ಹೊತ್ತು ಬಂದಿದೆ

ಕವಿತೆ

ಹೊತ್ತು ಬಂದಿದೆ

ಗಾಂಧಿ ನೀನುದಿಸಿದ
ನಾಡಿನಲೀ…

ತೊನೆವ ತರುಗಳ
ಕತ್ತು ಹಿಚುಕಿ
ಜಲದ ಕಣ್ಣಿಗಿರಿವ ಹೊತ್ತು ಬಂದಿದೆ

ಹರಿವರಿವ ನದಿಯ
ದಿಕ್ಕು ದಿವಾಳಿಯಾಗಿಸಿ
ಬರಿದಾಗಿಸುವ ಹೊತ್ತು ಬಂದಿದೆ

ಖಗ ಮೃಗ ಹುಳ ಹುಪ್ಪಟೆಗಳನ್ನು ಬಿಡದೇ ಹುರಿದುರಿದು ಮುಕ್ಕುವ ಹೊತ್ತು ಬಂದಿದೆ

ಸಾವಿರಾರು ವರುಷಗಳ ತಪೋನಿರತ ಶಿಲಾತಪಸಿಗಳ
ಎದೆಗೆ ಮದ್ದಿಕ್ಕುವ ಹೊತ್ತು ಬಂದಿದೆ

ಕಿವಿಗಡಚಿಕ್ಕುವ
ಬೈರಿಗೆಗಳನ್ನಿಕ್ಕಿ
ನೆಲದೊಡಲ ರಕ್ತ ಬಸಿವ ಹೊತ್ತು ಬಂದಿದೆ

ಹೊತ್ತಿಗೊತ್ತಿಗೆ ಉರಿವ ದಿನಕರ
ನ ಸಖ ಓಜೋನನ ಛಿದ್ರವಾಗಿಸುವ ಹೊತ್ತು ಬಂದಿದೆ

ಚಂದಿರನ ಅಂಗಳದಲ್ಲಿಳಿವ
ಮಂಗಳನ ಕೇರಿಯಲ್ಲಿ
ಸುತ್ತುವ ಹೊತ್ತು ಬಂದರೂ…

ವಿಜ್ಞಾನ ಜ್ಞಾನವೋ,
ಅಜ್ಞಾನವೋ ಮಂಕುಗವಿದ ಬುದ್ದಿಗೆ ಲದ್ದಿ ಮೇಯುವ ಹೊತ್ತು ಬಂದಿದೆ

ನಿನ್ನ ಮೂರು ಮಂಗಗಳು ಖಾದಿ ವೇಷತೊಟ್ಟು
ಅಧಿಕಾರದ ದರ್ಪದಲ್ಲಿ
ದಿಮಿ ದಿಮಿ ಕುಣಿದು
ಮಾನವೀಯತೆಯನ್ನು
ನುಂಗಿ ನೊಣೆಯುವ ಹೊತ್ತ್ತು ಬಂದಿದೆ

ಮಂದಿರವಿತ್ತೆಂಬ ಸಾಕ್ಷ್ಯ ಹುಡುಕಿದವರಿಗೆ
ಗುಮ್ಮಟ ಉರುಳಿಸಿದವರ ನಿರ್ದೋಷದ ಹುಸಿನಗೆಯು ಕಾಣದ
ಹೊತ್ತು ಬಂದಿದೆ

ಬಾಪೂಜಿ ನೀ ಕೊನೆಯುಸಿರೆಳೆಯುವಾಗ
ಹೇ ರಾಮ್ ಎಂದು ಉಸಿರು ಚೆಲ್ಲಿದೆಯೋ ನಾ ಕಾಣೆ
ಇದೀಗ
ಅಯ್ಯೋ ರಾಮ ಎಂದೆನುತ ಗೋರಿಯಲ್ಲಿ ನಿಡುಸುಯುವ
ಹೊತ್ತಂತು ಬಂದಿದೆ…
ಬಂದೇ ಇದೆ..

*****************************

3 thoughts on “ಹೊತ್ತು ಬಂದಿದೆ

    1. ವಾಸ್ತವ ವಿಚಾರವನ್ನು ತಿಳಿಸಿದ್ದೀರಿ ಮಧುಸೂದನ್ ಅವರಿಗೆ ಅಭಿನಂದನೆಗಳು

Leave a Reply

Back To Top