ನಮ್ಮ ಹತ್ತಿರ ಇರುವ ಸೀರೆಗಳನ್ನು ಒಂದೊಂದಾಗಿ ಉಟ್ಟು, ಪಟತೆಗೆದು, ಅದರ ಬಗ್ಗೆ ಬರೆದು ಪೋಸ್ಟ್ಮಾಡುವುದು”. “ಅಬ್ಬಾ, ಒಂದೊಂದು ಸೀರೆನೂ ಎಷ್ಟು ಸೊಗಸಾಗಿದೆ. ಇನ್ನು ಆ ರವಿಕೆಗಳೂ, ಅವುಗಳ ಶೈಲಿ, ಮಾದರಿಗಳೋ..ಸಕ್ಕತ್! ನನ್ನೂ ಸೇರಿಸೆ ಇದಕ್ಕೆ! ಮೊನ್ನೆ ತಾನೆ ಇವರು ಸುಮಾರು ಹೊಸ ಸೀರೆಗಳನ್ನು ಕೊಡಿಸಿದ್ದಾರೆ”ಮೆಚ್ಚುಗೆಯಿಂದ, ಹೆಮ್ಮೆಯಿಂದ ಹೇಳಿದ ತಂಗಿಯನ್ನು ನೋಡಿ ಅಕ್ಕ ಮೆಲುನುಡಿದಳು ”ಇಲ್ಲಿ ಒಂದೊಂದು ಸೀರೆ ಕೊಂಡಾಗಲೂ ಒಂದು ಹಳೆಸೀರೆಯನ್ನು ಯಾರಿಗಾದರೂ ಕೊಡಬೇಕು, ಆಗುತ್ತಾನಿನಗೆ?!”
ಎಳೆಮನಸ್ಸು
“ಅಪ್ರಯೋಜಕ,ದಡ್ಡ ನಿನ್ನಮಗ” ಅಪ್ಪನ ಕರ್ಣಕಠೋರ ಮಾತುಗಳು ಅವನನ್ನು ಚೂರುಚೂರು ಮಾಡಿದ್ದು ಇದು ಮೊದಲ ಸಲವಲ್ಲ. ಆದರೆ ಕೊನೆಯದಾಗುತ್ತೆ ಎಂದು ನಿರ್ಧಾರ ಮಾಡಿ, ಕಣ್ಣೀರನ್ನು ತೊಡೆದು ಎದ್ದ ಮಾಧವ. “ವಿಜ್ಞಾನ ನನಗೆ ಓದಲಿಕ್ಕೆ ಆಗೋಲ್ಲ, ಅಪ್ಪ. ನಾನು ಆರ್ಟ್ಸ್ ತೊಗೋತೀನಿ. ಅಮ್ಮ, ನೀ ಸಪೋರ್ಟ್ಮಾಡ್ತಿ ತಾನೇ” ಮಗನ ಮಾತಿಗೆ ಸುಮ್ಮನೆ ತಲೆಆ ಡಿಸಿದರೂ ಕಣ್ಣಲ್ಲಿ ಭರವಸೆ ಇತ್ತು. 5 ವರುಷದ ನಂತರ ಮಗ ಪತ್ರಿಕೋದ್ಯಮದ ಪ್ರಶಸ್ತಿ ಸ್ವೀಕರಿಸಿದಾಗ ಅಪ್ಪನ ಕಣ್ಣಲ್ಲೂ ಸಂತಸದ ಹೊನಲು!
ಇಷ್ಟೇಬದುಕು
“ಬೆಳಗ್ಗೆ ಸಂಜೆ ಬರೀ ಕೆಲಸ, ಕೆಲಸ, ಕೆಲಸ. ಕಚೇರಿಯಲ್ಲಿ ಮುಗಿಸಿ ಬಂದರೆ ಮನೆಯಲ್ಲೂಹೊರೆಗೆಲಸ. ಥೂ, ಇದೂ ಒಂದು ಬದುಕೇ!” ಗೊಣಗುತ್ತಾ ಕೆಲಸ ಮಾಡುತ್ತಿದ್ದ ಮಡದಿಯನ್ನು ನೋಡಿ ರವೀಂದ್ರನಿಗೆ ಕನಿಕರ, ಬೇಸರ ಎರಡೂ ಉಕ್ಕಿತು. ತಾನು ಬೇಸರಿಸಿ ಸಿಟ್ಟಾದರೆ ಅವಳೂ ಕಿರುಚಾಡಿ ಮನೆ ರಣರಂಗವಾಗುತ್ತದೆ ಎಂದು ಕ್ಷಣಕಾಲ ದೀರ್ಘ ಉಸಿರೆಳೆದುಕೊಂಡ. ಹೆಂಡತಿಯನ್ನಪ್ಪಿ “ಈ ಭಾನುವಾರ ಖಂಡಿತ ಹೊರಗೆ ಹೋಗೋಣ, ಆಯ್ತಾ”ಎಂದವಳ ನೆತ್ತಿಗೆ ಮುತ್ತನಿತ್ತಾಗ ಅವಳ ಅರಳಿದ ಮುಖ ತಾವರೆಯನ್ನೂ ನಾಚಿಸುವಂತಿತ್ತು!
ನಾಏನುಮಾಡಲಿ
ಆರ್ಜಿಯನ್ನೊಮ್ಮೆ, ಅವಳನ್ನೊಮ್ಮೆ ದಿಟ್ಟಿಸಿ ನೋಡಿದರು ಹೆಡ್ಮ್ಯಾಡಮ್. “ಸರಿಯಾಗಿ ಯೋಚಿಸಿದೀರ, ಸೀಮಾ?”ಅವರ ಮಾತಿಗೆ ತುಂಬಿ ಬಂದ ಕಣ್ಣೊರೆಸಿಕೊಂಡು ಧೈರ್ಯವಾಗಿನುಡಿದಳು“ಜಾಸ್ತಿಯೋಚಿಸಿಲ್ಲ. ಏಕೆಂದರೆ ಯೋಚಿಸಿದಷ್ಟೂ ಸಮಸ್ಯೆ ಹೆಚ್ಚಾಗುತ್ತಿದೆ” ಮರುಮಾತಾಡದೆ ಟ್ರಾನ್ಸ್ಫ ರ್ ಬರೆದು ಕೊಟ್ಟರು. ಗಂಡನಿಗೆ ಯಾವಾಗಲೂ ಕೆಲಸದ ಚಿಂತೆ, ಮನಸ್ಸು ಸದಾ ಆಫೀಸಿನಲ್ಲಿ. ಒಂಟಿಯಾಗಿ ಸಮಯ ಕಳೆದು ಸಾಕಾಗಿತ್ತು ಸೀಮಾಳಿಗೆ. ಓಡಿ ಹೋಗುವುದು ಸರಿಯಾದ ಆಯ್ಕೆಯಲ್ಲ, ಆದರೂ ಕಷ್ಟಪಟ್ಟು ಜತೆಯಲ್ಲಿರುವುದಕ್ಕಿಂತ ಇದು ಮೇಲು ಎಂದು ಧೈರ್ಯ ಮಾಡಿದಳು.
***********************************
*********************************