ಪುಸ್ತಕ ಪರಿಚಯ
ಮನ ಸೆಳೆವ ಇರುಳ ಹೆರಳು
[11:15 am, 11/10/2020] YAKOLLY: ತಮ್ಮಮೊದಲ ಹನಿಗವನ ಸಂಕಲನ ಪಿರುತಿ ಹನಿಗಳು ಸಂಕಲನಕ್ಕೆ ಅತ್ಯತ್ತಮ ಸಂಕಲನ ಪ್ರಶಸ್ತಿ ಪಡೆದ ಪ್ರತಿಭಾವಂತ ಕವಿ ನೀ ಶ್ರೀಶೈಲ ಅವರು ಕವಿಯಾಗಿ ಮಾತ್ರವಲ್ಲ,ಒಳ್ಳೆಯ ಗೆಳೆಯನಾಗಿ ಹೃದಯ ಗೆದ್ದವರು.ಅವರ ಭಾವದ ಪಲಕುಗಳನ್ನು ದಿನವೂ ಮುಖ ಪುಸ್ತಕದಲ್ಲಿ ಓದಿ ಮರುಳಾಗುತ್ತಿರುವವನು ನಾನು.ಹನಿಗವನ ಲೋಕದಲ್ಲಿ ತುಂಬ ಸುಂದರವಾದ ರಚನೆಗಳನ್ನೇ ಕೊಟ್ಟಿರುವ ಶ್ರೀಶೈಲ ಅವರ ಕವಿತೆಯ ತುಂಬ ತುಂಬಿದ ಪ್ರೀತಿಯ ಬೆಳಕನ್ನು ಬೊಗಸೆ ತುಂಬಿ ಹಿಡಿಯಲೂ ಆಗದೆ ನನ್ನ ಸುತ್ತಲೂ ಹರಡಿಕೊಂಡ ಆನಂದವೂ ನನಗಿದೆ. ಹನಿಗವನ ಗಳ ಪ್ರೇಮ ಮಾಯೆಯ ಕುರಿತು ಮತ್ತೊಮ್ಮೆ ಬರೆಯುವ ಅವಕಾಶ ದೊರೆಯಬಹುದೆಂಬ ಆಸೆಯಿದೆ. ಈಗ ನನ್ನ ಮುಂದಿರುವದು ೨೦೧೭ ರಲ್ಲಿ ಪ್ರಕಟವಾದ ಅವರ ಕವನ ಸಂಕಲನ ಇರುಳ ಹೆರಳು ನನ್ನ ಮುಂದಿದೆ.ಸಮಕಾಲೀನ ಕನ್ನಡದ ಪ್ರಮುಖ ಕವಿ ಸವದತ್ತಿಯ ನಾಗೇಶ ನಾಯಕರವರು ಸಂಕಲನದ ಅಂತರಂಗವನ್ನೇ ತೆರೆದಿಡುವಂತಹ ಚಂದದ ಬೆನ್ನುಡಿ ಬರೆದಿದ್ದಾರೆ.ಜೀವ ಮುಳ್ಳೂರ ಅವರ ಎದೆ ತೆರೆದ ಮಾತುಗಳು ಸಂಕಲನದ ಅಂದಕ್ಕೆ ಮುನ್ನುಡಿ ಬರೆದಿವೆ.
ಇಲ್ಲಿಯವರೆಗೆ ಹನಿಗವಿತೆಗಳನ್ನೇ ಬರೆದ ಕವಿ ಕವನಸಂಕಲನ ಪ್ರಕಟಿಸುವ ಆಸೆ ವ್ಯಕ್ತ ಪಡಿಸುತ್ತಾ ತಮ್ಮ ಬದುಕಿನ ದುರಿತದ ಬಗೆಗು ಅದಕ್ಕಿಂತ ಮಿಗಿಲು ಕಾಣೆಯಾದ ಹಿರಿಯ ಜೀವ,ಸಾಹಿತ್ಯ ಪೋಷಕ ದಿವಂಗತ ಅರ್ಜುನ ಕೊರಟಕರ ಸರ್ ಬಗೆಗೆ ಬರೆದಿರುವ ಮಾತುಗಳು ಎದೆ ಹಿಂಡುತ್ತವೆ.
ಇಲ್ಲಿನ ಕವಿತೆಗಳ ಅಂದ ವಿಮರ್ಶೆಯ ಮಾನದಂಡದಾಚೆಯೂ ಮರುಳಾಗುವಷ್ಟು ಚಂದವಿವೆ.ತುಂಬ ಸರಳವಾಗಿ ಶ್ರೀಶೈಲ ಬದುಕಿನ ಆತಂಕಗಳನ್ನು ಅನಾವರಣಗೊಳಿಸುತ್ತಲೇ ಬಾಳನ್ನು ತುಂಬಿರುವ ಪ್ರೀತಿ ಮಾಯೆಯ ಬಗೆಗೂ ಬರೆದಿರುವದು ಮನ ಹಿಡಿಸುವದೆಂದರೆ ಅತಿಶಯೋಕ್ತಿಯ ಮಾತಲ್ಲ..ಇಲ್ಲಿನ ಕವಿತೆಗಳು ಇನಿಯಳ ಹೆರಳಿನಷ್ಟೇ ಮೃದು ಮತ್ತು ವ್ಯಾಮೋಹ ಹುಟ್ಟಿಸುವಂತಿವೆ.ನವಿರೋನ್ಮಾದ ಕವಿತೆಯ ಈ
ಸಾಲುಗಳನ್ನು ನೋಡಿ,
ಬಿಸಿಯುಸಿರ ಸವಿ ಸೋಕಿ
ದಾಗಲೆಲ್ಲ ರೋಮಾಂಚನ
ಕಣ್ ಕೊಳದಲೆಲ್ಲ ತಣ್
ಗಿರಣಗಳ ತೂರುವ ಅಗ್ನಿದಿವ್ಯ
ಎನ್ನುವ ಕವಿ ಇಲ್ಲವಾಗುವದಾದರೂ ಅಲ್ಲಿಯೂ ಪ್ರೇಮವೇ ಇರಲಿ ಎನ್ನುವದಕ್ಕೆ
ತೆರೆಯ ನಲಿವಿನ ನವಿಲ
ಹರಿಗುಂಟ ಸಾಗೋಣ
ಮುಳುಗಿದರೂ ಜೇಂಗಡಲಲಿ
ಹೆಣವಾಗಿ ತೇಲೋಣ
ಎನ್ನುವದು ನಿಜವಾದ ಪ್ರೇಮಿಯ ಬಾಳ ಉದ್ದೇಶವೇ ಆಗಿಸೆ.ಈ ಪ್ರೇಮ ಮಾಯೆಯ ಯಾರಾದರೂ ಎಂದಾದರೂ ಬರೆದು ಮುಗಿಸಿದ್ದಾರೆಯೇ,?ಅದಕ್ಕೆ ಕವಿ
ಬಾನ ದಾರಿಗುಂಟ ನಡೆವೆ
ನಿನ್ನ ತೋಳಮೇಳದಲ್ಲಿ
ಚಂದ್ರ ತಾರೆ ಹಿಡಿದು ತರುವೆ
ಕಣ್ಣ ಬಿಂಬದಾಳದಲ್ಲಿ
ಕಣ್ಣ ಬಿಂಬದಾಳದ ಚಂದ್ರ ತಾರೆ ಹಿಡಿದು ತಂದವರೇ ಧನ್ಯರು .ಅದು ಆಸೆಯಷ್ಟೇ ! ಇಲ್ಲದಿರೆ ನಲ್ಲಳ
ಇರುಳಿಡೀ
ಧಾರಾಕಾರವಾಗಿ
ಸುರಿಸು ಗುಡುಗು
ಮಿಂಚು ಸಹಿತ
ಬಿರುಮಳೆ!
ಎಂಬ ಕೋರಿಕೆಯ ಅಗತ್ಯವಿರಲಿಲ್ಲ.’ಕಂಡಿಲ್ಲ ಯಾರೂ ಆಚೆಯ ದಂಡಿ’ ಎಂದು ಕವಿ ಸುಮ್ಮನೆ ಹಾಡಿಲ್ಲ.ಬ್ರಹ್ಮಕಮಲದ ಆಸೆ ಇದ್ದಷ್ಟೂ ಬದುಕಲ್ಲಿ ಸಂತಸದ ಪಸೆಯೊಸರುತ್ತದೆ.ಈ ಅರಕೆ ನಿರಂತರ ಇದ್ದರೇನೆ ಚಂದ .ತೃಪ್ತಿಯ ಮಾತೆಲ್ಲಿ? ಈ. ಎಲ್ಲ ಅರಕೆಯ ಪಲಕುಗಳ ಸಾಕ್ಷಿಯಾಗಿ ಸಂಕಲನದ ಹಲವು ಕವಿತೆಗಳನ್ನು ಉದಾಹರಿಸುತ್ತಾ ಹೋಗಬಹುದು.ನನ್ನ ಆ ಆಸೆಯನ್ನು ಬೇಕೆಂತಲೇ ತಡೆ ಹಿಡಿದಿದ್ದೇನೆ .ಮೂಗಿಗಿಂತ ಮೂಗುತಿ ಭಾರವಾಗದಿರಲೆಂದು.
ಸಮಕಾಲಿನ ಕಾಳ ಕೂಟಗಳತ್ತಲೂ ಕವಿ ಗಮನ ಹರಿಸಿರುವದು ಅವರ ಕವಿತೆ ಏಕಮುಖಿಯಲ್ಲ ಎನ್ನುವದಕ್ಕೆ ಸಾಕ್ಷಿ .ರೈತನ ಬದುಕು ದುಃಖದ ಸರಪಳಿಯಲ್ಕಿ ಸಿಲುಕಿನಲ್ಲಿ ನಲುಗುವದನ್ನು ಬರೆಯುವ ಕವಿ ಇದಕ್ಕೆ ಎಲ್ಲೋ ಒಂದಿಷ್ಟು ನಾವೂ ಕಾರಣರಾಗಿರುವದನ್ನು ಸೂಚಿಸುತ್ತಾರಾದ್ದರಿಂದಲೇ ಅವರ ಕವಿತೆ ಇಷ್ಟವಾಗುತ್ತದೆ. ಕವಿಗೆ ಈ ಪ್ರಾಮಾಣಿಕ ಪ್ರಜ್ಞೆ ಇರದಿದ್ದರೆ ಬರೆಯುವ ಸಾಲುಗಳು ಈಟಿಯಾಗಿ ಚುಚ್ಚತೊಡಗುತ್ತವೆ. ಕುಟಿಲಕೂಟ ಕವಿತೆಯಲ್ಲಿ ಬೆಳೆದು ಬಂದ ಹೊಲಗದ್ದೆ ಗುಡಿಸಲುಗಳ ಮರೆತಿರುವ ನಮ್ಮನ್ನು ಚುಚ್ಚಲೆಂದೇ ಕವಿ
ಕುಡಿವ ನೀರಲಿ
ಮನಸೋ ಇಚ್ಛೆ ಈಜಾಡಿ
ತುಚ್ಛತನದಿ ಆ ಸ್ವಚ್ಛ
ನೀರಲೇ ಉಚ್ಛೆ ಹೊಯ್ವ
ಕೊಚ್ಚೆ ಮನಸಿನ ಲುಚ್ಛಾ
ಲಪಂಗರು ನಾವು
ಆಕ್ರೋಶ ಪ್ರಾಮಾಣಿಕವಾದಾಗಲೇ ಇಷ್ಟು ತೀವ್ರ ಹರಿತ ಪದಗಳಿಗೆ ಬರುವದು.ಕವಿತಾ ಸಂಕಲನದ ಕೆಲವು ಸಮಾಜಮುಖಿ ಕವಿತೆಗಳು ತಮ್ಮ ಇರವನ್ನು ಸಾರ್ಥಕಗೊಳಿಸಿವೆ. ಮಲ್ಲಿಗೆಯ ಮನದ ಈ ಕವಿಯ ಬತ್ತಳಿಕೆಯಲ್ಲೂ ಬಾಣ ಬಿರುಸಿಗಳಿರುವದಕ್ಕೆ ಸಾಕ್ಷಿಯಾಗಿವೆ.
ಕೊರಗುಗೊರಳು,ಹೇಳಿ ಬಿಡೊಮ್ಮೆ, ಭಾವ ಸ್ಪುರಣ ಮೊದಲಾದ ಕವಿತೆಗಳು ಹಾಡಾಗಿಯೂ ರಾಗ ಸಂಯೋಜನೆಯ ಸಂಗ ಬಯಸುವ ಗೀತಗಳಾಗಿವೆ.
ಮನೆಯ ಮುಂದಿರುವ ಸಾಕು ನಾಯಿಯೂ ಕೂಡಾ
ಮನೆಗೆ ಬರುವ ಅತಿಥಿಗಳನು
ನಾದಸ್ವರದೆ ಸುಮ್ಮನಿರಿಸಿ
ಒಡೆಯನನ್ನು ಕೂಗಿ ಕರೆವ
ಪರಮಾಪ್ತ ಬಂಧುವೇ !
ಎಂಬಂತೆ ಕಂಡ ಕವಿಯ ಮನುಷ್ಯತ್ವದ ಪರಮಾವಧಿ
ಭಾವಕ್ಕೆ (ಕವಿತೆಯ ಹೆಸರೂ ನಾಯಿಯಲ್ಲ,ತಾಯಿ) ಶರಣಾಗಲೇಬೆಕೆನಿಸುತ್ತದೆ.
ಅಪರೂಪಕ್ಕೊಮ್ನೆ ಒಂದು ಒಳ್ಳೆಯ ಕವನಸಂಕಲನ ಸಿಕ್ಕಾಗ ಬರೆಯುತ್ತಲೇ ಹೋಗಬೇಕೆನಿಸುತ್ತದೆ.ಪ್ರತಿ ಕವಿತೆ ಎತ್ತಿ ಹೇಳಿ ಓದುಗರ ಸವಿಯ ರುಚಿ ಕೆಡಿಸಬಾರದಲ್ಲವೇ? ನಾಕು ಸಾಲು ಬರೆವ ನಮಗಿಂತ ಇಡೀ ಸಂಕಲನ ಓದಿ ಸಂತಸ ಪಡುವ ಮನಸುಗಳು ಹಲವಿರುವಾಗ ನಡುವೆ ನಮ್ಮಂಥವರದು ಮಿತಿ ದಾಟುವ ಹುಚ್ಚುತನವೂ ಆಗಬಹುದು.
ನೀ.ಶ್ರೀಶೈಲ ಅವರ ಸಮಗ್ರ ಹನಿಗಳ ಓದಿಗೆ,ಪ್ರಾಮಾಣಿಕ ಓದುಗನಾಗಿ ನಾನು ಕಾಯ್ದಿರುವೆ
*****************************.
ಡಾ.ವೈ.ಎಂ.ಯಾಕೊಳ್ಳಿ