ಪಟ್ಟದರಸಿಯೊಂದಿಗೆ ಪಟ್ಟಾಂಗ

ಕವಿತೆ

ಪಟ್ಟದರಸಿಯೊಂದಿಗೆ ಪಟ್ಟಾಂಗ

ಪ್ರೇಮಶೇಖರ

ಪಟ್ಟದಕಲ್ಲಿನ ಪಟ್ಟದರಾಣಿಯೇ

ಇಷ್ಟದ ಒಡವೆಯ ಕೊಡಿಸುವೆ ಬಾ.

ಕಷ್ಟವೇ ಆದರೂ, ನಿದ್ರೆಯೇ ಹೊದರೂ

ತರುವೆನು ಸರವನು ನಿನಗೊಂದ.

ಮೈಸೂರಿನ ಶೂರನೇ, ಪ್ರಾಣಕಾಂತನೆ

ಒಡವೆಯು ನನಗೆ ಬೇಡಪ್ಪ.

ಮಳೆಗಾಲಕೆ ಮೊದಲೇ ಸೋರುವ

ಸೂರನು ಚಂದಕೆ ನೀನು ಹೊದಿಸಪ್ಪ.

ಸೂರಿನ ಕೆಲಸವ ನಂತರ ಮಾಡುವೆ,

ಮೊದಲಿಗೆ ನಿನ್ನ ಕೊರಳನು ತುಂಬುವೆ

ಕಿವಿಯಲಿ ಓಲೆಗಳೆರಡನು ಅಂಟಿಸುವೆ,

ಜುಮಕಿಗಳೆರಡನು ತಂದೂ ಕೂಡಿಸುವೆ.

ಓಲೆಯು ಬೇಡ, ಜುಮಕಿಯೂ ಬೇಡ,

ಒಡವೆಯ ಗೊಡವೆಯು ಬೇಡವೇಬೇಡ.

ಮಳೆಗೇ ಮೊದಲೇ ಕಣಜವ ತುಂಬಪ್ಪ,

ಒಡವೆಯ ಕನಸನು ಸದ್ಯಕೆ ನೀ ಮರೆಯಪ್ಪ.

ಕಣಜದ ಕಥೆಯನು ನಾಳೆಗೆ ನೋಡುವೆ,

ರಾಗಿಯೇ ಏಕೆ, ಭತ್ತವ ತುಂಬುವೆ.

ನೋಡಲಾರೆನಿಂದು ನಿನ್ನಯ ಬರಿಗೈಗಳನು,

ತರಬೇಕಿದೆ ಈಗಲೇ ಅಂದದ ಬಳೆಗಳನು.

ರೊಟ್ಟಿಯ ತಟ್ಟಲು ಹಿಟ್ಟೇ ಇಲ್ಲ,

ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯಲ್ಲ!

ಕನಕದ ಕನಸಿಗೆ ಸಮಯವಿದಲ್ಲ,

ಬೇಗನೆ ಹೋಗಿ ಸೇರು ರಾಗಿ ನೀ ತರುವೆಯಲ್ಲ?

ರಾಗಿಯ ಚಿಂತೆ ಈಗಲೇ ಯಾಕೆ?

ಹೊಟ್ಟೆಯ ಹಸಿವನು ಕೆದಕುವೆಯೇಕೆ?

ಬಾ ನಿನ್ನಯ ಹೊಟ್ಟೆಯ ಮೇಲೆ ಡಾಬನು ಕಟ್ಟುವೆ,

ನಿನ್ನಯ ಕೈಯನು ಹಿಡಿದು ದರ್ಪದಿ ವಾಕಿಂಗ್ ಹೋಗುವೆ.

ನಿಮ್ಮಯ ಷರಾಯಿಯು ನೆಟ್ಟಗೆ ಹರಿದಿದೆ,

ಅಂಗಿಯಲೆರಡು ತೂತೂ ಬಿದ್ದಿವೆ.

ತೊಟ್ಟು ಹೇಗೆ ನಡೆವಿರಿ ನೀವು ಊರ ಮಧ್ಯದಲಿ?

ನಾ ಒಗೆದು ಹೇಗೆ ಒಣಹಾಕಲಿ ಅದನು ಹಿತ್ತಲಲಿ?

ಷರಾಯಿ ಹರಿದರೆ ಪಂಚೆಯ ಹಾಕುವೆ,

ಅಂಗಿಯ ಎಸೆದು ಶಲ್ಯವನೇರಿಸಿ ನಡೆವೆ.

ಚಿಂತೆಯ ಬಿಡು ನೀ ಚಿನ್ನಾರಿ ಚೆಲುವೇ,

ಈಗಲೇ ನಿನಗೆ ನಾ ಕಾಲ್ಗೆಜ್ಜೆಯ ತರುವೆ.

ಕಾಲ್ಗೆಜ್ಜೆಯ ಕಟ್ಟಿ ನಾ ಕುಣಿಯಲಿ ಎಲ್ಲಿ?

ಸುಮ್ಮನೆ ಯಾಕೆ ಮಾತಿನ ಬಡಿವಾರವಿಲ್ಲಿ?

ಸೂರನು ಹೊದಿಸದೆ, ಕಣಜವ ತುಂಬದೆ ಹೋದರೆ ನೀವೀಗ,

ಮೊದಲ ಮಳೆಗೂ ಮೊದಲೇ ನಾ ನಡೆವೆ ತವರಿಗಾಗ.

ಸೂರನು ಹೊದಿಸುವೆ, ಕಣಜವ ತುಂಬುವೆ ಕೇಳೇ ಜಾಣೆ.

ನಾ ಎಲ್ಲ ಮುಗಿಸಿದ ಮೇಲೆ ಬಾ ನೀ ಬಿಟ್ಟು ಅಡುಗೆಕೋಣೆ.

ಪಟ್ಟದಕಲ್ಲಿನ ಪಟ್ಟಣಶೆಟ್ಟಿಯ ಮುದ್ದಿನ ಕೂಸೇ,

ತಗೋ ಈಗಲೇ ಕೈ ಮೇಲೆ ಭಾಷೆ.

ಹೇ ಮೈಸೂರು ಮಹಾರಾಜ, ಓ ಮೈ ಲಾರ್ಡ್!

ಸೂರೂ ಸೊಗಸಿದೆ, ನೆಲವೂ ಹಸನಿದೆ,

ಕಣಜದ ತುಂಬ ಭತ್ತವು ತುಂಬಿದೆ.

ನಾ ಸುಮ್ಮನೆ ನಿನ್ನಯ ಕಾಲೆಳೆದೆ.

ಪಟ್ಟದಕಲ್ಲಿನ ಅತ್ತೆಯ ಮಗಳೇ, ತುಂಟ ತರಳೆ,

ತಿಳಿಯದೇ ನನಗೆ ನನ್ನಯ ಪಟ್ಟದರಸಿ ಯಾರೆಂದು?

ಇದನರಿತೇ ನಾ ಹಿಡಿದೆ ನಿನ್ನಯ ಕೈಯನು ಅಂದು.

ಕಟ್ಟಿದೆ ಎನ್ನೆದೆಯರಮನೆಯನು ನೀ ಮೈಸೂರಿಗೆ ಬಂದು.

ನನ್ನೀ ಕೊರಳಲಿ ಕನಕ ಕಂಠೀಹಾರ,

ಕೆಳಗೆ ಕಾಲ್ಬೆರಳಲಿ ಬೆಳ್ಳಿಯ ಕಾಲುಂಗುರ,

ಎರಡರ ನಡುವೆ ಹಲವು ಹತ್ತು ಬಂಗಾರ,

ನಿನಗಾಗೇ ನನ್ನ ಈ ಎಲ್ಲ ಸಿಂಗಾರ.

ನಡೆಯೋ ಎನ್ನಯ ಕೈಹಿಡಿದು‍, ನನ ಸರದಾರ.

==========================

2 thoughts on “ಪಟ್ಟದರಸಿಯೊಂದಿಗೆ ಪಟ್ಟಾಂಗ

  1. ನಾಟಕದ ಲಘು ಗೀತೆಯಂತೆ, ಸೇರಿಸಿ ತುಂಬಿದ ಸರಳ ಡ್ಯೂಯಟ್…ಭಿನ್ನವಾಗಿ ಚೆನ್ನಾಗಿದೆ.

Leave a Reply

Back To Top