ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
“ಏಕೆ ಗೆಳೆಯ”


ಹೊಸೆದ ಸವಿ ಭಾವಗಳ ಮಸೆದು ಮಣ್ಣಲಿ ಒಲವ ತರಿದು ಗಾಳಿಗೆ ತೂರಿದೆಯಲ್ಲ ಏಕೆ ಗೆಳೆಯ
ಬೆಸೆದ ಮನಸುಗಳ ತುಸು ಕರುಣೆಯಿಲ್ಲದೇ ಮುರಿದು
ಕನಸು ಮಾರಿದೆಯಲ್ಲ ಏಕೆ ಗೆಳೆಯ
ಕೊನೆವರೆಗೆ ಜೊತೆಗಿರುವೆ ಏನುತಲೇ ತಿರುವೊಂದರಲಿ ಹೇಳದೆ ಕಾರಣ ತೊರೆದು ದೂರಾದೆಯಲ್ಲ ಏಕೆ ಗೆಳೆಯ
ಮನೆವರೆಗೆ ಬಂದು ಮನದಲ್ಲಿ ನಿಂದು ಮರುಗಳಿಗೆ ಎಲ್ಲ ಮರೆತು ಬೇರಾದೆಯಲ್ಲ ಏಕೆ ಗೆಳೆಯ
ಮಲ್ಲಿಗೆ ಮನದ ಪರಿಮಳದ ನಗುವ ಕಸಿದು ಬರಿದೆ ಕುದಿ ಎಸರು ಎರೆದೆಯಲ್ಲ ಏಕೆ ಗೆಳೆಯ
ಮೆಲ್ಲಗೆ ಮಾತಿನ ಚೂಪು ಬಾಣಗಳ ತೊಡಿಸಿ ಹೃದಯದಿ ಬೆಂಕಿ ಮಳೆ ಬೀರಿದೆಯಲ್ಲ ಏಕೆ ಗೆಳೆಯ
ಒಪ್ಪಿದ ಸ್ನೇಹ ಬಂಧನವ ಕಾರಣವಿಲ್ಲದೇ ದೂರ ಮಾಡಿ ಹೃದಯ ತರಿದೆಯಲ್ಲ ಏಕೆ ಗೆಳೆಯ
ಅಪ್ಪಿದ ಅನುಬಂಧ ಎಳೆ ರಂಗೋಲಿ ಅಳಿಸಿ ನೆನಪೊಂದ ಉಳಿಸಿ ಎದೆ ಇರಿದೆಯಲ್ಲ ಏಕೆ ಗೆಳೆಯ..
ಮೌನದಲಿ ಕೊಲ್ಲುತ ಮಾಯದ ಗಾಯಗಳ ನೀಡಿ ಚುಚ್ಚು ಮಾತುಗಳಿಂದ ಗೀರಿದೆಯಲ್ಲ ಏಕೆ ಗೆಳೆಯ
ನಗುವ ಕಂಗಳ ಬೆಳಕನ್ನೇ ತುಟಿಯಂಚಿನ ನಗುವ ಜೇನನ್ನೇ ಕರುಣೆಯಿಲ್ಲದೇ ಹೀರಿದೆಯಲ್ಲ ಏಕೆ ಗೆಳೆಯ
ಮನದ ತುಂಬೆಲ್ಲಾ ಶಬ್ದಗಳ ಕೂರಂಬುವಿನಿಂದ ಸುಡು ಸುಡು ಬರೆಗಳ ಕೊರೆದೆಯಲ್ಲ ಏಕೆ ಗೆಳೆಯ
ನೆಲದ ಚಿಗುರ ಮರೆತು ಮುಗಿಲ ತಾರೆಗಳ ಮಡಿಲಿನಲ್ಲಿ ನಗುತ
ಮೆರೆದೆಯಲ್ಲ ಏಕೆ ಗೆಳೆಯ
ಕೊಟ್ಟ ಮಾತಿಗೆ ತಪ್ಪಿ ಇಟ್ಟ ಭಾಷೆಯ ತೊರೆದು ಅಂಬರದ ನಕ್ಷತ್ರಗಳ ಸೆರೆಯಾದೆಯಲ್ಲ ಏಕೆ ಗೆಳೆಯ
ಸ್ನೇಹ ತುಂಬಿದ ಕರಗಳ ಕಾರಣ ಹೇಳದೇ ದೂರ ಸರಿಸಿ
ಕಂಗಳಿಂದ ಮರೆಯಾದೆಯಲ್ಲ ಏಕೆ ಗೆಳೆಯ
ಹಣದ ಸುಧೆಯ ಅಮಲಲಿ ತೇಲಿದ ಶಶಿ ಇಂದುವಿನ ಹಾದಿಗೆ ಕತ್ತಲನ್ನೆ ಸುರಿದೆಯಲ್ಲ ಏಕೆ ಗೆಳೆಯ
ಪಣದ ಹಾದಿಯಲಿ ಸಾಗುತ ಎದೆತಬ್ಬಿ ಹಬ್ಬಿದ ಪ್ರೀತಿಯ ಬೇರನ್ನೇ ಮುರಿದೆಯಲ್ಲ ಏಕೆ ಗೆಳೆಯ
ಇಂದಿರಾ ಮೋಟೆಬೆನ್ನೂರ.




ಅದ್ಬುತ ಕವನ