ಕವಿತೆ
ಅರೆನಗ್ನ ಕನಸು
ಕಾವ್ಯ ಎಸ್.

ನಿನ್ನ ಅರೆ ಬೆಳಕಿನ ಇಬ್ಬನಿಯ ಮನೆಯಲ್ಲಿ
ನಾ ಒದ್ದೆಯಾಗಿ ಒಣಗುತ್ತಿರುವಾಗ
ಕೋಲ್ಮಿಂಚಂತೆ ನೀ ಹೊಕ್ಕೆ
ಚಳಿಯನ್ನು ತಬ್ಬಲಿಯಾಗಿ ಹೊದ್ದಿದ್ದ ನನಗೆ
ಕಣ್ಣುಗಳಿಂದ ಬಿಟ್ಟ ಇರುವೆ ಮೈಯೆಲ್ಲಾ ಸುತ್ತುತ್ತಿದೆ
ನಿನ್ನ ಎದುರಿನ ಅಂತರದಲ್ಲಿ ನಾ ಮುದುಡಿದರೆ
ತುಟಿಯಂಚಿನ ಮೊಗ್ಗಿನ ತಾವರೆಯು ಮುಡಿಯಲ್ಲಿ
ಬಿಸಿ ಉಸಿರಿನ ತಾಪಕ್ಕೆ ಹಬ್ಬಿ ಚುಂಬನದ
ಅಂಬರಕ್ಕೆ ಅರಳಿದ ಕೊಡೆಯಾಯಿತು
ನಿನ್ನ ಕೆಮ್ಮಣ್ಣು ತುಟಿಯಲ್ಲಿ ನನ್ನ ರೂಪು
ಬಿತ್ತಿದಾಗ ನನ್ನೊಳಗೆ ನವಿಲುಗಳು ಗುಂಪುಗಟ್ಟಿ
ನೃತ್ಯವಾಡಿದ್ದವು
ಹಿಡಿದೆಳೆದ ಒರಟು ರಭಸದ ಬಿಗಿತಕ್ಕೆ
ಕೆನ್ನೆಯ ಗುಳಿಯ ಕಚಗುಳಿಯಲ್ಲಿ ನಗುವ
ಕಂದಮ್ಮನಾಗಿದ್ದೆ
ಅಡ್ಡಾ ದಿಡ್ಡಿನ ಹಾಸು ಹೊಕ್ಕಳ್ಳಲ್ಲಿ ಮಲಗಿದ ನನಗೆ
ಮತ್ತದೇ ಇರುವೆ ಮತ್ತೆ ತೆವಳಿದಾಗ ಮೈಯೆಲ್ಲಾ
ಕಾದ ಬಾಣಲೆ ಎಣ್ಣೆಯಲ್ಲಿ ಅದ್ದಿದಂತಾಗಿ ಮೀನಾಕಾರದ
ಕಣ್ಣು ಬಿಟ್ಟಾಗ ಬವಣೆ ಯಮರಾಯನ
ಕುಣಿಕೆ ಪಾಶಕ್ಕೆ ಬೆವೆತು ನೀರಿನ ಹೊಳೆಯಲ್ಲಿ ಈಜಾಡಿ
ಮುಳುಗಿದ್ದೆ.
*************************