ಕವಿತೆ
ಗಾಯ
ಕಾತ್ಯಾಯಿನಿ ಕುಂಜಿಬೆಟ್ಟು
ನಾನೇ ಒಂದು ಗಾಯ!
ಆಳವಾಗುತ್ತಲೇ ಇರುತ್ತೇನೆ
ಹೃದಯದ ತಳದವರೆಗೂ…!
ನೋವಿನ ಹಲ್ಲಿಗೇ ನಾಲಗೆಯು
ಮತ್ತೆ ಮತ್ತೆ ತುಡಿಯುವಂತೆ
ತಾನೇ ತಾನಾಗಿ ನೊಂದು ಕೀವಾಗಿ ನವೆಯಾಗಿ
ಬೆರಳುಗಳನ್ನು ತುಡಿಸುತ್ತದೆ
ನಿದ್ದೆಯಲ್ಲೂ ಅಭ್ಯಾಸವಾಗಿ!
” ಉಬ್ಬಸಕ್ಕಾದರೂ ಮದ್ದುಂಟು… ಅಭ್ಯಾಸಕ್ಕಿಲ್ಲ!” ಎ೦ದುಬಿಟ್ಟರು
ಹಾಗನ್ನುವುದೇ ಅಭ್ಯಾಸವಾಗಿದ್ದ
ಗೀಳುತಜ್ಞರು!
ಬದುಕಿನ ಕಷ್ಟಗಳನ್ನು ಹಾಡುಹಗಲಲ್ಲೇ ಕಂಡು
ಹನಿಹನಿದು ಬತ್ತಿವೆ ಕಂಗಳ ಕೆರೆಗಳು !
ವಿಲಿವಿಲಿ ಒದ್ದಾಡುತ್ತಿವೆ ಕಣ್ಣ ಮೀನುಗಳು!
ನಿದ್ದೆಯಲ್ಲಿ ನಕ್ಷತ್ರ ಸುಟ್ಟು
ಕಣ್ಣಬೊಂಬೆಗಳು ಉರುಳಿ
ಬಾಯಿಯ ವಸಡಿಗೆ ಬೀಳುತ್ತವೆ
ಹಲ್ಲುಗಳು ಕಳಚಿ ಹೃದಯಕ್ಕೇ ಉದುರಿ
ಕಚ್ಚಿ ಕಚ್ಚಿ ಕಿತ್ತು ತಿನ್ನತೊಡಗುತ್ತವೆ!
ಕೈಗಳು ತಲೆಯನ್ನೇ ಕಿತ್ತು
ಪಕ್ಕಕ್ಕೆ ಎಸೆಯುತ್ತವೆ
ಮೆದುಳನ್ನೇ ಗೆದ್ದಲು ತಿನ್ನುವ
ನೋವನ್ನು ಸಹಿಸಲಾಗದೆ ಚೀರಿ!
ಮುಂಡವು ಮಂಡೆಯಿಲ್ಲದೆಯೇ
ಆಗ ಹಾಯಾಗಿ ಊರೂರು ಸುತ್ತುತ್ತದೆ!
ನೀನಾಗ ಬಂದು ನನ್ನ ರುಂಡವನ್ನು
ಮುಂಡಕ್ಕೆ ಜೋಡಿಸುತ್ತಿ
” ಹೀಗೆಲ್ಲ ರುಂಡವಿಲ್ಲದೆ ಅಲೆಯಬೇಡ!” ಅನ್ನುತ್ತಿ!
ನನ್ನ ರುಂಡ ಈಗಾಗಲೇ
ಆಕ್ಷೋಹಿಣಿ ಚತುರಂಗ ಬಲಗಳ
ಬಬ೯ರ ಕುರುಕ್ಷೇತ್ರ ಯುದ್ಧವನ್ನೇ ನೋಡಿಬಿಟ್ಟಿದೆ
ಘಟೋತ್ಕಚನ ಮಗ ಬಬ೯ರಿಕನಂತೆ
ಮು೦ಡವಿಲ್ಲದೆಯೇ…
ಈಗ ಮತ್ತೆ ಬಾಳ ಪಯಣ
ಮೊದಲoತೆಯೇ
ನೀನು ಅಂದದ್ದಕ್ಕೆ
ಅನ್ನಲಾರದ್ದಕ್ಕೆ!
ಈ ಮೆದುಳು ಹೃದಯವೆಂಬ
ಎರಡು ಗಾಯಗಳಿಗೆ
ಮದ್ದೇ ಇಲ್ಲದ್ದಕ್ಕೆ..
ನಾನೇ ಒಂದು ಗಾಯ!
ಇನ್ನೂ ಎಷ್ಟು ಆಳ!
**************************************
ಇಷ್ಟ ಆಯಿತು ಕವಿತೆ
ಧನ್ಯವಾದ ಸ್ಮಿತಾ… ಅಕ್ಕರೆ