ವಚನ ಸಂಗಾತಿ
ವೈ.ಎಂ.ಯಾಕೊಳ್ಳಿ
“ಐದು ಅಂತರಾತ್ಮನ ವಚನಗಳು”


̆̆೧
ಅತ್ತಿತ್ತ ಹರಿದಾಡುವ ಮನವ ಒತ್ತಟ್ಟಿ ನಿಲ್ಲಿಸಬೇಕು
ಚಂಚಲತೆ ಸಂಚಲತೆಯಾಗಿ ಒಂದೆಡೆ
ಕೂಡಿಸಬೇಕು
ಹರಿವ ಹಳ್ಳದ ನೀರು ಒಂದು ಸಮ ತಳದಿ ಸಂಗ್ರಹಿಸಿ
ನಿಂತಾಗಲೆ ಜಲಸಾಗರವು ಅಂತರಾತ್ಮ//1//
೩
ಬರುವದನು ಮುಂಚೆಯೆ ಚಿಂತಿಸಿ ಕಳವಳಪಡದಿರು
ಬರುವದನು ತಡೆಯುವ ಶಕ್ತಿ ಯಾವ ಕಾಲಕೂ ಇಲ್ಲ
ಬಂದುದನು ಬಂದಂತೆ ಇದ್ದುದನುಇದ್ದಂತೆ ಸ್ವೀಕರಿಸಿ ಅನುಭವಿಸೋ ಅಂತರಾತ್ಮ//2//
೩
ನಡೆವ ಮನುಜನಿಗೆ ನೂರು ದಾರಿಗಳುಂಟು
ಸಂತೆ ಸುಂಕದ ದಾರಿಯ ಹಿಡಿದು ಹೋರಲೇಕೆ
ಗದ್ದಲ ಗೌಜನು ಬಿಟ್ಟು ಶಾಂತವಿರು ಮನದಲ್ಲಿ
ಮನದ ಶಾಂತಿಯೆ ಎಲ್ಲದಕೂ ಕಾರಣ ಅಂತರಾತ್ಮ//೩//
೪
ಮನದ ಭಾವಗಳ ನೂರು ಪದವಾಗಲು ಕಷ್ಟ
ಪದವಾಗಿಬಂದವಷ್ಟೇ ಜನಕೆ ತಿಳಿಯುವದು
ಮನವು ಸಾಗರವದು ಹನಿ ನೀರ ಹೊರಹಾಕಿ ಇನಿತೆ
ನನ್ನದೆಂಬುದು, ಆದರದಷ್ಟೆ ಅಲ್ಲ ಅಂತರಾತ್ಮ
೫
ದಿನದ ದುಡಿ ಮೆಯ ಮರೆತು ಎಲ್ಲೊ ಒಂದೆಡೆ ಕುಳಿತು
ಬರಿ ಮಾತನು ಹೇಳಿದರೆ ಮೆಚ್ಚಲಾರದು ದೈವ, ನಿಯತ
ಕಾಯಕವ ಸತತ ಗೈದರದುವೆ ನಿನ್ನ ದೈವದ ಪೂಜೆ
ದುಡಿಮೆಯೇ ನಿಜ ದೈವ ಅಂತರಾತ್ಮ
ವೈ.ಎಂ.ಯಾಕೊಳ್ಳಿ




