ಪುಸ್ತಕ ಸಂಗಾತಿ
ಬೆಂಶ್ರೀ ರವೀಂದ್ರ
ಕೆ.ಎಸ್.ನರಸಿಂಹಸ್ವಾಮಿಯವರ ಪುತ್ರರಾದ
ಕೆಎನ್ ಮಹಾಬಲ ಅವರು
ತಮ್ಮ ತಂದೆಯ ಬಗ್ಗೆಬರೆದ ಕೃತಿ
“ನನ್ನ ಅಪ್ಪ ಕೆ ಎಸ್ ನ”



ಕನ್ನಡಿಗರ ನೆಚ್ಚಿನ ಕವಿ, ಕೆಎಸ್ ನರಸಿಂಹ ಸ್ವಾಮಿ. ಜನನ; ೧೯೧೫ ರ ಜನವರಿ,೨೬. ಮೊದಲ ಕವನ, ಕಬ್ಬಿಗನ ಕೂಗು ,೧೯೩೩. ಮೊದಲ ಕವನ ಸಂಗ್ರಹ, ಮೈಸೂರ ಮಲ್ಲಿಗೆ, ೧೯೪೨. ಮೈಸೂರ ಮಲ್ಲಿಗೆಯಿಂದ ಅಪಾರ ಜನಪ್ರಿಯತೆ.
ಕಾಳಿಂಗರಾವ್,ಮೈಸೂರು ಅನಂತಸ್ವಾಮಿ, ಅಶ್ವಥ್, ರತ್ನಮಾಲ, ಜಯವಂತಿ ದೇವಿ ಹಿರೇಬೆಟ್… ಮುಂತಾದ ಗಾಯಕರ ಧ್ವನಿಯಲ್ಲಿ ಕವನಗಳು ಕರ್ನಾಟಕದ ಜನಮನದ ಮೋಡಿ ಮಾಡಿತು. ಹಲವಾರು ಕವನ ಸಂಗ್ರಹಗಳ ಮೂಲಕ ಬೆಳೆದ ಕವಿ, ಶಿಲಾಲತೆಯ ಮೂಲಕ ಮತ್ತೊಂದು ಮಜಲು ತಲುಪಿದರು.
ಕಾವ್ಯವೇ ಪ್ರಮುಖ ಮಾಧ್ಯಮವಾದರೂ ಗದ್ಯ ಪ್ರಬಂಧ ಮತ್ತು ಅನುವಾದ ಮೂಲಕವೂ ಅಭಿವ್ಯಕ್ತಿ.. ಹುಡುಕಿಕೊಂಡು ಬಂದ ಪ್ರಶಸ್ತಿಗಳು ಹಲವಾರು. ಎಲ್ಲಕ್ಕಿಂತ ಮಿಗಿಲಾದುದು ಕನ್ನಡಿಗರ ಎದೆಯಂಗಳ ಮೆತ್ತನೆಯ ಆಸನ.
೧೯೭೨, ಜಿಎಸ್ಎಸ್ ಅವರ ಸಂಪಾದಕತ್ವದಲ್ಲಿ ಅಭಿನಂದನ ಗ್ರಂಥ “ಚಂದನ” ಸೇರಿದಂತೆ , ನರಸಿಂಹ ಸ್ವಾಮಿಯವರ ಕಾವ್ಯ ಸಾಹಿತ್ಯದ ಬಗ್ಗೆ ಹಲವಾರು ಪುಸ್ತಕಗಳು. ವಿಮರ್ಶಕರಿಂದ ಅವರ ಕಾವ್ಯದ ಎಲ್ಲ ಮಗ್ಗುಲುಗಳ ಶೋಧ. ಅವರ ಕಾವ್ಯದ ಬಗ್ಗೆ ಅಧ್ಯಯನ ನಡೆಸಿದ ಹಲವರಿಗೆ, ಡಾಕ್ಟರೇಟ್. ಕಳೆದ ಶತಮಾನದ ಮೂರನೆಯ ದಶಕದಿಂದ, ಈ ಶತಮಾನದ ಆರಂಭದ ತನಕ ಕೆಎಸ್ ನ ಅವರ ಛಾಪು. ಕನ್ನಡ ಸಾಹಿತ್ಯದ ಪುನರೋದಯ, ಬಿಎಂಶ್ರೀ ಕಾಲದಿಂದ , ಕನ್ನಡವು ಆಧುನಿಕ ಭಾಷೆಯಾಗಿ ರೂಪುಗೊಂಡ ಪ್ರಯೋಗದ ಪ್ರಮುಖ ಅಂಗವೇ ಆಗಿದ್ದರು.
ಅವರ ಕವನಗಳ ಮೂಲಕ ಜನಸಾಮಾನ್ಯರು ಕನ್ನಡವನ್ನು ಪ್ರೀತಿಸಿದರು. ಸಂಸ್ಕೃತಿಯ ಆರಾಧಕರಾದರು. ಬೇಂದ್ರೆ ಮತ್ತು ಕೆಎಸ್ ನ ಅವರ ಕವನಗಳು, ಕವಿಯ ಹೆಸರನ್ನು ಅರಿಯದ ಜನಪದರ ಆಸ್ತಿಯಾದ ಹಾಡುಗಳು. ಇದೇ ನಿಜವಾದ ಪ್ರಶಸ್ತಿ .
ಈಗ, ಕೆಎಸ್ ನ ಅವರ ಬಗ್ಗೆ ,ತುಂಬಾ ಅಪರೂಪವಾದ ಪುಸ್ತಕ. ಅವರ ಮಗ, ಸ್ವತಃ ಕವಿ, ಬರಹಗಾರ, ಸಾಹಿತ್ಯ ಚಿಂತಕ, ಸಂಘಟಕ ಶ್ರೀ ಕೆಎನ್ ಮಹಾಬಲ ಅವರ “ನನ್ನ ಅಪ್ಪ ಕೆ ಎಸ್ ನ “. ಕುತೂಹಲ. ಇತರ ಬರಹಕ್ಕಿಂತ ಹೇಗೆ ಭಿನ್ನ ?.
ಕೆಎನ್ ಮ ಮೊದಲ ಅಧ್ಯಾಯದಲ್ಲಿ ಹೇಳುತ್ತಾರೆ, ‘ಸಿರಿವಂತ ಸಾಹಿತ್ಯ ಪರಂಪರೆಯಲ್ಲಿ ಹುಟ್ಟಿ ಬೆಳೆದ ಮತ್ತು ಇನ್ನೂ ಜೀವಿಸುತ್ತಿರುವ ಭಾಗ್ಯವನ್ನು ಸದಾ ನೆನೆಯುತ್ತಾ ಕೆಎಸ್ ನ ಅವರ ಬದುಕು (ಸಾಮಾಜಿಕ, ಸಾಂಸ್ಕೃತಿಕ ಸಾಂಸಾರಿಕ) ಕಾರಣವಾದ ಪ್ರಸಂಗಗಳನ್ನು ಹಾಗೂ ಅವರು ನಿತ್ಯ ಕೃತಜ್ಞತೆಯಿಂದ ಸ್ಮರಿಸುತ್ತಿದ್ದ ವ್ಯಕ್ತಿಗಳನ್ನು ಈ ಲೇಖನ ಮಾಲೆಯಲ್ಲಿ ಚಿತ್ರಿಸುವ ಯತ್ನ ಮಾಡುತ್ತೇನೆ. ಪೂರ್ವಗ್ರಹವೂ ಅಲ್ಲದ ಪ್ರಶಂಸೆ-ಪಕ್ಷಪಾತವೂ ಅಲ್ಲದ ಒಂದು ಸುವರ್ಣಮಾರ್ಗವನ್ನು ಕ್ರಮಿಸಬೇಕಾದ ಜವಾಬ್ದಾರಿ ಯೂ ನನ್ನನ್ನು ಆವರಿಸಿದೆ’. ಇಡೀ ಪುಸ್ತಕ ಓದಿದ ನಂತರ ಮಹಾಬಲ , ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಅವರ ಗೆಳೆಯ ರವೀಂದ್ರರು ನೆನಪಿಸಿದ ‘ ಕವಿಜೀವನದ ಅಪರೂಪದ ಒಳನೋಟಗಳನ್ನು ಒದಗಿಸುವ ಸಾಂಸ್ಕೃತಿಕ ಜವಾಬ್ದಾರಿ’ ಯನ್ನು ನಿಷ್ಠೆಯಿಂದ ನೆರವೇರಿಸಿದ್ದಾರೆಂದು ಖಂಡಿತವಾಗುತ್ತದೆ.
೧೯೮೬ ರಲ್ಲಿ, ಕೆಎಸ್ ನ ಅವರು ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಕ್ಕೆ ನೀಡಿದ, ಒಂದು ಸಂದರ್ಶನ (ಬೆಂಗಳೂರು ವಲಯ ಕಛೇರಿಯ ‘ಸ್ಪಂದನ’ ಸಂಚಿಕೆ, ಬಿಡುಗಡೆ;ಶ್ರೀ ಗೋಪಾಲಕೃಷ್ಣ ಅಡಿಗ)ವೂ ಸೇರಿದಂತೆ, ಒಟ್ಟು ೫೦ ಪುಟ್ಟಪುಟ್ಟ ಅಧ್ಯಾಯಗಳು. ಜೀವನ ಚರಿತ್ರೆಯಲ್ಲ, ಆದರೆ ಕೆಎಸ್ ನ ಬದುಕಿನ ಪ್ರಮುಖ ಘಟ್ಟಗಳು ಕಾಲಾನುಕ್ರಮದಲ್ಲಿ ದಾಖಲಾಗಿದೆ.
‘ಮೈಸೂರ ಮಲ್ಲಿಗೆ’, ಯ ಬಿಡುಗಡೆ, ಎಆರ್ ಕೃ ಅವರ ಓಡಾಟ,, ಚಿರೋಟಿ, ಗಸೆಗಸೆ ಪಾಯಸ ಅಂತ ಚಿತ್ರವತ್ತಾಗಿ ಆರಂಭವಾಗುವ ಎರಡನೆಯ ಅಧ್ಯಾಯ, ಕನ್ನಡ ಸಾಹಿತ್ಯದಲ್ಲಿ ಮೈಸೂರು ಮಲ್ಲಿಗೆಯ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಎಆರ್ ಕೃ ಬಿಡುಗಡೆ. ಡಿವಿಜಿ, ಮುನ್ನುಡಿ. ೨೭ ವರ್ಷಗಳ ತರುಣ ಕವಿಯ ಪ್ರಥಮ ಸಂಕಲನ ಬಿಡುಗಡೆಯಲ್ಲಿ ಹಾಜರಿದ್ದವರು, ಬಿಎಂಶ್ರೀ, ಮಾಸ್ತಿ, ಕುವೆಂಪು, ಡಿವಿಜಿ, ತಿನಂಶ್ರೀ, ಡಿಎಲ್ಎನ್,. ಇದೇ ಅಲ್ಲವೇ ಭುವನದ ಭಾಗ್ಯ.
ಮುಂದಿನ ಅಧ್ಯಾಯಗಳಲ್ಲಿ ಕನ್ನಡ ಸಾರಸ್ವತ ಪ್ರಪಂಚದ ಹಲವು ಗಣ್ಯರೊಂದಿಗಿನ ಒಡನಾಟ, ಸಂಬಂಧಗಳನ್ನು ಲೇಖಕರು ಗುರುತಿಸಿದ್ದಾರೆ,ಮುಖ್ಯವಾಗಿ ಜಿವಿ, ವಿಸೀ ಪುತಿನ,ಬೇಂದ್ರೆ, ಮಾಸ್ತಿ, ಅಡಿಗ, ಜಿಎಸ್ಎಸ್, ಎಲ್ಎಸ್ಎಸ್, ನಿಸಾರ್, ರಾಜರತ್ನಂ, ಎಚ್ಎಸ್ ವಿ,ಬಾಕಿನ, ಎಂವಿ ವೆಂಕಟೇಶ ಮೂರ್ತಿ, ಲಕ್ಷ್ಮೀ ನಾರಾಯಣ ಭಟ್ಟ, ಅರಾ ಮಿತ್ರ, ನಾಡಿಗ, ಎಕೆ ರಾಮಾನುಜಂ, ಕೆವಿ ಸುಬ್ಬಣ್ಣ, ಶಿವಮೊಗ್ಗಾ ಸುಬ್ಬಣ್ಷ, ಅಶ್ವಥ್, ಎಚ್ಚೆಸ್ಕೆ, ರಾಜಕುಮಾರ್,…. ಇವರುಗಳ ಮೂಲಕ ಕೆಎಸ್ ನ ವ್ಯಕ್ತಿತ್ವದ ಹಲವು ಮುಖಗಳು ಅನಾವರಣವಾಗುತ್ತದೆ.
ಕವಿಯ ಸ್ನೇಹಶೀಲತೆ, ಅಕೆಡೆಮಿಕ್ ವಲಯದಿಂದ ಹೊರತಾಗಿರುವ ಕವಿಯೊಬ್ಬ ತನ್ನ ಅಸ್ತಿತ್ವಕ್ಕೆ ನಡೆಸುವ ಹೋರಾಟ. ವ್ಯಾವಹಾರಿಕವಲ್ಲವೆನಿಸಿದ ವ್ಯವಹಾರಗಳು, ಉದಾ; ಮೈಸೂರು ಮಲ್ಲಿಗೆಯ ಕಾಪಿರೈಟ್…
ಭಿನ್ನ ಕಾವ್ಯಮಾರ್ಗವನ್ನು ಅನುಸರಿಸುತ್ತಿದ್ದ ಹಿರಿಯ ಕವಿಗಳೊಂದಿಗಿನ ಸಂಬಂಧಗಳನ್ನು ಅರ್ಥಪೂರ್ಣ, ಸೌಜನ್ಯಯುತವಾಗಿ ನಿಭಾಯಿಸುತ್ತಿದ್ದ ರೀತಿ, … ಇತ್ಯಾದಿ.
ಮಹಾಬಲರ ಬಲವೆಂದರೆ, ಯಾವುದನ್ನೂ ತೇಲಿಸದೆ, ನಯವಾಗಿ, ಕಠಿಣ ವಿಚಾರಗಳನ್ನು ನಗುವಿನ ಅಲಂಕಾರದಿಂದ, ಸಮಚಿತ್ತದಿಂದ ಬರೆಯುವ ಸಹಜ ಚಮತ್ಕೃತಿ. ಮಧ್ಯೆ ಮಧ್ಯೆ ಮಾನವೀಯ ಸಂಬಂಧಗಳು ಬಿಚ್ಚಿಕೊಳ್ಳುತ್ತದೆ. ಪುತಿನ, ಬೇಂದ್ರೆ, ಎಚ್ಚೆಸ್ಕೆ ಮೊದಲಾದವರು ಕೆಎಸ್ ನ ಮನೆಗೆ ಭೇಟಿ, ರುಚಿಯಾದ ತಿಂಡಿಗಳ ಬಗ್ಗೆ ಕವಿಯ ಒಲವು,ಪ್ರವಾಸದ ಬಯಕೆಗಳು. ಕೆಎಸ್ ನ ಅಲ್ಲದೆ ,ಇತರ ಹಿರಿಯರ ವ್ಯಕ್ತಿತ್ವದ ಝಲಕ್ ಗಳು ಇಲ್ಲಿದೆ.
ಕೆಎಸ್ ನ ಅವರ ಬದುಕಿನಲ್ಲಿ ಬಾಕಿನ; ಪ್ರಕಾಶಕರು, ಎಂವಿ ವೆಂಕಟೇಶ ಮೂರ್ತಿ; ಲಿಪಿಕಾರ, ಕಾವ್ಯ ಪ್ರೋತ್ಸಾಹಕ, ಗಾಯಕರಾದ ಮೈಸೂರು ಅನಂತ ಸ್ವಾಮಿ, ಅಶ್ವಥ್ … ಮೊದಕಾದವರು ವಹಿಸಿದ ಸಕಾರಾತ್ಮಕ ಪಾತ್ರ,ಓದುಗರ ಗಮನ ಸೆಳೆಯುತ್ತದೆ.
ಕವಿಪತ್ನಿ ವೆಂಕಮ್ಮನವರ ಆದರ, ಸತ್ಕಾರಗಳು, ಬವಣೆಯೊಂದಿಗೆ ಸೆಣೆಸುವ ಇಚ್ಛಾಶಕ್ತಿ, ಪೂರ್ವಜರು,ಅವರೂರು ಕಿಕ್ಕೇರಿ, ಸರ್ಕಾರದ ಲಕ್ಷ್ಯ ನಿರ್ಲಕ್ಷ್ಯ ಎಲ್ಲವೂ ಸಣ್ಣ ಅಧ್ಯಾಯಗಳಲ್ಲಿ ಸಮರ್ಥವಾಗಿ ಬಿಚ್ಚಿ ಕೊಳ್ಳುತ್ತದೆ. ನೆನಪು, ಸಿಹಿಯೂ ಇದೆ, ಕಹಿಯೂ ಇದೆ. ಎರಡೂ ಇಲ್ಲಿದೆ. ನಡಿಗೆ ಬೆತ್ತದ ತಮಾಶೆ ಪ್ರಕರಣ, ಸಹೋದ್ಯೋಗಿಗಳ ಗೆಳೆತನ, ಕಾಪಿರೈಟ್ ಪ್ರಕರಣ ಮತ್ತು ಕುಟುಂಬದ ವಲಯದಲ್ಲಿ ಒಡನಾಟದ ಚಿತ್ರಗಳು, ಈ ಬರೆಹಕ್ಕೆ ಸಮಗ್ರತೆಯನ್ನು ನೀಡುತ್ತದೆ.
ಪ್ರೊಫೆಸರ್ ಅ ರಾ ಮಿತ್ರ ಅವರ, ಮುನ್ನುಡಿ, ಕಳಶಪ್ರಾಯ.
ಮಹಾಬಲರು, ಚೆನ್ನಾಗಿ ಬರೆಯುತ್ತಾರೆ. ಅವರು ಛಳಿ ಬಿಟ್ಟು ಬರೆಯಬೇಕು. ಸಂಕೋಚ ಸ್ವಭಾವದಿಂದ ಹೊರಬರಬೇಕು. ಪೂರ್ಣವಾಗಿ ಅರಳಬೇಕು. ಕೆಎಸ್ ನ ಅವರ ಪ್ರಭಾವಳಿಯ ಅಗತ್ಯ ಅವರಿಗಿಲ್ಲ. ಪೂರ್ಣಚಂದ್ರ ತೇಜಸ್ವಿ ಅವರಂತೆ ಸ್ವತಂತ್ರ ವಾಗಿ ಕನ್ನಡ ಸಾಹಿತ್ಯದಲ್ಲಿ ನೆಲೆ ನಿಲ್ಲಬಲ್ಲವರಾಗಿದ್ದಾರೆ. ಕೆಎನ್ ಮಹಾಬಲರ ಸಂಪರ್ಕ ; ೦೯೪೪೯೮೧೧೧೭೭.
ಬಹುರೂಪಿ ಪ್ರಕಾಶನದವರು “ನನ್ನ ಅಪ್ಪ ಕೆ ಎಸ್ ನ ” ಪ್ರಕಟಿಸಿದ್ದಾರೆ. ಬೆಲೆ ₹೨೦೦/-. ಪುಸ್ತಕಕಕ್ಕಾಗಿ ಸಂಪರ್ಕಿಸಿ ;
Online Book Store
Bahuroopi.in Bahuroopi.official/editor@bahuroopi.in
Phone: 70191 82729
Price: Rs.200/-
—————————
ಬೆಂಶ್ರೀ ರವೀಂದ್ರ.





ಚಂದದ ಪರಿಚಯ
ಧನ್ಯವಾದಗಳು