ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ” ವಿಶ್ವಾಸ್ ಡಿ.ಗೌಡ

ಹೊಸವರ್ಷದ ವಿಶೇಷ ವಿಶ್ವಾಸ್ ಡಿ.ಗೌಡ “ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ” *ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ*ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್‌ನ ಒಂದು ಪುಟ ತಿರುಗಿಸುವ ಕ್ರಿಯೆಯಷ್ಟೇ ಅಲ್ಲ; ಅದು ನಮ್ಮ ಜೀವನದ ಹೊಸ ಅಧ್ಯಾಯಕ್ಕೆ ತೆರೆ ಎಳೆಯುವ ಮಹತ್ವದ ಕ್ಷಣ. ಹಳೆಯ ವರ್ಷದ ಅನುಭವಗಳು—ಸಂತೋಷವಾಗಲಿ, ನೋವಾಗಲಿ—ಎಲ್ಲವೂ ನಮ್ಮನ್ನು ಪಾಠ ಕಲಿಸುವ ಗುರುಗಳಂತೆ ಕೆಲಸ ಮಾಡುತ್ತವೆ. ಇಂತಹ ಸಂದರ್ಭದಲ್ಲೇ ಹೊಸ ವರ್ಷ 2026 ನಮ್ಮ ಮುಂದೆ ಹೊಸ ಆಶಾವಾದ, ಹೊಸ ಉತ್ಸಾಹ ಮತ್ತು ಹೊಸ ಜವಾಬ್ದಾರಿಗಳೊಂದಿಗೆ ನಿಂತಿದೆ. ಈ ಹೊಸ ವರ್ಷವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೇ, ಆತ್ಮಪರಿಶೀಲನೆ, ಉತ್ತಮ ಸಂಕಲ್ಪಗಳು ಮತ್ತು ಸಮಾಜಪರ ಜಾಗೃತಿಯೊಂದಿಗೆ ಸ್ವಾಗತಿಸುವುದು ಅತ್ಯಂತ ಅಗತ್ಯ.ಹೊಸ ವರ್ಷಕ್ಕೆ ಶುಭಾಶಯಗಳನ್ನು ಹೇಳುವುದು ನಮ್ಮ ಸಂಸ್ಕೃತಿಯ ಒಂದು ಸುಂದರ ಭಾಗ. “ನಿಮ್ಮ ಜೀವನದಲ್ಲಿ ಸಂತೋಷ, ಆರೋಗ್ಯ, ಶಾಂತಿ ಮತ್ತು ಯಶಸ್ಸು ತುಂಬಿರಲಿ” ಎಂಬ ಹಾರೈಕೆಗಳು ಕೇವಲ ಪದಗಳಲ್ಲ; ಅವು ನಮ್ಮ ಮನದೊಳಗಿನ ಸದ್ಭಾವನೆಗಳ ಪ್ರತಿಬಿಂಬ. ಆದರೆ ಈ ಶುಭಾಶಯಗಳು ಅರ್ಥಪೂರ್ಣವಾಗಬೇಕಾದರೆ, ಅವುಗಳಿಗೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗಿದೆ. ಹೊಸ ವರ್ಷವು ನಮ್ಮನ್ನು ಉತ್ತಮ ವ್ಯಕ್ತಿಗಳಾಗುವತ್ತ ಕರೆದೊಯ್ಯಬೇಕು.ಇದೇ ಸಂದರ್ಭದಲ್ಲಿ “ರೆಸಲ್ಯೂಷನ್” ಅಂದರೆ ಸಂಕಲ್ಪಗಳ ಮಹತ್ವ ನೆನಪಾಗುತ್ತದೆ. ಹೊಸ ವರ್ಷದ ಸಂಕಲ್ಪಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿವೆ. ಆದರೆ ಹೆಚ್ಚಿನವರು ಹೊಸ ವರ್ಷ ಆರಂಭದಲ್ಲಿ ಉತ್ಸಾಹದಿಂದ ಸಂಕಲ್ಪಗಳನ್ನು ತೆಗೆದುಕೊಂಡು, ಕೆಲವೇ ದಿನಗಳಲ್ಲಿ ಮರೆತುಬಿಡುತ್ತಾರೆ. ಇದಕ್ಕೆ ಕಾರಣ ಸಂಕಲ್ಪಗಳ ಅಸಾಧ್ಯತೆ ಅಥವಾ ನಿರಂತರ ಪ್ರಯತ್ನದ ಕೊರತೆ. ಆದ್ದರಿಂದ 2026ಕ್ಕೆ ನಾವು ತೆಗೆದುಕೊಳ್ಳುವ ಸಂಕಲ್ಪಗಳು ಸರಳವಾಗಿರಲಿ, ಸಾಧ್ಯವಾಗಿರಲಿ ಮತ್ತು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿರಲಿ.ಆರೋಗ್ಯಕ್ಕೆ ಸಂಬಂಧಿಸಿದ ಸಂಕಲ್ಪಗಳು ಮೊದಲ ಆದ್ಯತೆಯಾಗಬೇಕು. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ, ಧೂಮಪಾನ ಮತ್ತು ಮದ್ಯಪಾನದ ನಿಯಂತ್ರಣ—ಇವೆಲ್ಲವೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯ. ಆರೋಗ್ಯವಂತ ವ್ಯಕ್ತಿಯೇ ಕುಟುಂಬಕ್ಕೂ, ಸಮಾಜಕ್ಕೂ ಉಪಯುಕ್ತನಾಗಬಲ್ಲ. ಜೊತೆಗೆ ಮಾನಸಿಕ ಶಾಂತಿಯೂ ಅಷ್ಟೇ ಮುಖ್ಯ. ಧ್ಯಾನ, ಪ್ರಾರ್ಥನೆ, ಓದು ಅಥವಾ ಪ್ರಕೃತಿಯೊಂದಿಗೆ ಸಮಯ ಕಳೆಯುವಂತಹ ಚಟುವಟಿಕೆಗಳು ನಮ್ಮ ಮನಸ್ಸನ್ನು ಸಮತೋಲನದಲ್ಲಿರಿಸುತ್ತವೆ.ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಸಂಕಲ್ಪಗಳೂ ಅಗತ್ಯ. ಸಮಯಕ್ಕೆ ಕೆಲಸ ಮಾಡುವ ಶಿಸ್ತು, ಪ್ರಾಮಾಣಿಕತೆ, ಸಹಾನುಭೂತಿ ಮತ್ತು ಇತರರ ನೋವನ್ನು ಅರ್ಥಮಾಡಿಕೊಳ್ಳುವ ಮನೋಭಾವ—ಇವು ನಮ್ಮನ್ನು ಉತ್ತಮ ನಾಗರಿಕರನ್ನಾಗಿಸುತ್ತವೆ. 2026ರಲ್ಲಿ “ನಾನು ಏನು ಪಡೆಯುತ್ತೇನೆ?” ಎಂಬ ಪ್ರಶ್ನೆಗೆ ಜೊತೆಗೆ “ನಾನು ಸಮಾಜಕ್ಕೆ ಏನು ಕೊಡಬಲ್ಲೆ?” ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು.ಹೊಸ ವರ್ಷ ಆಚರಣೆ ಎಂಬುದು ಮತ್ತೊಂದು ಮಹತ್ವದ ವಿಷಯ. ಇತ್ತೀಚಿನ ವರ್ಷಗಳಲ್ಲಿ ಹೊಸ ವರ್ಷದ ಸಂಭ್ರಮವು ಕೆಲವೊಮ್ಮೆ ಅತಿರೇಕಕ್ಕೆ ಹೋಗುತ್ತಿರುವುದು ವಿಷಾದಕರ. ಪಟಾಕಿಗಳ ಶಬ್ದ, ಅತಿಯಾದ ಮದ್ಯಪಾನ, ಅಸಭ್ಯ ವರ್ತನೆ, ರಸ್ತೆ ಅಪಘಾತಗಳು—ಇವೆಲ್ಲವೂ ಸಂಭ್ರಮದ ಹೆಸರಿನಲ್ಲಿ ನಡೆಯುವ ದುಃಖದ ಘಟನೆಗಳು. ಸಂಭ್ರಮ ಎಂದರೆ ಅತಿರೇಕವಲ್ಲ; ಸಂಭ್ರಮ ಎಂದರೆ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದು. ನಮ್ಮ ಆಚರಣೆಯಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಎಚ್ಚರಿಕೆ ಅತ್ಯಂತ ಮುಖ್ಯ.ಪಟಾಕಿಗಳ ಬಳಕೆಯಿಂದ ವಯೋವೃದ್ಧರು, ರೋಗಿಗಳು, ಮಕ್ಕಳಷ್ಟೇ ಅಲ್ಲದೆ ಪ್ರಾಣಿಗಳಿಗೂ ತೀವ್ರ ತೊಂದರೆ ಆಗುತ್ತದೆ. ಪರಿಸರ ಮಾಲಿನ್ಯವೂ ಹೆಚ್ಚಾಗುತ್ತದೆ. ಆದ್ದರಿಂದ 2026ನ್ನು “ಪರಿಸರ ಸ್ನೇಹಿ ಹೊಸ ವರ್ಷ”ವಾಗಿಸಲು ನಾವು ಸಂಕಲ್ಪ ಮಾಡಬೇಕು. ಶಬ್ದರಹಿತ, ಮಾಲಿನ್ಯರಹಿತ ಆಚರಣೆಗಳು ನಮ್ಮ ಸಂಸ್ಕೃತಿಯ ಗೌರವವನ್ನು ಹೆಚ್ಚಿಸುತ್ತವೆ.ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಸಂಯಮ ಅತ್ಯಂತ ಅಗತ್ಯ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಅನೇಕ ಅಮೂಲ್ಯ ಜೀವಗಳು ಕಳೆದುಕೊಳ್ಳುತ್ತಿವೆ. ಒಂದು ಕ್ಷಣದ ನಿರ್ಲಕ್ಷ್ಯವು ಜೀವಪೂರ್ತಿ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಆದ್ದರಿಂದ “ನನ್ನ ಸಂಭ್ರಮದಿಂದ ಯಾರ ಜೀವಕ್ಕೂ ಅಪಾಯವಾಗಬಾರದು” ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು.ಹೊಸ ವರ್ಷವು ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುವ ಅವಕಾಶವೂ ಹೌದು. ಮೊಬೈಲ್, ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆಯಿಂದ ದೂರವಿದ್ದು, ನಿಜವಾದ ಸಂಬಂಧಗಳಿಗೆ ಸಮಯ ಕೊಡುವುದು 2026ರ ಒಂದು ಉತ್ತಮ ಸಂಕಲ್ಪವಾಗಬಹುದು. ಹಿರಿಯರನ್ನು ಗೌರವಿಸುವುದು, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವುದು, ನೆರೆಹೊರೆಯವರೊಂದಿಗೆ ಸೌಹಾರ್ದ ಬೆಳೆಸುವುದು—ಇವೆಲ್ಲವೂ ಹೊಸ ವರ್ಷದ ಸಾರ್ಥಕತೆಯನ್ನು ಹೆಚ್ಚಿಸುತ್ತವೆ.ಕೊನೆಗೆ, ಹೊಸ ವರ್ಷ 2026 ನಮ್ಮೆಲ್ಲರಿಗೂ ಹೊಸ ಆಶಾಕಿರಣವಾಗಲಿ. ನಾವು ತೆಗೆದುಕೊಳ್ಳುವ ಸಂಕಲ್ಪಗಳು ಕಾಗದದಲ್ಲೇ ಉಳಿಯದೆ, ನಮ್ಮ ದೈನಂದಿನ ಜೀವನದಲ್ಲಿ ಪ್ರತಿಬಿಂಬಿಸಲಿ. ಸಂಭ್ರಮವು ಸಂಯಮದೊಂದಿಗೆ, ಸಂತೋಷವು ಸಂವೇದನೆಯೊಂದಿಗೆ ಬೆರೆಯಲಿ. ಯಾರಿಗೂ ತೊಂದರೆ ಆಗದಂತೆ, ಎಲ್ಲರಿಗೂ ಒಳಿತಾಗುವಂತೆ ನಾವು ಹೊಸ ವರ್ಷವನ್ನು ಆಚರಿಸೋಣ.ಹೊಸ ವರ್ಷ 2026ಕ್ಕೆ ಹಾರ್ದಿಕ ಶುಭಾಶಯಗಳು!ಈ ವರ್ಷ ನಿಮ್ಮ ಜೀವನದಲ್ಲಿ ಹೊಸ ಬೆಳಕು, ಉತ್ತಮ ಬದಲಾವಣೆಗಳು ಮತ್ತು ಶಾಶ್ವತ ಸಂತೋಷವನ್ನು ತರಲಿ. ಸಂಕಲ್ಪ, ಸಂಯಮ ಮತ್ತು ಮಾನವೀಯತೆಯೊಂದಿಗೆ ನಾವು ಎಲ್ಲರೂ ಒಟ್ಟಾಗಿ ಉತ್ತಮ ಭವಿಷ್ಯವನ್ನು ನಿರ್ಮಿಸೋಣ. ವಿಶ್ವಾಸ್‌ ಡಿ ಗೌಡ

“ಹೊಸ ವರ್ಷ 2026 : ಸಂಕಲ್ಪ, ಸಂಯಮ ಮತ್ತು ಸಂವೇದನೆಯೊಂದಿಗೆ ಭವಿಷ್ಯ ನಿರ್ಮಾಣ” ವಿಶ್ವಾಸ್ ಡಿ.ಗೌಡ Read Post »

ಕಾವ್ಯಯಾನ

ರಾಜು ಅವರ ಕವಿತೆ “ಕಾಲಚಕ್ರ”

ಕಾವ್ಯ ಸಂಗಾತಿ ರಾಜು “ಕಾಲಚಕ್ರ” ಒಂದೊಂದೇ ಹೆಜ್ಜೆ ಇಟ್ಟು ನಡೆಯುತ್ತಿದ್ದಕಾಲನ ಗಡಿಯಾರಈಗೀಗ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದೆ !ಮೊನ್ನೆಯಷ್ಟೇ ಕೇಕ್ ಕತ್ತರಿಸಿ ಕೇಕೆ ಹಾಕಿದ ದಿನಹಿಂದೆ ಸರಿದು ಮತ್ತೊಂದು ಎದುರಿಗೆ ಬಂದು ನಿಂತಿದೆ !! ಬೆನ್ನ ಹಿಂದೆ ಪಾಟಿ ಚೀಲ ಹಾಕಿಕೊಂಡುಶಾಲೆಯ ಫಸ್ಟ್ ಬೆಲ್ ಗೆ ಕಾಯುತ್ತಿದ್ದ ದಿನ ಕಳೆದುಮನೆಯಂಗಳದಲ್ಲಿ ಸ್ಕೂಲ್ ವ್ಯಾನ್ ಕಾಯುತ್ತಿದೆ !ಪಾಟಿ-ಪೇಣೆ ಅಟ್ಟಸೇರಿ ಲ್ಯಾಪ್‌ಟಾಪ್ ತೊಡೆಯೇರಿ ಕುಳಿತಿದೆ !! ಮನೆಯಂಗಳದ ಪುಟ್ಟ ಗಿಡವೀಗಎದೆಯೆತ್ತರ ಬೆಳೆದು ನೆರಳು ನೀಡುತ್ತಿದೆ !ಹಣ್ಣೆಲೆಗಳ ಕಳಚಿಕೊಂಡ ಮರವೀಗಚಿಗುರೆಲೆಗಳ ಹೊತ್ತು ಹಸಿರಾಗಿ ನಿಂತಿದೆ !! ಧಾವಂತದ,ದಣಿವರಿಯದ ಬದುಕಲ್ಲಿಹಿಂತಿರುಗಿ ನೋಡಿದರೆ ಹೆಜ್ಜೆ ಗುರುತು ಕಾಣದಾಗಿದೆ !ಮರಳ ಮೇಲಿನ ಹೆಜ್ಜೆ ಗುರುತುಸಾಗರದಲೆಗಳು ಅಳಿಸಿಹಾಕಿವೆ !! ಹೊಸತು ಹಳತಾಗಿ, ಹಳತು ಕಳೆದ್ಹೋಗಿಕಾಲಚಕ್ರ ಉರುಳುತ್ತಿದೆಮೂಗಿನ ಮೇಲೇರಿದ ಕನ್ನಡಕ ಕಣ್ಣುಗಳಿಗೆ ಬೆಳಕಾಗಿದೆ !ಕಾಲನ ಗಡಿಯಾರದ ಮುಳ್ಳುಗಳನ್ನು ತಡೆಯುವರಾರು !?? ರಾಜು ಪವಾರ್

ರಾಜು ಅವರ ಕವಿತೆ “ಕಾಲಚಕ್ರ” Read Post »

ಕಾವ್ಯ ದರ್ಪಣ

ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ”

ಕಾವ್ಯ ಸಂಗಾತಿ ನಾಗರತ್ನ.ಹೆಚ್ ಗಂಗಾವತಿ “ಗೆಲ್ಲುವೆ ಮನ” ಬೇಕು ಬೇಡಿಕೆಗಳ ನಡುವೆ ಸಾಗಿದೆ ಜೀವನಅರಿಯದ ಮನಗಳ ನಡುವೆ ಮೌನದ ತಲ್ಲಣಕೋಪ ಮುನಿಸುಗಳ ನಡುವೆ ಜೀವನ ಪಯಣಮತ್ತೇರಿದ ಗುಂಗಿನಲ್ಲಿ ಕೆಲವರ ಮಾತಿನ ಔತಣಇರಲು ನಿನ್ನಲ್ಲಿ ತಾಳ್ಮೆಯ ಗುಣ ಗೆಲ್ಲುವೆ ನೀ ಎಲ್ಲರ ಮನ.ಅಪರೂಪದ ಮಾತಿನ ಬಗೆಗಳ ಆಲಿಸುವ ತಾಳ್ಮೆಯ ಸೌಜನ್ಯಸ್ವಾರ್ಥದ ಬೇಗೆಯಲ್ಲಿ ಬಂಧಗಳ ಬಿರುಕಿನ ಕಂಪನ .ಆಡಿದವರ ಮಾತಿಗೆ ಹಾಕಬೇಕಿದೆ ವಿರಾಮ.ನಿನ್ನ ನಡೆ-ನುಡಿಯಲ್ಲಿ ಇರಲಿ ಸದಾ ಚೇತನಭಗವಂತನ ದಯೆ ಇರಲು ನಿನ್ನ ಮೇಲೆ ಸದಾ ಗೆಲುವಿನ ಪಯಣ. ನಾಗರತ್ನ.ಹೆಚ್. ಗಂಗಾವತಿ

ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ” Read Post »

ಇತರೆ

“ಮೌನ ನಮನ”ಸರಸ್ವತಿ ಕೆ ನಾಗರಾಜ್

ಹೊಸವರ್ಷ ವಿಶೇಷ ಸರಸ್ವತಿ ಕೆ ನಾಗರಾಜ್ “ಮೌನ ನಮನ” ಜೀವನ ಅನ್ನೋದು ಅತ್ಯಂತ ಅಮೂಲ್ಯವಾದದ್ದು. ಹುಟ್ಟಿನಿಂದ ಸಾಯುವವರೆಗೂ ಅನುಭವಿಸುವ ಒಂದೊಂದು ಕ್ಷಣಗಳು ಆಗಾಗ ನೆನಪಿಗೆ ಬರುವಂಥವುಗಳು.ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ. ಎಷ್ಟೋ ನೆನಪುಗಳು ಸುಃಖ ತರಬಹುದು;ಇನ್ನು ಕೆಲವು ದುಃಖತರಬಲ್ಲವುಗಳು.ಆದರೆ ಎಲ್ಲವೂ ನೆನಪುಗಳೇ ತಾನೆ! ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ,ಆದರೆ ಕೆಲವು ನೆನಪುಗಳು ಕಾಲವನ್ನೇ ದಾಟಿ ಬರುತ್ತವೆ. ನಾನು ಹಿಂತಿರುಗಿ ನೋಡಿದಾಗಲೆಲ್ಲ,ಮನಸು ನಗುವಂತೆ ಮಾಡಲಿ,“ಹೌದು, ಅದು ಸವಿ ವರ್ಷ” ಎಂದು.ಬದುಕಿನ ಜಂಜಾಟಗಳ ನಡುವೆ ಕೆಲವೊಂದಿಷ್ಟು ಮೌಲ್ಯವಾದ ನೆನಪನ್ನು ನಾವು ಮರೆಯದೆ ನೆನಪಿಸಿಕೊಳ್ಳೋಣ ಈ ವರುಷದ ಕೊನೆಯ ದಿನದಂದು. 31/12/2025, ಜೀವನದ ಓಟದಲ್ಲಿ ದಿನಗಳು ಎಣಿಕೆಯಾಗಿ ಹಾರಿದರೂ,ನೆನಪುಗಳು ಮಾತ್ರ ಮನದೊಳಗೆ ನೆಲೆಸುತ್ತವೆ.ಕೆಲವು ಕಣ್ಣಲ್ಲಿ ನೀರು ತರಿಸಿದರೆ,ಕೆಲವು ತುಟಿಗಳಲ್ಲಿ ನಗು ಮೂಡಿಸುತ್ತವೆ.ಕಾಲದ ಹೊಡೆತಕ್ಕೆ ಮಸುಕಾದರೂ,ಹೃದಯದ ಮೂಲೆಯಲ್ಲಿ ಉಳಿಯುವವುಅವುಗಳೇ ನಿಜವಾದ ಸಂಪತ್ತು.ಪಡೆದದ್ದಕ್ಕಿಂತ ಕಳೆದುಕೊಂಡ ಪಾಠಗಳುನಮ್ಮನ್ನು ಇನ್ನಷ್ಟು ಮಾನವನನ್ನಾಗಿಸುತ್ತವೆ.ಈ ವರುಷದ ಕೊನೆಯ ದಿನದಂದು,ಅಪೇಕ್ಷೆ,ನಿರೀಕ್ಷೆಗಳ ಗದ್ದಲ ಬಿಟ್ಟು,ನಮ್ಮನ್ನೇ ನಾವು ಕ್ಷಣಕಾಲ ಆಲಿಸೋಣ.ಕ್ಷಮೆ ಕೇಳಬೇಕಾದವರಿಗೆ ಮನಸಲ್ಲಿ ಕ್ಷಮೆ ಬೇಡೋಣ,ಕ್ಷಮಿಸಬೇಕಾದವರನ್ನು ಹೃದಯದಿಂದ ಕ್ಷಮಿಸೋಣ.ನಾಳೆ ಹೊಸ ವರ್ಷ ಎನ್ನುವ ನಿರೀಕ್ಷೆಯೊಂದಿಗೆ,ಇಂದಿನ ದಿನವನ್ನು ಕೃತಜ್ಞತೆಯಿಂದ ಮುಗಿಸೋಣ.ಎಲ್ಲಾ ನೋವುಗಳ ನಡುವೆಯೂನಮ್ಮನ್ನು ಬದುಕಲು ಕಲಿಸಿದ ಈ ವರ್ಷಕ್ಕೆಒಂದು ಮೌನ ನಮನ. ಸರಸ್ವತಿ ಕೆ ನಾಗರಾಜ್

“ಮೌನ ನಮನ”ಸರಸ್ವತಿ ಕೆ ನಾಗರಾಜ್ Read Post »

ಇತರೆ

“ಯುವಜನತೆಯ ದಿಕ್ಕು ತಪ್ಪಿಸುತ್ತಿರುವ ಹೊಸ ವರ್ಷಾಚರಣೆ”ಡಾ.ಸುಮತಿ ಪಿ

ಹೊಸ ವರ್ಷ ವಿಶೇಷ ಡಾ.ಸುಮತಿ ಪಿ “ಯುವಜನತೆಯ ದಿಕ್ಕು ತಪ್ಪಿಸುತ್ತಿರುವ ಹೊಸ ವರ್ಷಾಚರಣೆ” ನವ ವರ್ಷ ಅಥವಾ ಹೊಸ ವರ್ಷ ಎಂದಾಗ ಅದೇನೊ ಪುಳಕ, ಹೊಸದನ್ನು ಸ್ವೀಕರಿಸಬೇಕೆನ್ನುವ ಮನೋಲ್ಲಾಸ. ಹಳೆಯದನ್ನು ಮರೆತು, ಹೊಸತನವನ್ನು ಮೈಗೂಡಿಸಿಕೊಂಡು,ತಮ್ಮ ಜೀವನದ ಕನಸನ್ನು ಕಾಣುವ ಯುವಕರು ಹೊಸ ವರ್ಷಾಚರಣೆಯ ಗುಂಗಿನಲ್ಲಿ ಕಳೆದು ಹೋಗಿ, ಅನೇಕ ಅಪಾಯಗಳನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಹೊಸ ವರ್ಷದ  ಆಚರಣೆ ನಡೆದುಕೊಂಡು ಬಂದಿರುವುದು ಇಂದು ನಿನ್ನೆಯಿಂದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂಬುದಕ್ಕೆ ಸಾಕಷ್ಟು ಸುಳುಹುಗಳನ್ನು ನಾವು  ಇತಿಹಾಸದಲ್ಲಿ ಕಾಣುತ್ತೇವೆ. ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮ ಎಲ್ಲೆಡೆ ಕಾಣಸಿಗುತ್ತದೆ.  ಪ್ರಾಚೀನ ಕಾಲದಲ್ಲೂ ಜನರು ಹೊಸ ವರ್ಷ ವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು ಎಂಬುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ. ಹಿಂದಿನ ಕಾಲದಲ್ಲಿ ಧಾರ್ಮಿಕ ಹಾಗೂ ಸಂಪ್ರದಾಯಿಕ ಹಿನ್ನೆಲೆಯಿಂದ ಆಚರಿಸಿಕೊಂಡು ಬರುತ್ತಿದ್ದಂತಹ ಹೊಸ ವರ್ಷದ ಆಚರಣೆ ಇಂದು ಬದಲಾವಣೆಗೊಳ್ಳುತ್ತಾ, ಹೊಸ ರೂಪವನ್ನು ಪಡೆದಿದೆ. ಇಂದು ಮೋಜು, ಮಸ್ತಿ, ಕುಡಿತ ,ಕುಣಿತ ಇವೇ ಹೊಸ ವರ್ಷಾಚರಣೆಯ ಸಂಭ್ರಮವನ್ನು ಆಕ್ರಮಿಸಿ ಕೊಂಡಿವೆ.ಈಗಿನ  ಯುವ ಜನತೆಗೆ ಹೊಸ ವರ್ಷದ ಆಚರಣೆ ಎಂದರೆ ಅದೊಂದು ಮೋಜಿನಾಟವಲ್ಲದೇ ಬೇರೇನೂ ಅಲ್ಲ. ಮನೆಯಲ್ಲಿನ ಹಿರಿಯರು ಮೂಲೆಗುಂಪಾಗು ತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕೃತಿ,ಸಂಸ್ಕಾರ, ಸಂಪ್ರದಾಯ, ನಂಬಿಕೆ, ವಿಶ್ವಾಸಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಸ್ಮಾರ್ಟ್ ಫೋನ್, ವಾಟ್ಸ್ ಆ್ಯಪ್‌ಗಳ ಹಾವಳಿಯಿಂದಾಗಿ ಇಂದಿನ ಯುವಕರು ಬೀಚ್‌ನಲ್ಲೋ, ಪಬ್‌ನಲ್ಲೋ ಕುಳಿತುಕೊಂಡು ಊರಿನಲ್ಲಿರುವ,ಮನೆಯಲ್ಲಿರುವ ಹೆತ್ತವರಿಗೆ ಹೊಸ ವರ್ಷದ ಸಂದೇಶ ಕಳಿಸುವ ಪರಿಪಾಠ ಬೆಳೆಯುತ್ತಿದೆ. ಹೊಸ ವರ್ಷಾಚರಣೆಗಾಗಿಯೇ ನಗರದ ಪ್ರತಿಷ್ಠಿತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು, ಡಾಬಾಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಡಿ ಜೆ ಗೆ ಹೆಜ್ಜೆ ಹಾಕುವ ಪ್ರೇಮಿಗಳ ಕಲರವ ಯುವಕರ ಮನಸ್ಸನ್ನು ಹುಚ್ಚುಗಟ್ಟಿಸುವಂತಿರುತ್ತದೆ. ಇಂತಹ ಹೊಸ ವರ್ಷ ಆಚರಣೆಯಲ್ಲಿ ಮುಳುಗಿದ ಯುವಕರು ಅನೇಕ ದುರಭ್ಯಾಸಗಳಿಗೆ ಅಂಟಿಕೊಳ್ಳುತ್ತಾರೆ. ಅಲ್ಲದೆ ಪಬ್ಬು, ಪಾರ್ಟಿ ಎಂದು ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ, ವೃತ್ತಿಯಲ್ಲಿ ಬದ್ಧತೆಯನ್ನೂ ಕಳೆದುಕೊಳ್ಳುವವರು ಇದ್ದಾರೆ. ಕುಟುಂಬದವರನ್ನು ನಿರ್ಲಕ್ಷಿಸಿ,ತಮ್ಮದೇ ಆದ ದಾರಿಯನ್ನು ಹಿಡಿದು ಜೀವನವನ್ನು ಹಾಳು ಮಾಡಿಕೊಳ್ಳುವವರೂ ಇದ್ದಾರೆ. ಇದನ್ನೆಲ್ಲ ನೋಡುವಾಗ ಇಂದಿನ ಹೊಸ ವರ್ಷಾಚರಣೆ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದರೆ ಸುಳ್ಳಾಗಲಾರದು.ಹೊಸ ವರ್ಷದಲ್ಲಿ ಸಂಭ್ರಮ ಪಡುವುದಕ್ಕೆ ಹೋಗಿ,ಏನೇನೋ ಅನಾಹುತಗಳನ್ನು ಮಾಡಿಕೊಂಡು, ಸಂಕಷ್ಟಕ್ಕೆ ಈಡಾಗುತ್ತಾ, ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿ ಜೀವನವನ್ನು ಅಂತ್ಯಗಾಣಿಸುವವರೂ ಇದ್ದಾರೆ . ಮೊದಲೆಲ್ಲ ಹೊಸ ವರ್ಷಾಚರಣೆ ಎಂದರೆ ಬದುಕಿನಲ್ಲಿ ನಡೆದ ಕಷ್ಟಗಳನ್ನು ಮರೆತು, ಕಳೆದುಹೋದ ಬದುಕಿನ ದಿನಗಳ ಚಿಂತನ ಮಂಥನ ಮಾಡಿಕೊಂಡು ಮುಂದಿನ ಬದುಕಿನಲ್ಲಿ ನಡೆಯಬೇಕಾದ ಜೀವನದ ರೂಪುರೇಷೆಯನ್ನು ಹಾಕಿಕೊಳ್ಳುತ್ತಾ, ಒಮ್ಮೆ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯನ್ನು ವಹಿಸಲು ಮುಂಜಾಗ್ರತ ಕ್ರಮವಾಗಿ ಮುಂದಿನ ವರುಷದ ಜೀವನ ನಡೆಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವಂತಹ ಸುಸಂದರ್ಭವು ಹೊಸ ವರ್ಷವಾಗಿರುತ್ತಿತ್ತು ಇದೀಗ ಹೊಸ ವರ್ಷಾಚರಣೆ ಹೊಸ ಹೊಸ ರೂಪಗಳನ್ನು ಪಡೆಯುತ್ತಿದ್ದು, ಯುವಕರನ್ನು ಮೋಡಿ ಮಾಡುತ್ತಿದೆ. ಹೊಸ ವರ್ಷಾಚರಣೆ ಎಂದರೆ ಯುವಕರು ಕುಡಿಯುವುದು, ಮೋಜು, ಮಸ್ತಿ ಎಂದೇ ಭಾವಿಸಿರುವಂತೆ  ಕಾಣಿಸುತ್ತದೆ. ದೇವಸ್ಥಾನಕ್ಕೆ ಹೋಗಿಯೋ ಅಥವಾ ಮನೆ ದೇವರನ್ನು ವಿಶೇಷ ಭಕ್ತಿಯಿಂದ ಭಜಿಸಿಯೋ,ಮಾಡಿದ ತಪ್ಪುಗಳನ್ನು ಮನ್ನಿಸುವಂತೆ ಕೇಳಿಕೊಂಡು, ಹೊಸ ವರ್ಷದಲ್ಲಿ ಹೊಸ ರೀತಿಯ ಸುಂದರ ಜೀವನವನ್ನು ಕರುಣಿಸಬೇಕೆಂದು ಬೇಡುವಂತಹ ಸಂಸ್ಕಾರ ನಮ್ಮ ಹಿಂದಿನ ಅವಿಭಕ್ತ ಕುಟುಂಬದಲ್ಲಿತ್ತು. ಆದರೆ ಈಗ ಅಂತಹ ಯಾವುದೇ ಸಂಸ್ಕಾರ ನಮಗೆ ಕಾಣಿಸಿಗದು. ಹೊಸ ವರ್ಷವೆಂದರೆ ಅದೇನೋ ಸಂಭ್ರಮ!.ಹುಚ್ಚು ಆಚರಣೆ! ಮನೆಯಿಂದ ಹೊರಗಡೆ ಹೋಗಿ ಪಾರ್ಟಿಗಳಲ್ಲೋ ಅಥವಾ ಪಬ್ಬುಗಳಲ್ಲೋ ಚೆನ್ನಾಗಿ ತಿಂದುಂಡು ಕುಡಿದು ಕುಣಿಯುವುದೇ ಸಂಭ್ರಮ ಎಂದುಕೊಂಡಂತಿದೆ ನಮ್ಮ ಮಕ್ಕಳು. ಇಂತಹ ಹೊಸ ವರ್ಷದ ಆಚರಣೆಯಲ್ಲಿ ಮುಳುಗಿ ಹೋಗುವ ಎಷ್ಟೋ ಮಕ್ಕಳು ತಮಗರಿವಿಲ್ಲದಂತೆಯೇ ತಮ್ಮ ಜೀವನದಲ್ಲಿ ಅನೇಕ ಅಪಾಯಗಳನ್ನು ಎಳೆದುಕೊಳ್ಳುತ್ತಿದ್ದಾರೆ. ಕುಡಿದು ಮೋಜು ಮಸ್ತಿ ಮಾಡುವಾಗ ಸಂಘರ್ಷಗಳು ಉಂಟಾಗಿ ಜಗಳಗಳು ಕೊಲೆಯಲ್ಲಿ ಕೊನೆಗೊಳ್ಳುವುದೂ ಇದೆ.ಪಾರ್ಟಿಗಳಲ್ಲಿ ಕುಡಿದು, ಕುಣಿದು ಕುಪ್ಪಳಿಸುವ ಯುವಕರು ಹೊಸ ವರ್ಷದ ದಿನ ತಾವು ” ಸರ್ವ ಸ್ವತಂತ್ರರು” ಎಂಬಭ್ರಮೆಯಲ್ಲಿರುತ್ತಾರೆ. ಇದರಿಂದಾಗಿ ಮಹಿಳೆಯರನ್ನು ಚುಡಾಯಿಸುವುದು ಮುಂತಾದ ಅಹಿತಕರ ಘಟನೆಗಳು ನಡೆಯುತ್ತವೆ. ಅಲ್ಲದೇ ಸಮಾಜದ ಶಾಂತಿ ಕದಡುತ್ತದೆ. ಹೊಸ ವರ್ಷದ ದಿನ ಅಂದರೆ ಡಿಸೆಂಬರ್ 31ರ ರಾತ್ರಿ ಸಮಾಜದಲ್ಲಿ ಶಿಸ್ತು ಸಂಯಮವನ್ನು ಕಾಪಾಡುವಂತೆ ನೋಡಿಕೊಳ್ಳುವುದು ಪೊಲೀಸರಿಗೂ ಸವಾಲಿನ ಕೆಲಸವಾಗಿರುತ್ತದೆ.ಹೊಸ ವರ್ಷ ಆಚರಣೆಯಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವುದಕ್ಕಾಗಿ ಸರಕಾರ ಎಷ್ಟೇ ಮುಂಜಾಗ್ರತ ಕ್ರಮಗಳನ್ನು ವಹಿಸಿಕೊಂಡರೂ, ಯುವಕರ ಹುಚ್ಚುತನದಿಂದಾಗಿ ಅನಾಹುತಗಳು ನಡೆಯುತ್ತಲೇ ಇರುತ್ತವೆ.ಇತ್ತೀಚಿನ ದಿನಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಯುವಕರು ನಡೆಸುತ್ತಿರುವ ದುಂದುವೆಚ್ಚವನ್ನು ಗಮನಿಸಿದರೆ, ನಮ್ಮ ಯುವಕರು ಎತ್ತ ಸಾಗುತ್ತಿದ್ದಾರೆ ಎಂಬ ಭಯ ಮೂಡುತ್ತದೆ. ಕಂಠಪೂರ್ತಿ ಮದ್ಯ ಕುಡಿದು, ಕುಣಿದು, ಕುಪ್ಪಳಿಸುವ ವಿದೇಶಿ ಸಂಸ್ಕೃತಿ ನಮ್ಮ ಯುವಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತ ಇರುವುದು ಕಳವಳಕಾರಿ ಸಂಗತಿಯಾಗಿದೆ. ರಾತ್ರಿಯ ವೇಳೆ ಹೊಸ ವರ್ಷಾಚರಣೆ ಸಂಭ್ರಮದ ನೆಪದಲ್ಲಿ ನಡೆಯುವ ಪಾರ್ಟಿಗಳ ಜೊತೆ ಜೊತೆಗೆ, ಸಮಾಜದಲ್ಲಿ ಶಾಂತಿ ಕದಡುವ, ಅಸಭ್ಯವಾಗಿ ವರ್ತಿಸುವವರ ಪ್ರಮಾಣವು ಹೆಚ್ಚುತ್ತಿದೆ. ಯುವತಿಯರು ಕೂಡಾ ಮದ್ಯದ ನಶೆಯಲ್ಲಿ ತೇಲುವ, ಆಶ್ಲೀಲವಾಗಿ ವರ್ತಿಸುವ ದೃಶ್ಯಗಳು ಪ್ರತಿವರ್ಷ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುತ್ತವೆ.ಕೊಲೆ, ಅಪರಾಧ ಕೃತ್ಯಗಳು ನಡೆಯುತ್ತಿರುತ್ತವೆ.ಇದೆಲ್ಲ ನಿಲ್ಲಬೇಕು. ನಮ್ಮ ಯುವ ಜನತೆಗೆ ಜೀವನ ಸಂಸ್ಕಾರವನ್ನು ನೀಡಬೇಕು ಹೊಸ ವರ್ಷಾಚರಣೆಯಂದು ವರ್ಷದುದ್ದಕ್ಕೂ ತಮ್ಮ ಜೀವನ ಸಾಗಿ ಬಂದ ಬಗ್ಗೆ  ಅವಲೋಕನ ಮಾಡುತ್ತಾ,. ತಿಳಿದೋ, ತಿಳಿಯದೆಯೋ ಮಾಡಿರುವ ತಪ್ಪುಗಳಿದ್ದರೆ ಅವುಗಳನ್ನು ತಿದ್ದಿಕೊಂಡು,ಸನ್ನಡತೆಯಿಂದ ಬದುಕುವ ಸಂಕಲ್ಪ ಕೈಗೊಳ್ಳಬೇಕು.ತಮ್ಮ ಕುಟುಂಬದ ಸದಸ್ಯರೊಂದಿಗೆ ಸೇರಿ ಹೊಸ ವರ್ಷಾಚರಣೆ ಮಾಡುವುದು ಒಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ. ಹೊಸ ವರ್ಷದ ದಿನ ಅನಾಥಾಶ್ರಮ, ಆಸ್ಪತ್ರೆ, ವೃದ್ಧಾಶ್ರಮಗಳಲ್ಲಿ  ಒಂದಷ್ಟು ಅಶಕ್ತರ ಸೇವೆ ಮಾಡುವುದು, ಅವರಿಗೆ  ಆಹಾರ ಹಂಚುವುದು. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದು, ರಕ್ತದಾನ ಮಾಡುವುದು,ಪರಿಸರ ಸಂರಕ್ಷಣೆಯ ಕೆಲಸದಲ್ಲಿ ನಿರತರಾಗುವುದು ಮುಂತಾದ ಸಾಮಾಜಿಕ ಒಳಿತನ್ನುಂಟುಮಾಡುವ ಕಾರ್ಯಗಳನ್ನು ಕೈಗೊಂಡು ಹೊಸ ವರ್ಷಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಹೊಸ ವರ್ಷವೆಂದರೆ ಕೇವಲ ದಿನಾಂಕದ ಬದಲಾವಣೆ ಅಲ್ಲ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿರ್ಧಾರ ಕೈಗೊಳ್ಳುವ ಅಪೂರ್ವ ಅವಕಾಶ. ಕಳೆದ ವರ್ಷದ ತಪ್ಪುಗಳಿಂದ ಪಾಠ ಕಲಿತು, ಮುಂದಿನ ವರ್ಷವನ್ನು ಉತ್ತಮವಾಗಿ ಕಳೆಯಲು ಪ್ರೇರಣೆ ನೀಡುವ ಸಮಯ. ಹೊಸ ವರ್ಷಾಚರಣೆ ಎಂಬುದು ಆನಂದ, ನಂಬಿಕೆ ಮತ್ತು ಆಶಯಗಳ ಸಂಗಮವಾಗಲಿ. ಹೊಸ ವರ್ಷಾಚರಣೆ ಜನರನ್ನು ಒಂದುಗೂಡಿಸಿ, ಹೊಸ ಜೀವನದ ಆರಂಭಕ್ಕೆ ನಾಂದಿಯಾಗಲಿ.ಈ ದಿನದಂದು ಯುವ ಜನಾಂಗ ತಮ್ಮ ಜೀವನದ ಗುರಿಗಳನ್ನು ಮರುಪರಿಶೀಲಿಸಿ, ಸಕಾರಾತ್ಮಕ ಚಿಂತನೆಗಳಿಂದ ಮುನ್ನಡೆಯಲು ಸಂಕಲ್ಪ ಮಾಡಲಿ. ಈ ನಿಟ್ಟಿನಲ್ಲಿ ಮನೆಯ ಸಮಾಜದ ಹಾಗೂ ಪರಿಸರದ ಹಿರಿಯರು ಮಾರ್ಗದರ್ಶನ ನೀಡುವಂತವರಾಗಲಿ. ಹೊಸ ವರ್ಷ ಎಲ್ಲರ ಜೀವನದಲ್ಲೂ ಹೊಸ ಜೀವನವನ್ನು ಕರುಣಿಸಿ, ಸಂತೃಪ್ತಿಯನ್ನು ತರಲೆಂಬ ಆಶಯ ಪ್ರತಿಯೊಬ್ಬರ ಮನಸ್ಸಿನಲ್ಲಿರಲಿ. ಡಾ.ಸುಮತಿ ಪಿ

“ಯುವಜನತೆಯ ದಿಕ್ಕು ತಪ್ಪಿಸುತ್ತಿರುವ ಹೊಸ ವರ್ಷಾಚರಣೆ”ಡಾ.ಸುಮತಿ ಪಿ Read Post »

ಕಾವ್ಯಯಾನ, ಗಝಲ್

ಹಾ.ಮ ಸತೀಶ ಬೆಂಗಳೂರು ಅವರ ಗಜಲ್

ಕಾವ್ಯ ಸಂಗಾತಿ ಹಾ.ಮ ಸತೀಶ ಬೆಂಗಳೂರು ಗಜಲ್ ಸಾವಿರ ಬಾರಿ ಅಲೆದರೂ, ಪ್ರೀತಿಯು ಸಿಗಲಿಲ್ಲನಿನ್ನನೆ ಹುಡುಕುತ ಬಂದರೂ,ಪ್ರೀತಿಯು ಸಿಗಲಿಲ್ಲ ನಿನ್ನಯ ಹತ್ತಿರ ಬೇಡಿದೆ,ನೀನು ಹೋದೆ ಎಲ್ಲಿಗೆಜೀವ ನನಸಲಿ ನಿಂದರೂ,ಪ್ರೀತಿಯು ಸಿಗಲಿಲ್ಲ ಚೆಲುವ ಬೀರಿ ಮನಸನಿಂದು,ಕದಡಿ ಹೋದೆ ಏತಕೆಸವಿಯು ಬಂದು ಕೂತರೂ,ಪ್ರೀತಿಯು ಸಿಗಲಿಲ್ಲ ಚಿತ್ತದಲ್ಲಿ ಪ್ರೇಮರಾಗ, ಬೆರೆತು ಇರಲು ಹೋದೆಯಾಮೋಹ ಸಮಯ ಇದ್ದರೂ, ಪ್ರೀತಿಯು ಸಿಗಲಿಲ್ಲ ಸೊರಗಿ ಹೋದ ಮುಖದ ಭಾವ, ನನಗೆ ಏಕೆ ಈಶಅತ್ತು ಕರೆದು ಹೇಳಿದರೂ, ಪ್ರೀತಿಯು ಸಿಗಲಿಲ್ಲ ಹಾ.ಮ ಸತೀಶ ಬೆಂಗಳೂರು

ಹಾ.ಮ ಸತೀಶ ಬೆಂಗಳೂರು ಅವರ ಗಜಲ್ Read Post »

ಕಾವ್ಯಯಾನ

“ಮೌನ ನಮನ”ಸರಸ್ವತಿ ಕೆ ನಾಗರಾಜ್

ಕಾವ್ಯ ಸಂಗಾತಿ ಲಕ್ಷ್ಮೀದೇವಿ ಪತ್ತಾರ “ಮುಂದುವರೆದಿದೆ” ಹೊಸದೆನ್ನುವುದು ಈ ಜಗದಲ್ಲಿಯಾವುದಿದೆ ?ಗಮನವಿಟ್ಟು ನೋಡಿದರೆಎಲ್ಲವೂ ಹಳೆಯದರ ಹೊಸ ರೂಪವಷ್ಟೆ ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳುಸತ್ತಿರುವುದು ಹಳೆಯ ಸಂಬಂಧಹುಟ್ಟುವುದು ಮತ್ಯಾವುದೋ  ಹೊಸ ಬಂಧ ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು ಸೃಷ್ಟಿಯು ಇಲ್ಲ  , ಲಯವೂ ಇಲ್ಲಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ ಕೆಟ್ಟದ್ದು ಕಳೆಯುವುದಿಲ್ಲಒಳ್ಳೆಯದು ಅಳಿಯುವುದಿಲ್ಲಕೊರಗಿ,ಮರುಗಲು ಕಾರಣವೇ ಇಲ್ಲ. ಈಗ ಇರುವುದೆಲ್ಲವೂ ಮೊದಲೂ ಇತ್ತುಮತ್ತೆ ಮತ್ತೆ ಮುಂದುವರಿಯುವದುಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣಮುಂದುವರಿದಿದೆ ಹೊಸದೆನ್ನುವುದು ಈ ಜಗದಲ್ಲಿಯಾವುದಿದೆ ?ಗಮನವಿಟ್ಟು ನೋಡಿದರೆಎಲ್ಲವೂ ಹಳೆಯದರ ಹೊಸ ರೂಪವಷ್ಟೆ ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳುಸತ್ತಿರುವುದು ಹಳೆಯ ಸಂಬಂಧಹುಟ್ಟುವುದು ಮತ್ಯಾವುದೋ  ಹೊಸ ಬಂಧ   ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು  ಸೃಷ್ಟಿಯು ಇಲ್ಲ  , ಲಯವೂ ಇಲ್ಲಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ ಕೆಟ್ಟದ್ದು ಕಳೆಯುವುದಿಲ್ಲಒಳ್ಳೆಯದು ಅಳಿಯುವುದಿಲ್ಲಕೊರಗಿ,ಮರುಗಲು ಕಾರಣವೇ ಇಲ್ಲ. ಈಗ ಇರುವುದೆಲ್ಲವೂ ಮೊದಲೂ ಇತ್ತುಮತ್ತೆ ಮತ್ತೆ ಮುಂದುವರಿಯುವದುಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣ ಲಕ್ಷ್ಮೀದೇವಿ ಪತ್ತಾರ

“ಮೌನ ನಮನ”ಸರಸ್ವತಿ ಕೆ ನಾಗರಾಜ್ Read Post »

ನಿಮ್ಮೊಂದಿಗೆ

ಲತಾ ಎ ಆರ್ ಬಾಳೆಹೊನ್ನೂರು ಕವಿತೆ “ಕಡಲ ತೆರೆಯ ಮೊರೆತ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಕಡಲ ತೆರೆಯ ಮೊರೆತ” ಸೆಳೆದಿರುವೆ ನನ್ನನ್ನು ಸೂಜಿಗಲ್ಲಿನಂತೆಯವ್ವನದ ಹುಚ್ಚು ಹೊಳೆಯಂತೆತಾಯಿ ತಂದೆಯ ತೊರೆವಂತೆಬಾಳು ಸಾಗಿಸುವ ಹುಮ್ಮನಸ್ಸಿನಂತೆ ಬೇರೆಲ್ಲ ಬೇಡದ ಛಲದಂತೆವಿಧಿಯಾಟದ ಸುಳಿಗೆ ಸಿಲುಕಿದಂತೆಆಡಿಸಿದಾತನ ಕೈ ಚಳಕದ ಪಾತ್ರವಂತೆನಾ ನಿನ್ನಾ ಸೇರಿರುವೆ ಸಂಗಾತಿಯಂತೆ ಕನಸು ನೂರು ನನಸಾಗುವಂತೆಸಾಧಿಸಿ ನಡೆವ ನಾವೆಣಿಸಿದಂತೆಬಾಳ ದಾರಿಯಲಿ ನೋವ ಮರೆತಂತೆಕಂಡಿದೆ ತೃಪ್ತಿ ಮನವಂತೆ ಅಂದುಕೊಂಡಂತಲ್ಲ ಜೀವನವಂತೆಬಗೆದಷ್ಟು ಮುಗಿಯದ ಕರ್ಮಫಲವಂತೆಏರಿಳಿತದ ಹಾದಿಯಲ್ಲಿ ಎಲ್ಲವಂತೆಪಯಣಿಸಬೇಕು ನಾವೆಲ್ಲ ಬೆರೆತಂತೆ ಕೂಗಿ ಕೂಗಿ ಕರೆಯುವಂತೆಕಡಲ ತೆರೆಯ ಮೊರೆವಂತೆಬಂದು ಸೇರಿಬಿಡು ಏನುವಂತೆವಿದಾಯಕ್ಕೆ ಕೇಳಿರುವೆ ಸಮಯವಂತೆ ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಕವಿತೆ “ಕಡಲ ತೆರೆಯ ಮೊರೆತ” Read Post »

ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್ -ಮಿರ್ಜಾ ಗಾಲಿಬ್‌ ಬಗ್ಗೆ

ಕಾವ್ಯಸಂಗಾತಿ ರತ್ನರಾಯಮಲ್ಲ ಗಜಲ್ ಅನುದಿನ ಹೊಸ ಹೊಸ ಪಾಠಗಳನ್ನು ಕಲಿಸುತಿದ್ದಿಯಾ ಗಾಲಿಬ್ನಮ್ಮವರಿಂದಾಗುವ ನೋವುಗಳನ್ನು ಮರಿಸುತಿದ್ದಿಯಾ ಗಾಲಿಬ್ ಗಾಲಿಬ್ ಎಂಬುದೇ ನನಗೊಂದು ಸಂಜೀವಿನಿ ಬರಹದಲೆಯಲಿಷೇರ್ -ಶಾಯರಿಯಿಂದ ನೀನು ಹುಚ್ಚು ಹಿಡಿಸುತಿದ್ದಿಯಾ ಗಾಲಿಬ್ ಬದುಕಿನ ಏರಿಳಿತದಲಿ ನಿನ್ನ ಜೀವನವೇ ಸುಂದರ ಪ್ರಯೋಗ ಶಾಲೆಕಂಬನಿ ಕಡಲಲಿ ಒಲವಿಂದ ಕೈ ಹಿಡಿದು ನಗಿಸುತಿದ್ದಿಯಾ ಗಾಲಿಬ್ ನಡೆಯುತಿರಲು ಕಲ್ಲು ಮುಳ್ಳಿನ ಹಾದಿ ಮೇಲೂ ಪ್ರೀತಿ ಉಕ್ಕುವುದುಗಜಲ್ ಗುರುವಾಗಿ ದುನಿಯಾದಲಿ ದೀಪ ಹಚ್ಚಿಸುತಿದ್ದಿಯಾ ಗಾಲಿಬ್ ಹತಾಶೆಯ ಒಡಲಲಿ ಮಲ್ಲಿಗೆಯ ಸುಮಕೆ ನೀರುಣಿಸಿ ಪೋಷಿಸಿರುವೆನಿನ್ನ ಬಾಳ ಪುಟಗಳಿಂದ ಮಹಾಕಾವ್ಯವನು ಓದಿಸುತಿದ್ದಿಯಾ ಗಾಲಿಬ್ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ -ಮಿರ್ಜಾ ಗಾಲಿಬ್‌ ಬಗ್ಗೆ Read Post »

ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಅಮೃತ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಅಮೃತ” ಏನೆಂದು ಕರೆಯಲಿ ಈ ಭಾವಗಳನ್ನ ಜೀವ ನದಿಗಳನ್ನ.ಬಾಡಿಹೋಗುವ ಮುನ್ನಿನಹೊನ್ನುಗಳನ್ನಪನ್ನೀರ ಸಿಂಚನಗಳನ್ನಆಹ್ಲಾದಗಳನ್ನ. ಆ ಸ್ವಾದಗಳ ಘಮ ನಾಲಿಗೆಯಿಂದ ನಾಲಿಗೆಗೆಕೈ ಬಾಯಿ ತುಟಿ ಕಟಿಗಳ ಸಂಗೀತ ಸಂಭ್ರಮಗಳಿಗೆ ಹೌದೆಂದರೆ ಹೌದುಇಲ್ಲವೇ ಇಲ್ಲವೆಂದರೆನಾ ಯಾರುಇರುವ ತನಕ ಬದುಕಿದ್ದುಕನಸಲ್ಲೆ ಬದುಕು ಸಾಗಿಸಿದ್ದುಯಾರು. ಬಯಸಿದ್ದು ಸಾಕುಇರುವ ತನಕ ಇಲ್ಲಿಲ್ಲದಿರುವ ಬೇಕುಗಳೂ ಸಾಕು ಸಮುದ್ರ ಮಂಥನದ ಅಮೃತಮತ್ತೆ ಸಮುದ್ರಕ್ಕೇ!ಪುನಃ ಪುನಃ ದಡಕ್ಕಪ್ಪಳಿಸುವತೀರದ ಬಯಕೆಗಳಿಗೇ!! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ ಕವಿತೆ “ಅಮೃತ” Read Post »

You cannot copy content of this page

Scroll to Top