ಕಾವ್ಯ ಸಂಗಾತಿ
ಸುಮತಿ ನಿರಂಜನ್
“ಪದ್ಯವೆಂದರೆ …. ಉತ್ಸವ !!!”
The Hollow Men, The Waste Land ಬರೆದ ಮಹಾನ್ ಕವಿ ಟಿ.ಎಸ್. ಎಲಿಯಟ್ ಯಾವುದೋ ಲಹರಿಯಲ್ಲಿ ಹೇಳಿದನಂತೆ ಒಮ್ಮೆ – “Poetry is a mug’s game..”.


ಪದ್ಯವೆಂದರೆ
ಪದಗಳ ದೊಂಬರಾಟ
ಅದು ಬರಿ ಹುಂಬರಾಟ !
ಎಂದ ಪಶ್ಚಿಮದ ಕವಿಗೆ
ಕಂಡದ್ದು ಬರಡು
ಬಂಜರು ಭೂಮಿ
ಬೆಳೆವುದಲ್ಲಿ ಬರಿದೆ
ಪಾಪಾಸುಕಳ್ಳಿ !
ಬಟ್ಟೆ ತುಂಬಿಸಿಟ್ಟ
ಬೆದರು ಬೊಂಬೆಗಳು
ತಲೆ ತುಂಬ ಬೈಹುಲ್ಲು
ಸುಮ್ಮ ಸುಮ್ಮನೆ ಗುಲ್ಲು …
ಮೂಡಣ ಮನೆಯ
ಮುತ್ತಿನ ನೀರು
ಕಾಣುವುದೇನು
ಪಡುವಣದಲ್ಲಿ ?
ನುಣ್ಣನೆ ಎರಕದ
ಬೆಳ್ಳಿಯ ಹೊಳೆ ಅದು
ಬರಿ ಬೆಳಗಲ್ಲೋ ಅಣ್ಣಾ !
ಇದ ತಿಳಿಯಲು ಬಾರೋ
ಸಾಧನಕೇರಿಗೆ ವಂದಿಸಿ
ಬಾರೋ ಪಾಕಶಾಲೆಗೆ
ಬೆಂದರೆ ಏನಾಗುವೆಯೋ
ತಿಂದು ಹೇಳಲು ಬಾರೋ!
,
ಕರೆದೊಯ್ಯುವೆನು
ಕವಿಶೈಲಕೆ ನಿನ್ನ
ಅನಿಕೇತನವೆಂದರೆ
ಏನೆನ್ನಲಿ ಅಣ್ಣಾ !
ಹಾಗೆಯೇ ಜೋಗದ
ಸಿರಿ ಬೆಳಕಿನಲಿ
ಕಾಣುವೆ ನೀ
ನಿತ್ಯೋತ್ಸವ !
ಪದಗಳ ಹುಂಬರಾಟವಲ್ಲೋ
ಇದು ನಾದಬ್ರಹ್ಮೋತ್ಸವ
ತಂತಿ ನಾಕು ವೇದಕಲರವ…
ಸುಮತಿ ನಿರಂಜನ್




Nice poetry. Congratulations to Sumathi. Best wishes.
ಚಂದದ ಅರ್ಥಪೂರ್ಣ ಕವನ. ಅಭಿನಂದನೆಗಳು ಸುಮತಿ. ಶುಭಾಶಯಗಳು.
ಎ ಎಸ್ ಎನ್ ಹೆಬ್ಬಾರ್, ಕುಂದಾಪುರ.
ಶೀರ್ಷಿಕೆಯೇ ಸಾಕು, ಪಾಶ್ಚಿಮಾತ್ಯರ ಹಂಗಿಸಲು. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವುದನ್ನು ತೋರಿಸಿಕೊಟ್ಟಿರಿ. ಪದ್ಯವು ಒಂದು ನಾದ ಲಹರಿ. ಬಲ್ಲವರೇ ಬಲ್ಲರು ಜೇನ ಸಿಹಿಯನು!