ಕವಿತೆ
ಚಿಂದಿ ಆಯುವ ಕುಡಿಗಳು
ನೂತನಾ ದೋಶೆಟ್ಟಿ
ಆಗಸವ ಬೇಧಿಸುವ ಸೂರು
ಚಂದ್ರನಿಗೂ ಗಾಬರಿ
ಪ್ರೇಯಸಿಯ ಮೈಮೇಲೆ
ಪ್ಲ್ಯಾಸ್ಟಿಕ್ಕಿನ ಗಾಯ
ಬೆಳದಿಂಗಳೂ ಆರಿಸದ ಬೇಗೆ
ಓಝೋನಿನ ತೇಪೆಯಲ್ಲಿ
ಇಣುಕುವ ಸೂರ್ಯ
ಸತಿಯ ಜಾಲಾಡುವ ಅವನು
ಸಹಿಸಲಾಗದ ಧಗೆ
ಮತ್ಸರವೇಕೆ?
ಅವಳ ಪ್ರಶ್ನೆ
ಒಡಲ ಮಮತೆಯ ಕುಡಿಗಳವು
ಎದೆ ಭಾರ ಕಳೆಯುವವು
ನೀರ ಕಾಣದ ದೇಹ
ಹಣಿಗೆ ಸೋಕದ ತಲೆ
ಸಿಗುವ ರೂಪಾಯಿಗೆ
ಏನೆಲ್ಲ ಬವಣೆ ಸೈರಣೆ!
ತಾಯ ಮಮತೆಗೆ
ಪ್ರೇಮಿಗಳ ಹನಿಗಣ್ಣು
ಹೆತ್ತೊಡಲ ಉರಿಗೆ
ಗೋಳಿಟ್ಟ ರಾತ್ರಿಗಳು
ಹರಸಿದವು ಕೈಯೆತ್ತಿ
ಚಿಂದಿ ಆಯುವ ಕುಡಿಗಳ
ಇರಲೆಂಟು ಜನುಮ
ಎಲೆ ತುಂಬಿ ಉಣಲಿ
ಕನಸುಗಳ ನಿದ್ರಿಸಲಿ
ನಿನ್ನ ಸ್ವಚ್ಛ ಮಡಿಲಲ್ಲಿ
**********************
ಪ್ಲಾಸ್ಟಿಕ್ಕಿನ ಗಾಯ ಮಾಡಿದವರು ಅವಳದೇ ಮಕ್ಕಳು
Kannera bavane
Alisuvarilla
Avara kathe
Keluvavarilla…