ಕಾವ್ಯ ಸಂಗಾತಿ
ಸುಧಾ ಪಾಟೀಲ
ʼಸುಮ್ಮನಾದ ಭಾವಗಳುʼ

ತೊಯ್ದು ತೊಪ್ಪೆಯಾಗಿ
ಸ್ಥಬ್ದವಾದವು ಭಾವಗಳು
ಬಳಲಿದವು ಒಳಗೊಳಗೆ
ಅಭಿವ್ಯಕ್ತಿಗೊಳಿಸಲಾರದೆ
ಏರಿಳಿತಗಳ ವಿಚಾರವಿಲ್ಲದೆ
ಸುಮ್ಮನಾದವು ಭಾವಗಳು
ಹೊರಗಣ ಜಗದ
ಕೊಂಡಿಯ ಕಳಚಿಕೊಂಡು
ಉಳಿದುಬಿಟ್ಟವು
ತನ್ನಷ್ಟಕ್ಕೆ ತಾನೇ
ಯಾವುದೇ ಉಮೇದಿಯಿಲ್ಲದೆ
ತಟಸ್ಥವಾದವು ಭಾವಗಳು
ಹಿಂಜರಿಕೆಯ ಮೇಳದಲಿ
ಗಟ್ಟಿ ನಗಾರಿಯ ಸದ್ದಿನಲಿ
ಅಡಗಿದವು ತನ್ನಿಂದ ತಾನೇ
ನಡೆದವು ಹಿಮ್ಮುಖವಾಗಿ
ಜನನಿಬಿಢ ರಸ್ತೆಯಲಿ
ಕೊರಗಿದವು ಭಾವಗಳು
ಯಾರೂ ಕೇಳುವವರಿಲ್ಲದೆ
ಉಪಚರಿಸುವರಿಲ್ಲದೆ
ತನ್ನಲ್ಲೇ ಮಾತಾಡಿಕೊಂಡವು
ಯಾವುದರ ಅರಿವಿಲ್ಲದೆ
ಮಿತಿಮೀರಿದ ಅಸಹಾಯಕತೆಯಿಂದ
ಸುಧಾ ಪಾಟೀಲ್





Nice
Good Poem