ಮಾನಸ ಸಂಗಾತಿ
ಜಯಶ್ರೀ.ಜೆ. ಅಬ್ಬಿಗೇರಿ
“ಲಗಾಮು ಹಾಕಬೇಕಿದೆ ಚಂಚಲತೆಗೆ”

ಮನಸ್ಸಿನಷ್ಟು ಕುತೂಹಲ ಹುಟ್ಟಿಸುವ ಅತ್ಯದ್ಭುತ ವಸ್ತು ಮತ್ತೊಂದಿಲ್ಲ ಅನಿಸುತ್ತದೆ. ಅದರ ತಾಕತ್ತು ಅಗಾಧ. ಅದನ್ನು ಒಂದೆಡೆ ಕಟ್ಟಿಹಾಕಿದರೆ ಅಸಾಧ್ಯವೆನಿಸುವ ಕೆಲಸಗಳನ್ನು ಸಹ ಲೀಲಾಜಾಲವಾಗಿ ಮಾಡಿ ಮುಗಿಸುತ್ತದೆ. ಹಾಗೇ ಬಿಟ್ಟು ಬಿಟ್ಟರೆ ಸಣ್ಣವೆನಿಸುವ ಕಾರ್ಯಗಳು ಸಹ ಗುಡ್ಡದಂತೆ ಗೋಚರಿಸುತ್ತವೆ. ಮನಸ್ಸು ಇರುವುದೇ ಚಂಚಲ ಅಷ್ಟೇ ಅಲ್ಲ ಮಂಗನಂತೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರುತ್ತಲೇ ಇರುತ್ತದೆ. ಅದು ಒಂದು ಕಡೆ ಜಾಸ್ತಿ ಹೊತ್ತು ನಿಲ್ಲುವುದೇ ಇಲ್ಲ. ಚಂಚಲತೆ ಎಲ್ಲರಲ್ಲೂ ಸಹಜವಾಗಿ ಇರುವ ಸ್ಥಿತಿ. ಅದು ಒಂದು ತರಹ ಪುಟ್ಟ ಮಗುವಿನಂತೆ ಒಂದಾದ ಮೇಲೆ ಒಂದು ವಿಷಯದ ಬಗ್ಗೆ ಹಟ ಹಿಡಿಯುತ್ತದೆ. ಅದನ್ನು ಹಿಡಿದು ಒಂದೇ ವಿಷಯದ ಮೇಲೆ ನಿಲ್ಲಿಸುವುದು ಸಾಹಸದ ಕೆಲಸವೇ ಸರಿ. ಸಾಹಸದ ಕಾರ್ಯ ಅಂತ ಬಿಟ್ಟರೆ ಯಾವುದನ್ನೂ ಮಾಡಲು ಆಗುವುದಿಲ್ಲ. ಮನಸ್ಸನ್ನು ಹೇಗೆ ಕಟ್ಟಿ ಹಾಕುವುದು ಅಂತ ಒಂದು ಸಲ ತಿಳಿದರೆ ಸಾಕು ಅಂದುಕೊಂಡ ಕೆಲಸ ತುಸು ಸುಲಭವಾಗುವುದು.
ಈ ವೇಗದ ಜಗತ್ತಿನಲ್ಲಿ ಎಲ್ಲದರಲ್ಲೂ ದಾವಂತ ಇದ್ದೇ ಇದೆ. ಮನಸ್ಸು ಚಂಚಲವಾದರೆ ಯಾವುದೇ ಕೆಲಸ ನಿಭಾಯಿಸುವುದು ಅಸಾಧ್ಯ. ಅದರ ಗೋಳಾಟ ಹೇಳತೀರದು. ಮನಸ್ಸನ್ನು ಆಚೀಚೆ ಓಡದಂತೆ ಕಟ್ಟಿ ಹಾಕುವ ಕೆಲಸ ನನ್ನದೇ ಹೊರತು ಬೇರೆಯವರದಲ್ಲ ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ಮುಂದಿನ ಕೆಲ ಸಲಹೆಗಳು ಸಹಾಯವಾಗಬಹುದು.
ಚಿತ್ತವೆಂಬ ಸಾಗರವು ಚಿತ್ರ ವಿಚಿತ್ರ ದಿಕ್ಕುಗಳಲ್ಲಿ ಹರಿಯುತ್ತದೆಂಬುದು ನಮ್ಮೆಲ್ಲರ ಅನುಭವ ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೇಳಿದಂತೆ‘ಮನಸ್ಸಿನ ಸ್ವಭಾವ ಗಟ್ಟಿಯಾದ ಇಟ್ಟಿಗೆ ಮತ್ತು ಗಾರೆಗಳಿಂದ ಮಾಡಿದ್ದಲ್ಲ. ಅದಕ್ಕೆ ಮರದ ಭಾರವಾದ ತೊಲೆಯು ಆಧಾರವೂ ಇಲ್ಲ. ಎಷ್ಟೇ ದೃಢ ಸಂಕಲ್ಪ ಮಾಡಿದರೂ ಗಟ್ಟಿ ನಿರ್ಧಾರ ತೆಗೆದುಕೊಂಡರೂ, ಮನಸ್ಸು ಪಾದರಸದ ಸ್ವಭಾವ ಹೊಂದಿದೆ. ಅದು ಒಂದೆಡೆ ನಿಲ್ಲದೇ ಚಂಚಲವಾಗಿರುತ್ತದೆ.’
ಇಂತಹ ಚಂಚಲ ಮನಸ್ಸನ್ನು ನಿಗ್ರಹಿಸಿದರೆ ಮಾತ್ರ ಜೀವನ ಸುಗಮ ಎಂದಿದ್ದಾರೆ. ಒಂದಕ್ಕಿಂತ ಹೆಚ್ಚು ಆಯ್ಕೆಗಳಿದ್ದಾಗ ಮನಸ್ಸು ಯಾವುದು ಹೆಚ್ಚು ಒಳ್ಳೆಯದು, ಇಲ್ಲವೇ ಯಾವುದು ಸರಿ, ಯಾವುದು ತಪ್ಪು ಎಂದು ಚಂಚಲಗೊಳ್ಳುತ್ತದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಮನಸ್ಸು ಹೊಯ್ದಾಡುತ್ತದೆ. ಆಯ್ಕೆ ಸರಿಯಾದರೆ ಲಾಟರಿ ಹೊಡೆದಷ್ಟು ಸಂತಸ ಪಡುತ್ತೇವೆ. ಆಯ್ಕೆ ತಪ್ಪಿದರೆ ಪಶ್ಚಾತ್ತಾಪದ ನದಿಯಲ್ಲಿ ಮುಳುಗುತ್ತೇವೆ. ಆಯ್ಕೆಯಲ್ಲಿ ಜಾಣತನ ಉಪಯೋಗಿಸಿ. ಆರಿಸಿಕೊಂಡಿದ್ದನ್ನೇ ಇಷ್ಟಪಡಬೇಕು ಆಗ ಮನಸ್ಸು ಅತ್ತಿತ್ತ ವಾಲದೇ ದೃಢವಾಗಿ ನಿಲ್ಲುತ್ತದೆ.
ನಿರ್ಧಾರ ಮುಂದೂಡಿಕೆ
ಚಂಚಲತೆ ಕ್ಷಣಿಕ ಅದನ್ನು ಆ ಕ್ಷಣದಲ್ಲಿ ಮೀರುವುದನ್ನು ಕಲಿತರೆ ಸಾಕು. ಚಂಚಲತೆಯಲ್ಲಿರುವಾಗ ನಿರ್ಧಾರ ತೆಗೆದುಕೊಳ್ಳಬಾರದು. ಆಗ ನಿರ್ಧಾರ ಮುಂದೂಡಿ ನಂತರದ ಕ್ಷಣಗಳಲ್ಲಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ದೃಢಚಿತ್ತರಾಗಿ ತೆಗೆದುಕೊಂಡ ನಿರ್ಧಾರವು ಸಹ ಒಳ್ಳೆಯ ನಿರ್ಧಾರವೇ ಆಗಿರುತ್ತದೆ. ಇಷ್ಟವನ್ನು ಕಡೆಗಣಿಸಿ ದಾಕ್ಷಿಣ್ಯಕ್ಕೆ ಬಲಿಯಾಗಬಾರದು. ನನಗಿಷ್ಟವಾದುದು ಎಲ್ಲರಿಗೂ ಇಷ್ಟವಾಗಬೇಕೆನ್ನುವ ಭ್ರಮೆಯಲ್ಲಿಯೂ ಇರಬಾರದು. ಯೋಗದ ಅಭ್ಯಾಸದಿಂದ ಸಮಚಿತ್ತರಾದರೆ ಚಂಚಲತೆ ಕಾಲಿಗೆ ಬುದ್ಧಿ ಹೇಳುತ್ತದೆ.
ನಿಧಾನಗೊಳಿಸುವಿಕೆ
ಚಂಚಲತೆಗೆ ವಯಸ್ಸಿನ ಭೇದವಿಲ್ಲ ಎಲ್ಲ ವಯೋಮಾನದಲ್ಲೂ ಅದು ತನ್ನ ಇರುವಿಕೆಯನ್ನು ಮೆರೆಯುತ್ತದೆ. ಆದರೆ ಅದರ ಪ್ರತಾಪ ಹೆಚ್ಚಾಗಿ ಕಾಣುವುದು ಯೌವ್ವನದಲ್ಲಿ. ‘ದ ಪೆನ್ ಈಸ್ ದ ಟಂಗ್ ಆಫ್ ಮೈಂಡ್’ ಎನ್ನುವ ನುಡಿ ಕೇಳಿಯೇ ಇರುತ್ತೀರಿ. ಬರೆಯಲು ಪ್ರಾರಂಭಿಸಿದಾಗ ನಿಧಾನಗೊಳಿಸಬೇಕೆಂದು ಕಂಡುಕೊಳ್ಳುತ್ತೇವೆ. ಏಕೆಂದರೆ ನಮ್ಮ ಮೆದುಳು ತುಂಬಾ ವೇಗವಾಗಿ ಚಲಿಸುತ್ತದೆ. ಆದ್ದರಿಂದ ಬರಹವನ್ನು ನಿಧಾನಗಗೊಳಿಸಬೇಕಾಗುತ್ತದೆ. ನಿಧಾನಗೊಳಿಸಿದಾಗ ಆಲೋಚನೆಗಳು ಸ್ಪಷ್ಟಗೊಳ್ಳುತ್ತವೆ. ಏಕಾಗ್ರಗೊಳಿಸದಿದ್ದರೆ ಮನಸ್ಸು ಸಾವಿರಾರು ಆಲೋಚನೆಗಳನ್ನು ನೀಡುತ್ತದೆ. ಅದರಿಂದ ನಾವು ಮತ್ತಷ್ಟು ಗೊಂದಲಕ್ಕೆ ಒಳಗಾಗುತ್ತೇವೆ. ಮನಸ್ಸನ್ನು ಸ್ಥಿರಗೊಳಿಸಿದಾಗ ಹೆಚ್ಚು ಸುಲಭ ಮತ್ತು ಸರಳ ರೀತಿಯಲ್ಲಿ ಸುಧಾರಿಸಬಹುದು. ಮನಸ್ಸು ಇಚ್ಛಿಸಿದರೆ ಅದನ್ನು ತಡೆಯುವವರು ಯಾರೂ ಇಲ್ಲ. ಮನಸ್ಸು ಮಹಾನ ಶಕ್ತಿಯುಳ್ಳದ್ದು. ಅದರ ಶಕ್ತಿ ಅಸೀಮ. ಚಂಚಲತೆಯಿಂದ ಬಿಡಗಡೆ ಹೊಂದಲು ನಿಧಾನಗೊಳಿಸುವಿಕೆ ಒಳ್ಳೆಯ ಮಾರ್ಗ.
ಯಜಮಾನಿಕೆ
ಧ್ಯಾನದಿಂದ ಚಂಚಲತೆ ಹತೋಟಿಗೆ ಸಿಗುತ್ತದೆ. ಮಾನಸಿಕ ಸ್ಥಿತಿ ಸುಧಾರಿಸಿದರೆ ಸಾಕು ಬಯಸಿದ್ದೆಲ್ಲವೂ ನಮ್ಮದೇ. ಮನಸ್ಸಿನ ಸ್ಥಿತಿ ಗಂಭೀರವಾದರೆ ನಮ್ಮದು ಸಹ ನಮ್ಮದಲ್ಲ. ಮನಸ್ಸು ಹೇಳಿದಂತೆ ನಾವು ಗೋಣು ಹಾಕುವುದಲ್ಲ. ನಾವು ಹೇಳಿದಂತೆ ಅದು ಹೆಜ್ಜೆ ಹಾಕಬೇಕು ಹಾಗೆ ಅದನ್ನು ಹದಗೊಳಿಸಬೇಕು. ಹದಗೊಳಿಸಿದರೆ ಖಂಡಿತ ಹದಗೊಳ್ಳುತ್ತದೆ. ಮನಸ್ಸು ನನ್ನ ಮಾತು ಕೇಳದೆಂಬ ಭ್ರಮೆಯ ಕಗ್ಗತ್ತಲೆಯಿಂದ ಹೊರಬರಬೇಕು. ಮನಸ್ಸು ಆಳಾಗಬೇಕೇ ಹೊರತು ಯಜಮಾನನಲ್ಲ. ನಾವೇ ಯಜಮಾನರಾದರೆ ಯೋಗ್ಯತಗೆ ಅರ್ಹವಾದುದನ್ನು ದಯಪಾಲಿಸುತ್ತದೆ.
ಮನಸ್ಸೆಂಬ ಸಾಗರ ಮನಸ್ಸಿನ ಸಾಗರದಲ್ಲಿ ಮೀನು ಮೊಸಳೆಗಳಷ್ಟೇ ಇಲ್ಲ. ಮುತ್ತು ರತ್ನಗಳೂ ಇವೆ ಹುಡುಕಬೇಕಷ್ಟೆ. ಹೀಗೆ ಮುತ್ತು ರತ್ನಗಳನ್ನು ಹುಡುಕಲು ಮನಸ್ಸನ್ನು ನಿಗ್ರಹಿಸಬೇಕು ಮತ್ತು ಸಂಸ್ಕರಿಸಬೇಕು. ಮನಸ್ಸನ್ನು ಸಾಣೆ ಹಿಡಿಯಲು ಅದನ್ನು ಸರಿದಾರಿಗೆ ತರಲು ಅಸಂಖ್ಯಾತ ದಾರಿಗಳನ್ನು ಹೇಳುವವರು ಸಾಕಷ್ಟು ಜನ ಸಿಗುತ್ತಾರೆ. ಬೋಧಿಸುವ ಅವರಿಗೆ ಮನಸ್ಸನ್ನು ನಿಗ್ರಹಿಸಲು ಹೇಳಿದರೆ ಅದು ಕಷ್ಟ. ಆದ್ದರಿಂದಲೆ
ಪುರಂದರದಾಸರು,’ಹರಿದಾಡುವ ಮನವ ನಿಲಿಸುವುದು ಬಲು ಕಷ್ಟ ಎಂದು ಹಾಡಿದ್ದಾರೆ.ನಮ್ಮೆದುರಿಗೆ ಮನಸ್ಸಿನ ಯಜಮಾನರಾಗಿ ಸಾಕಷ್ಟು ಸಾಧಕರು ಮನಸ್ಸಿನ ಮೇಲೆ ಸಂಪೂರ್ಣ ಹತೋಟಿ ಸಿದ್ಧಿಸಿದ್ದಾರೆ ಆ ಕಾರಣದಿಂದಲೇ ಅವರು ಸಾಧಕರಾಗಲು ಸಾಧ್ಯವಾಗಿದೆ.
ಕಸದ ಬುಟ್ಟಿಯಾಗುತ್ತೆ‘ಜೀವನ ತುಂಬಾ ಕುತೂಹಲಕಾರಿ ನಾವು ತಪ್ಪುಗಳನ್ನು ಮಾಡುತ್ತಲೇ ಇದ್ದರೆ ಮಾತ್ರವಲ್ಲ ಅದರಿಂದ ಕಲಿಯುತ್ತಲೇ ಇದ್ದರೆ ಮಾತ್ರ.ಬೇಡವಾದುದನೆಲ್ಲ ಮನದ ಮನೆಯಲ್ಲಿ ಇರಿಸಿದರೆ ಮನಸ್ಸು ಕಸದ ಬುಟ್ಟಿಯಂತಾಗುತ್ತದೆ. ಮನದ ಕಸದ ವಿಲೇವಾರಿ ನಿತ್ಯ ನಡೆಯಬೇಕು. ಚಂಚಲತೆ ಕ್ಷಣಿಕ ಎಂಬುದು ಗೊತ್ತಿದ್ದರೂ ಅದರ ಬಲೆಯಲ್ಲಿ ಬೀಳುತ್ತೇವೆ. ಅದರಿಂದ ತಲೆ ಕೆಡಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಅದು ಕ್ಷುಲ್ಲಕ ಕೂಡ ಆಗಿರುತ್ತದೆ. ಆಗ ಮನದ ಕತ್ತಲೆ ಕಳೆಯುತ್ತದೆ. ಮನದ ಮಾನಸದ ಆಗಸ ಸ್ವಚ್ಛವಾಗಿದ್ದರೆ ಎಲ್ಲವೂ ಸಲೀಸು. ಒಡಲಾಳದಲ್ಲಿ ಒಡಮೂಡಿದ ಕನಸುಗಳೆಲ್ಲ ನನಸು. ಮನಸ್ಸಿನ ಕಡಲಾಳದಿ ಬೇಡದ ನೂರಾರು ಭಾವಗಳ ಸಮಾಧಿಯಾಗಬೇಕು. ಮನಸ್ಸು, ಮನಸ್ಸು ಮಾಡಿದರೆ ಇದು ನಡೆಯಲು ಸಾಧ್ಯವೇ ಇಲ್ಲ ಎನ್ನುವುದು ನಡೆಯಲು ಸಾಧ್ಯ. ಕಾಠಿಣ್ಯ ಕಠೋರತೆ ಅಷ್ಟೇ ಇಲ್ಲ ದಿವ್ಯ ಮೂರ್ತಿಯೂ ಇದೆ ಕಟೆದು ನೋಡಬೇಕಷ್ಟೆ. ಮನಸ್ಸು ಗೊಂದಲದಲ್ಲಿರುವಾಗ ಸುಮ್ಮನಿರಬೇಕು. ದೃಢಚಿತ್ತವಿರುವಾಗ ಮುನ್ನಗ್ಗಬೇಕು. ಚಂಚಲತೆಯನ್ನು ಮೆಟ್ಟಿ ನಿಲ್ಲಬೇಕು.
ಏಕಾಗ್ರತೆಯ ಝರಿ ಹರಿಸಬೇಕು.ಗಮ್ಯ ಸೇರುವಿಕೆಓಡುವ ಕುದುರೆಗೆ ಲಗಾಮು ಹಾಕಿದಂತೆ ಚಂಚಲತೆಗೆ ಹಾಕಬೇಕಿದೆ ಲಗಾಮು
ಕಠೋಪನಿಷತ್ತಿನಲ್ಲಿ ಮನಃ ಪ್ರಗ್ರಹಮೇವಚ’ ಎಂದು ಹೇಳಲ್ಪಟ್ಟಿದೆ. ಪ್ರಗ್ರಹವೆಂದರೆ ಕುದುರೆಗಳಿಗೆ ಹಾಕುವ ಲಗಾಮು. ಕುದುರೆಗಳೆಂದರೆ ಇಂದ್ರಿಯಗಳು. ಇಂದ್ರಿಯಗಳು ಆಸೆ ಆಮಿಷಗಳಿಗೆ ಬೆನ್ನು ಹತ್ತಿ ಬದುಕು ಹಾಳು ಮಾಡುತ್ತವೆ. ಕುದುರೆಗಳನ್ನು ಬುದ್ಧಿಯೆಂಬ ಸಾರಥಿ ತನ್ನ ಹಿಡಿದಲ್ಲಿಟ್ಟುಕೊಂಡರೆ ಆಗ ಬದುಕು ಸೇರಬೇಕಾದ ಗಮ್ಯವನ್ನು ಸೇರುವುದು.
ಚಂಚಲ ಮನಸ್ಸನ್ನು ನಮ್ಮ ಕೈಯಲ್ಲಿ ನಿಗ್ರಹಿಸುವುದಕ್ಕೆ ಸಾಧ್ಯವಿಲ್ಲವೆಂದು ಕೈ ಚೆಲ್ಲಿ ಕುಳಿತುಕೊಳ್ಳಬಾರದು ಕುಳಿತರೆ, ಅದು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗಬೇಕಾಗುತ್ತದೆ. ಸಿಕ್ಕ ಸಿಕ್ಕಲ್ಲಿಗೆ ಹೋಗುವುದನ್ನು ತಡೆದು ಎಲ್ಲ ಆಲೋಚನೆಗಳನ್ನು ಒಂದು ಆಣೆಕಟ್ಟೆಗೆ ಕಟ್ಟಬೇಕು. ನೀರಾವರಿಗಾಗಿ ನದಿಯನ್ನು ನಾಲೆಗಳ ಮೂಲಕ ಹರಿಬಿಡುವಂತೆ ಚಂಚಲ ಮನಸ್ಸಿನ ಸ್ಥಿತಿಯ ಗತಿಯನ್ನು ಹರಿಬಿಡಬೇಕು. ಆಗ ಚಂಚಲ ಮನಸ್ಸಿನ ಪರದಾಟಕ್ಕೆ ಪೂರ್ಣವಿರಾಮ ಬೀಳುತ್ತದೆ. ಶಾಂತ ಸುಂದರ ಮನಸ್ಸು ಆವರಣಗೊಳ್ಳುತ್ತದೆ. ಗೆಲುವಿನ ಜೀವನಕ್ಕೆ ಸ್ವಾಗತಿಸುತ್ತದೆ.
ಜಯಶ್ರೀ.ಜೆ. ಅಬ್ಬಿಗೇರಿ





ತುಂಬಾ ಅರ್ಥ ಪೂರ್ಣವಾಗಿ ಮನಸ್ಸಿನ ಚಂಚಲತೆಯ ಬಗ್ಗೆ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಮೇಡಂ