ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ನನ್ನ ಪರವನಾಗಿಯೂ ಪಡೆಯದೇ ನನ್ನೊಳಗೆ ನೀ
ನೆಲೆಸಬಹುದೆಂದು ಖಾತ್ರಿಯಾಯಿತು ಇಂದು
ಮಾಲಿಯ ಅನುಮತಿಯೂ ಇಲ್ಲದೇ ಹೂಬನಕೆ
ಕಾಲಿಡಬಹುದೆಂದು ಖಾತ್ರಿಯಾಯಿತು ಇಂದು
ಒಲವು ಅರಳಲು ಬೇಕಾಗಿಲ್ಲ
ವರುಷಗಳ ಒಡನಾಟ ಇನಿಯ
ನಶೆಯ ಒಂದು ನೋಟದಿಂದ ನೀ
ಎದೆಗೆ ಇಳಿಯಬಹುದೆಂದು ಖಾತ್ರಿಯಾಯಿತು ಇಂದು
ಪ್ರೀತಿಯೂರಿನೆಡೆಗೆ ನಡೆಯಬಾರದೆಂದು
ಹಾದಿಯುದ್ದಕ್ಕೂ ಕಲ್ಲುಗಳ ಹಾಸಿದ್ದೆ
ತಂಗಾಳಿಯಲಿ ಬಂದು ಪ್ರೇಮ ಸೋಕಿದರೂ
ಎದೆ ಬಡಿತ ಹೆಚ್ಚಾಗಬಹುದೆಂದು ಖಾತ್ರಿಯಾಯಿತು ಇಂದು
ಬೇಲಿ ಹಚ್ಚಿ , ಬೀಗ ಜಡಿದು ಭಾವ
ಬಂಧಿಸಿಡಲು ಯತ್ನಿಸಿದ್ದೆ ನಾನು
ಅರಿವಿನಿಂದ ಸಾಗಿದರೂ ಮನವು
ಕಳುವಾಗಬಹುದೆಂದು ಖಾತ್ರಿಯಾಯಿತು ಇಂದು
ಪ್ರೀತಿಯ ಪವಾಡವ ನೋಡಿ ಪುಳಕಿತಗೊಂಡಿಹುದು
ಈ ವಾಣಿಯ ಹೃದಯ
ಉಸಿರು ಪಿಸುಗುಟ್ಟಿದರೂ ನಾಡಿ ಮಿಡಿತ
ಬದಲಾಗಬಹುದೆಂದು ಖಾತ್ರಿಯಾಯಿತು ಇಂದು

ವಾಣಿ ಯಡಹಳ್ಳಿಮಠ



