ತಲೆದಿಂಬಿನೊಳಗೆ ಅವಿತ ನಾ

ಕವಿತೆ

ತಲೆದಿಂಬಿನೊಳಗೆ ಅವಿತ ನಾ

ಡಾ. ರೇಣುಕಾ ಅರುಣ ಕಠಾರಿ

man standing infront of window

ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾ
ಸದ್ದಿಲ್ಲದೆ ತಲೆದಿಂಬಿನೊಳಗಿನಿಂದ
ಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆ
ಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.
ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ.

ಕಾಡುವ ಕನಸುಗಳು ಘಳಿಗೆಗೆ ಒಮ್ಮೆ
ನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.
ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,
ನದಿಯನ್ನು ದಾಟಲು ಸೇತುವೆಯಂತೆ,
ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.
ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆ
ಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ.

ಜೊತೆಯಾಗಿ ಬರುತ್ತೇನೆ,
ಉಸಿರಿಗೆ ಉಸಿರಾಗಿ ಇರುತ್ತೇನೆ
ನಿನ್ನ ತಲೆ ಬೆನ್ನಿಗೆ ಬಿಂಬವಾಗಿರುತ್ತೇನೆ, ಎಂದು
ಬಂದವನು ನಿನ್ನ ಋಣ ತೀರಿತ್ತೆಂದು
ಬಂದ ದಾರಿಗೆ ನಡೆದು ಬಹುದೂರ ಹೋಗಿದ್ದಾಯಿತು.
ಆಗ ಕಟ್ಟಿದೆಲ್ಲವೂ ಬರೀ ಉಳಿದ ಖಾಲಿ ಕನಸುಗಳು.

ಬಯಲು ಆಲಯವು ಒಂದಾದಂತೆ
ಆ ಬೇಸುಗೆಯೂ ಬೇಸತ್ತು ಕಂಗಾಲಾಗಿ
ಸಾಗಿ ಸಾಗಿ ಹಾರಿ ಹೋದಿದ್ದಾಯಿತು.
ನನ್ನ ಪ್ರಜ್ಞಾಪೂರಿತ ಸಾಕ್ಷಿಯ ಕನಸು,
ವಾಸ್ತವಿಕತೆಯೂ ಮನಸು
ನನ್ನ ತಲೆದಿಂಬಿನೊಳಗೆ ಜೋಪಾನವಾಗಿಯೇ ಮಲಗಿತ್ತು.

*****************************************

Leave a Reply

Back To Top